ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಯಾವುದೇ ವ್ಯಕ್ತಿಯ ಖಾಸಗಿ ಭೂಮಿ ಸೂಕ್ತ ಪರಿಹಾರ ನೀಡದೇ ಸ್ವಾಧೀನಪಡಿಸುವುದು ಅಥವಾ ಅದನ್ನು ಸರಕಾರಕ್ಕೆ ಯಾ ಅದರ ಅಂಗಸಂಸ್ಥೆಗಳಿಗೆ ಹಸ್ತಾಂತರಿಸುವಂತೆ ಆದೇಶ ನೀಡುವುದು ಕಾನೂನು ಬಾಹಿರ. ಈ ಬಗ್ಗೆ ಕರ್ನಾಟಕ ಹೈಕೋರ್ಟ್ ನಲ್ಲಿ ಸಹ ಇದಕ್ಕೆ ಸಂಬಂಧಿಸಿ ತೀರ್ಪುಗಳನ್ನು ನೀಡಲಾಗಿದೆ. ಆದರೆ ಇದ್ಯಾವುದನ್ನೂ ಲೆಕ್ಕಿಸದೆ ಅಧಿಕಾರಿಗಳು ಹಿಂಬರಹ ನೀಡುತ್ತಿದ್ದಾರೆ. ಇದೀಗ ಸರಕಾರವು ಹಿಂದಿನ ಎಲ್ಲಾ ಆದೇಶ, ಸುತ್ತೋಲೆಗಳನ್ನು ಪರಿಷ್ಕರಿಸಿ ಹೊಸ ನಿಯಮಗಳನ್ನು ಜಾರಿಗೆ ಮಾಡಿ 19 ಮೇ 2025 ರ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ಇದು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಈ ಪ್ರಕಾರಕ್ಕೆ ಇನ್ನು ಮುಂದಕ್ಕೆ ಯಾರೂ ಇದ್ದ ಭೂಮಿಯನ್ನು ಅಭಿವೃದ್ಧಿಪಡಿಸುವುದಾಗಲೀ ಅಥವಾ ನಿವೇಶನ ಖರೀದಿಸುವುದಾಗಲಿ ಅಸಾಧ್ಯದ ಮಾತು. ಇದರಿಂದಾಗಿ ನೋಂದಣಿ ಇಳಿಕೆಯಾಗಿ ಸರಕಾರದ ಬೊಕ್ಕಸಕ್ಕೂ ನಷ್ಟವೇ.
2013 ರ ಮೊದಲು ಕೃಷಿ ಭೂಮಿಯಾಗಲಿ ಅಥವಾ ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತನೆಗೊಂಡ ಜಮೀನಾಗಲಿ, ಅವುಗಳ ದಾಖಲೆ ನಿರ್ವಹಣೆ, ಪಹಣಿ ಬದಲಾವಣೆ ಕಂದಾಯ ಇಲಾಖೆಯಲ್ಲೇ ನಡೆಯುತ್ತಿದ್ದವು. ನಂತರದ ದಿನಗಳಲ್ಲಿ ಸರಕಾರ ವರ್ಗೀಕರಿಸಿ ಕೃಷಿ ಭೂಮಿ, ಕಂದಾಯ ಇಲಾಖೆಯಲ್ಲಿ ಮತ್ತು ಪರಿವರ್ತಿತ ಜಮೀನುಗಳ ಖಾತೆಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳ ಸುಪರ್ದಿಯಲ್ಲಿ ನಿರ್ವಹಿಸುವಂತಹ ನಿಯಮಗಳನ್ನು ಜಾರಿಗೆ ತಂದಿತು. ಈ ನಿಯಮದ ನಂತರ ಪರಿವರ್ತಿತ ಜಮೀನುಗಳಿಗೆ ಪಹಣಿ ಬದಲಾಗಿ ಪಂಚಾಯತ್ ವ್ಯಾಪ್ತಿಯಲ್ಲಿ 9-11, ನಗರ ಪ್ರದೇಶಗಳಲ್ಲಿ ನಮೂನೆ -3 ಇತ್ಯಾದಿ ವಿಧಾನಗಳ ಮೂಲಕ ದಾಖಲೆಗಳನ್ನು ನಿರ್ವಹಿಸುವ ಕ್ರಮ ಜಾರಿಗೆ ಬಂತು. ಆರಂಭದ ದಿನಗಳಲ್ಲಿ ಭೌತಿಕವಾಗಿ ದಾಖಲೆಗಳನ್ನು ನೀಡಲಾಗುತ್ತಿತ್ತು. ಕ್ರಮೇಣ ಇ-ಸ್ವತ್ತು ಎಂಬ ನೂತನ ವ್ಯವಸ್ಥೆ ಜಾರಿಗೆ ತರಲಾಯಿತು. ಮುಂದಕ್ಕೆ ಈ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ಜಾರಿಗೆ ತರಲಾಯಿತು. ಜನರಿಗೆ ಮೂಲಭೂತ ಸೌಕರ್ಯಗಳು ಸುಲಭದಲ್ಲಿ ಮತ್ತು ವ್ಯವಸ್ಥಿತವಾಗಿ ದೊರೆಯಬೇಕೆಂಬ ನೆಲೆಯಲ್ಲಿ ಜಾರಿಗೊಳಿಸಿದ ನಿಯಮಗಳು ಜನರಿಗೆ ಬರಬರುತ್ತಾ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಸರಕಾರವು ಯಾವುದಾದರೂ ಹೊಸ ನಿಯಮಗಳನ್ನು ಜಾರಿಗೊಳಿಸುವಾಗ ಅದರ ಸಾಧಕ ಬಾಧಕಗಳನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ಯಾವುದೇ ಅಧಿಕಾರಿಗಳು ಯಾವುದೇ ಕಚೇರಿಯಲ್ಲಿ ಕುಳಿತುಕೊಂಡು ನೀಡುವ ವರದಿಗಳನ್ನಾಧರಿಸಿ ನಿಯಮಗಳನ್ನು ಜಾರಿ ಮಾಡಿದರೆ ಹೇಗೆ? ಹಿಂದಿನ ನಿಯಮಗಳ ಪ್ರಕಾರ ಒಂದು ಜಾಗದಲ್ಲಿ ಕಟ್ಟಡ ನಿರ್ಮಿಸಿಕೊಳ್ಳಬೇಕಾದರೆ ಪ್ರಸ್ತಾವಿತ ಜಮೀನನ್ನು ವಾಸ್ತವ್ಯ ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಕೊಳ್ಳಬೇಕಿತ್ತು. ಆ ಜಾಗಕ್ಕೆ ಹೋಗುವ ರಸ್ತೆಯು 9 ಮೀಟರ್ ಅಗಲವಿದ್ದು ಆ ಜಾಗದ ಮಾಲಕ ಬೇರೆಯಾಗಿದ್ದಲ್ಲಿ ಅದರ ಒಪ್ಪಿಗೆ ಪತ್ರದ ನೆಲೆಯಲ್ಲಿ ಅದನ್ನು ನಕ್ಷೆಯಲ್ಲಿ ತೋರಿಸಿದರೆ ಭೂ ಪರಿವರ್ತನೆ ಮಂಜೂರಾಗುತ್ತಿತ್ತು. ನಂತರ ಗ್ರಾಮ ಪಂಚಾಯತ್ ನೀಡುತ್ತಿರುವ 9-11 ಅರ್ಜಿ ಸಲ್ಲಿಸುವಾಗಲೂ ಇದೇ ಮಾನದಂಡ ಅನುಸರಿಸಲಾಗುತ್ತಿತ್ತು. ಭೂ ಪರಿವರ್ತನೆ ಮಾಡುವ ಅಧಿಕಾರ ಕಂದಾಯ ಇಲಾಖೆಯ ಮತ್ತು 9-11 ವಿತರಿಸುವ ಅಧಿಕಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿತ್ತು.
ಆದರೆ ಒಂದು ವರ್ಷದ ಹಿಂದೆ ಸರಕಾರ ಜಾರಿಗೊಳಿಸಿದ ಹೊಸ ನಿಯಮಗಳ ಪ್ರಕಾರ 9-11 ವಿತರಿಸುವ ಪೂರ್ವದಲ್ಲಿ ಅದನ್ನು ಅನುಮೋದಿಸುವ ಅಧಿಕಾರ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರಿಗೆ ನೀಡಲಾಯಿತು. ನಂತರ ಜನರು 9-11 ಮಾಡಿಕೊಳ್ಳಬೇಕಾದರೆ ಅದರ ಕಡತ ಹಿಡಿದುಕೊಂಡು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅಲೆದಾಡುವ ಪರಿಸ್ಥಿತಿ ಬಂದೊದಗಿದೆ. 9-11 ಅನುಮೋದಿಸಬೇಕಾದರೆ ಆ ನಿವೇಶನದ ಸಂಪರ್ಕ ರಸ್ತೆಯ ಮಾಲಿಕ ಅರ್ಜಿದಾರನೇ ಆಗಿರಬೇಕು. ಇಲ್ಲವಾದಲ್ಲಿ ಆ ರಸ್ತೆಯನ್ನು ಪಂಚಾಯತಿಗೆ ದಾನ ಶಾಸನದ ಮೂಲಕ ಹಸ್ತಾಂತರಿಸುವಂತೆ ಅಧಿಕಾರಿ ಹಿಂಬರಹ ನೀಡುತ್ತಾರೆ. ಹಸ್ತಾಂತರ ಮಾಡಬೇಕಾದಲ್ಲಿ ಆ ರಸ್ತೆ ಜಾಗವನ್ನು ಭೂ ಪರಿವರ್ತನೆ ಮಾಡಬೇಕು. ಹೀಗೆ ಮಾಡಿ ನೋಂದಣಿ ಮಾಡಬೇಕಾದರೆ 9-11 ಬೇಕು. ಅದನ್ನು ಅನುಮೋದಿಸುವ ಅಧಿಕಾರ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರಿಗೆ ಇಲ್ಲ. ಇದರ ಅನುಮೋದನೆಗಾಗಿ ಜಿಲ್ಲಾ ನಗರ ಮತ್ತು ಯೋಜನಾ ಅಭಿವೃದ್ಧಿ ಕೋಶ ಮಂಗಳೂರು ಇಲ್ಲಿಗೆ ಹೋಗಬೇಕು. ಅವರು ಅನುಮೋದಿಸಬೇಕಾದರೆ ಸಂಪೂರ್ಣ ಭೂಮಿ ಪರಿವರ್ತನೆಗೊಳಪಡಿಸಿ 30 ಮೀಟರ್ ಅಗಲದ ರಸ್ತೆ ತೋರಿಸಿ ಬಡಾವಣೆ ಯೋಜನೆ ತಯಾರಿಸಿ ಅದರೊಂದಿಗೆ ಅರ್ಜಿ ಸಲ್ಲಿಸಬೇಕು. ಇಲ್ಲಿ ಒಂದು ಸಹಜ ಪ್ರಶ್ನೆ ಮೂಡುತ್ತದೆ. ಯಾವುದೇ ಒಬ್ಬ ವ್ಯಕ್ತಿ ಭೂಮಿ ಅಥವಾ ನಿವೇಶನವನ್ನು ಸರಕಾರವೇ ರೂಪಿಸಿದೆ. ನಿಯಮಗಳಂತೆ ’11ಇ’ ಗೆ ಶುಲ್ಕ ಪಾವತಿಸಿ ನಕ್ಷೆ ತಯಾರಿಸಿ ನಂತರ ಅಗಾಧ ಮೊತ್ತದ ನೋಂದಣಿಗೆ ಶುಲ್ಕ ಪಾವತಿಸಿ ಪಡೆದುಕೊಳ್ಳುತ್ತಾನೆ. ಮುಂದಕ್ಕೆ ನಿಯಮಗಳಂತೆ ಭೂ ಪರಿವರ್ತನೆ ಕೂಡ ಮಾಡಿಸಿಕೊಳ್ಳುತ್ತಾನೆ. ಆದರೆ ಅಂತಿಮವಾಗಿ 9-11 ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕಾದರೆ ಇಂತಹ ಕಠಿಣ ನಿಯಮಗಳನ್ನು ಹೇರಲಾಗುತ್ತದೆ. ಇಲ್ಲಿ ಕಂದಾಯ ಇಲಾಖೆ, ಅದರ ಅಡಿಯಲ್ಲಿ ಬರುವ ನೋಂದಣಿ ಇಲಾಖೆ ಮತ್ತು ಸ್ಥಳೀಯಾಡಳಿತ ಇಲಾಖೆಗಳಿವೆ. ಈ ಎಲ್ಲಾ ಇಲಾಖೆಗಳು ಸರಕಾರದ ಅಡಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದು ಇವುಗಳ ನಡುವೆ ಸಮನ್ವಯ ಇಲ್ಲವೇ? ಒಂದು ಪಕ್ಷ 9-11 ವಿತರಿಸಲು ಅಡ್ಡಿಯಾಗುವುದಾದರೆ 11ಇ ಅರ್ಜಿ ಸಲ್ಲಿಸುವಾಗಲೇ ಅಥವಾ ನೋಂದಣಿ ಸಮಯದಲ್ಲಿ ಈ ನಿಯಮಗಳನ್ನು ಜನರಿಗೆ ಏಕೆ ತಿಳಿಸಲಾಗುವುದಿಲ್ಲ? ಲಕ್ಷ, ಕೋಟಿಗಳಲ್ಲಿ ಭೂಮಿ ಮೌಲ್ಯದೊಂದಿಗೆ ಸರಕಾರದ ಬೊಕ್ಕಸಕ್ಕೆ ಅಗಾಧ ಮೊತ್ತದ ಶುಲ್ಕ ಪಾವತಿಸಿ ಜಾಗ ನೋಂದಣಿ ಮಾಡಿಸಿಕೊಂಡವರ ಗತಿಯೇನು? ಅದೂ ಅಲ್ಲದೆ ಎಷ್ಟೋ ಜನರು ಕುಟುಂಬದ ಆಸ್ತಿಯನ್ನು ಪಾಲು ಮಾಡಿಸಿಕೊಂಡಿರುತ್ತಾರೆ. ಆ ಜಾಗದಲ್ಲಿ ಮನೆ ಕಟ್ಟಿಸಿಕೊಳ್ಳಲು ಜಿಲ್ಲಾ ನಗರ ಮತ್ತು ಯೋಜನಾ ಅಭಿವೃದ್ಧಿ ಕೋಶದ ಕಚೇರಿಯ ನಿಯಮಗಳನ್ನು ಪಾಲಿಸಬೇಕು. ಹಾಗಾದರೆ ಎಕರೆಗಟ್ಟಲೆ ಕೃಷಿ ಭೂಮಿಯನ್ನು ಸಹ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಬೇಕೆಂಬುದು ಇದರ ಅರ್ಥ ಅಲ್ಲವೇ? ಇನ್ನು ಎಲ್ಲವೂ ಸರಿಯಿದ್ದರೂ ನಿವೇಶನಕ್ಕೆ ಹೋಗುವಂತಹ ದಾರಿ 30 ಅಡಿಗಿಂತ ಕಡಿಮೆ ಇದ್ದಲ್ಲಿ ಪ್ರಸ್ತಾವಿತ ನಿವೇಶನದಿಂದ ಕಳೆದು ರಸ್ತೆಗೆ ಸೇರಿಸಿ ಪಂಚಾಯತ್ ಗೆ ದಾನ ಶಾಸನದ ಮೂಲಕ ಉಚಿತವಾಗಿ ಹಸ್ತಾಂತರಿಸಿದ ನಂತರವೇ ಉಳಿಕೆ ಜಾಗಕ್ಕೆ 9-11 ನೀಡುವ ಬಗ್ಗೆ ಅನುಮೋದಿಸಲಾಗುತ್ತದೆ. ಗ್ರಾಮೀಣ ಭಾಗದ ಕೆಲಸ ಕಾರ್ಯಗಳನ್ನು ನಗರಾಭಿವೃದ್ಧಿ ಮಾಡುವುದಾದರೆ ಅಧಿಕಾರ ವಿಕೇಂದ್ರೀಕರಣದ ಕಲ್ಪನೆಯೊಂದಿಗೆ ಅಸ್ತಿತ್ವಕ್ಕೆ ಬಂದ ಗ್ರಾಮ ಪಂಚಾಯತ್ ಏಕೆ? ಪಂಚಾಯತ್ ಗಳ ಅಧಿಕಾರವನ್ನು ಮೊಟಕುಗೊಳಿಸುವ ಹಿಂದಿನ ಹುನ್ನಾರವೇನು? ಸ್ಥಳೀಯ ಜನರ ಸಮಸ್ಯೆಗಳು ದೂರದ ನಗರಾಭಿವೃದ್ಧಿ ಇಲಾಖೆಗೆ ಹೇಗೆ ಅರ್ಥವಾಗುತ್ತಿದೆ?
ಇನ್ನೂ 9-11 ಗಾಗಿ ಅರ್ಜಿ ಸಲ್ಲಿಸುವಾಗ ಅದರ ಸಂಪರ್ಕ ರಸ್ತೆ ಬೇರೆ ವ್ಯಕ್ತಿಗಳಿಗೆ ಸೇರಿದ್ದಾದರೆ ಅದನ್ನು ಪಂಚಾಯತಿಗೆ ಹಸ್ತಾಂತರಿಸಲು ಅರ್ಜಿದಾರರಿಗೆ ಸೂಚಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅರ್ಜಿದಾರನು ರಸ್ತೆ ನೀಡಿದಾತನಿಗೆ ಹೋಗಿ ನೀವು ಸದ್ರಿ ರಸ್ತೆಯನ್ನು ಪಂಚಾಯತಿಗೆ ಹಸ್ತಾಂತರಿಸಿ ಎಂದರೆ ಕಠಿಣ ನಿಯಮಗಳನ್ನು ಪಾಲಿಸಿ ಅಗಾಧ ಮೊತ್ತದ ಖರ್ಚು ಮತ್ತು ಸಮಯ ವ್ಯಯಿಸಿ ಉಚಿತವಾಗಿ ಹಸ್ತಾಂತರಿಸಲು ಆತ ಒಪ್ಪುವನೇ? ಅದೇ ರೀತಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಂಘ ಸಂಸ್ಥೆಗಳು ಕೃಷಿ ಭೂಮಿ ಹೊಂದಲು ಅವಕಾಶವಿಲ್ಲದ 79ಬಿ ರದ್ದುಪಡಿಸಲಾಗಿದ್ದು ಇದೀಗ ಯಾವುದೇ ಕೃಷಿ ಭೂಮಿ ಪಂಚಾಯತ್ ಹೆಸರಲ್ಲಿ ಭೂ ಪರಿವರ್ತನೆ ಮಾಡದೆ ಹೊಂದಲು ಏನು ಅಡ್ಡಿ? ಯಾವುದೇ ನಿಯಮಗಳನ್ನು ಜಾರಿಗೆ ತರುವಾಗ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಅಗತ್ಯ. ಜನಪ್ರತಿನಿಧಿಗಳು ತಮ್ಮ ಕುರ್ಚಿಗಾಗಿ ಕಾದಾಡುವುದನ್ನು ಬಿಟ್ಟು ಇಂತಹ ನಿಯಮಗಳಿಂದ ಜನಸಾಮಾನ್ಯರಿಗಾಗುವ ತೊಂದರೆ ಬಗ್ಗೆ ಅರಿವು ಹೊಂದಿರಬೇಕು. ಅಧಿಕಾರಿಗಳು ಸರಕಾರದ ಸುತ್ತೋಲೆಗಳನ್ನು ಓದಿ ಜಾರಿ ಮಾಡುವಾಗ ಅದರ ಸಾಧಕ ಬಾಧಕಗಳನ್ನು ಜನಪ್ರತಿನಿಧಿಗಳ, ಮೇಲಾಧಿಕಾರಿಗಳ ಗಮನಕ್ಕೆ ತರುವುದು ಉತ್ತಮ. ಕಾನೂನು ನಿಯಮಗಳು ಜನರಿಗಾಗಿ ಇರಬೇಕೇ ಹೊರತು ಜನರು ಅವುಗಳಿಗಾಗಿ ಅಲ್ಲ. ಈ ನಿಯಮಗಳನ್ನು ಸಮಗ್ರವಾಗಿ ತಿದ್ದುಪಡಿ ಮಾಡಿ ಗ್ರಾಮೀಣ ಭಾಗದ ಅಭಿವೃದ್ಧಿ ಕೆಲಸಗಳನ್ನು ಗ್ರಾಮ ಪಂಚಾಯತ್ ಗಳಿಗೆ ನೀಡಬೇಕು.
