ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆಕುಡಿಯ ಕಾಲೋನಿಯಲ್ಲಿ 47ಬಡ ಕುಟುಂಬಗಳು ವಾಸಿಸುತ್ತಿವೆ. ಮಂಗಳೂರಿನ ಪ್ರಸಿದ್ಧ ಉದ್ಯಮಿ ಯೆನೆಪೋಯ ಮೊಯ್ದೀನ್ ಕುಂಞಿ ಮತ್ತು ಕಂಪನಿಯು ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ 4028 ಎಕರೆ ಜಮೀನು ಹೊಂದಿದೆ. ಇದರಲ್ಲಿ 368ಎಕರೆ ಜಮೀನು ಹೆಚ್ಚುವರಿಯಾಗಿ ಹೊಂದಿರುವುದನ್ನು ಬೆಳ್ತಂಗಡಿ ಭೂ ನ್ಯಾಯ ಮಂಡಳಿಯು ತೀರ್ಪು ನೀಡಿದೆ.
ಭೂನ್ಯಾಯ ಮಂಡಳಿಯ ತೀರ್ಪಿನ ವಿರುದ್ಧ ಭೂಮಾಲಿಕರ ಸಂಸ್ಥೆ ಮತ್ತು ರಾಜ್ಯ ಸರ್ಕಾರವು ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ರಿಟ್ ಅರ್ಜಿಗಳನ್ನು ವಜಾಗೊಳಿಸಿ ಭೂ ನ್ಯಾಯ ಮಂಡಳಿಯ ಆದೇಶವನ್ನು ಎತ್ತಿ ಹಿಡಿದಿದೆ. ನಂತರ ರಾಜ್ಯ ಸರ್ಕಾರವು ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಿದ್ದ ರಿವ್ಯೂ ಪಿಟಿಶನ್ ಕೂಡಾ ತಿರಸ್ಕೃತವಾಗಿತ್ತು. ಈ ಆದೇಶದ ವಿರುದ್ಧ ಮತ್ತೆ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟಲ್ಲಿ ಸ್ಪೆಷಲ್ ಲೀವ್ ಪಿಟಿಶನ್ ಸಲ್ಲಿಸಿದೆ.
ಯೆನೆಪೋಯ ಮೊಯ್ದೀನ್ ಕುಂಞಿ ಮತ್ತು ಕಂಪನಿಯು ಕರ್ನಾಟಕ ಭೂಸುಧಾರಣಾ ಕಾಯ್ದೆಯಂತೆ ಹೆಚ್ಚುವರಿಯಾಗಿ ಪಡೆದ ಜಮೀನನ್ನು ಸರ್ಕಾರದ ವಶಕ್ಕೆ ಒಪ್ಪಿಸಬೇಕಾಗಿತ್ತು ಗೇಣಿದಾರರಲ್ಲದ ತಮ್ಮದೇ ವಲಯದ 53ಕುಟುಂಬಗಳಿಗೆ 537ಎಕರೆ ಮಂಜೂರಾತಿ ಮಾಡಿಸಲಾಗಿದೆ ಎನ್ನುವುದು ಸರ್ಕಾರದ ವಾದವಾಗಿದ್ದು ಭೂ ನ್ಯಾಯ ಮಂಡಳಿಯಿಂದ ಮಂಜೂರಾತಿಯಾದ ಜಮೀನನ್ನು ರದ್ದುಗೊಳಿಸಲು ಪ್ರಯತ್ನ ನಡೆಸುತ್ತಿದೆ. ಆದರೆ ಮಲೆಕುಡಿಯ ಸಮುದಾಯ ವಾಸಿಸುವ ಬಾಂಜಾರು ಮಲೆಕುಡಿಯ ಸಮುದಾಯ ಕಾಲೋನಿಯ 37ಬಡ ಕುಟುಂಬಗಳಿಗೆ ಮಂಜೂರಾಗಿರುವ ಜಮೀನಿನ ವಿರುದ್ಧ ರಾಜ್ಯ ಸರ್ಕಾರ ದಾಖಲಿಸಿರುವ ರಿಟ್ ಅರ್ಜಿಯನ್ನು ಹಿಂಪಡೆದು ಸಮುದಾಯದ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕೆಂದು ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.