ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ. 7 ಲಕ್ಷ ನುಂಗಿದ ಸಜೀಪ ಮೂಡ ಗ್ರಾಮ ಪಂಚಾಯತ್ ಸಿಬ್ಬಂದಿ

ಕರಾವಳಿ

ಭ್ರಷ್ಟೆ ಸಿಬ್ಬಂದಿ ಬೆನ್ನಿಗೆ ನಿಂತ ಪಂಚಾಯತ್ ಸದಸ್ಯರು, ಕಾಂಗ್ರೆಸ್ಸಿನ ಪ್ರಭಾವಿ ಮುಖಂಡ.!

‘ಕಾವಲಿಗಿಟ್ಟವರೇ ಕೊಳ್ಳೆ ಹೊಡೆದ ಸ್ಥಿತಿಯಂತಾಗಿದೆ’ ಸಜೀಪ ಮೂಡ ಗ್ರಾಮ ಪಂಚಾಯತ್ ಪರಿಸ್ಥಿತಿ. ಇದು ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮ ಪಂಚಾಯತ್ ನ ಭ್ರಷ್ಟತೆಯ ಪರಮಾವಧಿಯ ಕಥೆ ವ್ಯಥೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಅನ್ನುತ್ತಾರಲ್ಲ ಅದಕ್ಕೆ ಪಕ್ಕಾ ಉದಾಹರಣೆಯಂತಿದೆ ಈ ಪಂಚಾಯತ್. ಇಲ್ಲಿನ ಪಂಚಾಯತ್ ಸಿಬ್ಬಂದಿಯೇ ದುಡ್ಡು ಸ್ವಾಹಾ ಮಾಡಿದರೂ, ಆಕೆಯ ರಕ್ಷಣೆಗೆ ಪಂಚಾಯತ್ ಸದಸ್ಯರ ಜೊತೆ ಕಾಂಗ್ರೆಸ್ ಮುಖಂಡರು ಬೆನ್ನಿಗೆ ನಿಂತಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ಸಜೀಪ ಮೂಡ ಗ್ರಾಮ ಪಂಚಾಯತ್ ಸಿಬ್ಬಂದಿ ಮಹಿಳಾ ಮಣಿಯೊಬ್ಬಳು ಕಳೆದ ಎರಡು ವರ್ಷಗಳಿಂದ ನಳ್ಳಿ ನೀರಿನ ಹಣ, ತೆರಿಗೆ ಹಣ ಸೇರಿದಂತೆ ಏಳೂವರೆ ಲಕ್ಷ ರೂಪಾಯಿ ಅನ್ನು ನುಂಗಿ ನೀರು ಕುಡಿದಿದ್ದಳಾಂತೆ. ಸಾರ್ವಜನಿಕರಿಂದ ಸಂಗ್ರಹವಾದ ದುಡ್ಡನ್ನೇ ಸ್ವಾಹಾ ಮಾಡಿದ್ದಾಳೆ. ಸಾಮಾನ್ಯ ಜನರಿಂದ ಸಂಗ್ರಹವಾದ ಹಣವನ್ನು ಸರ್ಕಾರಕ್ಕೆ ಖಜಾನೆಗೆ ಸಂದಾಯ ಮಾಡದೆ ತನ್ನ ವೈಯಕ್ತಿಕ ಉದ್ದೇಶಕ್ಕೆ ಪಂಚಾಯತ್ ಸಿಬ್ಬಂದಿ ಬಳಸಿರುವುದು ಅಕ್ಷಮ್ಯ ಅಪರಾಧ. ದಿನ ದಿನ ಸಂಗ್ರಹವಾದ ತೆರಿಗೆ ಹಣ, ಸಾರ್ವಜನಿಕ ನಳ್ಳಿ ನೀರಿನ ಹಣವನ್ನು ಪಂಚಾಯತ್ ಅಕೌಂಟ್ ಗೆ ಹಾಕಬೇಕಿರುವುದು ಸಿಬ್ಬಂದಿಯ ಕರ್ತವ್ಯ. ಸಿಬ್ಬಂದಿ ಅಸಡ್ಡೆ ತೋರಿದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳು ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಬೇಕಿರುವುದು ಕಾನೂನಿನಲ್ಲಿರುವ ನಿಯಮ. ಆದರೆ ಸಿಬ್ಬಂದಿ ಕಳೆದ ಎರಡು ವರ್ಷಗಳಿಂದ ಪಂಚಾಯತ್ ಗೆ ಬರುತ್ತಿದ್ದ ನಳ್ಳಿ ನೀರಿನ ಹಣವನ್ನು ತನ್ನ ಸ್ವಂತ ಲಾಭಕ್ಕೆ ಬಳಸಿ ಏಳೂವರೆ ಲಕ್ಷ ರೂಪಾಯಿಯಷ್ಟು ದುಡ್ಡನ್ನು ಸ್ವಾಹಾ ಮಾಡಿದರೂ, ಪಂಚಾಯತ್ ಅಧಿಕಾರಿ ವರ್ಗ ಕಣ್ಣಿದ್ದು ಕುರುಡರಂತೆ ವರ್ತಿಸಿರುವುದು ಯಾವ ನ್ಯಾಯ.?

ಪಂಚಾಯತ್ ಸಿಬ್ಬಂದಿ ಮಹಿಳಾ ಮಣಿಗೆ ಪಂಚಾಯತ್ ನೋಟಿಸ್ ನೀಡಿದರೂ ನೋಟಿಸಿಗೆ ಕ್ಯಾರೆ ಅನ್ನಲಿಲ್ಲ. ಎರಡೆರಡು ಬಾರಿ ನೋಟೀಸು ನೀಡಿದರೂ ಜವಾಬೇ ಇಲ್ಲಂತೆ.! ಕೊನೆಗೆ ಒತ್ತಡ ಜಾಸ್ತಿಯಾದಾಗ ಎರಡೂವರೆ ಲಕ್ಷ ರೂಪಾಯಿಯಷ್ಟು ಪಂಚಾಯತ್ ಗೆ ಕಟ್ಟಿ ಸುಮ್ಮನೆ ಕೂತಿದ್ದಾಳಂತೆ. ಎರಡನೇ ಬಾರಿ ನೋಟಿಸ್ ನೀಡಿದರೂ ಅದಕ್ಕೆ ಯಾವುದೇ ರೀತಿಯ ಉತ್ತರ ನೀಡದೇ ಸುಮ್ಮನಿರುವುದು ಪಂಚಾಯತ್ ಆಡಳಿತದ ಅಣಕ ಅಂದರೆ ತಪ್ಪಲ್ಲ. ಪಂಚಾಯತ್ ಅಧ್ಯಕ್ಷೆ ಸೌಮ್ಯ ಸ್ವಬಾವದ ಮಹಿಳೆ, ಸ್ವಂತವಾಗಿ ಅಲೋಚಿಸುವ ಶಕ್ತಿ ಇಲ್ಲ. ಯಾರದ್ದೋ ಅನತಿಯಂತೆ ಕೈಗೊಂಬೆ ರೀತಿ ವರ್ತಿಸುತ್ತಿದ್ದಾರೆ. ಪಂಚಾಯತ್ ಅಧ್ಯಕ್ಷೆ ಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ಮನಸ್ಸಿದ್ದರೂ, ಪಂಚಾಯತ್ ಸದಸ್ಯರು ಅಧ್ಯಕ್ಷೆಯ ಬೆನ್ನಿಗೆ ನಿಲ್ಲುತ್ತಿಲ್ಲ. ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಾಗಿದೆ ಅಧ್ಯಕ್ಷೆಯ ಪರಿಸ್ಥಿತಿ. ಕೇಳಿ ನೋಡುತ್ತೇನೆ, ವಿಚಾರಿಸಿ ಹೇಳುತ್ತೇನೆ ಅನ್ನುವ ಹಾರಿಕೆಯ ಉತ್ತರಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಅಧ್ಯಕ್ಷೆಯ ಕೈ ಕಾಲು ಕಟ್ಟಿ ಹಾಕಿದ್ದಾರೆ ಇಲ್ಲಿನ ಪಂಚಾಯತ್ ಸದಸ್ಯರು. ಇಲ್ಲಿ ಸ್ವಲ್ಪ ಮಟ್ಟಿನ ಗಟ್ಟಿಗಿತ್ತಿ ಮಹಿಳೆ ಪಂಚಾಯತ್ ಉಪಾಧ್ಯಕ್ಷೆ. ಈ ಇಬ್ಬರೂ ಮಹಿಳೆಯರ ಬೆನ್ನಿಗೆ ಸ್ವ ಪಕ್ಷದ ಸದಸ್ಯರೇ ನಿಲ್ಲುತ್ತಿಲ್ಲವಂತೆ. ಆದರೂ ತಾಲೂಕು ಪಂಚಾಯತಿನ ಅಧಿಕಾರಿಗಳಿಗೆ ಪತ್ರ ಬರೆದು ಹಗರಣದ ಬಗ್ಗೆ ಕ್ರಮಕೈಗೊಳ್ಳಲು ಅದ್ಯಕ್ಷರು, ಉಪಾದ್ಯಕ್ಷರು ಮನವಿ ಮಾಡಿರುತ್ತಾರೆ. ಆದರೂ ಇಲ್ಲಿನ ಸ್ವ ಪಕ್ಷದ ಕೆಲವು ಪಂಚಾಯತ್ ಸದಸ್ಯರು ದುಡ್ಡು ನುಂಗಿ ಗುಳುಂ ಮಾಡಿರುವ ಸಿಬ್ಬಂದಿಯ ಬೆನ್ನಿಗೆ ನಿಂತಿರುವುದು ವಿಪರ್ಯಾಸವೇ ಸರಿ. ಸಿಬ್ಬಂದಿ ಸ್ವಾಹಾ ಮಾಡಿದ ದುಡ್ಡಲ್ಲಿ ಪಂಚಾಯತ್ ಸದಸ್ಯರಿಗೂ ಪಾಲಿದೆಯೋ ಅನ್ನುವ ಮಾತುಗಳು ಸಜೀಪ ಮೂಡದ ಪ್ರತೀ ಮನೆಗಳಲ್ಲೂ ಕೇಳಿ ಬರುತ್ತಿದೆ.

ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಬೇಕಿರುವುದು ಪಂಚಾಯತ್ ಆಡಳಿತದ ಕರ್ತವ್ಯ. ಆದರೆ ವಿಚಿತ್ರ ಅನ್ನುವಂತೆ ಸಾರ್ವಜನಿಕರ ದುಡ್ಡನ್ನೇ ನುಂಗಿದ ಈ ಮಹಿಳಾ ಭ್ರಷ್ಟ ಸಿಬ್ಬಂದಿ ಪರ ಪಂಚಾಯತಿನ ಕೆಲವು ಸದಸ್ಯರೇ ಬೆನ್ನಿಗೆ ನಿಂತಿದ್ದಾರೆ. ಸರಿ ಸುಮಾರು ಏಳೂವರೆ ಲಕ್ಷ ದುಡ್ಡು ಸ್ವಾಹಾ ಮಾಡಿದರೂ ಈಕೆ ಪಂಚಾಯತ್ ಗೆ ಬೇಕು ಎಂದು ಕಾಂಗ್ರೆಸಿನ ಕೆಲವು ಪಂಚಾಯತ್ ಸದಸ್ಯರ ನಿಯೋಗವೊಂದು ಕಾಂಗ್ರೆಸ್ ಪಕ್ಷದ ಬಂಟ್ವಾಳದ ಪ್ರಭಾವಿ ನಾಯಕರ ಬಳಿಗೆ ತೆರಳಿ ಲಾಬಿ ನಡೆಸಿದೆ. ಭ್ರಷ್ಟೆ ಸಿಬ್ಬಂದಿ ಪರ ಪ್ರಭಾವಿ ನಾಯಕರು ಓಕೆ ಶರಣು ಅಂದಿದ್ದಾರಂತೆ. ಸಾರ್ವಜನಿಕರ ದುಡ್ಡನ್ನೇ ತನ್ನ ವೈಯಕ್ತಿಕ ಗೂಗಲ್ ಪೇ, ಪೋನ್ ಪೇ ಮೂಲಕ ದುಡ್ಡು ಹಾಕಿಸಿ ಅದನ್ನು ತನ್ನ ಸ್ವಂತಕ್ಕೆ ಬಳಸಿ ಸರ್ಕಾರಕ್ಕೆ ವಂಚಿಸಿದ ಭ್ರಷ್ಟರ ಪರ ನಿಂತಿರುವುದು ನಾಚಿಕೆಗೇಡಿನ ಸಂಗತಿ. ಆಡಳಿತ ವರ್ಗ, ಪಂಚಾಯತ್ ಅಧಿಕಾರಿ ವರ್ಗ ಮೌನಕ್ಕೆ ಶರಣಾಗಿರುವ ಹಿಂದಿನ ರಹಸ್ಯವಾದರೂ ಏನು.? ನಳ್ಳಿ ನೀರು, ತೆರಿಗೆ ಹಣವನ್ನೇ ಲಪಟಾಯಿಸಿದರೆ, ಇನ್ನು ಅಭಿವೃದ್ಧಿಗೆ ಬಂದ ಹಣ ಯಾರ ಜೇಬು ಸೇರಿರಬಹುದು.? ಸಜೀಪ ಮೂಡ ಗ್ರಾಮ ಪಂಚಾಯತ್ ನಲ್ಲಿ ಭ್ರಷ್ಟರ ಪರ ಕಾಂಗ್ರೆಸ್ ಸದಸ್ಯರು ನಿಲ್ಲುವುದಾದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಕೊನೆಯ ಮೊಳೆ ಹೊಡೆಯಲು ಇಲ್ಲಿನ ಜನ ನಿರ್ಧರಿಸಿದಂತಿದೆ.ಇನ್ನಷ್ಟು ಕಾರ್ಮಕಾಂಡಗಳನ್ನು ಮುಂದಕ್ಕೆ ಬಿಚ್ಚಿಡೋಣ.

ಸಜಿಪ ಮೂಡ ಗ್ರಾಮ ಪಂಚಾಯತಿನ ದ್ವಿತೀಯ ಅವಧಿಗೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶೋಭಾ ಶೆಟ್ಟಿ ಅವಿರೋಧವಾಗಿ ಹಾಗೂ ಉಪಾಧ್ಯಕ್ಷರಾಗಿ ಫೌಝಿಯ ಅವರು ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ. ಪಂಚಾಯತ್ ಒಟ್ಟು 20 ಸದಸ್ಯ ಬಲ ಹೊಂದಿದ್ದು 11 ಮಂದಿ ಕಾಂಗ್ರೆಸ್ ಬೆಂಬಲಿತ ಹಾಗೂ 9 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರು. ಆದರೆ ಯಾಕೋ ಬಿಜೆಪಿ ಸದಸ್ಯರು ಮೌನಕ್ಕೆ ಜಾರಿದ್ದಾರೆ. ಮಾನ್ಯ ಶಾಸಕರಾದ ರಾಜೇಶ್ ನಾಯ್ಕ್ ರವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಇಷ್ಟೆಲ್ಲಾ ಭ್ರಷ್ಟಾಚಾರಗಳು ನಡೆಯುತ್ತಿರುವಾಗ ಕ್ರಮಕೈಗೊಳ್ಳದೆ, ತಮ್ಮ ವ್ಯಾಪ್ತಿಯ ಸರಕಾರಿ ನೌಕರರನ್ನು ಹದ್ದು ಬಸ್ತಿನಲ್ಲಿಡದಿರುವುದು ಖೇಧಕರ. ಮಾನ್ಯ ಶಾಸಕರು ಇನ್ನಾದರೂ ಭ್ರಷ್ಟರ ವಿರುದ್ದ ಕ್ರಮಕೈಗೊಳ್ಳುವ ಅನಿವಾರ್ಯತೆ ಇದೆ. ಇಲ್ಲದಿದ್ದಲ್ಲಿ ಶಾಸಕರಿಗೂ ಕಳಂಕ ತಪ್ಪಿದ್ದಲ್ಲ.