ಅಂಡರ್ ವರ್ಲ್ಡ್ -ಪಾಲಿಟಿಕ್ಸ್-ಫಿಲಂ; ಶೆಟ್ಟಿ ಗ್ಯಾಂಗ್ ಧರ್ಬಾರ್.!

ಕರಾವಳಿ

ಕರಾವಳಿ ಭಾಗದಲ್ಲಿ ಉದ್ಯಮ, ರಾಜಕಾರಣ ಬಂಟರದ್ದೇ ಪ್ರಾಬಲ್ಯ. ಇದೀಗ ಕನ್ನಡ ಸಿನಿ ರಂಗದಲ್ಲೂ ಶೆಟ್ಟಿ ಗ್ಯಾಂಗ್ ಪ್ರಾಬಲ್ಯ ಹೊಂದಿದ್ದು ಫಿಲಂ ಇಂಡಸ್ಟ್ರೀಯನ್ನು ಬಂಟರು ಆಳುತ್ತಿದ್ದಾರೆ. ಪ್ರಖ್ಯಾತ ಉದ್ಯಮಿಗಳು, ರಾಜಕಾರಣಿಗಳು, ವೈದ್ಯರುಗಳು, ವಕೀಲರು, ಸಿನಿಮಾ ತಾರೆಯರು ಹೀಗೆ ಬಂಟರು ತಮ್ಮದೇ ಆದ ಪ್ರಾಬಲ್ಯ ಹೊಂದಿದ್ದಾರೆ. ಅದೇ ರೀತಿ ಕರಾವಳಿಯ ಪಾತಕ ಜಗತ್ತಿನಲ್ಲಿ ಬಂಟರ ಹುಡುಗರ ಸದ್ದು ಕಮ್ಮಿಯೇನಿಲ್ಲ. ಅಂಡರ್ ವರ್ಲ್ಡ್, ಪಾಲಿಟಿಕ್ಸ್, ಫಿಲಂ ಎಲ್ಲದರಲ್ಲೂ ಬಂಟರದ್ದೇ ಕಾರ್ಬಾರು.

ನಿಮಗೆ ತಿಳಿದಿರಲಿ. ಭೂಗತ ಜಗತ್ತಿನಲ್ಲಿ ಮೆರೆದ ಅತ್ಯಂತ ಸ್ಫುರದ್ರೂಪಿ ಬಂಟರ ಹುಡುಗ ಅಮರ್ ಆಳ್ವ ನ ಕಥೆ ಶೆಟ್ಟಿ ಲೋಗ್ ಗ್ಯಾಂಗಿನಿಂದಲೇ ಮುಗಿಯುತ್ತದೆ. ಮುತ್ತಪ್ಪ ರೈ, ಅಶೋಕ್ ಶೆಟ್ಟಿ, ಯತೀಶ್ ಶೆಟ್ಟಿ, ಶ್ರೀಕರ ಶೆಟ್ಟಿ ಯಿಂದಲೇ ಅಮರ ಆಳ್ವ ಕತೆ ಮುಗಿಯುತ್ತದೆ. ಮುತ್ತಪ್ಪ ರೈ, ಪುತ್ತೂರಿನ ಜಯಂತ್ ರೈ, ಸಾಧು ಶೆಟ್ಟಿ ಫಣಿಯೂರು ಹೀಗೆ ಕರಾವಳಿಯ ಪಾತಕ ಜಗತ್ತನ್ನು ಆಳಿದ ಪಂಟರಾಗಿದ್ದರು.

ಮುಂಬೈಗೂ ಶೆಟ್ಟಿ ಲೋಗ್ ಗೂ ಕನೆಕ್ಷನ್ ದೊಡ್ಡದಿತ್ತು. ಇದೇ ಕಾರಣದಿಂದ ಭೂಗತ ಜಗತ್ತನ್ನು ಆಳಿದವರು ಇದ್ದಾರೆ. ಶರದ್ ಶೆಟ್ಟಿ, ಅಶೋಕ್ ಶೆಟ್ಟಿ ತನ್ನದೇ ಆದ ಹವಾ ಸೃಷ್ಟಿಸುತ್ತಾರೆ. ಫಣಿಯೂರು ಸಾಧು ಶೆಟ್ಟಿ ಒಂದಿಷ್ಟು ಕಾಲ ಭೂಗತ ಜಗತ್ತಿನ ದೊರೆಯಾಗಿ ಅಳುತ್ತಾರೆ. ಭೂಗತ ಜಗತ್ತಿನ ಸಹವಾಸ ಸಾಕೆಂದು ಫಣಿಯೂರಿಗೆ ಬಂದು ಜೈ ತುಳುನಾಡು ಸೇನೆ ಸ್ಥಾಪಿಸುತ್ತಾನೆ. ಜೈಲಿನಲ್ಲಿ ಪರಿಚಯವಾದ ರೋಹಿದಾಸ್ ಶೆಟ್ಟಿ ಯಾನೆ ವಾಮಂಜೂರು ರೋಹಿ ಬಳ್ಳಾಲ್ ಬಾಗ್ ರಘು ಅನ್ನುವ ಬಂಟರ ಹುಡುಗನ ಗರಡಿಯಲ್ಲಿ ಪಳಗುತ್ತಾನೆ. ಜೈ ತುಳುನಾಡು ಸೇನೆ ಮುಳುಗುತ್ತಿದ್ದಂತೆ ಮತ್ತೆ ಮುಂಬೈ ಪಾತಕ ಜಗತ್ತಿಗೆ ಎಂಟ್ರಿ ಪಡೆದು ಛೋಟಾ ರಾಜನ್ ನಿಷ್ಠೆ ಬೆಳೆಸಲು ಹೋಗಿ 2002 ರಲ್ಲಿ ಎನ್ ಕೌಂಟರ್ ಗೆ ಸಾಧು ಶೆಟ್ಟಿ ಬಲಿಯಾಗುತ್ತಾನೆ.

ಆರ್ ಎಸ್ ಎಸ್ ನಿಂದ ಹೊರಬಂದು ಹಿಂದೂ ಯುವ ಸೇನೆ ಸಂಘಟನೆ ಸ್ಥಾಪಿಸುವುದರೊಂದಿಗೆ ಗುಣಕರ ಶೆಟ್ಟಿ ಅನ್ನುವ ಬಂಟ ಹುಡುಗನ ಹೆಸರು ಪ್ರವರ್ಧಮಾನಕ್ಕೆ ಬರುತ್ತದೆ.

ಹೀಗೆ ಕರಾವಳಿ ಪ್ರದೇಶದ ಬಂಟರ ಹುಡುಗರು ಭೂಗತ ಜಗತ್ತಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸುದ್ಧಿಯಾಗುತ್ತಲೇ ಇರುತ್ತಾರೆ. ಕೆಲವರು ಶೋಕಿಗಾಗಿ, ಕೆಲವರು ದ್ವೇಷಕ್ಕಾಗಿ, ಕೆಲವರು ಅನ್ಯಾಯಕ್ಕಾಗಿ ಹೀಗೆ ಪಾತಕ ಜಗತ್ತಿಗೆ ಕಾಲಿಡಬೇಕಾಗಿ ಬರುತ್ತದೆ. ಹಾಗೆ ಬಂದವರು ಮರಳುವಾಗೆ ಇಲ್ಲ, ಡಾನ್ ಆಗಿ ಮಿಂಚಿದರೂ ಕೂಡ.

ಭಾರತೀಯ ಚಿತ್ರರಂಗದಲ್ಲಿ ಬಂಟರು ತನ್ನದೇ ಆದ ಪ್ರಾಬಲ್ಯ ಹೊಂದಿದ್ದಾರೆ. ಕನ್ನಡ ಚಿತ್ರರಂಗಕ್ಕೂ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಗುರುಕಿರಣ್ ಈಗಲೂ ಕನ್ನಡ ಚಿತ್ರರಂಗದಲ್ಲಿ ಸಂಗೀತ ಮಾಂತ್ರಿಕನಾಗಿ ಗುರುತಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಫಿಲಂ ಲೋಕವನ್ನು ಶೆಟ್ಟಿ ಗ್ಯಾಂಗ್ ಆವರಿಸಿದೆ. ತನ್ನದೇ ಆದ ಹುಡುಗರ ಗ್ಯಾಂಗ್ ಕಟ್ಟಿಕೊಂಡು ಫಿಲಂ ಇಂಡಸ್ಟ್ರೀಯಲ್ಲಿ ಕಾರುಬಾರು ತೋರಿಸುತ್ತಿದ್ದಾರೆ. ಇದು ಹಲವರ ಕಣ್ಣು ಕುಕ್ಕಿಸುವಂತೆ ಮಾಡಿದೆ. ಶೆಟ್ಟಿ ಗ್ಯಾಂಗ್ ಮೇನಿಯಾ ಕನ್ನಡ ಚಿತ್ರರಂಗವನ್ನು ಆವರಿಸಿದೆ. ರಾಜ್ ಬಿ ಶೆಟ್ಟಿ ಯ ಸುಲೋಚನಾ ಫ್ರಮ್ ಸೋಮೇಶ್ವರ (ಸು ಫ್ರಮ್ ಸೋ) ಕನ್ನಡ ಚಿತ್ರರಂಗದಲ್ಲಿ ಐನೂರು ಕೋಟಿಗೂ ಅಧಿಕ ರೂಪಾಯಿ ಬಾಚಿ ತನ್ನ ತಾಕತ್ತು ತೋರಿಸಿದೆ. ಮಂಗಳೂರಿನ ಸನ್ನಿವೇಶ ಹೊಂದಿರುವ ಈ ಚಿತ್ರದಲ್ಲಿ ಬಹುತೇಕ ಮಂಗಳೂರಿನ ಕಲಾವಿದರೇ ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಈ ಚಿತ್ರ ಹೊಸ ದಾಖಲೆಗೆ ಮುನ್ನುಡಿ ಬರೆದಿದೆ. ಶೆಟ್ಟಿ ಗ್ಯಾಂಗ್ ಚಿತ್ರ ಎಂದು ಕುಹಕವಾಡಿದ್ದು ಇದೆ. ಇನ್ನು ರಿಷಬ್ ಶೆಟ್ಟಿ ಕಾಂತಾರ ಪಾರ್ಟ್ 2 ಸೆನ್ಸೇಷನಲ್ ಹಿಟ್ ಆಗಿದೆ. ಕಾಂತಾರ ಮೊದಲ ಭಾಗ ಅಭೂತಪೂರ್ವ ಯಶಸ್ಸು ಕಂಡಿತ್ತು. ಕಾಂತಾರ ಭಾಗ -2 ಕೂಡ ಸೂಪರ್ ಡೂಪರ್ ಹಿಟ್ ಆಗಿದೆ. ಕರಾವಳಿಯ ದೈವದ ಕಥೆಗೆ ಸಂಬಂಧಿಸಿದ ಚಿತ್ರ ಇದಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಶೆಟ್ಟಿ ಲೋಗ್ ಆಳ್ವಿಕೆ ಆರಂಭವಾಗಿದೆ. ಈ ನಡುವೆ ರಕ್ಷಿತ್ ಶೆಟ್ಟಿ ಕೂಡಾ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಕರಾವಳಿಯ ರಾಜಕಾರಣದಲ್ಲೂ ಕೂಡ ಬಂಟರದ್ದೇ ಪ್ರಾರಮ್ಯ. ಬಿಜೆಪಿ ಕಾಂಗ್ರೆಸ್ ಯಾವುದೇ ಪಕ್ಷ ಇರಲಿ ಕರಾವಳಿಯ ರಾಜಕಾರಣವನ್ನು ನಿಯಂತ್ರಿಸುವವರು ಬಂಟರು. ರಮಾನಾಥ ರೈ, ನಾಗರಾಜ್ ಶೆಟ್ಟಿ ಸಚಿವರಾಗಿ ರಾಜಕಾರಣದಲ್ಲಿ ಹೆಸರು ಗಳಿಸಿದವರು. ಕಾಂಗ್ರೆಸ್ ನಲ್ಲಿ ಅಶೋಕ್ ರೈ, ಬಿಜೆಪಿಯಲ್ಲಿ ಭರತ್ ಶೆಟ್ಟಿ, ರಾಜೇಶ್ ನಾಯಕ್, ಹರೀಶ್ ಪೂಂಜಾ ಹೀಗೆ ಕರಾವಳಿಯ ಜನನಾಯಕರಲ್ಲೂ ಬಂಟರದ್ದೇ ಅಧಿಪತ್ಯ. ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾಗಿ ಮೂರು ದಶಕಗಳಿಂದ ಆಳುತ್ತಿರುವವರು ಕೂಡ ಬಂಟರೇ. ಐಎಂ ಜಯರಾಂ ಶೆಟ್ಟಿ, ನಳೀನ್ ಕುಮಾರ್ ಕಟೀಲ್ ಇದೀಗ ಬ್ರಿಜೇಶ್ ಚೌಟ ಎಲ್ಲರೂ ಬಂಟರೇ.

ರಾಜಕೀಯ ಪಕ್ಷದ ವಿವಿಧ ಮುಂಚೂಣಿ ಘಟಕವನ್ನು ನಿಯಂತ್ರಿಸುವವರು ಕೂಡ ಬಂಟರು ಅನ್ನುವುದು ಇಲ್ಲಿ ಚೋದ್ಯದ ಸಂಗತಿ. ಕಾಂಗ್ರೆಸ್ ಪಕ್ಷದ ವಿವಿಧ ಬ್ಲಾಕ್ ಘಟಕಗಳ ಅಧ್ಯಕ್ಷರು ಕೂಡ ಬಂಟರ ಸಂಖ್ಯೆ ಹೆಚ್ಚು. ಇನ್ನು ವಿವಿಧ ವಿದ್ಯಾರ್ಥಿ ಸಂಘಟನೆಗಳಲ್ಲೂ ಬಂಟರದ್ದೇ ಪಾರಮ್ಯ. ಕರಾವಳಿಯಲ್ಲಿ ಬಿಲ್ಲವ, ಬ್ಯಾರಿ ನಂತರದ ಸ್ಥಾನದಲ್ಲಿ ಬಂಟರಿದ್ದರೂ ರಾಜಕಾರಣದ ಆಯಕಟ್ಟಿನ ಜಾಗದಲ್ಲಿ ಬಂಟರೇ ಮುಂಚೂಣಿಯಲ್ಲಿದ್ದಾರೆ.