ಬ್ಯಾರೇಜ್ ನಿರ್ಮಿಸಿದ ಗುತ್ತಿಗೆದಾರನಿಗೆ 1.31 ಕೋಟಿ ರೂಪಾಯಿ ಬಿಲ್ ಬಾಕಿ, ಬೆಳಗಾವಿ ಜಿಲ್ಲಾಧಿಕಾರಿ ಕಾರು ಜಪ್ತಿ

ರಾಜ್ಯ

ಬ್ಯಾರೇಜ್ ನಿರ್ಮಿಸಿದ ಗುತ್ತಿಗೆದಾರನಿಗೆ ಬಡ್ಡಿ ಸಮೇತವಾಗಿ ರೂಪಾಯಿ 1.31 ಕೋಟಿ ಬಾಕಿ ಬಿಲ್ ನೀಡುವುದಕ್ಕೆ ವಿಫಲವಾದ ಕಾರಣ ಅರ್ಜಿದಾರರ ಪರ ವಕೀಲ ಓ.ಬಿ.ಜೋಶಿ ಅವರು, ಇಲ್ಲಿನ ಒಂದನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಲಯದ ಆದೇಶದಂತೆ ಬೆಳಗಾವಿ ಜಿಲ್ಲಾಧಿಕಾರಿ ಕಾರನ್ನು ಶುಕ್ರವಾರ ಜಪ್ತಿ ಮಾಡಿದರು.

ಸಣ್ಣ ನೀರಾವರಿ ಇಲಾಖೆಗೆ ಸೇರಿದ ದೂಧಗಂಗಾ ನದಿಯ ಬ್ಯಾರೇಜ್ ನಿರ್ಮಾಣದ ಗುತ್ತಿಗೆಯನ್ನು ನಾರಾಯಣ ಕಾಮತ್ ಅವರಿಗೆ 1992-93ರಲ್ಲಿ ನೀಡಲಾಗಿತ್ತು. ಕಾಮಗಾರಿಗೆ ಬೇಕಿರುವ ಅನುದಾನ, ಸಾಮಾಗ್ರಿ ಇಲಾಖೆ ನೀಡುವುದಾಗಿ ತಿಳಿಸಿತ್ತು. ಆದರೆ, ಕಾಮಗಾರಿ ಆರಂಭವಾಗಿ ಮೂರು ವರ್ಷಗಳಾದರೂ ಅನುದಾನ ಕೊಡಲಿಲ್ಲ. ಇದರಿಂದಾಗಿ ನಾರಾಯಣ 1995ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಗುತ್ತಿಗೆದಾರನಿಗೆ ರೂ. 35 ಲಕ್ಷ ಪಾವತಿಸುವಂತೆ ಆದೇಶ ನೀಡಿತ್ತು. ಸರ್ಕಾರ ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು. ಆಗ ವಿಚಾರಣೆ ಮಾಡಿದ ಹೈಕೋರ್ಟ್, ಮರುವಿಚಾರಣೆ ಮಾಡುವಂತೆ ಆದೇಶಿಸಿತ್ತು.

ಮರುವಿಚಾರಣೆ ಮಾಡಿದ ಕೆಳ ನ್ಯಾಯಾಲಯ, 2025ರ ಜೂನ್ ತಿಂಗಳೊಳಗೆ ಒಟ್ಟು ಬಾಕಿ ಮೊತ್ತದಲ್ಲಿ ಶೇ 50ರಷ್ಟು ಬಡ್ಡಿ ಸಮೇತವಾಗಿ ಗುತ್ತಿಗೆದಾರನಿಗೆ ಪಾವತಿಸುವಂತೆ ತೀರ್ಪು ಕೊಟ್ಟಿತ್ತು. ಈವರೆಗೂ ಹಣ ನೀಡದ ಹಿನ್ನೆಲೆಯಲ್ಲಿ ವಾರೆಂಟ್ ಸಹ ಜಾರಿಯಾಗಿತ್ತು. ಈ ಹಿನ್ನಲೆಯಲ್ಲಿ ಶುಕ್ರವಾರದಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರನ್ನು ಕೋರ್ಟ್ ಆದೇಶದಂತೆ ಜಪ್ತಿ ಮಾಡಲಾಗಿದೆ.