ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಳ್ಳಾಲ, ಮೂಡಬಿದ್ರೆ, ಬಂಟ್ವಾಳ, ಪುತ್ತೂರು, ಕಡಬ, ಬೆಳ್ತಂಗಡಿ, ಸುಳ್ಯ ಹೀಗೆ ಇರುವ ಎಲ್ಲಾ ತಾಲೂಕುಗಳ ಗ್ರಾಮಾಂತರ ಏಕೆ ವಿನ್ಯಾಸ, ತಾಂತ್ರಿಕ ಅನುಮೋದನೆ, ಕಟ್ಟಡ ಅನುಮೋದನೆ, ಅಭಿವೃದ್ಧಿ ಇವೆಲ್ಲ ನಗರ ಮತ್ತು ಗ್ರಾಮಾಂತರ ಇಲಾಖೆಗೆ ಬರುತ್ತದೆ. ಇದರ ಹೆಡ್ ಆಫೀಸ್ ಇರುವುದೇ ಪಡೀಲ್ ಜಿಲ್ಲಾಧಿಕಾರಿ ಕಚೇರಿಯಲ್ಲಿ. ಇದರ ಸಹಾಯಕ ನಿರ್ದೇಶಕ ಆಗಿರುವಾಕೆ ಸ್ವಾತಿ. ಈ ಇಲಾಖೆಯಲ್ಲಿ ಮಣ್ಣಾಂಗಟ್ಟಿ ಯಾವ ಕೆಲಸನೂ ಆಗುತ್ತಿಲ್ಲ. ಜನಸಾಮಾನ್ಯರು ಕಚೇರಿಗೆ ಅಲೆದಾಡುವುದೇ ಆಗಿದೆ. ಪಂಚಾಯತ್ ನಿಂದ ಈ ಇಲಾಖೆಗೆ 9/11 ಜವಾಬ್ದಾರಿ ಕೊಟ್ಟರೂ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆದಾಡುವುದೇ ಆಗಿದೆ. ಆದರೆ ಜನರ ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ.
ನಗರ ಮತ್ತು ಗ್ರಾಮಾಂತರ ಇಲಾಖೆಗಳಲ್ಲಿ ಫೈಲ್ ಮೂವ್ ಆಗುವುದೇ ಇಲ್ಲ. ಆರು ತಿಂಗಳು, ಒಂದು ವರ್ಷದ ಫೈಲ್ ಇಲ್ಲಿ ಹಾಗೆ ಕೊಳೆಯುತ್ತಾ ಇದೆ. ಈ ಬಗ್ಗೆ ಅಧಿಕಾರಿಗಳಲ್ಲಿ ಜನಸಾಮಾನ್ಯರು ಪ್ರಶ್ನಿಸಿದರೆ ಉಡಾಫೆಯ ಉತ್ತರ ಬರುತ್ತದೆ. ಇಲ್ಲಿ ಕೆಲಸಕ್ಕೆ ಜನ ಇಲ್ಲ, ಇರುವ ಸಿಬ್ಬಂದಿಗಳು ಹೊಸಬರು ಅನ್ನುವ ರೀತಿಯ ಉತ್ತರ ಇವರದ್ದು. ಕೆಲಸಕ್ಕೆ ಜನ ಇಲ್ಲದಿದ್ದರೆ ಸರಕಾರ ಯಾವ ಪುರುಷಾರ್ಥಕ್ಕೆ 9/11 ಇಲ್ಲಿಗೆ ವರ್ಗಾಯಿಸಿದೆ. ಮೊದಲು ಇದ್ದ ಹಾಗೆ ಇದ್ದಿದ್ದರೆ ಜನರಿಗೆ ಅನುಕೂಲ ಆಗಿರುತ್ತಿತ್ತು ತಾನೇ.
ಇನ್ನು ಯೋಜನಾ ನಿರ್ದೇಶಕಿ ಸ್ವಾತಿ ಯದ್ದು ದುರಂಹಕಾರದ ವರ್ತನೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಧಿಕಾರಿಗಳು ಜನರು ಪ್ರಶ್ನಿಸಿದರೆ ದುರಂಹಕಾರದ ಮಾತುಗಳನ್ನು ಆಡುತ್ತಾರೆ. ಸಿಬ್ಬಂದಿಗಳ ಅಬತರವಂತೂ ಕೇಳುವುದೇ ಬೇಡ. ನಿಮ್ಮ ಫೈಲ್ ಆಗಿಲ್ಲ, ಸರಕಾರದಿಂದ ಆದೇಶ ಬಂದಿಲ್ಲ, ಸದ್ಯಕ್ಕೆ ನಿಮ್ಮ ಫೈಲ್ ಆಗುವುದಿಲ್ಲ ಅನ್ನುವ ರೆಡಿಮೇಡ್ ಉತ್ತರಗಳು. ಯಾವಾಗ ಫೈಲ್ ರೆಡಿಯಾಗಬಹುದು ಎಂದು ಕೇಳಿದರೆ 6 ತಿಂಗಳು ಆಗಬಹುದು, ಒಂದು ವರ್ಷ ಆಗಬಹುದು , 2 ವರ್ಷ ಆಗಬಹುದು. ಈ ರೀತಿಯ ಮಾತುಗಳೇ ಕೇಳಿ ಬರುವುದು. ಶಾಸಕ, ಮಂತ್ರಿಗಳಿಗೆ ದೂರು ಕೊಡಿ, ಡಿಸಿ ಗೆ ಕಂಪ್ಲೇಂಟ್ ಕೊಡಿ ಅನ್ನುತ್ತಾರೆ. ಜನಸಾಮಾನ್ಯರ ಕೆಲಸ ಆಗಲು ಸತಾಯಿಸಿದರೆ ಇಂತಹ ಇಲಾಖೆಗಳ ಅಗತ್ಯ ಇದೆಯಾ?
ಇನ್ನು ಇಲ್ಲಿನ ನಿರ್ದೇಶಕರು, ಸಿಬ್ಬಂದಿಗಳು ಇವರ್ಯಾರು ಕಚೇರಿಗಳಲ್ಲಿ ಇರುವುದೇ ಕಡಿಮೆ. ಸೈಟ್ ವಿಸೀಟ್ ಅಂತ ಹೊರಗಡೆ ಇರುವುದೇ ಹೆಚ್ಚು. ಸೈಟ್ ವಿಸೀಟ್ ಹೋದರೆ ಇವರಿಗೆ ಭರಪೂರ ಗಿಂಬಳ ಹರಿದುಬರುತ್ತದೆ. ನಾವು ಇಂಜಿನಿಯರ್ಸ್ ಗಳು ಅನ್ನುವ ಅಹಂ ಇವರ ತಲೆಯಲ್ಲಿದೆ. ನಾವು ಮಾಡಿಕೊಟ್ಟಾಗ ಅದನ್ನು ತೆಗೆದುಕೊಂಡು ಹೋಗಬೇಕು, ನಮಗೆ ಆರ್ಡರ್ ಮಾಡಲು ನೀವ್ಯಾರು ಅನ್ನುವ ರೀತಿಯ ದುರಹಂಕಾರ ಇವರಲ್ಲಿದೆ. ಸರಕಾರಿ ಕೆಲಸ ಅಂದರೆ ಜನಸಾಮಾನ್ಯರ ಕೆಲಸ ಅನ್ನುವ ಭಾವನೆಗಳು ಇವರಲ್ಲಿ ಇಲ್ಲ. ಈ ಹಿಂದೆ ಪುತ್ತೂರು ಶಾಸಕ ಅಶೋಕ್ ರೈ ಮೀಟಿಂಗ್ ಮಾಡಿ ಪುತ್ತೂರು, ಸುಳ್ಯ ಸೇರಿದಂತೆ ಆಯಾಯ ತಾಲೂಕಿಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ತೀರ್ಮಾನ ಕೈಗೊಳ್ಳಲು ಆದೇಶಿಸುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಅದನ್ನು ಕಸದ ಬುಟ್ಟಿಗೆ ಎಸೆದು ನಗರ ಮತ್ತು ಗ್ರಾಮಾಂತರ ಇಲಾಖೆಯ ಅಧೀನಕ್ಕೆ ಎಲ್ಲಾ ಫೈಲುಗಳು ಬರುವಂತೆ ಅಧಿಕಾರಿಗಳು ಖತರ್ನಾಕ್ ಕೆಲಸ ಮಾಡಿದ್ದರು. ಜನಸಾಮಾನ್ಯರ ದುಡ್ಡು ದೋಚಲು ಮಾಡಿರುವ ಕೆಲಸ ಇದಾಗಿದೆ. ಇನ್ನಾದರೂ ನೂತನ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸುವುದು ಒಳಿತು.
ಜಿಲ್ಲಾಧಿಕಾರಿ, ಸಚಿವರು ಇತ್ತ ಗಮನ ಹರಿಸಿ
ಮನೆ ಚಂದವಿದ್ದರೆ ಸಾಕಾ, ಮನಸ್ಸು ಚಂದವಿರಬೇಕು ಅಲ್ಲವೇ.? ಪಡೀಲ್ ನಲ್ಲಿ ತಲೆ ಎತ್ತಿ ನಿಂತಿರುವ ನೂತನ ಪ್ರಜಾಸೌಧದ ಕಟ್ಟಡದಲ್ಲೇ ಜಿಲ್ಲಾಧಿಕಾರಿ, ಸಚಿವರ ಕಚೇರಿಗಳಿವೆ. ಅದರ ಪಕ್ಕದಲ್ಲೇ ನಗರ ಮತ್ತು ಗ್ರಾಮಾಂತರ ಇಲಾಖೆ ಕಚೇರಿ ಇದೆ. ಪ್ರಜಾಸೌಧವೇನೂ ಸುಂದರವಾಗಿದೆ. ಆದರೆ ಆ ಕಚೇರಿಯಲ್ಲಿರುವ ಕೆಲವೊಂದು ಇಲಾಖೆಗಳಂತೂ ತೋಪೆದ್ದು ಹೋಗಿದೆ. ಅದರಲ್ಲಿ ನಗರ ಮತ್ತು ಗ್ರಾಮಾಂತರ ಇಲಾಖೆ ಕೂಡ ಒಂದು. ಜನಸಾಮಾನ್ಯರ ಕೆಲಸಕಾರ್ಯಗಳಿಗೆ ನಿರಂತರವಾಗಿ ಸತಾಯಿಸುವ ಇಲ್ಲಿನ ಅಧಿಕಾರಿಗಳು, ಸಿಬ್ಬಂದಿಗಳ ಮೇಲೆ ಜಿಲ್ಲಾಧಿಕಾರಿ, ಸಚಿವರು ಸೂಕ್ತ ಕ್ರಮ ಜರುಗಿಸಬೇಕಿದೆ.
