ಅಬಕಾರಿ ಇಲಾಖೆಯವರ ಕಣ್ಣು ತಪ್ಪಿಸಿ ಪರಾರಿಯಾದ ಗಾಂಜಾ ಆರೋಪಿಗಳನ್ನು ಮಾಲು ಸಹಿತ ಲಾಕ್ ಮಾಡಿದ ಬಂಟ್ವಾಳ ನಗರ ಪೊಲೀಸರು

ಕರಾವಳಿ

ಇತ್ತೀಚೆಗೆ ಕೆಎ-70, 6904 ಸಂಖ್ಯೆ ಹೊಂದಿರುವ ಬೊಲೋರೋ ಪಿಕಪ್ ವಾಹನದಲ್ಲಿ ಮಾಧಕ ವಸ್ತು(ಗಾಂಜಾ) ಸಾಗಾಟ ಮಾಡುತ್ತಿದ್ದ ಸಮಯ ಅಬಕಾರಿ ಇಲಾಖೆಯವರು ಪಿಕ್ ಅಪ್ ವಾಹನವನ್ನು ಬೆನ್ನಟ್ಟಿಕೊಂಡು ಬಂದಿದ್ದು, ಆರೋಪಿಗಳು ಅವರಿಗೆ ಸಿಗದೆ ಪಿಕ್ ಅಪ್ ನ್ನು ಚಲಾಯಿಸಿಕೊಂಡು ಪರಾರಿಯಾಗಿ ನಂದಾವರದ ರೈಲ್ವೆ ಇಲಾಖೆಗೆ ಸಂಬಂದಿಸಿದ ಖಾಲಿ ಜಾಗದಲ್ಲಿ ಪಿಕಪ್ ವಾಹನ ಬಿಟ್ಟು, ಗಾಂಜಾದ ಸಮೇತ ಪರಾರಿಯಾಗಿ, ಗಾಂಜಾವನ್ನು ತಮ್ಮ ಸ್ನೇಹಿತನಾದ ಮಜೀದ ಎಂಬವರ ಮನೆಯಲ್ಲಿ ಬಚ್ಚಿಟ್ಟು ಅಬಕಾರಿ ಅಧಿಕಾರಿಗಳ ಕಣ್ಣು ತಪ್ಪಿ ಭೂಗತರಾಗಿದ್ದರು.

ದಿನಾಂಕ 08-10-2025 ರಂದು ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ನಗರ ಪೊಲೀಸರು ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 11.50 ಸಮಯಕ್ಕೆ ಗೂಡಿನಬಳಿ-ಪಾಣೆಮಂಗಳೂರು ಕಡೆಯಿಂದ ಬಿ.ಸಿರೋಡು ಕಡೆಗೆ ಒಂದು ಮೋಟಾರು ಸೈಕಲಿನಲ್ಲಿ ಇಬ್ಬರು ಸವಾರರು ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನವನ್ನು ಚಾಲಾಯಿಸಿಕೊಂಡು ಹೋಗುತ್ತಿರುವಾಗ ಪೊಲೀಸರು ನಿಲ್ಲಿಸುವಂತೆ ಸೂಚನೆ ನೀಡಿದರೂ, ಮೋಟಾರು ಸೈಕಲನ್ನು ನಿಲ್ಲಿಸದೆ ಗೂಡಿನಬಳಿ ಹೋಗುವ ರಸ್ತೆಗೆ ತಿರುಗಿಸಿ ಪರಾರಿಯಾಗಲು ಯತ್ನಿಸಿದಾಗ, ಪೊಲೀಸರು ಕೈಕುಂಜೆ ರೈಲ್ವೇ ಸ್ಟೇಷನ್‌ ಬಳಿ ಮೋಟಾರು ಸೈಕಲ್‌ ನ್ನು ಸವಾರರನ್ನು ಬೆನ್ನು ಹತ್ತಿ ವಶಕ್ಕೆ ಪಡೆದು ವಿಚಾರಿಸಿದಾಗ ದಿನಾಂಕ 25-09-2025 ರಂದು ಕೆಎ-70-6904 ನೇ ಬೊಲೋರೋ ಪಿಕಪ್ ವಾಹನದಲ್ಲಿ ಮಾಧಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿದಾಗ ಅಬಕಾರಿ ಇಲಾಖೆಯವರು ಪಿಕ್ ಅಪ್ ನ್ನು ಬೆನ್ನಟ್ಟಿಕೊಂಡು ಬಂದಿದ್ದು, ಅವರಿಗೆ ಸಿಗದ ಹಾಗೆ ಪಿಕ್ ಅಪ್ ನ್ನು ಚಲಾಯಿಸಿಕೊಂಡು ಹೋಗಿ ಗಾಂಜಾವನ್ನು ಸ್ನೇಹಿತ ಮಜೀದನ ಮನೆಯಲ್ಲಿ ಇಟ್ಟಿದ್ದು, ಸದ್ರಿ ಗಾಂಜಾವನ್ನು ಮಾರಾಟ ಮಾಡಲು ನಾವು ಕೊಂಡು ಹೋಗುತ್ತಿರುವುದಾಗಿ ಬೈಕ್ ಸವಾರರಾದ ಅಬ್ದುಲ್ ಸಾಧಿಕ್ ಮತ್ತು ಮಜೀದ್ ಒಪ್ಪಿಕೊಂಡಿದ್ದು, ಈ ಮೊದಲು ಫರಂಗಿಪೇಟೆಯ ಚೋಟಾ ಅಶ್ರಪ್ ಮತ್ತು ಫರಂಗಿಪೇಟೆಯ ಅಜರುದ್ದೀನ್ ಎಂಬವರಿಗೆ ಮಾರಾಟ ಮಾಡಿದ್ದು, ಬಾಕಿ ಉಳಿದ ಗಾಂಜಾವನ್ನು ಮಂಗಳೂರು ಕಡೆಗೆ ಬೇರೆ ಗಿರಾಕಿಗಳಿಗೆ ಮಾರಾಟ ಮಾಡಲು ಕೊಂಡು ಹೋಗುತ್ತಿರುವುದಾಗಿ ಒಪ್ಪಿಕೊಂಡಿರುತ್ತಾರೆ.

ಐದು ಕಟ್ಟು ಪ್ಲಾಸ್ಟಿಕ್ ಸಹಿತ ಗಾಂಜಾದ ಒಟ್ಟು ತೂಕ 8.790 ಕಿಲೋ ಗ್ರಾಂ, ಅಂದಾಜು ಮೌಲ್ಯ ರೂ 88.700 ಆಗಿರುತ್ತದೆ. ಆರೋಪಿ ಅಬ್ದುಲ್‌ ಮಜೀದ್‌ ಎಂಬಾತನ ಬೈಕನ್ನು ಪೊಲೀಸರು ವಶಕ್ಕೆ ಪಡೆದಿರುತ್ತಾರೆ. ವಶಪಡಿಸಿಕೊಂಡಿರುವ ಸ್ವತ್ತುಗಳ ಒಟ್ಟು ಮೌಲ್ಯ 2,17,460 ಆಗಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.