ಕರಾವಳಿಯ ಆ ಎರಡು ಹತ್ಯೆಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಆ ಇಬ್ಬರು ಯಾರು ಗೊತ್ತೆ? ಹಿಂದೂ ಕಾರ್ಯಕರ್ತ ಕಂ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್, ಮತ್ತೊಬ್ಬ ಹಿಂದೂ ಕಾರ್ಯಕರ್ತ ಕಂ ರೌಡಿಶೀಟರ್ ಸುಹಾಸ್ ಶೆಟ್ಟಿ. ಕರಾವಳಿಯಲ್ಲಿ ನಿತ್ಯ ನಿರಂತರವಾಗಿ ಧರ್ಮ ದಂಗಲ್ ಗೆ ಸರಣಿ ಹತ್ಯೆ ನಡೆಯುತ್ತಿತ್ತು. ಕೊಳತ್ತಮಜಲಿನ ರಹೀಂ ಹತ್ಯೆಯ ನಂತರ ಜಿಲ್ಲೆಯಲ್ಲಿ ಖಡಕ್ಕ್ ಪೋಲಿಸ್ ಆಫೀಸರ್ಸ್ ಚಾರ್ಜ್ ತೆಗೆದುಕೊಂಡ ನಂತರ ಕರಾವಳಿ ಒಂಥರಾ ತಣ್ಣನೆ ಮಲಗಿತ್ತು.
2022 ಜುಲೈ 19 ರಂದು ಬೆಳ್ಳಾರೆಯಲ್ಲಿ ಮಸೂದ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಸೂದ್ ಜುಲೈ 21 ರಂದು ಮೃತಪಟ್ಟಿದ್ದ. ಮಸೂದ್ ಹತ್ಯೆಗೆ ಪ್ರತೀಕಾರ ಅನ್ನುವ ರೀತಿಯಲ್ಲಿ ಜುಲೈ 26ರ ರಾತ್ರಿ 8.30 ರ ಸುಮಾರಿಗೆ ಪ್ರವೀಣ್ ನೆಟ್ಟಾರ್ ಅನ್ನುವ ಬಿಜೆಪಿ ಕಾರ್ಯಕರ್ತನ ಹೆಣ ಉರುಳಿತ್ತು. ಹೇಳಿ ಕೇಳಿ ಅವತ್ತಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿತ್ತು. ಅರಗ ಜ್ಞಾನೇಂದ್ರ ಗೃಹಮಂತ್ರಿಯಾಗಿದ್ದರು. ಕೇಂದ್ರದಲ್ಲಿ ಬಿಜೆಪಿ ಸರಕಾರವಿತ್ತು. ಹತ್ಯೆಯಾದ ಪ್ರವೀಣ್ ನೆಟ್ಟಾರ್ ಗೆ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇರಲಿಲ್ಲ. ಸಹಜವಾಗಿ ಈ ಹತ್ಯೆ ಕರಾವಳಿಯಲ್ಲಿ ಕಂಪನ ಉಂಟಾಗಲು ಕಾರಣವಾಗಿತ್ತು.
ಬಿಜೆಪಿಯಲ್ಲೂ ದೊಡ್ಡ ಪ್ರತಿರೋಧದ ಅಲೆ ಎದ್ದಿತ್ತು. ಕೇಂದ್ರ, ರಾಜ್ಯ ದಲ್ಲೂ ಬಿಜೆಪಿ ಸರಕಾರ ಇದ್ದಾಗಲೂ ಹಿಂದೂ ಕಾರ್ಯಕರ್ತರ ಜೀವಕ್ಕೆ ಬೆಲೆ ಇಲ್ಲ ಅನ್ನುವ ಉದ್ಘಾರ ಮೊಳಗಿತ್ತು. ಸಂಸದ ನಳಿನ್ ಕುಮಾರ್ ಕಟೀಲ್ ಕಾರು ಅಲ್ಲಾಡಿಸಲಾಯಿತು. ನೆಟ್ಟಾರು ಹತ್ಯೆ ಕಟೀಲು ಸಂಸದ ಸ್ಥಾನಕ್ಕೆ ಕುತ್ತು ತಂದಿತ್ತು. ಕೋಳಿ ಉದ್ಯಮವನ್ನು ಆರಂಭಿಸಿ ಯಶಸ್ವಿಯಾಗಿದ್ದ, ಬೆಳ್ಳಾರೆ ಭಾಗದಲ್ಲಿ ಬಿಜೆಪಿ ಪ್ರಭಾವೀ ನಾಯಕನಾಗಿ ಬೆಳೆಯುತ್ತಿದ್ದ ನೆಟ್ಟಾರು ಹತ್ಯೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಗೆ ವಹಿಸಿ ರಾಜ್ಯ ಸರಕಾರ ಆದೇಶಿಸಿತ್ತು. ನೆಟ್ಟಾರು ಹತ್ಯೆಯಲ್ಲಿ ಪ್ರತ್ಯಕ್ಷ, ಪರೋಕ್ಷ ಭಾಗಿಯಾಗಿದ್ದ ಎಲ್ಲ ಆರೋಪಿಗಳನ್ನು ಕಂಬಿ ಹಿಂದೆ ತರಲು ಎನ್ ಐಎ ಯಶಸ್ವಿಯಾಗಿತ್ತು. ನೆಟ್ಟಾರು ಹತ್ಯೆಯ ಎಫೆಕ್ಟ್ ಅನ್ನುವಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಕೇಂದ್ರ ಸರಕಾರ ನಿಷೇಧಿಸಿತ್ತು. ಪ್ರವೀಣ್ ನೆಟ್ಟಾರ್ ಕೇಸಲ್ಲಿ ಎನ್ ಐಎ ತನಿಖೆ ಅಭೂತಪೂರ್ವ ಯಶಸ್ಸು ಗಳಿಸಿತ್ತು.

ಕರಾವಳಿಯಲ್ಲಿ ರೌಡಿಗಳನ್ನು ರಾಜಕೀಯ ಮೊಗಸಾಲೆಯಲ್ಲಿಟ್ಟು ರಕ್ಷಿಸುವ ಕೆಲಸ ಮಾಮೂಲಿಯಾಗಿದೆ. ಹಿಂದೂ ಮುಸ್ಲಿಂ ಧರ್ಮಗಳ ನಶೆ ಏರಿಸಿ ಅವರನ್ನು ಪ್ರಚೋದಿಸಿ ಕೋಮು ವಿಷಗಳನ್ನು ತಲೆಗೆ ತುಂಬಿಸಿ ಪ್ರತಿಭಟನೆ, ದೊಂಬಿ, ಗಲಾಟೆಗಳಿಗೆ ಬಳಸುತ್ತಾ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ.
ಕೊಲೆ, ಸುಲಿಗೆ, ಅಪರಾಧಗಳ ಎ1 ಆರೋಪಿಗಳೇ ಇಲ್ಲಿ ಧರ್ಮ ರಕ್ಷಕರಾಗಿ ಅವತಾರವೆತ್ತಿ ಆದರ್ಶ ವ್ಯಕ್ತಿಗಳಾಗುತ್ತಿರುವುದು ವಿಚಿತ್ರವಾದ ಸಾಮಾಜಿಕ ದುರಂತವಾಗಿದೆ. ಅದಕ್ಕಾಗಿಯೇ ಇಲ್ಲಿ ಸೇಡಿನ ಕಥೆಗಳು ಮತ್ತೆ ಮತ್ತೆ ಮರುಕಳಿಸುತ್ತವೇ ಇವೆ. ಹಿಂದೂ -ಮುಸ್ಲಿಂ ಹೆಸರಿನಲ್ಲಿ ಬೀದಿಗಳಲ್ಲಿ ಮನುಷ್ಯನ ಬೇಟೆ, ಮಾರಣಹೋಮ ನಡೆಯುತ್ತಿದೆ. ನೆಟ್ಟಾರ್ ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್ಲಿನಲ್ಲಿ ಫಾಝಿಲ್ ಅನ್ನುವ ಅಮಾಯಕ ಯುವಕನ ಹತ್ಯೆ ಆಗುತ್ತೆ. ಈ ಫಾಝಿಲ್ ಹತ್ಯೆಯ ಪ್ರಮುಖ ಆರೋಪಿಯೇ ಈ ಸುಹಾಸ್ ಶೆಟ್ಟಿ. ಬಜಪೆಯ ಕಿನ್ನಿಪದವು ನಡುಬೀದಿಯಲ್ಲೇ ಸುಹಾಸ್ ಮರ್ಡರ್ ನಡೆಯುತ್ತೆ.
ಕರಾವಳಿ ಜಿಲ್ಲೆಯಲ್ಲಿ ಭಾರೀ ಸಂಚಲನವನ್ನು ಮೂಡಿಸಿದ್ದ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಸಫ್ವಾನ್ ಗ್ಯಾಂಗ್ ನ ಕೈವಾಡವಿತ್ತು. ಮಾಫಿಯಾ ಗ್ಯಾಂಗ್ ವಾರ್ ಗೆ ಈ ಹತ್ಯೆ ನಡೆದಿತ್ತು. ಆದರೆ ಬಿಜೆಪಿ ಈ ಹತ್ಯೆಯನ್ನು ಧರ್ಮ ರಕ್ಷಣೆಯ ಕೊಲೆ ಅನ್ನುವ ರೀತಿ ಬಿಂಬಿಸಿತ್ತು. ಸುಹಾಸ್ ಶೆಟ್ಟಿ ಹಂತಕರನ್ನು ಪೊಲೀಸರು ಲಾಕ್ ಮಾಡಿದರೂ ಬಿಜೆಪಿ ಈ ಪ್ರಕರಣವನ್ನು ಎನ್ ಐಎ ಗೆ ವಹಿಸಲು ರಾಜ್ಯ ಸರಕಾರದ ಅನುಮತಿ ಕಾಯದೇ ಕೇಂದ್ರ ಸರಕಾರದಿಂದ ಆದೇಶ ಪಡೆದುಕೊಂಡು ಕರಾವಳಿಯ ನಾಯಕರು ಬಂದಿದ್ದರು.

ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಜಿಹಾದಿ ಗುಂಪು, ವಿದೇಶಿ ಫಂಡಿಂಗ್, ಮತೀಯ ಸಂಘಟನೆಗಳ ಕೈವಾಡವಿದೆ ಎಂದು ಹುಯಿಲೆಬ್ಬಿಸಿ ಕೇಂದ್ರದ ಎನ್ ಐಎ ತನಿಖೆ ಮೂಲಕ ಸಂಪೂರ್ಣ ಚಿತ್ರಣ ಹೊರಬೀಳುತ್ತದೆ ಅನ್ನುವ ಕಥೆ ಕಟ್ಟಿದ್ದರು. ಬಿಜೆಪಿ ಕಟ್ಟಿದ ಕಥೆಯನ್ನು ಹಿಂದೂ ಕಾರ್ಯಕರ್ತರು ನಂಬಿದ್ದರು. ನೆಟ್ಟಾರು ಹತ್ಯೆಯ ಕೇಸಿನಲ್ಲಿ ಎನ್ ಐಎ ತನಿಖೆ ದೊಡ್ಡ ಮಟ್ಟಿನ ಯಶಸ್ಸು ಪಡೆದಿತ್ತು. ಹಿಂದೂ ಕಾರ್ಯಕರ್ತರಿಗೆ ನ್ಯಾಯ ಒದಗಿಸಿತ್ತು. ಅದೇ ರೀತಿ ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ದೊಡ್ಡ ನ್ಯಾಯ ಸಿಗುತ್ತದೆ ಅನ್ನುವ ನಿರೀಕ್ಷೆ ಹಿಂದೂ ಕಾರ್ಯಕರ್ತರಲ್ಲಿತ್ತು. ಆದರೆ ಈ ತನಿಖೆ ದಡ ಮುಟ್ಟಿದೆಯಾ? ಹಿಂದೂ ಕಾರ್ಯಕರ್ತರ ಆಕ್ರೋಶವನ್ನು ತಣಿಸಲು ಮಾಡಿದ ಫ್ಲ್ಯಾನಾ? ಎನ್ ಐಎ ತನಿಖೆ ಅನ್ನುವುದು ಬರೀ ಠುಸ್ ಪಟಾಕಿ ಆಗಿದೆ ಅಷ್ಟೇ. ಎನ್ ಐಎ ಮೂಲಕ ದೊಡ್ಡ ದೊಡ್ಡ ತಲೆ ಹೊರಬರುತ್ತದೆ ಎಂದು ಪುಂಗಿ ಬಿಟ್ಟ ಬಿಜೆಪಿ ನಾಯಕರನ್ನು ಹಿಂದೂ ಕಾರ್ಯಕರ್ತರು ಪ್ರಶ್ನಿಸಬೇಕಿದೆ. ಕೇವಲ ರೀಲ್ ಬಿಟ್ಟ ಹಳಿಯಂತಾಗಿದೆ ಎನ್ ಐಎ ತನಿಖೆ.
ಬಿಜೆಪಿಯ ದ್ವಂದ್ವ ನೀತಿ
ಹಿಂದೂ ಕಾರ್ಯಕರ್ತ ಕಂ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯ ಸಂಸದರು, ಶಾಸಕರು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯ ಸರಕಾರದ ಅನುಮತಿ ಇಲ್ಲದೇ ನೇರವಾಗಿ ಎನ್ ಐಎ ತನಿಖೆಗೆ ಪ್ರಕರಣವನ್ನು ವರ್ಗಾಯಿಸಲು ಆಸಕ್ತಿ ತೋರಿತ್ತು. ಅದರಲ್ಲಿ ಯಶಸ್ವಿಯೂ ಆಗಿತ್ತು.
ಆದರೆ ಧರ್ಮಸ್ಥಳ ಷಡ್ಯಂತ್ರ ವಿಚಾರದಲ್ಲಿ SIT ಬದಲು NIA ಗೆ ವಹಿಸುವಂತೆ ಬಿಜೆಪಿ ನಾಯಕರು ಧರ್ಮಯಾತ್ರೆ ನಡೆಸುತ್ತಿದ್ದಾರೆ. ಹಿಂದುತ್ವ, ಹಿಂದೂ ದೇವಾಲಯಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿಗರು ಧರ್ಮಸ್ಥಳದ ಮೇಲಾಗುತ್ತಿರುವ ಷಡ್ಯಂತ್ರದ ಬಣ್ಣ ಬಯಲು ಮಾಡಲು ಬಿಜೆಪಿ ನಿಯೋಗ ಕೇಂದ್ರ ಗೃಹಮಂತ್ರಿಯನ್ನು ಭೇಟಿಯಾಗಿ ಪ್ರಕರಣವನ್ನು ಎನ್ ಐಎ ಗೆ ವಹಿಸಲು ಯಾಕೆ ಆಸಕ್ತಿ ತೋರುತ್ತಿಲ್ಲ. ಓರ್ವ ರೌಡಿಶೀಟರ್ ಗೆ ಮಿಡಿದ ಬಿಜೆಪಿ ಹೃದಯಗಳು ಧರ್ಮಸ್ಥಳಕ್ಕೆ ನ್ಯಾಯ ಒದಗಿಸಲು ಯಾಕೆ ಮಿಡಿಯುತ್ತಿಲ್ಲ. ಇದು ಬಿಜೆಪಿಯ ದ್ವಂದ್ವ ನಡೆಯಲ್ಲವೇ?
