ಉಳಾಯಿಬೆಟ್ಟು: ‘ಮರಣದ’ ಹಂಪ್ಸ್ ಗೆ ಕೊನೆಗೂ ಮುಕ್ತಿ.. ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿಗೆ ಸೂಚನೆ

ಕರಾವಳಿ

ಸ್ಪೆಷಲ್ ನ್ಯೂಸ್ ವರದಿಗೆ ಸ್ಪಂದಿಸಿದ ಉಳಾಯಿಬೆಟ್ಟು ಗ್ರಾಮ ಪಂಚಾಯತ್

ಉಳಾಯಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ಮಂಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿಯ ಲೋಕೋಪಯೋಗಿ ರಸ್ತೆಯಲ್ಲಿ ಅಪಾಯಕಾರಿ ಹಂಪ್ಸ್ ಮರಣದ ಹಂಪ್ಸ್ ಆಗಿ ಹಲವಾರು ಪ್ರಾಣ ಹಾನಿಗಳು ಸಂಭವಿಸಿದ ಬಗ್ಗೆ ಕೆಲವು ದಿನಗಳ ಹಿಂದೆಯಷ್ಟೇ ಸ್ಪೆಷಲ್ ನ್ಯೂಸ್ ಮೀಡಿಯಾ ವಿಸ್ತೃತ ವರದಿಯನ್ನು ಬಿತ್ತರಿಸಿತ್ತು. ಇತ್ತೀಚೆಗೆ ನಾಲ್ಕರಿಂದ ಐದು ಅಪಘಾತ ಪ್ರಕರಣಗಳು ಅವೈಜ್ಞಾನಿಕ ಹಂಪ್ಸ್ ನಿಂದಾಗಿ ನಡೆದಿತ್ತು. ಮೊನ್ನೆಯಷ್ಟೇ ಇಫ್ತಾರ್ ಗಾಗಿ ಸಂಬಂಧಿಕರ ಮನೆಗೆ ಬಂದಿದ್ದ ಗುರುಪುರದ ಮಹಿಳೆಯೊಬ್ಬರು ಬೇಜವಾಬ್ದಾರಿ ಹಂಪ್ಸ್ ನಿಂದಾಗಿ ಜೀವ ತೆತ್ತಿದ್ದರು.

ಹಂಪ್ಸ್ ಪಕ್ಕದಲ್ಲೇ ಮೊರಾರ್ಜಿ ದೇಸಾಯಿ ವಸತಿ ಶಾಲೆ ಇದ್ದು, ಮಕ್ಕಳ ಸುರಕ್ಷತೆಗಾಗಿ ಲೋಕೋಪಯೋಗಿ ಇಲಾಖೆ ಹಾಗೂ ಉಳಾಯಿಬೆಟ್ಟು ಪಂಚಾಯತ್ ಗೆ ಮನವಿ ನೀಡಿ ಹಂಪ್ಸ್ ನಿರ್ಮಾಣಕ್ಕೆ ಕೋರಿಕೊಂಡಿದ್ದರು. ಶಾಲೆಯ ಮನವಿಗೆ ಸ್ಪಂದಿಸಿದ ಉಳಾಯಿಬೆಟ್ಟು ಪಂಚಾಯತ್ ಅಲ್ಲಿ ಹಂಪ್ಸ್ ನಿರ್ಮಿಸಿ ವಾಹನ ಸವಾರರ ವೇಗಕ್ಕೆ ಮಿತಿ ಹಾಕಲು ನಿರ್ಧರಿಸಿತ್ತು. ಆದರೆ ಹಂಪ್ಸ್ ವೈಜ್ಞಾನಿಕವಾಗಿ ನಿರ್ಮಿಸದ ಪರಿಣಾಮ, ಎತ್ತರದ ಗೋರಿ ಕಟ್ಟುವಂತೆ ಕಟ್ಟಿದ್ದು ಇಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಲು ಕಾರಣವಾಗಿತ್ತು. ಅಪಘಾತ ನಿಯಂತ್ರಿಸುವ ಉದ್ದೇಶದಿಂದ ನಿರ್ಮಾಣವಾದ ಹಂಪ್ಸ್ ಬೇಜವಾಬ್ದಾರಿ ನಿರ್ಮಾಣದಿಂದಾಗಿ ಅಪಘಾತಗಳ ಸಂಖ್ಯೆ ವಿಪರೀತವಾಗಿ ಹೆಚ್ಚಳು ಕಾರಣವಾಗಿತ್ತು.

ಲೋಕೋಪಯೋಗಿ ಇಲಾಖೆ, ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಬೇಜವಬ್ದಾರಿತನದ ಬಗ್ಗೆ ಸ್ಪೆಷಲ್ ನ್ಯೂಸ್ ಮೀಡಿಯಾ ಸಮಗ್ರ ವರದಿಯನ್ನು ಪ್ರಕಟಿಸಿತ್ತು. ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಗೆ ನೋಟಿಸ್ ಜಾರಿ ಮಾಡಿತ್ತು. ವರದಿಗೆ ತಕ್ಷಣ ಸ್ಪಂದಿಸಿದ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಪಿಡಿಒ ಅನಿತಾ, ಗುತ್ತಿಗೆದಾರರಿಗೆ ಅವೈಜ್ಞಾನಿಕ ಹಂಪ್ಸ್ ತೆರವು ಮಾಡಿ ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸುವಂತೆ ಸೂಚನೆ ನೀಡಿದ್ದರು. ಪಕ್ಕದಲ್ಲೇ ವಸತಿ ಶಾಲೆ ಇರುವುದರಿಂದ ಅಲ್ಲಿ ಹಂಪ್ಸ್ ಅಗತ್ಯವಾಗಿ ಬೇಕಾಗಿದ್ದು, ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್ ನಿರ್ಮಿಸಲು ಸೂಚನೆ ನೀಡಿದ್ದೇವೆ. ರಾತ್ರಿ ಹೊತ್ತು ವಾಹನ ಸವಾರರಿಗೆ ಹಂಪ್ಸ್ ಗೊತ್ತಾಗುವಂತೆ ಉತ್ತಮ ದರ್ಜೆಯ ಪೈಂಟ್ ಬಳಸಲು ಸೂಚಿಸಿದ್ದೇವೆ ಹಾಗೂ ರಸ್ತೆಯ ಆಸುಪಾಸು ಅಗತ್ಯ ಸೂಚನಾ ಬೋರ್ಡ್ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ಉಳಾಯಿಬೆಟ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿತಾ ಸ್ಪೆಷಲ್ ನ್ಯೂಸ್ ಮೀಡಿಯಾ ಕ್ಕೆ ತಿಳಿಸಿದ್ದಾರೆ. ಇದೀಗ ಕಾಮಗಾರಿ ಆರಂಭಿಸಲಾಗಿದೆ.