ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ, 4,346 ಹುದ್ದೆಗಳ ಭರ್ತಿಗೆ ಸಿದ್ದತೆ

ರಾಜ್ಯ

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ನೇರ ನೇಮಕಾತಿ ವೇಳೆ ಅನುಸರಿಸಬೇಕಾದ ‘ಪರಿಷ್ಕೃತ ಮೀಸಲಾತಿ ರೋಸ್ಟರ್’ ನಿಗದಿಪಡಿಸಲಾಗಿದ್ದು, ಪೊಲೀಸ್ ಇಲಾಖೆಯಲ್ಲಿ 4,346 ಹುದ್ದೆಗಳ ಭರ್ತಿಗೆ ಸಿದ್ದತೆಗಳು ಆರಂಭವಾಗಿವೆ.

ಪೊಲೀಸ್‌ ಇಲಾಖೆಯಲ್ಲಿ ವಿವಿಧ ಹಂತದ ಸಿಬ್ಬಂದಿ ಒಳಗೊಂಡು ಒಟ್ಟು 1,11,330 ಮಂಜೂರಾದ ಹುದ್ದೆಗಳಿವೆ. ಆ ಪೈಕಿ 18,581 ಹುದ್ದೆಗಳು ಖಾಲಿ ಇವೆ. ಹೀಗಾಗಿ, ಕರ್ತವ್ಯದಲ್ಲಿರುವ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಸೃಷ್ಟಿಯಾಗಿದೆ. ತಕ್ಷಣವೇ ಕೆಲವು ಹುದ್ದೆಗಳನ್ನಾದರೂ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಂಡು ಸಿಬ್ಬಂದಿ ಮೇಲಿನ ಒತ್ತಡ ಕಡಿಮೆ ಮಾಡಲು ಇದೀಗ ಇಲಾಖೆ ಮುಂದಾಗಿದೆ.

ಈ ಸಂಬಂಧ ನೇಮಕಾತಿ ವಿಭಾಗದ (ಪೊಲೀಸ್‌) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ಒಳಮೀಸಲಾತಿ ಜಾರಿಗೆ ಬಂದಿರುವ ಕಾರಣ ಹುದ್ದೆಗಳನ್ನು ಮರು ಹಂಚಿಕೆ ಮಾಡಿ, ಆ ಪಟ್ಟಿಯನ್ನು ನೇಮಕಾತಿ ವಿಭಾಗಕ್ಕೆ ರವಾನಿಸಿದ್ದಾರೆ. 2024ರ ನವೆಂಬರ್‌ನಲ್ಲೂ 4,115 ಹುದ್ದೆಗಳ ನೇಮಕಾತಿಗೆ ಇಲಾಖೆ ಮುಂದಾಗಿತ್ತು. ಆದರೆ, ಒಳಮೀಸಲಾತಿ ನಿಗದಿ ಆಗುವವರೆಗೂ ಹೊಸದಾಗಿ ಯಾವುದೇ ಅಧಿಸೂಚನೆ ಪ್ರಕಟಿಸಬಾರದು ಎಂದು ರಾಜ್ಯ ಸರ್ಕಾರ ಸೂಚಿಸಿತ್ತು. ಹೀಗಾಗಿ ಅಧಿಸೂಚನೆ ಕಾಯ್ದಿರಿಸಲಾಗಿತ್ತು. ರಾಜ್ಯದಲ್ಲಿ ಒಂದು ಲಕ್ಷ ಜನರಿಗೆ ಕೇವಲ 165 ಪೊಲೀಸರಷ್ಟೇ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲೂ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.