ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲು 30 x 40 ಅಡಿ ನಿವೇಶನದವರೆಗಿನ ಕಟ್ಟಡಗಳಿಗೆ ಪ್ರಾರಂಭಿಕ ಪ್ರಮಾಣಪತ್ರ (ಸಿಸಿ) ಮತ್ತು ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆಯುವುದಕ್ಕೆ ವಿನಾಯಿತಿ ನೀಡಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ‘ಕರ್ನಾಟಕ ಪಾಲಿಕೆಗಳ ತಿದ್ದುಪಡಿ ಮಸೂದೆ- 2025’ ಮಂಡಿಸಿದ ಸಚಿವರು, ‘ಕಡಿಮೆ ಅಪಾಯವಿರುವ ಕಟ್ಟಡಗಳಿಗೆ ಒಸಿ ಮತ್ತು ಸಿಸಿ ಪಡೆಯುವುದನ್ನು ತೆಗೆದುಹಾಕಲಾಗಿದೆ. 50 x 80 ಅಡಿಯವರೆಗಿನ ನಿವೇಶನದಲ್ಲಿರುವ ಕಟ್ಟಡಗಳಿಗೆ ಒಸಿ, ಸಿಸಿ ಬೇಡ ಎಂಬುದು ನನ್ನ ಸಲಹೆಯಾಗಿದೆ. ಆದರೆ, ಸರ್ಕಾರ 30 x 40 ಅಡಿ ನಿವೇಶನದವರೆಗೆ ನಿಗದಿಪಡಿಸುವ ಸಾಧ್ಯತೆ ಇದೆ’ ಎಂದು ಮಾಹಿತಿ ನೀಡಿದರು.
