ರಾಜ್ಯ ಸಚಿವ ಸಂಪುಟ ಪುನಾರಚನೆ ಸಾಧ್ಯತೆ; ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಸಂಪುಟಕ್ಕೆ ಮೇಜರ್ ಸರ್ಜರಿ ಪಕ್ಕಾ

ರಾಜ್ಯ

ರಾಜ್ಯ ಸಚಿವ ಸಂಪುಟ ಪುನಾರಚನೆ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಸುಳಿವನ್ನು ನೀಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ ತಿಂಗಳಲ್ಲಿ ಸಚಿವ ಸಂಪುಟ ಪುನಾರಚನೆ ಆಗಿವುದು ನಿಶ್ಚಿತವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಶಾಸಕರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಸಿಎಂ ಸಂಪುಟ ಪುನಾರಚನೆಯ ಸುಳಿವು ನೀಡಿರುವ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಗರಿಗೆದರಿದೆ. ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿಯ ಚರ್ಚೆ ಹೊತ್ತಲ್ಲೇ ಡಿನ್ನರ್ ಮೀಟಿಂಗ್ ಸಿಎಂ ಸಿದ್ದರಾಮಯ್ಯ ಕರೆದಿದ್ದಾರೆ. ಡಜನ್ ಗೂ ಹೆಚ್ಚು ಸಚಿವರನ್ನು ಸಂಪುಟದಿಂದ ಕೈಬಿಡುವ ಗುಸುಗುಸು ನಡುವೆಯೇ ಔತಣಕೂಟ ಏರ್ಪಡಿಸಿದ್ದಾರೆ.

ನವೆಂಬರ್ ಇಲ್ಲವೇ ಡಿಸಂಬರ್ ತಿಂಗಳಲ್ಲಿ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯುವ ಸಾಧ್ಯತೆ ಇದೆ. ಹನ್ನೆರಡಕ್ಕೂ ಹೆಚ್ಚು ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎಂಬುವುದು ಸದ್ಯಕ್ಕೆ ಕೇಳಿ ಬರುತ್ತಿರುವ ವಿಚಾರವಾಗಿದೆ. ನಿಷ್ಕ್ರಿಯ ಹಾಗೂ ಭ್ರಷ್ಟಾಚಾರದ ಆರೋಪದ ಹಿನ್ನೆಲೆ ಇರುವ ಸಚಿವರಿಗೆ ಗೇಟ್ ಪಾಸ್ ನೀಡಲು ಹೈಕಮಾಂಡ್ ಸೂಚನೆ ನೀಡಿದೆ ಎಂಬುವುದು ತಿಳಿದುಬಂದಿದೆ. ಇದೇ ಕಾರಣಕ್ಕೆ ಡಜನ್ ಗೂ ಹೆಚ್ಚು ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡುವ ಬಗ್ಗೆ ಹೈಕಮಾಂಡ್ ಚರ್ಚೆ ನಡೆಸಿದೆ. ಇದರ ನಡುವೆಯೇ ಅ.13ರಂದು ಸಚಿವರಿಗಾಗಿ ಡಿನ್ನರ್ ಪಾರ್ಟಿಯನ್ನು ಸಿಎಂ ಸಿದ್ದರಾಮಯ್ಯ ಆಯೋಜಿಸಿದ್ದಾರೆ. ಅಷ್ಟಕ್ಕೂ ಸಂಪುಟ ಪುನಾರಚನೆ ವೇಳೆ ಯಾರಿಗೆಲ್ಲಾ ಅವಕಾಶ ಸಿಗಲಿದೆ ಎಂಬುವುದು ಕುತೂಹಲ ಕೆರಳಿಸಿದೆ.

ಸಚಿವ ಸಂಪುಟ ಸೇರ್ಪಡೆಗೆ ಈಗಾಗಲೇ ಸಾಕಷ್ಟು ಲಾಬಿ ನಡೆಯುತ್ತಿದೆ. ಸಿಎಂ ಡಿನ್ನರ್ ಪಾರ್ಟಿ ಆದ ಬಳಿಕ ಸಂಪುಟ ಸೇರ್ಪಡೆಗೆ ಲಾಬಿ ಮತ್ತಷ್ಟು ತೀವ್ರಗೊಳ್ಳಲಿದೆ. ಕೆಲವು ಆಕಾಂಕ್ಷಿಗಳು ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ. ಮತ್ತೆ ಕೆಲವರು ಸಿಎಂ ಸಿದ್ದರಾಮಯ್ಯ ಅವರ ಬಳಿಕ ಸಂಪುಟದಲ್ಲಿ ಸ್ಥಾನಕ್ಕಾಗಿ ಪ್ರಯತ್ನ ಶುರುಮಾಡಿದ್ದಾರೆ. ಬಿ.ಕೆ. ಹರಿಪ್ರಸಾದ್, ಸಲೀಂ ಅಹಮದ್‌, ಬಸವರಾಜ ರಾಯರೆಡ್ಡಿ,
ಟಿ.ಬಿ. ಜಯಚಂದ್ರ, ರೂಪ ಶಶಿಧರ್,
ಶಿವಲಿಂಗೇಗೌಡ, ನಾಗೇಂದ್ರ,
ಅಪ್ಪಾಜಿ ನಾಡಗೌಡ, ಲಕ್ಷ್ಮಣ್ ಸವದಿ,
ತರೀಕೆರೆ ಶ್ರೀನಿವಾಸ್‌, ರಿಜ್ವಾನ್ ಅರ್ಷದ್ ಇವರುಗಳು ಮಂತ್ರಿಗಿರಿ ಮಟ್ಟದ ಪ್ರಬಲ ಆಕಾಂಕ್ಷಿಗಳು ಎನ್ನಲಾಗಿದೆ.