ಮೂಡಬಿದ್ರೆ ಹಂಡೇಲು ಬಳಿ ‘ಮಾಸ್ಟರ್’ ಬಸ್ ಶರವೇಗದ ಚಾಲನೆ ; ಇಬ್ಬರಿಗೆ ಗಂಭೀರ ಗಾಯ; ಸಿಡಿದೆದ್ದ ವಿಧ್ಯಾರ್ಥಿಗಳಿಂದ ಬಸ್ಸಿನ ಗಾಜು ಪುಡಿಪುಡಿ

ಕರಾವಳಿ

ಮೂಡಬಿದ್ರೆ ಹಂಡೇಲು ಬಳಿ ಮಾಸ್ಟರ್ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಭೀಕರ ಅಪಘಾತ ನಡೆದಿದ್ದು, ದ್ವಿಚಕ್ರ ವಾಹನದ ಮೇಲೆ ಹರಿದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.

ತೋಡಾರ್ ಮೈಟ್ ಕಾಲೇಜು ಬಳಿ ಕಾಲೇಜಿನ ಬಸ್ಸನ್ನು ಓವರ್ ಟೇಕ್ ಮಾಡುವ ಸಂದರ್ಭ ಈ ಘಟನೆ ನಡೆದಿದ್ದು, ಬಸ್ಸಿನ ಅಜಾಗರೂಕತೆ ಚಾಲನೆ ವಿರುದ್ಧ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಬಸ್ಸಿನ ಗಾಜು ಪುಡಿ ಪುಡಿ ಮಾಡಿದ್ದಾರೆ. ವಿದ್ಯಾರ್ಥಿಗಳ ಆಕ್ರೋಶಕ್ಕೆ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಮಂಗಳೂರು -ಮೂಡಬಿದ್ರೆ ರೂಟಿನಲ್ಲಿ ಖಾಸಗಿ ಬಸ್ಸಿನ ಶರವೇಗದ ಚಾಲನೆ, ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಇಲ್ಲಿ ದಿನನಿತ್ಯ ಅಪಘಾತಕ್ಕೆ ಕಾರಣವಾಗುತ್ತಿದ್ದು, ಸಂಬಂಧಪಟ್ಟವರು ಇತ್ತ ಗಮನ ಹರಿಸುವಂತೆ ಆಗ್ರಹಿಸುತ್ತಿದ್ದಾರೆ.

ಈ ಸಾವುಗಳು ನ್ಯಾಯವೇ.? ಬಸ್ಸು ಮಾಫಿಯಾಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು.? ಜನ ಪ್ರತಿನಿಧಿಗಳು, ಸಾರಿಗೆ ಅಧಿಕಾರಿಗಳು ನೇರ ಹೊಣೆ.

ಮಂಗಳೂರು-ಮೂಡಬಿದ್ರೆ ರೂಟಿನಲ್ಲಿ ಸಂಚರಿಸುವ ಖಾಸಗಿ ಬಸ್ ಗಳ ಧಾವಂತಕ್ಕೆ ದ್ವಿಚಕ್ರ ಸವಾರರು ಬಲಿಯಾಗುತ್ತಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಗುರುಪುರ ಜಂಕ್ಷನ್ ಬಳಿ ಬಸ್ ಡಿಕ್ಕಿಯಾಗಿ ದ್ವಿಚಕ್ರ ಸವಾರ ಸಾವನ್ನಪ್ಪಿದ ಘಟನೆಯನ್ನು ಖಂಡಿಸಿ ಸಾರ್ವಜನಿಕರು ಅಂದು ಗುರುಪುರ-ಕೈಕಂಬ ಜಂಕ್ಷನ್ ನಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು.

ಖಾಸಗಿ ಬಸ್ ಗಳ ಧಾವಂತಕ್ಕೆ ಇತ್ತೀಚೆಗೆ ದ್ವಿಚಕ್ರ ವಾಹನಗಳ ಅಪಘಾತ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೈಕಂಬ ಜಂಕ್ಷನ್ ನಲ್ಲಿ ಅಂದು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಲಾಗಿತ್ತು. ನೂರಾರು ಮಂದಿ ಸಾರ್ವಜನಿಕರು ಸೇರಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.

ಮೂಡಬಿದ್ರೆ-ಮಂಗಳೂರು ರೂಟಿನಲ್ಲಿ ಕನಿಷ್ಠ ಒಂದೇ ಒಂದು ಸರಕಾರಿ ಬಸ್ ಓಡಾಟ ನಡೆಸುತ್ತಿಲ್ಲ. ಇದರಿಂದಾಗಿ ಈ ರೂಟಿನಲ್ಲಿ ಏನಿದ್ದರೂ ಖಾಸಗಿ ಬಸ್ಸುಗಳದ್ದೇ ದರ್ಭಾರ್.! ಇವರ ಆರ್ಭಟಕ್ಕೆ ಕಡಿವಾಣ ಹಾಕುವವರೇ ಇಲ್ಲವಂತಾಗಿದೆ. ಈ ರೂಟಿನಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳ ಆರ್ಭಟಕ್ಕೆ ಎಷ್ಟೊ ಅಮಾಯಕರು ತಮ್ಮ ಜೀವವನ್ನು ಕಳಕೊಂಡಿದ್ದಾರೆ. ಮೂಡಬಿದ್ರೆ ಅಳ್ವಾಸ್ ಕಾಲೇಜು ವಿಧ್ಯಾರ್ಥಿಯೊಬ್ಬ ಖಾಸಗಿ ಬಸ್ಸೊಂದರ ಅಜಾಗರೂಕತೆಯ ಚಾಲನೆಯಿಂದಾಗಿ ತನ್ನ ಪ್ರಾಣವನ್ನೇ ಬಲಿಕೊಡಬೇಕಾಯಿತು. ಅವತ್ತು ಮೂಡಬಿದ್ರೆ, ಎಡಪದವು ಬಾಗದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ, ಈ ಬಗ್ಗೆ ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ಸಭೆಯು ನಡೆದು ಕೆಲವು ಅಶ್ವಾಸನೆ, ಭರವಸೆ ನೀಡಿ ವಾರ ಕಳೆಯುವುದರೊಳಗೆ ಖಾಸಗಿ ಬಸ್ಸಿನ ಆರ್ಭಟಕ್ಕೆ ಗುರುಪುರ ಬಳಿ ಯುವಕನೊಬ್ಬ ಪ್ರಾಣ ಕಳಕೊಳ್ಳುವಂತಾಯಿತು. ಆದರೆ ಸಂಬಂಧ ಪಟ್ಟವರು ಮಾತ್ರ ಕುಂಭಕರ್ಣನ ನಿದ್ರೆಗೆ ಜಾರಿದ್ದಾರೆ.