ದುರಂತಗಳು ನಮಗೆ ನೀಡುವ ಸಂದೇಶ ಸರಳ “ಜೀವನವೇ ಮೊದಲ ಆದ್ಯತೆ” “ಸಾಹಸ, ಉಲ್ಲಾಸ, ಸೆಲ್ಫಿಎಲ್ಲವೂ ನಗಣ್ಯ”
✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು
ಪ್ರಕೃತಿ ಯಾವಾಗಲೂ ಮಾನವನನ್ನು ಆಕರ್ಷಿಸಿ, ತನ್ನತ್ತ ಸೆಳೆಯುತ್ತದೆ. ಕಡಲತೀರದ ಅಲೆಗಳು, ಜಲಪಾತಗಳ ಘರ್ಜನೆ, ನದಿಗಳ ಹರಿವು ಈ ಎಲ್ಲವೂಗಳು ವಿಸ್ಮಯಕಾರಿಗಳಾಗಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸ್ಥಳಗಳು ಅನೇಕ ಕುಟುಂಬಗಳಿಗೆ ಸಂತೋಷದ ನೆನಪಿಗಿಂತ ದುಃಖದ ಕಣ್ಣೀರನ್ನು ನೀಡುತ್ತಿವೆ. ಇದರಲ್ಲಿ ಪ್ರಕೃತಿಯ ತಪ್ಪಿಲ್ಲವಾದರೂ, ಮನುಷ್ಯ ತನ್ನ ಪ್ರವೃತ್ತಿಯಿಂದ ತನಗೆ ತಾನೇ ಕಂಕಟಕಾರಿಯಾಗಿ ಪರಿಣಮಿಸುತ್ತಾನೆ. ವಿಶೇಷವಾಗಿ ಯುವಕರು, ಸಾಹಸಪ್ರಿಯತೆ ಮತ್ತು ಕ್ಷಣಿಕ ಉಲ್ಲಾಸಕ್ಕಾಗಿ ಜೀವವನ್ನು ಅಪಾಯಕ್ಕೆ ತಳ್ಳುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ.
ಕುಂದಾಪುರದ ದುರಂತ – ಎಚ್ಚರಿಕೆಯ ಗಂಟೆ
ಇಡೀ ಸೆಪ್ಟೆಂಬರ್ 7ರಂದು ಕುಂದಾಪುರದ ಗೋಪಾಡಿ ಕಡಲತೀರದಲ್ಲಿ ನಡೆದ ಘಟನೆ ದೇಶದ ಗಮನ ಸೆಳೆದಿದೆ. ಬೆಂಗಳೂರು ಮೂಲದ ಹತ್ತು ಮಂದಿ ಕಾಲೇಜು ವಿದ್ಯಾರ್ಥಿಗಳು ವಾರಾಂತ್ಯದ ಪ್ರವಾಸಕ್ಕಾಗಿ ಸಮುದ್ರದ ಗೋಪಾಡಿ ತೀರಕ್ಕೆ ಬಂದಿದ್ದರು. ಸ್ಥಳೀಯ ಮೀನುಗಾರರು “ಅಲೆಗಳು ಜೋರಾಗಿವೆ, ನೀರಿಗಿಳಿಯಬೇಡಿ” ಎಂದು ಎಚ್ಚರಿಸಿದರೂ, ಬಂದವರ ಪೈಕಿ ಏಳು ಮಂದಿ ನೀಗಿಗಿಳಿದಿದ್ದಾರೆ. ನೋಡ ನೋಡುತ್ತಿದ್ದಂತೆ ಆ ಪೈಕಿ ನಾಲ್ಕು ಮಂದ್ನಿ ಅಲೆಗಳ ಅಬ್ಬರಕ್ಕೆ ಸಿಕ್ಕಿ ನಾಪತ್ತೆಯಾಗಿದ್ದು, ಈ ಪೈಕಿ ಮೂವರು—ಗೌತಮ್ (19), ಲೋಕೇಶ್ (19), ಅಶೀಷ್ (18) ಎಂಬರು ದಾರುಣವಾಗಿ ಮೃತಪಟ್ಟಿದ್ದು, ಮತ್ತೋರ್ವ ನಿರೂಪ್ (20) ಮಾತ್ರ ತಕ್ಷಣದ ರಕ್ಷಣೆಯಿಂದ ಬದುಕುಳಿದಿದ್ದು, ಈಗ ಜೀವನ್ಮರಣ ಹೋರಾಟದಲ್ಲಿದ್ದಾನೆ.
ಈ ಘಟನೆ ಕೇವಲ ಒಂದು ದುರಂತವಲ್ಲ;
ಇದು ಭಾರತದಾದ್ಯಂತ ನಡೆಯುತ್ತಿರುವ ಪುನರಾವರ್ತಿತ ಕಥೆಯ ಪ್ರತಿಬಿಂಬ.
ದೇಶಾದ್ಯಂತ ನಡೆದ ಘಟನೆಗಳ ಸರಮಾಲೆ
ಆಂಧ್ರಪ್ರದೇಶ: 2025ರ ಜೂನ್ನಲ್ಲಿ ಬಾಪಟ್ಲಾದ ವೋದರೆವು ಬೀಚ್ನಲ್ಲಿ 18 ವರ್ಷದ ಆಟೋ ಚಾಲಕ ಮುಳುಗಿ ಮೃತಪಟ್ಟಿದ್ದನು. ಮೇ 2025ರಲ್ಲಿ ಕೋಝಿಕೋಡ್ ಜಿಲ್ಲೆಯ ಪಠಂಕಯಂ ಜಲಪಾತದಲ್ಲಿ 20 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿದ್ದನು. ಆಗಸ್ಟ್ 2025ರಲ್ಲಿ ಮಧ್ಯಪ್ರದೇಶದ ನರ್ಸಿಂಘ್ಪುರ ಜಿಲ್ಲೆಯ ಹಥಿನಾಲ-ಬಿಲ್ಧಾ ಜಲಪಾತದಲ್ಲಿ ಮೂವರು ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳು ಮುಳುಗಿ ಪ್ರಾಣ ಕಳೆದುಕೊಂಡರು. ಜುಲೈ 2025ರಲ್ಲಿ ಮುಂಬೈನ 22 ವರ್ಷದ ಯುವಕನು ರೈಗಢದ ಚನ್ನಟ್ ಜಲಪಾತದಲ್ಲಿ ವಿಡಿಯೋ ತೆಗೆದುಕೊಳ್ಳಲು ಹಾರಿದಾಗ ಮುಳುಗಿ ಮೃತಪಟ್ಟಿದ್ದ. ಆಗಸ್ಟ್ 11, 2025ರಂದು ಒರಿಸ್ಸಾದ ಪುರಿ ಚಂದ್ರಭಾಗ ಕಡಲತೀರದಲ್ಲಿ ಮೂರು ಯುವಕರು ಪ್ರತ್ಯೇಕ ಪ್ರಕರಣಗಳಲ್ಲಿ ಸಾವಿಗೀಡಾದರು. 2025ರ ಮೊದಲ ಐದು ತಿಂಗಳಲ್ಲಿ ಗೋವಾ ಕಡಲ ತೀರಗಳಲ್ಲಿ ಮಾತ್ರವೇ 68 ಮುಳುಗುವಿಕೆ ಪ್ರಕರಣಗಳು ಹಾಗೂ 2024ರಲ್ಲಿ 106 ಪ್ರಕರಣಗಳು ದಾಖಲಾಗಿವೆ.
ಇವುಗಳೆಲ್ಲ ಸೇರಿ “ಸಾಹಸಕ್ಕಾಗಿ ಜೀವ ಬಲಿ” ಎಂಬ ಕಠೋರ ಸತ್ಯವನ್ನು ಸಾರುತ್ತಿವೆ.

ವೈಜ್ಞಾನಿಕ ಕಾರಣಗಳು-ಪ್ರಕೃತಿಯ ಶಕ್ತಿಯನ್ನು ಅರ್ಥಮಾಡಿಕೊಳ್ಳದಿರುವುದು
1.ರಿಪ್ ಕರಂಟ್ಗಳು (Rip Currents):
ಕಡಲ ತೀರದಲ್ಲಿ ಕಾಣದ ಬಲವಾದ ನೀರಿನ ಒಳ ಸೆಳೆತ ಅಥವಾ ಹರಿವು ಇರುವುದು. ಈ ಸೆಳೆದ ಕೇವಲ ಕೆಲವೇ ಸೆಕೆಂಡುಗಳಲ್ಲಿ ನೀರಿಗಿಳಿದ ವ್ಯಕ್ತಿಯನ್ನು ಆಳ ಸಮುದ್ರದ ಕಡೆ ಎಳೆಯುತ್ತದೆ. ಇದನ್ನು ಗುರುತಿಸುವುದು ಕಷ್ಟ.
2.ಮಳೆಗಾಲದ ಪ್ರವಾಹ:
ನದಿಗಳು ಮತ್ತು ಜಲಪಾತಗಳಲ್ಲಿ ನೀರಿನ ಪ್ರಮಾಣ ಅಕಸ್ಮಾತ್ ಹೆಚ್ಚುತ್ತದೆ. ಮೇಲಿನಿಂದ ಹರಿಯುವ ಮಳೆಯ ನೀರು “ಫ್ಲ್ಯಾಶ್ ಫ್ಲಡ್” ಸೃಷ್ಟಿಸುತ್ತದೆ. ಇದರಿಂದ ಬಂಡೆಗಳ ಮೇಲೆ ನಿಂತವರು ಸಹ ಸುಲಭವಾಗಿ ಜಾರಿ ನೀರಿಗೆ ಬೀಳುತ್ತಾರೆ.
3.ಆಳದ ತಪ್ಪು ಅಂದಾಜು:
ಜಲಪಾತಗಳಲ್ಲಿ ಅಥವಾ ತಟಗಳಲ್ಲಿ ನೀರಿನ ಆಳ ಸಮಾನವಾಗಿರುವುದಿಲ್ಲ. ಕೆಲ ಕಡೆ ಚಿಕ್ಕ ಆಳವಾಗಿದ್ದರೂ, ಪಕ್ಕದಲ್ಲೇ ಅಪಾಯಕಾರಿ ಗುಂಡಿಯಂತಿರುವ ಆಳಗಳು ಇರುತ್ತವೆ.
4.ಆಮ್ಲಜನಕ ಕೊರತೆ:
ನೀರಿನಲ್ಲಿ ಬಿದ್ದು ಉಸಿರಾಟ ತಡೆಯುವುದರಿಂದ ಮೆದುಳಿಗೆ ಆಮ್ಲಜನಕ ತಲುಪದ ಸ್ಥಿತಿ ಬರಲು ಕೆಲವೇ ನಿಮಿಷ ಸಾಕು. ವೈದ್ಯಕೀಯವಾಗಿ ಇದನ್ನು “ಹೈಪಾಕ್ಸಿಯಾ” ಎನ್ನುತ್ತಾರೆ.
5.ತಣ್ಣಗಿನ ಶಾಕ್ ಪ್ರತಿಕ್ರಿಯೆ (Cold Shock Response):
ತಕ್ಷಣ ತಣ್ಣನೆಯ ನೀರಿಗೆ ಬಿದ್ದಾಗ ದೇಹದಲ್ಲಿ ಅತೀವ ಶಾಕ್ ಉಂಟಾಗಿ ಹೃದಯ ಬಡಿತ ತಪ್ಪಿ ಮುಳುಗುವಿಕೆ ವೇಗವಾಗಿ ಸಂಭವಿಸುತ್ತದೆ.

ಸಾಮಾಜಿಕ ಮತ್ತು ಮಾನಸಿಕ ಕಾರಣಗಳು
1.ಸಾಹಸಪ್ರಿಯತೆ ಮತ್ತು ಸ್ನೇಹಿತರ ಒತ್ತಡ:
“ನೀನು ಮಾಡದಿದ್ದರೆ ನಾನು ಮಾಡ್ತೀನಿ” ಎಂಬ ಮಾತುಗಳಿಂದ ಯುವಕರು ಅಪಾಯವನ್ನು ಅಲಕ್ಷಿಸುತ್ತಾರೆ.
2.ಸೋಶಿಯಲ್ ಮೀಡಿಯಾ ಪ್ರಭಾವ:
ಇನ್ಸ್ಟಾಗ್ರಾಂ, ರೀಲ್ಸ್, ಟಿಕ್ಟಾಕ್ ಶೈಲಿ ವಿಡಿಯೋಗಳಿಗಾಗಿ ಅಪಾಯಕಾರಿ ಸ್ಟಂಟ್ಗಳಿಗೆ ಇಳಿಯುತ್ತಾರೆ. “ಲೈಕ್ಸ್” ಮತ್ತು “ಫಾಲೋವರ್ಸ್” ಗಳಿಗಾಗಿ ಜೀವವನ್ನು ಹಾಳುಮಾಡುತ್ತಾರೆ.
3.ಅನುಭವದ ಕೊರತೆ:
ಬಹುತೇಕ ಯುವಕರಿಗೆ ಈಜು ಬರುವುದಿಲ್ಲ. ಆದರೆ ಯಾರನ್ನೋ ಮೆಚ್ಚಿಸಲು ನೀರಿಗೆ ಇಳಿದು ತಮ್ಮ ಜೀವಗಳಿಗೆ ಸಂಚಕಾರ ತಂದು ಕೊಳ್ಳುತ್ತಾರೆ.
4.ಭದ್ರತಾ ವ್ಯವಸ್ಥೆಯ ಕೊರತೆ:
ಭಾರತದಲ್ಲಿ ಬಹುತೇಕ ಜಲಪಾತಗಳು ಮತ್ತು ಕಡಲ ತೀರಗಳಲ್ಲಿ ಲೈಫ್ಗಾರ್ಡ್ಗಳೇ ಇಲ್ಲ. ಎಚ್ಚರಿಕೆ ಫಲಕಗಳು ಕಾಣಸಿಗುವುದಿಲ್ಲ.
5.ಪೋಷಕರ ನಿರ್ಲಕ್ಷ್ಯ:
ಪ್ರವಾಸಕ್ಕೆ ಹೋದಾಗ ಪೋಷಕರು “ಸಾವಕಾಶ” ಎನ್ನುತ್ತಾರೆ, ಆದರೆ ಕಠಿಣ ನಿಯಂತ್ರಣದ ಕೊರತೆಯಿಂದ ಮಕ್ಕಳು ಸಾಹಸಕ್ಕೆ ಇಳಿಯುತ್ತಾರೆ. ಬಹುತೇಕ ಸಂಧರ್ಭಗಳಲ್ಲಿ ಮಕ್ಕಳು ತಮ್ಮ ಮನೆಯವರಿಗೆ ಹೇಳದೆಯೇ ನೀರಿರುವ ಪ್ರದೇಶಕ್ಕೆ ಮೋಜಿಗಾಗಿ ತೆರಳಿರುತ್ತಾರೆ.
ಅಂಕಿಅಂಶಗಳ ಭಯಾನಕ ಚಿತ್ರ
ಭಾರತದಲ್ಲಿ ವರ್ಷಕ್ಕೆ ಸರಾಸರಿ 38,000 ಮಂದಿ ನೀರಿನಲ್ಲಿ ಮುಳುಗಿ ಸಾಯುತ್ತಾರೆ. 5 ರಿಂದ 14 ವರ್ಷದ ಮಕ್ಕಳಲ್ಲಿ ಈ ಪ್ರಕರಣಗಳು ಹೆಚ್ಚು. ಪಶ್ಚಿಮ ಬಂಗಾಳ ಒಂದರಲ್ಲೇ ಪ್ರತಿ ದಿನ ಸರಾಸರಿ 25 ಜನರು ನೀರಿಗಿಳಿದು ಜೀವ ಕಳೆದು ಕೊಳ್ಳುತ್ತಾರೆ. ಈ ಪೈಕಿ ಸರಾಸರಿ 12 ಮಂದಿ ಮಕ್ಕಳುಗಳಾಗಿರುತ್ತಾರೆ. ಬಿಹಾರದಲ್ಲಿ ಮಕ್ಕಳ ಮುಳುಗುವಿಕೆಯ ಅರ್ಧ ಪ್ರಕರಣಗಳು ನದಿಗಳಲ್ಲೇ ಸಂಭವಿಸುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ ಜಗತ್ತಿನಲ್ಲಿ 2.5 ಲಕ್ಷ ಮಂದಿ ಮುಳುಗಿ ಸಾಯುತ್ತಾರೆ, ಅದರಲ್ಲಿ 80,000ಕ್ಕೂ ಹೆಚ್ಚು ಮಕ್ಕಳು.
ಪರಿಹಾರ ಮಾರ್ಗಗಳು – ವಿಜ್ಞಾನ ಮತ್ತು ಸಮಾಜದ ಸಂಯೋಜನೆ
1. ಶಿಕ್ಷಣ ಮತ್ತು ಜಾಗೃತಿ
ಶಾಲೆಗಳಲ್ಲಿ ಈಜು ಪಾಠ ಕಡ್ಡಾಯ ಮಾಡಬೇಕು. ಮೂಲ ಈಜು ಕೌಶಲ್ಯ ಕಲಿತರೆ ಮಕ್ಕಳ ಮುಳುಗುವಿಕೆ ಅಪಾಯ 80% ಕಡಿಮೆಯಾಗುತ್ತದೆ. ಪ್ರಕೃತಿ ಸುರಕ್ಷತಾ ಪಾಠಗಳು ಪಠ್ಯಕ್ರಮದಲ್ಲಿ ಇರಬೇಕು. ನದಿಗಳು, ಜಲಪಾತಗಳು, ಸಮುದ್ರಗಳ ಅಪಾಯಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು.
- ಮೂಲಸೌಕರ್ಯ:
ಲೈಫ್ಗಾರ್ಡ್ಗಳ ನಿಯೋಜನೆ: ಪ್ರಮುಖ ಬೀಚ್ಗಳು ಮತ್ತು ಜಲಪಾತಗಳಲ್ಲಿ ತರಬೇತಿ ಪಡೆದ ರಕ್ಷಣಾ ಸಿಬ್ಬಂದಿ ಇರಬೇಕು.
ಎಚ್ಚರಿಕೆ ಫಲಕಗಳು ಮತ್ತು ಅಡ್ಡಗೋಡೆಗಳು: ಅಪಾಯ ಪ್ರದೇಶಗಳಲ್ಲಿ ಕನ್ನಡ ಹಾಗೂ ಇತರ ಭಾಷೆಗಳಲ್ಲಿ ಸ್ಪಷ್ಟ ಸೂಚನೆಗಳು ಇರಬೇಕು.
CCTV ಮತ್ತು ಡ್ರೋನ್ ನಿಗಾ: ಹೆಚ್ಚಿನ ಜನಸಂಚಾರವಿರುವ ಬೀಚ್ಗಳಲ್ಲಿ ತಂತ್ರಜ್ಞಾನವನ್ನು ಬಳಸಬೇಕು. - ಸಾಮಾಜಿಕ ಮಟ್ಟದಲ್ಲಿ:
ಸೋಶಿಯಲ್ ಮೀಡಿಯಾ ಅಭಿಯಾನಗಳು: “ಸೆಲ್ಫಿಗಿಂತ ಜೀವ ಮುಖ್ಯ”, “ಸಾಹಸಕ್ಕಿಂತ ಎಚ್ಚರಿಕೆ ಮುಖ್ಯ” ಎಂಬ ಸಂದೇಶಗಳು ವ್ಯಾಪಕವಾಗಿ ಹರಡಬೇಕು.
ಪೋಷಕರ ಜವಾಬ್ದಾರಿ: ಪ್ರವಾಸದಲ್ಲಿ ಮಕ್ಕಳು ನೀರಿನಲ್ಲಿ ಇಳಿಯುವ ಮುನ್ನ ಕಟ್ಟುನಿಟ್ಟಿನ ನಿಯಂತ್ರಣ ಇರಬೇಕು.
ಸಮುದಾಯ ರಕ್ಷಣಾ ತಂಡಗಳು: ಸ್ಥಳೀಯ ಮೀನುಗಾರರು, ಯುವಕರ ಸಂಘಗಳು, ಸ್ವಯಂಸೇವಕರು ತುರ್ತು ನೆರವಿಗೆ ತರಬೇತಿ ಪಡೆಯಬೇಕು. - ಕಾನೂನು ಮತ್ತು ಆಡಳಿತ:
ಅಪಾಯ ಪ್ರದೇಶಗಳಲ್ಲಿ ಪ್ರವೇಶ ನಿಷೇಧ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು.
ಮುಳುಗುವಿಕೆ ಪ್ರಕರಣಗಳನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಗಣಿಸಿ ಆರೋಗ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು.
ಪ್ರವಾಸೋದ್ಯಮ ಇಲಾಖೆಯು ಭದ್ರತಾ ನೀತಿ (Safety Policy) ರೂಪಿಸಿ ಕಡ್ಡಾಯವಾಗಿ ಪಾಲಿಸಬೇಕು.
ಬದುಕು ಸಾಹಸಕ್ಕಿಂತ ಮುಖ್ಯ
ಕುಂದಾಪುರದಂತಹ ದುರಂತಗಳು ನಮಗೆ ನೀಡುವ ಸಂದೇಶ ಸರಳ”ಜೀವನವೇ ಮೊದಲ ಆದ್ಯತೆ” “ಸಾಹಸ, ಉಲ್ಲಾಸ, ಸೆಲ್ಫಿಎಲ್ಲವೂ ನಗಣ್ಯ”ಕುಂದಾಪುರದಂತಹ ದುರಂತಗಳು ನಮಗೆ ನೀಡುವ ಸಂದೇಶ ಸರಳ”ಜೀವನವೇ ಮೊದಲ ಆದ್ಯತೆ” “ಸಾಹಸ, ಉಲ್ಲಾಸ, ಸೆಲ್ಫಿಎಲ್ಲವೂ ನಗಣ್ಯ” ಎಂಬ ಸತ್ಯವನ್ನು ನಾವು ಅರಿಯೋಣ ಹಾಗೂ ಇತರರಿಗೆ ಕಲಿಸೋಣ. ಅಮೂಲ್ಯ ಜೀವಗಳು ಸುರಕ್ಷಿತವಾಗಿರುವಂತಾಗಲಿ ಎಂಬುವುದೇ ಹಾರೈಕೆ.
