ಕಳೆದ ಎರಡು ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕೊಲೆ ಯತ್ನ ಪ್ರಕರಣದ ಆರೋಪಿ ಮೊಹಮ್ಮದ್ ಸಿನಾನ್ ಬಂಧನ

ಕರಾವಳಿ

ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ, ತಲೆ ಮರೆಸಿಕೊಂಡಿರುವ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲು

ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021 ರಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿ ಕುದ್ರೋಳಿ ನಿವಾಸಿ ಮೊಹಮ್ಮದ್ ಸಿನಾನ್, ಎಂಬಾತನು ಕಳೆದ ಎರಡು ವರ್ಷಗಳಿಂದ ಘನ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಈತನ ವಿರುದ್ದ ಘನ ನ್ಯಾಯಾಲಯವು ವಾರೆಂಟ್ ಹೊರಡಿಸಿದ್ದು, ವಾರೆಂಟ್ ಜ್ಯಾರಿಗೊಳಿಸುವ ಸಲುವಾಗಿ ಈತನ ವಿರುದ್ದ ಬ್ಯೂರೋ ಆಫ್ ಇಮಿಗ್ರೇಶನ್ ನವದೆಹಲಿ, ಭಾರತ ಸರಕಾರ ಇವರಿಂದ ಎಲ್.ಓ.ಸಿ ತೆರೆಯಲಾಗಿತ್ತು.

ದಿನಾಂಕ 08.10.2025 ರಂದು ಆರೋಪಿ ಮಹಮ್ಮದ್ ಸಿನಾನ್ ಕತಾರ್ ದೇಶದಿಂದ ವಿಮಾನ ಮೂಲಕ ಮಂಗಳೂರಿಗೆ ಆಗಮಿಸಿ, ವಿಮಾನ ನಿಲ್ದಾಣದಿಂದ ಹೊರ ಬರುವ ಸಮಯದಲ್ಲಿ ಇಮಿಗ್ರೇಶನ್ ಅಧಿಕಾರಿಗಳು ವಶಕ್ಕೆ ಪಡೆದು ಉರ್ವಾ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಹಸ್ತಾಂತರಿಸಿರುತ್ತಾರೆ. ಆರೋಪಿ ಸಿನಾನ್ ನನ್ನು ಉರ್ವಾ ಪೊಲೀಸರು ತಮ್ಮ ವಶಕ್ಕೆ ಪಡೆದು ದಿನಾಂಕ: 08.10.2025 ರಂದು ರಾತ್ರಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಮಹಮ್ಮದ್ ಸಿನಾನ್ ಎಂಬವರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ವಾರಂಟ್ ಆರೋಪಿ ಸಿನಾನ್ ನ್ಯಾಯಾಲಯಕ್ಕೆ ಹಾಜರಾಗದೆ, ನ್ಯಾಯಾಲಯದ ಜಾಮೀನಿನ ಆದೇಶವನ್ನು ಉಲ್ಲಂಘನೆ ಮಾಡಿದ ತಲೆ ಮರೆಸಿಕೊಂಡಿರುವ ಬಗ್ಗೆ ಉರ್ವಾ ಪೊಲೀಸ್ ಠಾಣಾ ಮೊಕದ್ದಮೆ ಸಂಖ್ಯೆ 100/2025 ಕಲಂ:269 ಬಿ.ಎನ್.ಎಸ್ ನಂತೆ ಪ್ರತ್ಯೇಕ ಪ್ರಕರಣವನ್ನು ಪೊಲೀಸರು ದಾಖಸಿರುತ್ತಾರೆ.