ಸಜೀಪ ಮೂಡ ಗ್ರಾಮ ಪಂಚಾಯತ್ ಸಿಬ್ಬಂದಿಯ ಲಕ್ಷ, ಲಕ್ಷ ನೀರಿನ ಬಿಲ್ಲು ಸ್ವಾಹ ಪ್ರಕರಣ

ಕರಾವಳಿ

ಸಿಬ್ಬಂದಿ ಲಾವಣ್ಯ ವಿರುದ್ದ ಆಡಳಿತಾತ್ಮಕ ಕ್ರಮ ಜರುಗಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಯಿಂದ ಪಿಡಿಓ ಗೆ ನೋಟಿಸ್ ಜಾರಿ

ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮ ಪಂಚಾಯತ್ ಸಿಬ್ಬಂದಿಯ ಭ್ರಷ್ಟತೆಯ ಪರಮಾವಧಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಜೀಪ ಮೂಡ ಗ್ರಾಮ ಪಂಚಾಯತ್ ಬಂಟ್ವಾಳ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಪಿಡಿಒ ಅವರಿಗೆ ಸೂಚಿಸಿದ್ದಾರೆ.

ಸಜೀಪ ಮೂಡ ಗ್ರಾಮ ಪಂಚಾಯತ್ ಸಿಬ್ಬಂದಿ ಲಾವಣ್ಯ ಎಂಬಾಕೆ ಸಜೀಪ ಮೂಡ ಗ್ರಾಮ ಪಂಚಾಯತ್ ನಲ್ಲಿ ಸ್ವಚ್ಛತಾಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ಸಾರ್ವಜನಿಕರಿಂದ ನಳ್ಳಿ ನೀರಿನ ವಸೂಲಾತಿ ನಡೆಸಿ 7,07,000 ರೂಪಾಯಿಗಳನ್ನು ಪಂಚಾಯತ್ ಖಾತೆಗೆ ಜಮಾ ಮಾಡದೆ ಹಣ ದುರುಪಯೋಗಪಡಿಸಿದ ಆರೋಪ ಕೇಳಿ ಬಂದಿತ್ತು.

ಈ ಬಗ್ಗೆ ಪಂಚಾಯತ್ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಸಭೆ ನಡೆಸಿ ಸಿಬ್ಬಂದಿ ಲಾವಣ್ಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಪಿಡಿಒ, ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಧಿಕಾರಿಗಳಿಗೆ ದೂರು ನೀಡಿ, ಅವ್ಯವಹಾರ ನಡೆಸಿದ ಸಿಬ್ಬಂದಿ ಲಾವಣ್ಯ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಈ ಸಂಬಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿಬ್ಬಂದಿ ಲಾವಣ್ಯಳಿಗೆ ನೋಟಿಸ್ ಜಾರಿ ಮಾಡಿ 2,14,000 ರೂಪಾಯಿಗಳನ್ನು ಪಂಚಾಯತ್ ಖಾತೆಗೆ ವರ್ಗಾವಣೆ ಮಾಡಿಸಿದ್ದರು. ಉಳಿದ ಮೊತ್ತ ಪಾವತಿಸದೆ ಸಿಬ್ಬಂದಿ ಬಾಕಿ ಇರಿಸಿದ್ದರು. ಇದೀಗ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಿಬ್ಬಂದಿ ಲಾವಣ್ಯ ವಿರುದ್ದ ಆಡಳಿತಾತ್ಮಕ ಕ್ರಮ ಜರುಗಿಸುವಂತೆ ಪಿಡಿಒ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ನೀರಿನ ಬಿಲ್ಲಿನ ಸ್ವಾಹ ಪ್ರಕರಣವನ್ನು ಸ್ಪೆಷಲ್ ನ್ಯೂಸ್ ಮೀಡಿಯಾ ಬೆಳಕಿಗೆ ತಂದಿತ್ತು. ಇದೀಗ ಸಂಬಂಧ ಪಟ್ಟವರು ಕ್ರಮ ಜರುಗಿಸಲು ಮುಂದಾಗಿದ್ದಾರೆ.