ಬಲಿಷ್ಠ ವಿರೋಧ ಪಕ್ಷಗಳ ಅಗತ್ಯತೆ – ಕರ್ನಾಟಕದ ನೋಂದಣಿ ಕಾಯ್ದೆ ತಿದ್ದುಪಡಿ, ನೋಂದಣಿ ಶುಲ್ಕ ಹೆಚ್ಚಳ ಮತ್ತು ಜನಜೀವನದ ಮೇಲೆ ಅದರ ಪರಿಣಾಮ

ಕರಾವಳಿ

ವಿರೋಧ ಪಕ್ಷಗಳು ತಮ್ಮ ಕರ್ತವ್ಯವನ್ನು ಮರೆತರೆ, ಪ್ರಜಾಪ್ರಭುತ್ವವೇ ದುರ್ಬಲವಾಗುತ್ತದೆ.

✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು

ಕೆಲವು ಮಂತ್ರಿಗಳು ದೊಣ್ಣೆ ನಾಯಕರಂತೆ ವರ್ತಿಸಿ ಹೊಸ ಹೊಸ ಕಾನೂನುಗಳನ್ನು ಜ್ಯಾರಿಗೆ ತರುವಾಗ ಅದರ ಸಾಧಕ ಬಾಧಕಗಳ ಬಗ್ಗೆ ವಿವರವಾದ, ಸಾಕಾರಣಾತ್ಮಕ ಚರ್ಚೆ ಮಾಡಿ ವಿದೇಯಕಗಳನ್ನು ಅಂಗೀಕರಿಸುವ ಬದಲಿಗೆ, ವಿರೋಧ ಪಕ್ಷದ ನಾಯಕರು ಸಹಿತ, ಆ ಸರಕಾರ ಹೇಳಿದ್ದನ್ನೆಲ್ಲ ಅಜ್ಞಾನಿಗಳಂತೆ ಕೇಳಿ, ಕಾನೂನು ಮಂಡಿಸಿದ ಮಂತ್ರಿಗಳಿಗೆ ಜಯಕಾರ ಮಾಡುತ್ತಿರುವುದು ಸಂವಿಧಾನದ ಆಶಯೋತ್ತರಗಳಿಗೆ ವಿರುದ್ಧ ಎನ್ನದೆ ವಿಧಿಯಿಲ್ಲ.

ಪ್ರಜಾಪ್ರಭುತ್ವವು ಕೇವಲ ಮತದಾನದ ಹಕ್ಕಿಗೆ ಸೀಮಿತವಾಗಿರುವುದಿಲ್ಲ. ಅದು ಆಡಳಿತ ಮತ್ತು ವಿರೋಧದ ಪಕ್ಷಗಳ ನಡುವೆ ಸಮತೋಲನ ಸಾಧಿಸುವ ವ್ಯವಸ್ಥೆಯಾಗಿದೆ. ಆಡಳಿತ ಪಕ್ಷ ಜನಪರ ನೀತಿಗಳನ್ನು ತರಬೇಕಾದರೆ, ವಿರೋಧ ಪಕ್ಷಗಳು ಆ ನೀತಿಗಳನ್ನು ಪರಿಶೀಲಿಸಿ, ಅವುಗಳಲ್ಲಿ ಇರುವ ದೋಷಗಳನ್ನು ತಿದ್ದಿ, ಜನರ ಧ್ವನಿಯನ್ನು ಪ್ರತಿಬಿಂಬಿಸಬೇಕಾಗಿದೆ. ಆದರೆ ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ವಿರೋಧ ಪಕ್ಷಗಳ ದುರ್ಬಲತೆ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ವಿರೋಧಪಕ್ಷಗಳು ಜಾತಿರಾಜಕಾರಣದಲ್ಲೇ ನಿರತರಾಗಿದ್ದು, ಜನರ ಹಿತಾಸಕ್ತಿಗೆ ಹಾನಿಕಾರಕವಾದ ಹಲವು ನಿರ್ಧಾರಗಳನ್ನು ಕರ್ನಾಟಕ ಸರಕಾರ ಯಾವುದೇ ವಿರೋಧವಿಲ್ಲದೆ ಜಾರಿ ಮಾಡುತ್ತಿದೆ. ಮಾತ್ರವಲ್ಲದೆ ಇಲ್ಲಿನ ಕೆಲವು ಮಂತ್ರಿಗಳು ದೊಣ್ಣೆ ನಾಯಕರಂತೆ ವರ್ತಿಸಿ ಹೊಸ ಹೊಸ ಕಾನೂನುಗಳನ್ನು ಜ್ಯಾರಿಗೆ ತರುವಾಗ ಅದರ ಸಾಧಕ ಬಾಧಕಗಳ ಬಗ್ಗೆ ವಿವರವಾದ, ಸಾಕಾರಣಾತ್ಮಕ ಚರ್ಚೆ ಮಾಡಿ ವಿದೇಯಕಗಳನ್ನು ಅಂಗೀಕರಿಸುವ ಬದಲಿಗೆ, ವಿರೋಧ ಪಕ್ಷದ ನಾಯಕರು ಸಹಿತ, ಆ ಸರಕಾರ ಹೇಳಿದ್ದನ್ನೆಲ್ಲ ಅಜ್ಞಾನಿಗಳಂತೆ ಕೇಳಿ, ಕಾನೂನು ಮಂಡಿಸಿದ ಮಂತ್ರಿಗಳಿಗೆ ಜಯಕಾರ ಮಾಡುತ್ತಿರುವುದು ಸಂವಿಧಾನದ ಆಶಯೋತ್ತರಗಳಿಗೆ ವಿರುದ್ಧ ಎನ್ನದೆ ವಿಧಿಯಿಲ್ಲ.

GPA ನೋಂದಣಿ ಕಡ್ಡಾಯ ಸಾಮಾನ್ಯ ಜನರ ಮೇಲೆ ಹೆಚ್ಚುವರಿ ಹೊರೆ ಹಿಂದೆ General Power of Attorney (GPA) ಅನ್ನು ಕೇವಲ ನೋಟರಿ ದೃಢೀಕರಣದ ಮೂಲಕ, ಮಾಡಿಕೊಳ್ಳಬಹುದಾಗಿತ್ತು. ಇದು ಹೊರದೇಶದಲ್ಲಿರುವವರು, ಹೊರರಾಜ್ಯಗಳಲ್ಲಿರುವವರು, ರೋಗಿಗಳು, ಗ್ರಾಮಾಂತರ ಪ್ರದೇಶಗಳಲ್ಲಿ ರೈತರು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆಸ್ತಿ ವ್ಯವಹಾರಗಳನ್ನು ನಡೆಸಲು ಅತ್ಯಂತ ಉಪಯುಕ್ತ ಸಾಧನವಾಗಿತ್ತು. ಉದಾಹರಣೆಗೆ, ವಿದೇಶದಲ್ಲಿರುವ ಮಗನು ತನ್ನ ತಾಯಿಗೆ GPA ನೀಡಿದರೆ, ತಾಯಿ ಆಸ್ತಿಯನ್ನು ಮಾರಾಟ/ಬಾಡಿಗೆ/ದಾಖಲೆ ಮಾಡಿಸಲು ಸುಲಭವಾಗುತ್ತಿತ್ತು.

ಆದರೆ ಇತ್ತೀಚಿನ ತಿದ್ದುಪಡಿ ಪ್ರಕಾರ, GPA ಈಗ ಕಡ್ಡಾಯವಾಗಿ ನೋಂದಾಯಿಸಬೇಕಾದ ದಸ್ತಾವೇಜು ಆಗಿದೆ. ಮಾತ್ರವಲ್ಲದೆ, ಈ ತಿದ್ದುಪಡಿ ಕಾಯ್ದೆ ಅಸ್ಪಷ್ಟತೆ ಹಾಗೂ ವೈರುಧ್ಯಗಳಿಂದ ಕೂಡಿದೆ. ಆಸ್ತಿ ವ್ಯವಹರಣೆಗಳಲ್ಲಿನ ವಂಚನೆ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಎಂದು ಹೇಳಲಾಗಿರುವ, ತಿದ್ದುಪಡಿ ಕಾಯ್ದೆಯನ್ನು, ಈಗಾಗಲೇ ನೀಡಲಾಗಿ ಸಂಪೂರ್ಣ ಮುದ್ರಂಕ ಶುಲ್ಕ ಪಾವತಿಸಲಾಗಿರುವ ಜಿಪಿಎ ಹಾಗೂ ಕುಟುಂಬದೊಳಗಿನ ಸದಸ್ಯರ ನಡುವಿನ ವ್ಯವಹಾರಗಳಿಗೂ ಅನ್ವಯಗೊಳಿಸಿರುವುದರಿಂದ ಬಹಳಷ್ಟು ಸಮಸ್ಯೆಗಳಾಗಿವೆ. ಆದರೆ ಈ ಬಗ್ಗೆ ವಿವೇಚನಾಯುತ ಕ್ರಮ ಕೈಗೊಳ್ಳಬೇಕಾಗಿದ್ದ ರಾಜ್ಯ ಸರಕಾರ ಹಾಗೂ ಕಂದಾಯ ಮಂತ್ರಿಗಳು ತಾವೇನೋ ಬಹಳ ದೊಡ್ಡ ಸಾಧನೆಯನ್ನು ಮಾಡಿದವರಂತೆ ತಮ್ಮನ್ನು ತಾವೇ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸೂಕ್ರ ಪ್ರತಿರೋಧವನ್ನು ಒಡ್ಡಬೇಕಾಗಿದ್ದ ವಿರೋಧ ಪಕ್ಷಗಳು ತೆಪ್ಪಗೆ ಕುಳಿತು ಸರಕಾರದ ಕ್ರಮಕ್ಕೆ ತಮ್ಮ ಸಮ್ಮತಿಯನ್ನು ಸೂಚಿಸಿದೆ.

ಆಸ್ತಿ ಮಾರಾಟ, ವರ್ಗಾವಣೆ ವಹಿವಾಟುಗಳಿಗೆ 100% ನೋಂದಣಿ ಶುಲ್ಕದ ಏರಿಕೆ:
ಉಚಿತ ಭಾಗ್ಯವನ್ನು ಘೋಷಣೆ ಮಾಡಿಕೊಂಡು ಕೈಸುಟ್ಟುಕೊಂಡಿದ್ದ ಸರಕಾರ ಅದರಿಂದ ಉಂಟಾಗಿದ್ದ ಆರ್ಥಿಕ ಕಂದರವನ್ನು ಮುಚ್ಚಲು 2023ರ ಒಕ್ಟೋಬರ್ ತಿಂಗಳಲ್ಲಿ ಜಮೀನುಗಳ ಮಾರ್ಗದರ್ಶಿ ದರವನ್ನು 30% ಏರಿಕೆ ಮಾಡಿದ್ದೇವೆಂದು ಹೇಳಿಕೊಂಡು, ಕೆಲವೊಂದು ಕಡೆ ಪ್ರತಿಶತ 400% ರಷ್ಟೂ ಏರಿಕೆ ಮಾಡಿದ್ದ, ರಾಜ್ಯ ಸರಕಾರ, ಈಗ ಮತ್ತೆ 26,000 ಕೋಟಿ ಆದಾಯ ಗಳಿಸುವ ಸಲುವಾಗಿ ನೋಂದಣಿ ಶುಲ್ಕವನ್ನು 100% ಏರಿಕೆ ಮಾಡಿದೆ. ಹಿಂದೆ ಪರಭಾರೆ ನೋಂದಾಯಿಸಲು 5.6% ಮುದ್ರಂಕ ಶುಲ್ಕ ಹಾಗೂ 1% ನೋಂದಣಿ ಶುಲ್ಕ ಇದ್ದಿತು. ಈಗ ಸರ್ಕಾರವು ನೋಂದಣಿ ಶುಲ್ಕವನ್ನು 100% ಹೆಚ್ಚಿಸಿದೆ. ಮೊದಲೆಲ್ಲ, ಇಂತಹ ಬಹುಮುಖ್ಯ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳುವುದು ಆಯವ್ಯಯ ಮಂಡನೆ ಮೂಲಕವಾಗಿತ್ತು. ಆದರೆ ಈಗ ಕರ್ನಾಟಕ ರಾಜ್ಯ ಸರಕಾರ ಕೇವಲ ಸುತ್ತೋಲೆಗಳನ್ನು ಹೊರಡಿಸಿ ನೋಂದಣಿ ಶುಲ್ಕ ಏರಿಕೆ 100% ಏರಿಕೆ ಮಾಡಿದ್ದು, ರಾಜ್ಯದ ಜನರಿಗೆ ಬಗೆದ ದ್ರೋಹ ಹಾಗೂ ನಿಯಮಾವಳಿಗಳು, ಸಂಪ್ರದಾಯದ ಉಲ್ಲಂಘನೆಯಾಗಿದ್ದರೂ, ಪ್ರತಿಪಕ್ಷಗಳು ಇಂಗು ತಿಂದ ಮಂಗನಂತೆ ಸುಮ್ಮನೆ ಕುಳಿತಿರುವುದು ಹಾಸ್ಯಾಸ್ಪದ.
ಸರಕಾರದ ಈ ಜನವಿರೋಧಿ ಕ್ರಮಗಳಿಂದ ಮನೆ ಜಮೀನು ಖರೀದಿ ಮುಂತಾದ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಭಾರಿ ಹೊಡೆದ ಬಿದ್ದಿದೆ. ಕೆಂಪು ಕಲ್ಲು ಸಮಸ್ಯೆ, ಹೊಯಿಗೆ ಸಮಸ್ಯೆ ಇತ್ಯಾದಿಗಳಿಂದ ಈಗಾಗಲೇ ಕಂಗೆಟ್ಟು ಹೋಗಿದ್ದ, ನಿರ್ಮಾಣ ಕ್ಷೇತ್ರ, ಸರಕಾರದ ಈ ಕ್ರಮದಿಂದ ಸಾಕಷ್ಟು ದೊಡ್ಡ ಆರ್ಥಿಕ ಹೊಡೆತವನ್ನು ಅನುಭವಿಸಿದಂತಾಗಿದೆ. ಇನ್ನು ಮುಂದಕ್ಕೆ ಜನ-ಸಾಮಾನ್ಯರಿಗೆ ಮನೆ-ಜಮೀನು ಖರೀದಿಸುವುದು ಇನ್ನಷ್ಟು ಕಷ್ಟವಾಗುತ್ತದೆ. ಮಾತ್ರವಲ್ಲದೆ ಹೂಡಿಕೆದಾರರು ಹೆಚ್ಚುವರಿ ಶುಲ್ಕ ಸಮಸ್ಯೆಯಿಂದ ಹೂಡಿಕೆಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ. ಇದರಿಂದ ಉದ್ಯೋಗಾವಕಾಶಗಳು ಕಡಿಮೆಯಾಗಬಹುದು. ಸರಕಾರದ ಈ ಕ್ರಮದಿಂದ ಶ್ರೀಮಂತರಿಗೆ ಮಾತ್ರ ಆಸ್ತಿ ವ್ಯವಹಾರ ಸಾಧ್ಯವಾಗುತ್ತದೆ, ಬಡ ವರ್ಗಕ್ಕೆ ಮನೆ ಕನಸು ಮತ್ತಷ್ಟು ದೂರವಾಗುತ್ತದೆ.

ವಿರೋಧ ಪಕ್ಷಗಳ ಮೌನ – ಪ್ರಜಾಪ್ರಭುತ್ವದ ದುರ್ಬಲತೆ
ಈ ತಿದ್ದುಪಡಿ ಮತ್ತು ಶುಲ್ಕ ಏರಿಕೆಯಂತಹ ಮಹತ್ವದ ನಿರ್ಧಾರಗಳನ್ನು ವಿರೋಧ ಪಕ್ಷಗಳು ವಿಧಾನಸಭೆಯಲ್ಲಿ ಗಂಭೀರವಾಗಿ ಚರ್ಚಿಸಬೇಕಿತ್ತು. ಆದರೆ ಎಲ್ಲಾ ವಿರೋಧ ಪಕ್ಷಗಳು ಮೌನವಾಗಿವೆ. ಜನರ ಹಿತಾಸಕ್ತಿಯ ಪರವಾಗಿ ಹೋರಾಟ, ಪ್ರತಿಭಟನೆ ಅಥವಾ ಅಭಿಯಾನಗಳನ್ನು ಸಂಘಟಿಸಲು ವಿಫಲವಾಗಿವೆ.
ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಈ ವಿಷಯಗಳು ಹೆಚ್ಚಿನ ಚರ್ಚೆಗೆ ಬರದಿರುವುದು ವಿರೋಧ ಪಕ್ಷಗಳ ಜವಾಬ್ದಾರಿತನದ ಕೊರತೆಯನ್ನು ತೋರಿಸುತ್ತದೆ.
ಇದರಿಂದ ಸರ್ಕಾರದ ನಿರ್ಧಾರಗಳು ಯಾವುದೇ ಪ್ರತಿರೋಧವಿಲ್ಲದೆ ಮನಸೋ ಇಚ್ಛೆ ಹೊಸ ಹೊಸ ಕಾನೂನುಗಳನ್ನು ಜಾರಿ ಮಾಡುತ್ತಿದೆ ಹಾಗೂ ಬೆಲೆ ಏರಿಕೆಯನ್ನು ಮಾಡುತ್ತಿದೆ. ಇದು ಪ್ರಜಾಪ್ರಭುತ್ವದ ಆರೋಗ್ಯಕರ ಸಮತೋಲನವನ್ನು ಕುಸಿಯುವಂತೆ ಮಾಡುತ್ತಿದೆ.
ಬಲಿಷ್ಠ ವಿರೋಧ ಪಕ್ಷಗಳ ಅಗತ್ಯತೆ
ಇಂತಹ ಪರಿಸ್ಥಿತಿಯನ್ನು ತಿದ್ದಲು, ವಿರೋಧ ಪಕ್ಷಗಳು ತಕ್ಷಣವೇ ತಮ್ಮ ಸಾಮರ್ಥ್ಯವನ್ನು ಒರೆಗಲ್ಲಿಗೆ ಹಂಚಿ ಸರಕಾರದ ಕ್ರಮಗಳನ್ನು ಪ್ರಶ್ನಿಸಲು ಪುನರ್ಪರಿಶೀಲಿಸಲು ಒತ್ತಡ ಹೇರಬೇಕಾಗಿದೆ. ಕೇವಲ ಜಾತಿರಾಜಕಾರಣ ಮಾಡಿ ವೋಟು ಗಿಟ್ಟಿಸಿಕೊಳ್ಳುವುದನ್ನು ರೂಢಿ ಮಾಡಿಕೊಂಡಿರುವ ವಿರೋಧಪಕ್ಷಗಳು ಜನರ ನಿಜವಾದ ಸಮಸ್ಯೆಗಳ ಕಡೆಗೆ ಗಮನ ಹರಿಸಬೇಕಾಗಿದೆ.

ಶಾಸನ ಅಧ್ಯಯನ ಕೇಂದ್ರ ಸ್ಥಾಪನೆ– ಪ್ರಸ್ತಾಪಿತ ಕಾಯ್ದೆಗಳನ್ನು ಅಧ್ಯಯನ ಮಾಡುವ ತಜ್ಞರ ತಂಡವನ್ನು ಪ್ರತಿಪಕ್ಷಗಳು ರಚಿಸಬೇಕು. ಜನರ ಸಂಪರ್ಕ – ಹಳ್ಳಿಗಳಲ್ಲಿ, ನಗರಗಳಲ್ಲಿ ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಕಾನೂನು ಮಂಡಲದಲ್ಲಿ ಎತ್ತಬೇಕು. ಮಾಧ್ಯಮ ಬಳಕೆ – ಸಾಮಾಜಿಕ ಮಾಧ್ಯಮ, ಪತ್ರಿಕೆ, ಟಿವಿ ಚರ್ಚೆಗಳಲ್ಲಿ ಜನಜಾಗೃತಿ ಮೂಡಿಸಬೇಕು. ಶಾಂತಿಪೂರ್ಣ ಪ್ರತಿಭಟನೆಗಳು, ಜನಹಿತ ಪಾದಯಾತ್ರೆಗಳು, ಜನಸಮಾವೇಶಗಳ ಮೂಲಕ ಒತ್ತಡ ತರುವ ಕಾರ್ಯಾಚರಣೆ ನಡೆಸಬೇಕು.
ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳ ಬಲ ಕುಸಿದರೆ, ಜನರ ಹಿತಾಸಕ್ತಿ ಬಲಿಯಾಗುತ್ತದೆ. ಕರ್ನಾಟಕದಲ್ಲಿ GPA ನೋಂದಣಿ ಕಡ್ಡಾಯತೆ ಮತ್ತು Conveyance/JDA ಶುಲ್ಕದ 100% ಏರಿಕೆಯಂತಹ ನಿರ್ಧಾರಗಳು, ವಿರೋಧ ಪಕ್ಷಗಳ ದುರ್ಬಲತೆಯಿಂದ ಯಾವುದೇ ಪ್ರತಿರೋಧವಿಲ್ಲದೆ ಜಾರಿಯಾಗಿವೆ. ಇದರಿಂದ ಸಾಮಾನ್ಯ ಜನರ ಜೀವನ ಕಠಿಣವಾಗಿದೆ. ಮನೆ ಖರೀದಿ ಕನಸು ಇನ್ನಷ್ಟು ದೂರವಾಗುತ್ತಿದೆ. ಆಸ್ತಿ ವ್ಯವಹಾರಗಳು ದುಬಾರಿಯಾಗುತ್ತಿವೆ. ಆರ್ಥಿಕ ಅಸಮಾನತೆ ವಿಸ್ತರಿಸುತ್ತಿದೆ.
ಕೊನೆಯದಾಗಿ ನಮ್ಮ ರಾಜ್ಯದ ವಿರೋಧ ಪಕ್ಷಕ್ಕೊಂದು ಕಿವಿ ಮಾತೇನೆಂದರೆ, ಬಲಿಷ್ಠ, ಜ್ಞಾನಪೂರ್ಣ, ಚುರುಕಾದ ಮತ್ತು ಜನಪರ ವಿರೋಧ ಪಕ್ಷಗಳು ಅಗತ್ಯ. ಅವರು ಮಾತ್ರ ಸರ್ಕಾರವನ್ನು ಹೊಣೆಗಾರಿಗೊಳಿಸಿ, ಜನರ ಪರವಾಗಿ ಧ್ವನಿ ಎತ್ತಿ, ಪ್ರಜಾಪ್ರಭುತ್ವದ ಸಮತೋಲನವನ್ನು ಮರುಸ್ಥಾಪಿಸಬಲ್ಲರು. ವಿರೋಧ ಪಕ್ಷಗಳು ತಮ್ಮ ಕರ್ತವ್ಯವನ್ನು ಮರೆತರೆ, ಪ್ರಜಾಪ್ರಭುತ್ವವೇ ದುರ್ಬಲವಾಗುತ್ತದೆ.