ಲಂಚ ಪ್ರಕರಣದ ಆರೋಪಿ ಪುತ್ತೂರು ತಹಶೀಲ್ದಾರ್ ಎಸ್.ಬಿ ಕೂಡಲಗಿಗೆ ಲಭಿಸದ ಜಾಮೀನು.

ಕರಾವಳಿ

ಲೋಕಾಯುಕ್ತ ಪರವಾಗಿ ವಾದ ಮಂಡಿಸಿದ ವಿಶೇಷ ಸರಕಾರಿ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ

ಪುತ್ತೂರು: ಲಂಚ ಪಡೆದ ಪ್ರಕರಣದಲ್ಲಿ ಆರೋಪಿಯಾಗಿದ್ದು, ತಲೆಮರೆಸಿಕೊಂಡಿರುವ ಪುತ್ತೂರು ತಾಲೂಕು ತಹಶೀಲ್ದಾರ್‌ ಎಸ್‌.ಬಿ. ಕೂಡಲಗಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಸೆಪ್ಟಂಬರ್ 25ರಂದು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಅವರ ವಿಚಾರಣೆ ನಡೆಸಿ ಜಾಮೀನು ನಿರಾಕರಿಸಿರುತ್ತದೆ. ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ವಾದ ಮಂಡಿಸಿದ್ದರು.

ಜಮೀನಿನ ನಿರಾಕ್ಷೇಪಣ ಪತ್ರಕ್ಕೆ ಲಂಚನ ಬೇಡಿಕೆ ಇಟ್ಟ ಸಂಬಂಧ ಫಲಾನುಭವಿಯೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ ಕಾರಣ ಆಗಸ್ಟ್ 28ರಂದು ಪುತ್ತೂರು ತಹಶೀಲ್ದಾರ್‌ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕಚೇರಿಯ ಭೂ ಸುಧಾರಣಾ ಶಾಖೆಯ ಪ್ರಥಮ ದರ್ಜೆ ಸಹಾಯಕ ಸುನೀಲ್‌ ಕುಮಾರ್‌ ದೂರುದಾರರಿಂದ 12 ಸಾವಿರ ರೂ. ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ವಿಚಾರಣೆ ವೇಳೆ ತಹಶೀಲ್ದಾರ್‌ ಅವರಿಗೆ 10 ಸಾವಿರ ರೂ. ನೀಡಬೇಕು ಎಂದು ಆತ ತಿಳಿಸಿದ್ದು, ಇಬ್ಬರ ವಿರುದ್ಧವೂ ಭ್ರಷ್ಟಾಚಾರ ನಿರ್ಬಂಧಕ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸುನೀಲ್‌ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಅಂದು ತಲೆ ಮರೆಸಿ ಭೂಗತರಾಗಿದ್ದ ಕೂಡಲಗಿ ಇನ್ನೂ ಪತ್ತೆಯಾಗಿಲ್ಲ.

ಪುತ್ತೂರು ತಹಶೀಲ್ದಾರ್ ಆಗಿದ್ದ ಪುರಂದರ ಹೆಗ್ಡೆಯವರು ಮೇ 31 ರಂದು ನಿವೃತ್ತಿ ಹೊಂದಿದ ಬಳಿಕ ಬಾಗಲಕೋಟೆ ಇಳಕಲ್ ಗ್ರೇಡ್ -1 ತಹಶೀಲ್ದಾರ್ ಆಗಿದ್ದ ವಿಜಯಪುರ ಮೂಲದ ಎಸ್ ಬಿ ಕೂಡಲಗಿ ಅವರು ಪುತ್ತೂರಿಗೆ ವರ್ಗಾವಣೆಗೊಂಡು ಜೂನ್ 26 ರಂದು ಅಧಿಕಾರ ಸ್ವೀಕರಿಸಿದ್ದರು. ಆಗಸ್ಟ್ 28 ರಂದು ಸಂಜೆ ಲೋಕಾಯುಕ್ತ ಪೊಲೀಸರು ತಾಲೂಕು ಕಚೇರಿಯ ಭೂಮಿ ಶಾಖೆಗೆ ದಾಳಿ ನಡೆಸಿ ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಮೀನು ಪರಭಾರೆಗೆ ನಿರಾಕ್ಷೇಪಣಾ ಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ದೂರು ದಾಖಲಿಸಿಕೊಂಡಿದ್ದಲ್ಲದೆ ಕೇಸು ವರ್ಕರ್ ಸುನೀಲ್ ಎಂಬವರು 12 ಸಾವಿರ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು. ಆ ಬಳಿಕ ತಹಶೀಲ್ದಾರ್ ಕೂಡಲಗಿ ಈತನಕ ಕಚೇರಿ ಕರ್ತವ್ಯಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದಾರೆ. ಈಶ್ವರಮಂಗಲದ ಅಜಿತ್ ಎಂಬವರು ದೂರು ನೀಡಿದ್ದರು.