ನಕಲಿ ವೈದ್ಯನ ಯಡವಟ್ಟು, ಹೈ ಡೋಸ್ ಇಂಜೆಕ್ಷನ್ ನೀಡಿದ ಪರಿಣಾಮ ಎಂಟು ವರ್ಷದ ಬಾಲಕಿ ಸಾವು, ವೈದ್ಯ ನಾಪತ್ತೆ.

ರಾಜ್ಯ

ನಕಲಿ ವೈದ್ಯರ ದಂಧೆ ಮತ್ತು ಅವರ ಅವೈಜ್ಞಾನಿಕ ಚಿಕಿತ್ಸೆಗಳು ಗ್ರಾಮೀಣ ಪ್ರದೇಶದ ಅಮಾಯಕ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವುದಕ್ಕೆ ಮತ್ತೊಂದು ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಡೆದಿದೆ. ಮಾಲೂರಿನಲ್ಲಿರುವ ನಕಲಿ ಕ್ಲಿನಿಕ್‌ನ ವೈದ್ಯನ ಯಡವಟ್ಟಿನಿಂದಾಗಿ 8 ವರ್ಷದ ಬಾಲಕಿ ತೀವ್ರವಾಗಿ ನರಳಾಡಿ ಮೃತಪಟ್ಟಿದ್ದಾಳೆ. ಈ ಘಟನೆ ಸಂಬಂಧ ಆಕ್ರೋಶಗೊಂಡಿರುವ ಪೋಷಕರು ನಕಲಿ ವೈದ್ಯನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಾಲೂರು ತಾಲೂಕಿನ ದೊಡ್ಡ ಇಗಲೂರು ಗ್ರಾಮದ ನಿವಾಸಿಗಳಾದ ತಾನವಿ (8) ಎಂಬ ಬಾಲಕಿಯೇ ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿ. ಬಾಲಕಿಗೆ ಜ್ವರ ಕಾಣಿಸಿಕೊಂಡ ಕಾರಣ, ಪೋಷಕರು ಸೋಮವಾರದಂದು ಅ.01 ಪಕ್ಕದ ಸಂತೇಹಳ್ಳಿ ಗ್ರಾಮದಲ್ಲಿರುವ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದರು.

ಆದರೆ, ಅಲ್ಲಿನ ನಕಲಿ ವೈದ್ಯನು ಮಗುವಿಗೆ ನೀಡಬೇಕಾದ ಪ್ರಮಾಣಕ್ಕಿಂತ ಹೆಚ್ಚು ಅಥವಾ ದೊಡ್ಡವರಿಗೆ ನೀಡುವ ಮಾದರಿಯ ಪ್ರಬಲ ಇಂಜೆಕ್ಷನ್ (ಹೈ ಡೋಸ್)‌ ಅನ್ನು ಬಾಲಕಿಗೆ ನೀಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಇಂಜೆಕ್ಷನ್ ತೆಗೆದುಕೊಂಡ ನಂತರ ತಾನವಿ ತೀವ್ರ ನೋವಿನಿಂದ ನರಳಾಡಲು ಪ್ರಾರಂಭಿಸಿದ್ದಾಳೆ. ಎರಡು ದಿನಗಳ ಕಾಲ ಇಂಜೆಕ್ಷನ್ ನೀಡಿದ ಸ್ಥಳದಲ್ಲಿ ವಿಪರೀತ ನೋವು ಕಾಣಿಸಿಕೊಂಡಿದ್ದು, ಆ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿ ಚರ್ಮ ಹಸಿರು ಬಣ್ಣಕ್ಕೆ ತಿರುಗಿತ್ತು.

ಬಾಲಕಿಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದನ್ನು ಗಮನಿಸಿದ ಪೋಷಕರು ಅ.01 ರಂದು ಮಾಲೂರಿನ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ನೀಡಿದ ಚಿಕಿತ್ಸೆ ಫಲಕಾರಿಯಾಗದೆ, ಇಂದು ಸಂಜೆ ಅ.02 ರಕ್ತದ ವಾಂತಿ ಮಾಡಿ ಬಾಲಕಿ ತಾನವಿ ಸಾವನ್ನಪ್ಪಿದ್ದಾಳೆ. ನಕಲಿ ವೈದ್ಯ ನೀಡಿದ ಇಂಜೆಕ್ಷನ್‌ನಿಂದಲೇ ತಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂದು ಬಾಲಕಿಯ ಪೋಷಕರು ದುಃಖತಪ್ತವಾಗಿ ಆರೋಪಿಸಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ನಕಲಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯ ಕ್ಲಿನಿಕ್‌ಗೆ ಬೀಗ ಹಾಕಿ ತಲೆಮರೆಸಿಕೊಂಡಿದ್ದಾನೆ.