ಮಕ್ಕಳ ಅಶ್ಲೀಲ ವಿಡಿಯೋ; ಇಂಟರ್ ಪೋಲ್ ಮೂಲಕ ಬೆಳಕಿಗೆ ಬಂದ ಕೃತ್ಯ, 47 ದೇಶಗಳಲ್ಲಿ ಮಾರಾಟ, ಎಂಜಿನಿಯರ್ ದಂಪತಿಗಳಿಗೆ ಗಲ್ಲು.

ರಾಷ್ಟ್ರೀಯ

ಲೈಂಗಿಕ ಅಪರಾಧ ಸೇರಿದಂತೆ 33 ಮಕ್ಕಳ ಮೇಲೆ ಘೋರ ಅಪರಾಧಗಳನ್ನು ಎಸಗಿದ ದಂಪತಿಗೆ ಉತ್ತರ ಪ್ರದೇಶದ ಪೋಕ್ಸೋ ವಿಚಾರಣಾ ನ್ಯಾಯಾಲಯ ಶುಕ್ರವಾರ ಮರಣದಂಡನೆ ವಿಧಿಸಿದೆ. ನೀರಾವರಿ ಇಲಾಖೆಯ ಮಾಜಿ ಜೂನಿಯರ್ ಎಂಜಿನಿಯರ್ ರಾಮ್‌ಭವನ್‌ ಮತ್ತು ಆತನ ಪತ್ನಿ ದುರ್ಗಾವತಿಗೆ ಉತ್ತರ ಪ್ರದೇಶದ ಬಾಂದಾದಲ್ಲಿನ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಅಡಿಯ ವಿಶೇಷ ನ್ಯಾಯಾಧೀಶರು ಮರಣ ದಂಡನೆ ವಿಧಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೊ ಕಾಯ್ದೆಯಡಿ ವಿವಿಧ ಅಪರಾಧಗಳಿಗಾಗಿ ಆರೋಪಿಗಳಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಕೇಂದ್ರ ತನಿಖಾ ದಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಮಕ್ಕಳ ಮೇಲೆ ಅಸ್ವಾಭಾವಿಕ ಅಪರಾಧಗಳನ್ನು ಎಸಗಗಿರುವುದು, ಗಂಭೀರವಾದ ಲೈಂಗಿಕ ಅಪರಾಧಗಳು, ಮಕ್ಕಳನ್ನು ಅಶ್ಲೀಲ ಉದ್ದೇಶಗಳಿಗಾಗಿ ಬಳಸಿರುವುದು, ಮಕ್ಕಳನ್ನು ಬಳಸಿರುವ ಅಶ್ಲೀಲ ವಿಡಿಯೋ ಚಿತ್ರಗಳ ಸಂಗ್ರಹಣೆ, ಪ್ರಚೋದನೆ ಮತ್ತು ಕ್ರಿಮಿನಲ್ ಪಿತೂರಿಯ ಆರೋಪಗಳನ್ನು ಈ ದಂಪತಿಯ ಮೇಲೆ ಹೊರಿಸಲಾಗಿತ್ತು ಎಂದು ಸಿಬಿಐ ತಿಳಿಸಿದೆ.

2020 ರಲ್ಲಿ ಸಿಬಿಐ ದಾಖಲಿಸಿರುವ ಪ್ರಕರಣದ ಅನ್ವಯ, ಆರೋಪಿಗಳು ಮೂರು ವರ್ಷದ ವಯೋಮಾನದವರೂ ಸೇರಿದಂತೆ ಸುಮಾರು 33 ಬಾಲಕರ ಮೇಲೆ ತೀವ್ರ ತೆರನಾದ ಲೈಂಗಿಕ ದೌರ್ಜನ್ಯವೂ ಸೇರಿದಂತೆ ವಿವಿಧ ಅಪರಾಧಗಳನ್ನು ಎಸಗಿದ್ದಾರೆ ಎಂದು ಹೇಳಲಾಗಿದೆ. ಲೈಂಗಿಕ ದೌರ್ಜನ್ಯದ ವೇಳೆ ಅನೇಕ ಸಂತ್ರಸ್ತರ ಖಾಸಗಿ ಭಾಗಗಳಿಗೆ ಗಾಯಗಳಾಗಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅವರಲ್ಲಿ ಕೆಲವರು ಆಸ್ಪತ್ರೆಯಲ್ಲಿಯೇ ಇದ್ದಾರೆ. ಕೆಲವು ಸಂತ್ರಸ್ತರಲ್ಲಿ ಆರೋಗ್ಯದ ಸಮಸ್ಯೆ ಉದ್ಭವಿಸಿದೆ. ಅನೇಕ ಸಂತ್ರಸ್ತರು ಘಟನೆಯಿಂದ ಉಂಟಾದ ಮಾನಸಿಕ ಆಘಾತದಿಂದ ಇನ್ನೂ ಹೊರಬಂದಿಲ್ಲ ಎಂದು ಸಿಬಿಐ ತಿಳಿಸಿದೆ.

ಆರೋಪಿಗಳ ಹೀನ ದುಷ್ಕ್ರತ್ಯದ ಬಗ್ಗೆ ವಿವರಿಸಿರುವ ಸಿಬಿಐ, ಆರೋಪಿ ದಂಪತಿಯು 2010 ರಿಂದ 2020ರವರೆಗೆ ಉತ್ತರ ಪ್ರದೇಶದ ಬಾಂದಾ ಮತ್ತು ಚಿತ್ರಕೂಟ ಪ್ರದೇಶದಲ್ಲಿ ಸಕ್ರಿಯರಾಗಿದ್ದರು. ಅವರು ಮಕ್ಕಳ ಮೇಲೆ ದೌರ್ಜನ್ಯ ಎಸಗಲು ವಿವಿಧ ರೀತಿಯಲ್ಲಿ ಓಲೈಕೆ ಮತ್ತು ಆಮಿಷಗಳನ್ನು ಒಡ್ಡುತ್ತಿದ್ದರು. ಆನ್‌ಲೈನ್ ವಿಡಿಯೋ ಗೇಮ್‌ಗಳ ಆಕರ್ಷಣೆ ಒಡ್ಡುವುದು, ಹಣ ಅಥವಾ ಉಡುಗೊರೆಗಳನ್ನು ನೀಡುವ ಮೂಲಕ ಮಕ್ಕಳನ್ನು ಒಯ್ಯುತ್ತಿದ್ದರು ಎಂದು ತಿಳಿಸಿದೆ. ವೈರಲ್ ವಿಡಿಯೋ ನೋಡಿ ನೆಟ್ಟಿಗರಿಂದ ತರಾಟೆರಾಮ್‌ಭವನ್‌ ಮತ್ತು ದುರ್ಗಾವತಿ ವಿರುದ್ಧ ಫೆಬ್ರವರಿ 2021ರಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಿತು. ಮೇ 2023 ರಲ್ಲಿ ಅವರ ವಿರುದ್ಧ ಆರೋಪ ಹೊರಿಸಲಾಯಿತು. ಮರಣದಂಡನೆ ವಿಧಿಸುವ ವೇಳೆ ವಿಚಾರಣಾ ನ್ಯಾಯಾಲಯವು ಆರೋಪಿಗಳ ಅಪರಾಧ ಕೃತ್ಯಗಳನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಹೇಳಿದೆ.

ಅಪರಾಧಿಗಳು ವಿವಿಧ ಜಿಲ್ಲೆಗಳಲ್ಲಿ ಎಸಗಿರುವ ಅಪರಾಧಗಳು ತೀವ್ರ ನೈತಿಕ ಅಧಃಪತನದಿಂದ ಕೂಡಿದ್ದು, ಘೋರ ಸ್ವರೂಪದ್ದಾಗಿವೆ. ಹಾಗಾಗಿ, ಇಲ್ಲಿ ಯಾವುದೇ ಸುಧಾರಣೆಗೆ ಆಸ್ಪದವಿಲ್ಲವಾಗಿದ್ದು, ನ್ಯಾಯದ ಉದ್ದೇಶವನ್ನು ಪೂರೈಸಲು ಅಂತಿಮ ನ್ಯಾಯಿಕ ಪ್ರತಿಬಂಧದ ಅಗತ್ಯ ಅನಿವಾರ್ಯವಾಗಿದೆ ಎಂದು ಮರಣದಂಡನೆ ವಿಧಿಸಿದೆ.

ರಾಮ್ ಭವನ್ ದಂಪತಿ ಕೃತ್ಯ ಇಂಟರ್ ಪೋಲ್ ಮೂಲಕ ಬೆಳಕಿಗೆ ಬಂದಿತ್ತು. ಡಾರ್ಕ್ ವೆಬ್ ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಮಾರಾಟ ಸಂಬಂಧ ಮೊಬೈಲ್ ನಂಬ್ರ ಪತ್ತೆ ಮಾಡಿದ ಇಂಟರ್ ಪೋಲ್ ಸಂಸ್ಥೆ ಭಾರತದ ಸಿಬಿಐಗೆ ಈ ಬಗ್ಗೆ ಮಾಹಿತಿ ನೀಡಿತು. ತನಿಖೆಗೆ ಇಳಿದ ಸಿಬಿಐ ರಾಮ್ ಭವನ್ ದಂಪತಿಯ ಈ ದಂಧೆ ಪತ್ತೆಮಾಡಿತು. 2020ರಲ್ಲಿ ಪ್ರಕರಣ ದಾಖಲಿಸಿ, ಸಮಗ್ರ ತನಿಖೆ ನಡೆಸಿದ ಬಳಿಕ 2021ರಲ್ಲಿ ಚಾರ್ಜ್ ಶೀಟ್ ಸಲ್ಲಿಸಿತು. ಇದೀಗ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.