ಮಂಗಳೂರು: ದೇರಳಕಟ್ಟೆಯ ಮುತ್ತೂಟ್ ಪೈನಾನ್ಸ್ ಬ್ಯಾಂಕ್ ಕಳ್ಳತನ ಯತ್ನ ಪ್ರಕರಣ; ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯ ಬಂಧನ

ಕರಾವಳಿ

ಮಂಗಳೂರು ನಗರ ಸಿಸಿಬಿ ಪೊಲೀಸರ ಕಾರ್ಯಾಚರಣೆ

ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ ದೇರಳಕಟ್ಟೆ ಎಂಬಲ್ಲಿರುವ ಮುತ್ತೂಟ್ ಪೈನಾನ್ಸ್ ನಲ್ಲಿ ಕಳ್ಳತನಕ್ಕೆ ಪ್ರಯತ್ನ ನಡೆಸಿದ ಪ್ರಕರಣದಲ್ಲಿ ಬಂಧನವಾಗದೆ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ನಗರದ ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ದಿನಾಂಕ: 29-03-2025 ರಂದು ರಾತ್ರಿ ವೇಳೆ ದೇರಳಕಟ್ಟೆ ಪರಿಸರದಲ್ಲಿರುವ ಹೆಚ್.ಎಮ್ ಕಾಂಪ್ಲೇಕ್ಸ್ ನ ಮುತ್ತೂಟ್ ಪೈನಾನ್ಸ್ ಕಚೇರಿಯ ಮುಂದಿನ ಬಾಗಿಲಿನ ಸೈರನ್ ನ ಕೇಬಲ್ ಅನ್ನು ತುಂಡರಿಸಿ ಪೈನಾನ್ಸ್ ಕಂಪನಿಯಲ್ಲಿ ಕಳವು ಮಾಡಲು ಪ್ರಯತ್ನ ಮಾಡಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು.  

ಈ ಪ್ರಕರಣದಲ್ಲಿ ಕೇರಳ ಇಡುಕ್ಕಿ ಮೂಲದ ಮುರಳಿ ಮತ್ತು ಕಾಂಞಿಗಾಡ್ ಎಂಬಲ್ಲಿಯ ಆರ್ಷದ್ ಎಂಬವರು ಈಗಾಗಲೇ ಬಂಧನವಾಗಿರುತ್ತದೆ. ಪ್ರಕರಣದಲ್ಲಿ ಪತ್ತೆಯಾಗದೇ ತಲೆಮರೆಸಿಕೊಂಡಿದ್ದ ಹಾಗೂ ಈ ಹಿಂದೆ ನಡೆದ ರಾಜಧಾನಿ ಜುವೆಲ್ಲರಿಯಲ್ಲಿ ಕಳ್ಳತನ ಹಾಗೂ ಕೇರಳ ರಾಜ್ಯದ ವಿಜಯ ಬ್ಯಾಂಕ್ ಕಳ್ಳತನದ ಪ್ರಮುಖ ಸಂಚುಕೋರನಾದ ಅಬ್ದುಲ್ ಲತೀಫ್ @ ಲತೀಫ್ ಪ್ರಾಯ 47 ವೆಲ್ಲರಿಕುಂಡು, ಕಾಸರಗೋಡು, ಎಂಬಾತನನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿ, ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿರುತ್ತಾರೆ.

ಅಬ್ದುಲ್ ಲತೀಫ್ @ ಲತೀಫ್ ಎಂಬಾತನ ಮೇಲೆ ಈ ಹಿಂದೆ ಕೇರಳ ರಾಜ್ಯದ ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಧಾನಿ ಜುವೆಲ್ಲರಿ ಶಾಪ್ ನ ಸುಮಾರು 20 ಕೆ.ಜಿಯಷ್ಟು ಬಂಗಾರವನ್ನು ಕಳ್ಳತನ ಮಾಡಿದ ಪ್ರಕರಣ, ಕೇರಳ ರಾಜ್ಯದ ಚಂದೇರ್ ಪೊಲೀಸ್ ಠಾಣಾ ವ್ಯಾಪ್ತಿಯ ಚೆರವತ್ತೂರಿನ ವಿಜಯ ಬ್ಯಾಂಕ್ ನ ಸುಮಾರು 15.80 ಕೆ.ಜಿಯಷ್ಟು ಬಂಗಾರ ಮತ್ತು 2.5 ಲಕ್ಷ ರೂ. ಹಣವನ್ನು ಕಳ್ಳತನ ಮಾಡಿದ ಪ್ರಕರಣಗಳಲ್ಲಿ ಪ್ರಮುಖ ಆರೋಪಿ. ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಮಂಗಳೂರು ನಗರ ಸಿಸಿಬಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳ ತಂಡ ಯಶಸ್ವಿಯಾಗಿರುತ್ತಾರೆ.