ತುರ್ತು ಚಿಕಿತ್ಸೆಗೆ ಮುಂಗಡ ಹಣ ಬೇಡಿಕೆ ಇಡುವಂತಿಲ್ಲ , ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು: ಆರೋಗ್ಯ ಇಲಾಖೆ

ರಾಜ್ಯ

ಅಪಘಾತ ಸಂದರ್ಭದಲ್ಲಿ ಮುಂಗಡ ಹಣ ಪಾವತಿಸುವಂತೆ ಬೇಡಿಕೆಯಿಡದೆ ಸಂತ್ರಸ್ತರಿಗೆ ತುರ್ತು ಚಿಕಿತ್ಸೆ ನೀಡುವ ಕಾನೂನುಬದ್ಧ ಬಾಧ್ಯತೆಯನ್ನು ರಾಜ್ಯ ಸರಕಾರ ಪುನರುಚ್ಚರಿಸಿದೆ.

ವೈದ್ಯಕೀಯ ಸಂಸ್ಥೆ ಅಥವಾ ವೈದ್ಯರು ಚಿಕಿತ್ಸೆಗೂ ಮೊದಲು ಹಣದ ಬೇಡಿಕೆ ಇಡುವಂತಿಲ್ಲ. ವಿಳಂಬ ಮಾಡದೇ ಚಿಕಿತ್ಸೆ ನೀಡುವುದು ಕಡ್ಡಾಯವಾಗಿದೆ. ಉಲ್ಲಂಘನೆ ಮಾಡಿದಲ್ಲಿ ಒಂದು ಲಕ್ಷ ರೂಪಾಯಿ ಗಳವರೆಗೆ ದಂಡ ವಿಧಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.

2025 ರ ರಸ್ತೆ ಅಪಘಾತ ಸಂತ್ರಸ್ತರ ನಗದು ರಹಿತ ಚಿಕಿತ್ಸೆ ಯೋಜನೆಯನ್ನು ಉಲ್ಲೇಖಿಸಿ ‘ರಸ್ತೆ ಅಪಘಾತದ ಸಂತ್ರಸ್ತರು’ ಅಪಘಾತದ ದಿನಾಂಕದಿಂದ ಏಳು ದಿನಗಳವರೆಗೆ ಪ್ರತಿ ಸಂತ್ರಸ್ತರಿಗೆ ಒಂದು ಲಕ್ಷದ ಐವತ್ತು ಸಾವಿರ ರೂಪಾಯಿಗಳವರೆಗೆ ಯಾವುದೇ ಗೊತ್ತುಪಡಿಸಿದ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ. ರಾಜ್ಯ ರಸ್ತೆ ಸುರಕ್ಷತಾ ಮಂಡಳಿಯು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದ್ದು, ಮೋಟಾರು ವಾಹನ ಅಪಘಾತ ನಿಧಿಯಿಂದ ಮರು ಪಾವತಿ ಮಾಡಲಾಗುತ್ತದೆ ಎಂದು ಅದು ತಿಳಿಸಿದೆ.