ಚುನಾವಣಾ ಚಕ್ ಪೊಯಿಂಟ್ ಹೆಸರಿಗೆ ಮಾತ್ರ; ನಿರಂತರ ಹಣ, ಹೆಂಡ ಸಾಗಾಟ ಆರೋಪ : ಪತ್ರಕರ್ತರ ಕಂಡು ಅಲಾರ್ಟ್ ಆದ ಸಿಬ್ಬಂಧಿಗಳು

ರಾಜ್ಯ

ಮೂಡಿಗೆರೆ: ಹಣ-ಹೆಂಡದ ಸರಬರಾಜು ಮತ್ತು ಆದಾಯ ಮೀರಿದ ಹಣವನ್ನು ತಡೆಯುವುದರೊಂದಿಗೆ ಚುನಾವಣಾ ಅಕ್ರಮ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಚೆಕ್ ಪೋಸ್ಟ್ (ತನಿಖಾಠಾಣೆ) ಗಳನ್ನು ಲಕ್ಷಾಂತರ ರೂ ವೆಚ್ಚದಲ್ಲಿ ನಿರ್ಮಿಸಿ ಕೊಟ್ಟು ಅಧಿಕಾರಿ ಸೇರಿದಂತೆ ಆರು ಜನರನ್ನು ನಿಯೋಜನೆ ಮಾಡಿರುತ್ತದೆ .ಆದರೆ ಅಧಿಕಾರಿಗಳು ಮಾಡಿದ ತಪ್ಪಿನಿಂದ ಅಭ್ಯರ್ಥಿಗಳ ಕಡೆಯಿಂದ ಕೋಟ್ಯಾಂತರ ರೂ ಹಣ ಹರಿದು ಬರುತ್ತಿದ್ದರು ತಪಾಸಣೆ ನಡೆಸದೇ ಹಾಗೇ ಬಿಟ್ಟಿರುವ ಪ್ರಕರಣ ವರದಿಯಾಗಿದೆ. ಚುನಾವಣಾ ಅಕ್ರಮಗಳು, ಅಕ್ರಮ ಹಣ ಸಾಗಾಟ ನಿರಾಂತಕವಾಗಿ ನಡೆಯುತ್ತಿದೆ ಎಂದು ಸಾರ್ವಜನಿಕರು ಪತ್ರಕರ್ತರಿಗೆ ತಿಳಿಸಿದ ಹಿನ್ನಲೆಯಲ್ಲಿ ಪತ್ರಕರ್ತರುಗಳಾದ ಸಲಾವುದ್ದಿನ್, ಚಂದ್ರು ಒಡೆಯರ್, ಪ್ರದೀಪ್, ಸೋಮಶೇಖರ್, ಶಾರದ ಶೇಖರ್ ಅವರುಗಳು ಮಧ್ಯಾಹ್ನ ಒಂದು ಗಂಟೆ ಸಮಯಕ್ಕೆ ಬಸ್ಕಲ್ ಚೆಕ್ ಪೋಸ್ಟ್ ಗೆ ಹೋದಾಗ ತಂಡದ ತನಿಖಾ ಠಾಣಾ ಮುಖ್ಯಸ್ಥ ಸ್ಥಳದಲ್ಲಿರಲಿಲ್ಲ. ಬಾಕಿ ಇದ್ದ ಸಿಬ್ಬಂಧಿಗಳು ವಾಹನಗಳು ಓಡಾಡುತ್ತಿದ್ದರು ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಮೊಬೈಲ್ ನೋಡುವುದರಲ್ಲಿ ಬಿಜಿಯಾಗಿದ್ದರು. ಪತ್ರಕರ್ತರು ದೂರದಿಂದ ಚಿತ್ರಿಕರಣ ಮಾಡಿಕೊಳ್ಳುವಾಗ ಅದನ್ನು ಗಮನಿಸಿದ ಸಿಬ್ಬಂಧಿಯೋರ್ವ ತಮ್ಮ ಸಹಪಾಟಿಗಳೊಂದಿಗೆ ಅಲಾರ್ಟ್ ಆಗಿ ಗಡಿ-ಬಿಡಿಯಲ್ಲಿ ನಾಮಕಾವಸ್ಥೆಗೆ ತಪಾಸಣೆ ಮಾಡಲು ಶುರುವಿಟ್ಟರು.

ತನಿಖಾಧಿಕಾರಿಗಳ ಬಗ್ಗೆ ವಿಚಾರಿಸಿದಾಗ ಅವರಿಗೆ ಆರೋಗ್ಯ ಸರಿ ಇಲ್ಲಾ ಎಂಬ ಉತ್ತರ ಬಂತು. ಕ್ಯಾಮರಾ ಮ್ಯಾನ್‌ಗೆ ಸರ್ಕಾರದಿಂದ ಯಾವುದೇ ಟ್ಯಾಗ್ ಕೊಡದೇ ಇರುವುದು ತಪಾಸಣೆ ಲೋಪ ಎದ್ದು ಕಾಣುತಿತ್ತು. ಅಲ್ಲಿಂದ ಸೀದಾ ಚೀಕನಹಳ್ಳಿಗೆ ಹೋದರೆ ಹಾಸನ ಜಿಲ್ಲೆಯ ತನಿಖಾಠಾಣೆಯಲ್ಲೂ ಅದೇ ಕಥೆ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಮರದಡಿಯಲ್ಲಿ ವಿರಮಿಸುತ್ತಿದ್ದರು.

ಮೂಡಿಗೆರೆ ಕ್ಷೇತ್ರದ ಕಸ್ಕೇಬೈಲ್ ಚೆಕ್ ಪೋಸ್ಟನಲ್ಲಿ ಮೂವರು ಸಿಬ್ಬಂಧಿಗಳು ಕರ್ತವ್ಯ ನಿರ್ವಹಿಸುತ್ತಿದ್ದು ತಂಡದ ಮುಖ್ಯಸ್ಥ ಅಧಿಕಾರಿ ತಮ್ಮ ಮಗನನ್ನು ಚನ್ನರಾಯಪಟ್ಟಣದಲ್ಲಿ ಶಾಲೆಗೆ ಸೇರಿಸಲು ಹೋಗಿದ್ದರೆ ಮತ್ತೋರ್ವ ಸಹಾಯಕ ಅಧಿಕಾರಿ ಆರೋಗ್ಯ ಹದಗೆಟ್ಟು ಗೈರಾಗಿದ್ದರು. ಇನ್ನೋರ್ವರು ನಾಪತ್ತೆಯಾಗಿದ್ದರು. ಆಗ ದಿಢಿರ್ ಎಂದು ಮಾದರಿ ನೀತಿ ಸಂಹಿತೆ ಸದಸ್ಯೆ ಹಾಗೂ ಸಹಾಯಕ ನಿದೇರ್ಶಕರು ಪಂಚಾಯತ್ ರಾಜ್‌ನ ಶ್ರೀಮತಿ ಶಾರದ ಕೆ.ವಿ ಕಸ್ಕೆಬೈಲ್ ಗೆ ಆಗಮಿಸಿದಾಗ ಪತ್ರಕರ್ತರು ಮೂವರು ಸಿಬ್ಬಂಧಿಗಳನ್ನು ಬಿಟ್ಟು ಉಳಿದ ಅಧಿಕಾರಿಗಳೇ ನಾಪತ್ತೆಯಾಗಿದ್ದರು. ಅಲ್ಲಿದ್ದ ಸಿಸಿ ಕ್ಯಾಮರ ಮಾತ್ರ ತನ್ನ ಕಾರ್ಯ ನಿರ್ವಹಿಸುತಿತ್ತು. ಅಧಿಕಾರಿ ಬಂದು ಒಂದು ಗಂಟೆಯ ನಂತರ ಬಂದ ತನಿಖಾ ಠಾಣೆಯ ಮುಖ್ಯಸ್ಥ ಬಸ್ಸಿನಿಂದಿಳಿದವರೇ ಅಧಿಕಾರಿಗಳ ಎದುರು ತುರಾತುರಿಯಲ್ಲಿ ತಪಾಸಣೆ ಪ್ರಾರಂಭಿಸಿದರು. ಅಲ್ಲಿಗೆ ಆಗಮಿಸಿದ್ದ ಅಧಿಕಾರಿಗಳು ಯಾರ ಪರ್ಮಿಸನ್ ತೆಗೆದುಕೊಂಡು ಹೊರ ಹೋಗಿದ್ದಿರಿ ಎಂದಾಗ ಮುಗುಳು ನಗುತ್ತಾ ಉಢಾಫೆಯ ಉತ್ತರ ನೀಡಿದರು. ನಂತರ ಅವರಿಗೆ ಎಚ್ಚರಿಕೆ ನೀಡಿದ ಅಧಿಕಾರಿ ಅಲ್ಲಿಂದ ನಿರ್ಗಮಿಸಿದರು.

ತನಿಖಾ ಠಾಣೆಗಳು ಅಕ್ರಮ ತಡೆಯುವ ಬದಲು ಅಕ್ರಮಕ್ಕೆ ಮತ್ತಷ್ಟು ದಾರಿ ಮಾಡಿಕೊಟ್ಟಿವೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲಾ. ಇನ್ನು ಕಿರುಗುಂದ ತನಿಖಾ ಠಾಣೆಯಲ್ಲಿ ವಿಡೀಯೋ ಕ್ಯಾಮರ ಬದಲು ಮೊಬೈಲ್ ಕ್ಯಾಮರದಲ್ಲಿ ಚಿತ್ರಿಕರಣ ಮಾಡುತ್ತಿರುವುದು ಕಂಡು ಬಂತು. ಏನೇ ಆಗಲಿ ಈ ಅಧಿಕಾರಿಗಳು ಮಾಡಿರೋ ಎಡವಟ್ಟಿಗೆ ಹಣ ಮತ್ತು ವಸ್ತುಗಳು ಸೇರಬೇಕಾದ ಜಾಗ ಸೇರಿಯಾಯ್ತು ಇನ್ನು ಹಂಚುವುದಷ್ಟೇ ಬಾಕಿ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿಗಳು ತನಿಖಾ ಠಾಣೆಗಳ ಸಿಸಿ ಕ್ಯಾಮರವನ್ನು ಪರಿಶೀಲಿಸಿದರೆ ಇನ್ನಷ್ಟು ಸತ್ಯ ಹೊರಬರುತ್ತದೆ. ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳ ನಿರ್ಲಕ್ಷವೇ ಇಂತಹ ಅಕ್ರಮ ನಡೆಸಲು ಸಾಧ್ಯವಾಗುತ್ತಿದೆ ಎಂದು ತನಿಖಾ ಠಾಣಾಯ ಸುತ್ತ ಮುತ್ತಲಿನ ಗ್ರಾಮಸ್ಥರು ಪತ್ರಕರ್ತರ ಬಳಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

ಪತ್ರಕರ್ತರು (ಎಂಸಿಸಿ) ಮಾದರಿ ನೀತಿ ಸಂಹಿತೆ ಅಧಿಕಾರಿಗಳ ಗಮನಕ್ಕೆ ತಂದಾಗ ನಿರ್ಲಕ್ಷ ದೋರಣೆ ತೋರಿಸಿದ್ದು ಪತ್ರಕರ್ತರಲ್ಲಿ ಅಸಮಧಾನವನ್ನುಂಟು ಮಾಡಿತ್ತು. ಮೂಡಿಗೆರೆ ತಾಲ್ಲೂಕಿನ ಎಫ್ ಎಸ್‌ಟಿ ತಂಡಗಳ ವಾಹನಗಳಲ್ಲಿ ಕೇವಲ ಎರಡರಿಂದ ಮೂರು ಜನ ಓಡಾಡುತ್ತಿದ್ದು ಕರ್ತವ್ಯ ನಿರ್ವಹಿಸದೇ ಸುಖಾಸುಮ್ಮನೆ ಓಡಾಡುವ ಮೂಲಕ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂಬ ಆರೋಪಗಳು ಸಿಬ್ಬಂಧಿಗಳಿಂದ ಕೇಳಿ ಬರುತ್ತಿದೆ. ರಾಜ್ಯ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳಿಗೆ ಛಾಟಿ ಬೀಸುವರೇ ಎಂದು ಕಾದು ನೋಡೋಣ