ಖಾಸಗಿ ತೆಕ್ಕೆಗೆ ಬಂದ ನಂತರ ಇಲ್ಲಿ ನಡೆಯುತ್ತೆ ಕರಾಳ ಕೃತ್ಯ; ಈ ಹಿಂದೆಯೂ ನಡೆದಿತ್ತು ಕಳ್ಳರ ಕೈಚಳಕ.!
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಜಪೆ) ಮಂಗಳೂರಿನ ಹಿರಿಮೆಗೊಂದು ಗರಿ. ಆದರೆ ಇತ್ತೀಚಿನ ದಿನಗಳಲ್ಲಿ ಏರ್ಪೋರ್ಟ್ ಸಿಬ್ಬಂದಿಗಳ ರಾದ್ಧಾಂತ, ಅನಪೇಕ್ಷಿತ ಘಟನೆಗಳು ಬ್ರ್ಯಾಂಡ್ ಮಂಗಳೂರು ಕನಸಿಗೆ ಕಪ್ಪು ಚುಕ್ಕೆ ಇಟ್ಟಿದೆ. ಅದರಲ್ಲೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ತೆಕ್ಕೆಗೆ ಬಂದ ನಂತರವಂತೂ ಇಲ್ಲಿ ಕೆಲವೊಂದು ಕರಾಳ ಕೃತ್ಯಗಳು ಸದ್ದಿಲ್ಲದೆ ನಡೆಯುತ್ತಿರುವುದಂತೂ ಸತ್ಯ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಲಗೇಜ್ ಬ್ಯಾಗ್ ನಲ್ಲಿದ್ದ 5 ಲಕ್ಷ ಮೌಲ್ಯದ 56 ಗ್ರಾಂ ಚಿನ್ನವನ್ನು ಕಳವುಗೈದ ಘಟನೆ ಬೆಳಕಿಗೆ ಬರುತ್ತಿದ್ದಂತೆ ತನಿಖೆಗೆ ಇಳಿದ ಬಜಪೆ ಪೊಲೀಸರು ಏರ್ಪೋರ್ಟ್ ನಲ್ಲಿ ಲೋಡಿಂಗ್ ಆನ್ ಲೋಡಿಂಗ್ ಮಾಡುತ್ತಿದ್ದ ಸಿಬ್ಬಂದಿಗಳಾದ ಕಂದಾವರ ನಿವಾಸಿ ನಿತಿನ್, ಮೂಡುಪೆರಾರ ನಿವಾಸಿಗಳಾದ ಸದಾನಂದ, ರಾಜೇಶ್, ಬಜಪೆ ನಿವಾಸಿ ಪ್ರವೀಣ್ ಫೆರ್ನಾಂಡಿಸ್ ಎಂಬವರನ್ನು ಬಂಧಿಸಿದ್ದರು. ಕಳವುಗೈದ ಚಿನ್ನವನ್ನು ಮೂಡುಪೆರಾರ ನಿವಾಸಿ ರವಿರಾಜ್ ಎಂಬವರಿಗೆ ಮಾರಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದರು. ಈ ಸಂಬಂಧ ರವಿರಾಜ್ ಎಂಬವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆ ಕೂಡ ನಡೆಯುತ್ತಿದೆ.

ಮಂಗಳೂರು ಏರ್ ಪೋರ್ಟ್ ನಲ್ಲಿ ಖದೀಮ ಕೆಲಸಗಳು ಇದೇ ಮೊದಲು ನಡೆಯುತ್ತಿರುವುದಲ್ಲ. ಖಾಸಗಿ ತೆಕ್ಕೆಗೆ ಏರ್ ಪೋರ್ಟ್ ಜಾರಿದ ನಂತರ ಪ್ರಯಾಣಿಕರ ಜೊತೆ ಇಲ್ಲಿನ ಸಿಬ್ಬಂದಿಗಳ, ಅಧಿಕಾರಿಗಳ ದುರಂಹಕಾರದ ವರ್ತನೆ ಜಗಜ್ಜಾಹೀರು ಕೂಡ ಆಗಿತ್ತು. ಇಲ್ಲಿನ ಏರ್ ಪೋರ್ಟ್ ಸಿಬ್ಬಂದಿಗಳ ವರ್ತನೆಯಿಂದ ರೋಸಿ ಹೋದ ಕೆಲವರು ಕೇರಳದ ಕಣ್ಣೂರಿನ ವಿಮಾನ ನಿಲ್ದಾಣವನ್ನು ಆಶ್ರಯಿಸುತ್ತಿರುವುದು ಕೂಡ ಸುಳ್ಳಲ್ಲ. ಇತ್ತೀಚೆಗೆ ಪೊಲೀಸರ ಕೈಗೆ ಸಿಕ್ಕ ಏರ್ಪೋರ್ಟ್ ಕಳ್ಳರು ಈ ಹಿಂದೆಯೂ ಇಂತಹ ಅನೇಕ ಘಟನೆಗಳಲ್ಲಿ ಭಾಗವಹಿಸಿರುವ ಸಾಧ್ಯತೆ ಕೂಡ ಇದೆ. 2025 ರ ಜನವರಿ ತಿಂಗಳಲ್ಲಿ ಪ್ರಯಾಣಿಕ ಮನೋಹರ ಶೆಟ್ಟಿ ಎಂಬವರ ಲಗೇಜ್ ನಿಂದ 2 ಲಕ್ಷ ರೂಪಾಯಿ ಕಳವು ಮಾಡಿರುವ ಸಂಬಂಧ ಬಜಪೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ತನಿಖೆಯ ಹಂತದಲ್ಲಿದೆ. ಈ ಕೃತ್ಯದಲ್ಲೂ ಇದೇ ಖದೀಮರು ಭಾಗವಹಿಸಿರಬಹುದು. ಆದರೆ ಏರ್ ಪೋರ್ಟ್ ಅಧಿಕಾರಿಗಳು ಇವರ ಮೇಲೆ ಕ್ರಮ ತೆಗೆದುಕೊಳ್ಳದೆ ಹಾಗೆಯೇ ಬಿಟ್ಟಿರುವುದು ಇದರ ಹಿಂದೆ ದೊಡ್ಡ ರಹಸ್ಯ ಅಡಗಿರುವ ಸಾಧ್ಯತೆ ಇದೆ. ಪಾಲು ಅಧಿಕಾರಿಗಳಿಗೂ ಸಂದಾಯವಾಗುತ್ತಿದೆಯೋ ಎಂಬ ಅನುಮಾನ ಕೂಡ ಮೂಡುವಂತಾಗಿದೆ. ಕಳೆದ ಒಂಭತ್ತು ವರ್ಷಗಳಿಂದ ಇಲ್ಲಿಯೇ ಝಂಡಾ ಹೂಡಿ ಕೆಲಸ ಮಾಡುತ್ತಿದ್ದು, ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರೂ ಏರ್ಪೋರ್ಟ್ ಆಡಳಿತ ಮಂಡಳಿ ಇವರನ್ನು ವಜಾ ಮಾಡದೆ ಇಟ್ಟುಕೊಂಡಿರುವ ಹಿಂದಿನ ಬ್ರಹ್ಮಾಂಡ ರಹಸ್ಯವಾದರೂ ಏನು.?

ಇನ್ನು ಅದಾನಿ ತೆಕ್ಕೆಯಲ್ಲಿ ಮಂಗಳೂರು ವಿಮಾನ ನಿಲ್ದಾಣ ಟೈಯಫ್ ಆದ ನಂತರ ಇಲ್ಲಿನ ಖಾಸಗಿ ಆಡಳಿತ ಮಂಡಳಿ ಸಿಬ್ಬಂದಿಗಳ ಪೂರ್ವಾಪರ ತಿಳಿಯದೆ ಬೇಕಾಬಿಟ್ಟಿಯಾಗಿ ನೇಮಕ ಮಾಡಿರುವುದು, ಏರ್ ಪೋರ್ಟ್ ಸಿಬ್ಬಂದಿಯಾದ ಕೆಲವೇ ತಿಂಗಳಲ್ಲಿ ಈ ಖದೀಮರು ಐಷಾರಾಮಿ ಮನೆ, ಕಾರು, ಬಂಗಲೆ ಕಟ್ಟಿರುವ ಕಾರುಬಾರಿನ ಹಿಂದೆಯೂ ಕರಾಳ ಕೃತ್ಯದ ವಾಸನೆ ಬಡಿಯುತ್ತಿದೆ.

ಪ್ರಯಾಣಿಕರು ಬೆಲೆಬಾಳುವ ವಸ್ತುಗಳಾದ ಚಿನ್ನ, ನಗದನ್ನು ಮೊಬೈಲ್ ಬ್ಯಾಗೇಜ್ ನಲ್ಲಿ ಕಳುಹಿಸುವಾಗ ಬ್ಯಾಗ್ ಪರಿಶೀಲಿಸುವುದು, ಬ್ಯಾಗ್ ಲಾಕ್ ಆಗಿದ್ದಲ್ಲಿ ಲಾಕ್ ಒಡೆದು ದೋಚುವುದು ಮಾಮೂಲಿಯಾಗಿದೆ. ಇಂತಹ ಖದೀಮರಿಂದ ಮಂಗಳೂರಿಗೆ ದೊಡ್ಡ ಕಳಂಕ ಅಂಟಿಕೊಳ್ಳುವಂತಾಗಿದೆ. ಈಗಾಗಲೇ ದುಬೈ ಸರಕಾರ ಮಂಗಳೂರಿಗರಿಗೆ ವೀಸಾ ನೀಡುತ್ತಿಲ್ಲ. ಸ್ಟ್ಯಾಂಪಿಂಗ್ ಮಾಡುತ್ತಿಲ್ಲ. ಈ ಹಿಂದೆ ಕೇರಳಿಗರಿಗೆ ನೀಡುತ್ತಿರಲಿಲ್ಲ. ಆದರೆ ಈಗ ಮಂಗಳೂರಿಗೂ ಮಂಗಳೂಗರಿಗೂ ಅ ಸ್ಥಿತಿ ಬಂದಿರುತ್ತದೆ. ಏಕೆಂದರೆ ಮಂಗಳೂರಿನ ಕೆಲವು ಪ್ರಯಾಣಿಕರಿಂದಲೇ ಡ್ರಗ್ಸ್, ಮಾದಕ ದ್ರವ್ಯ ದುಬೈಗೆ ಸರಬರಾಜಾಗುತ್ತಿರುವುದು ಹೆಚ್ಚಂತೆ. ಮಂಗಳೂರಿನ ಜನ ಬುದ್ಧಿವಂತರು ಎಂಬ ಪ್ರತೀತಿ ಇದೆ. ಡ್ರಗ್ಸ್, ಸ್ಮಗ್ಲಿಂಗ್. ಇದೀಗ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣದಲ್ಲಿ ಸ್ವತಹ ಸಿಬ್ಬಂದಿಗಳೇ ದರೋಡೆಕೋರರ ರೀತಿ ಪರಿವರ್ತಿತರಾಗಿರುವುದು ಇಲ್ಲಿನ ಇಮೇಜಿಗೆ ಧಕ್ಕೆ ತಂದಿದೆ.

ಒಂದು ಕಡೆ ಮಂಗಳೂರಿಗೆ ಕೋಮು ಸೂಕ್ಷ್ಮ ಹಣೆಪಟ್ಟಿ, ಮತ್ತೊಂದು ಕಡೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾದಲ್ಲೇ ಸಿಬ್ಬಂದಿ, ಅಧಿಕಾರಿಗಳಿಂದಲೇ ದೋಚುವ ಸಂಸ್ಕೃತಿ ಆರಂಭವಾಗಿರುವುದು ಬ್ರ್ಯಾಂಡ್ ಮಂಗಳೂರು ಕಲ್ಪನೆಗೆ ಕಳಂಕ ತಂದಂಟ್ಟಾಗಿದೆ. ವಿಪರ್ಯಾಸವೆಂದರೆ ಇಲ್ಲಿನ ಅತೀಬುದ್ಧಿವಂತರು, ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಲು ಪಾರ್ಕ್, ಮಾಲ್ ಗಳಲ್ಲಿ ಅನ್ಯಮತೀಯರ ಹುಡುಗ ಹುಡುಗಿಯರ, ಗೋವಿನ ತಲೆಬುರುಡೆ ಹುಡುಕುತ್ತಾ ಧರ್ಮರಕ್ಷಣೆಯ ಕೆಲಸ ಮಾಡುತ್ತಿದ್ದಾರೆ ವಿನಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರಿಗೆ ಕಳಂಕ ಉಂಟಾಗುತ್ತಿದ್ದರೂ ಜಾಣ ಮೌನಕ್ಕೆ ಜಾರಿದ್ದಾರೆ.
