ಕೋಮು ದ್ವೇಷ ಭಾಷಣ, ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಮಹಿಳಾ ಹೋರಾಟಗಾರ್ತಿ ಈಶ್ವರಿ ಪದ್ಮುಂಜ ದೂರು ದಾಖಲು

ಕರಾವಳಿ

ಪುತ್ತೂರು: ದೀಪಾವಳಿ ಸಂಭ್ರಮ ಸಾರ್ವಜನಿಕ ಸಮಾರಂಭವೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮಹಿಳಾ ಹೋರಾಟಗಾರ್ತಿ ಈಶ್ವರಿ ಪದ್ಮುಂಜ ಅವರು ಸಂಪ್ಯ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.

ಪುತ್ತೂರಿನ ಉಪ್ಪಳಿಗೆಯಲ್ಲಿ ನಡೆದ ದೀಪಾವಳಿ ಸಂಭ್ರಮ ಧಾರ್ಮಿಕ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮಹಿಳೆಯರನ್ನು ಅವಮಾನಿಸಿ, ಗರ್ಭಿಣಿ ಮಹಿಳೆಯರನ್ನು ನಿಂದನೆ ಮಾಡಿ, ಅವರ ಘನತೆಗೆ ಧಕ್ಕೆ ತರುವಂತೆ, ಗರ್ಭಿಣಿಯರ ವಿರುದ್ದ ಹಿಂಸೆಗೆ ಪ್ರೇರೆಪಿಸುವಂತೆ, ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ, ದ್ವೇಷ ಬಿತ್ತುವಂತೆ ಮತ್ತು ಕೋಮು ಗಲಭೆ ಸೃಷ್ಟಿಸುವಂತೆ ಭಾಷಣ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

“ಆಚೆ ಮನೆಯಲ್ಲಿ ಒಬ್ಬಳು ಬ್ಯಾರ್ದಿ ಇದ್ಳು. ಅವಳು 6ನೆಯದ್ದು ಆಗಿ 7ನೇ ಗರ್ಭಿಣಿಯಾಗಿದ್ದಳು. ಅವಳಿಗೆ ಯಾರಾದ್ರು ಕೇಳಿದ್ರಾ ? ನೀನು ನಾಯಿ ಮರಿ ಹಾಕಿದ ಹಾಗೆ ಹಾಕ್ತಾ ಇದ್ದೀಯಾ ಅಂತ ಕೇಳಿದ್ರಾ ? ಕೇಳುವ ದೈರ್ಯವೂ ಇಲ್ಲ. ಎರಡನೆಯದಾಗಿ ಅವರು ಹೇಳ್ತಾರೆ. ಅದು ಅಲ್ಲಾಹನಿಗೋಸ್ಕರ. ನಮ್ಮ ಮಕ್ಕಳು ಅಲ್ಲಾಹನಿಗೋಸ್ಕರ ಅನ್ನುತ್ತಾರೆ. ನೀವೇನಾದರೂ ಮಹಾಲಿಂಗೇಶ್ವರನಿಗಾಗಿ ಮಕ್ಕಳು ಮಾಡ್ತೀರಾ ? ನಮ್ಮ ಜನಸಂಖ್ಯೆ ಜಾಸ್ತಿಯಾಗಬೇಕು. ಮಂಗಳೂರು ವಿಧಾನಸಭಾ ಕ್ಷೇತ್ರ ಉಲ್ಲಾಳ ಅಂತ ಏನು ಹೇಳ್ತೀವಿ ಅಲ್ಲಿ ಹಿಂದೂ ಗೆಲ್ಲಲು ಸಾದ್ಯವೇ ಇಲ್ಲ. ಅಲ್ಲಿ ಖಾದರೇ ಗೆಲ್ಲೋದು. ಯಾಕೆಂದರೆ ಒಂದು ಲಕ್ಷದ ಹತ್ತು ಸಾವಿರ ಬ್ಯಾರಿಗಳದ್ದೇ ಓಟು ಇದೆ. ಹಿಂದೂಗಳು 90 ಸಾವಿರ ಇರೋದು. ಗೆಲ್ಲೊದು ಯಾವಾಗ ? ಅದು ಎಲ್ಲಾ ಕಡೆಗೂ ಹತ್ತಿರ ಹತ್ತಿರ ಬರ್ತಾ ಉಂಟು. ನಾವು ಗೆಲ್ತೇವಾ.? ಗೆಲ್ಲಲು ಸಾದ್ಯವೇ ಇಲ್ಲ. ನಮ್ಮನ್ನು ಸರ್ವನಾಶ ಮಾಡ್ತಾರೆ. ಹಾಗಾಗಿ ನಮ್ಮ ಮನೆಯಲ್ಲಿ 3ಕ್ಕಿಂತ ಕಡಿಮೆ ಮಕ್ಕಳು ಇರಬಾರದು” ಎಂದು ಸಾರ್ವಜನಿಕ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧ ಮಹಿಳಾ ಹೋರಾಟಗಾರ್ತಿ ಈಶ್ವರಿ ಪದ್ಮುಂಜ ಅವರು ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಹಿಂದೆ ಬಂಟ್ವಾಳದ ಕಾವಳಪಡೂರು ಗ್ರಾಮದ ಮದ್ವ ಪ್ಯಾಲೇಸ್ ಕಲ್ಯಾಣ ಮಂಟಪದ ಹಾಲ್‌ನಲ್ಲಿ ರೌಡಿಶೀಟರ್ ಸುಹಾಸ್ ಶೆಟ್ಟಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಪ್ರಭಾಕರ್ ಭಟ್ ದ್ವೇಷ ಭಾಷಣ ಮಾಡಿದ್ದರು. ಪ್ರಭಾಕರ್ ಭಟ್ ಮತೀಯ ಗುಂಪುಗಳ ನಡುವೆ ವೈಮನಸ್ಸು ಉಂಟು ಮಾಡುವಂತೆ ಪ್ರಚೋದನಾತ್ಮಕವಾಗಿ ಭಾಷಣ ಮಾಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿತ್ತು. ಕೋಮು ದ್ವೇಷ ಬಿತ್ತುವ, ಸಮಾಜದ ಸ್ವಾಸ್ಥ್ಯ ಕದಡುವ ಭಾಷಣ ಮಾಡಿದ ಪ್ರಭಾಕರ್ ಭಟ್ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಶ್ರೀರಂಗಪಟ್ಟಣದಲ್ಲಿ ಮುಸ್ಲಿಂ ಮಹಿಳೆಯರ ಅಪಮಾನ ಮಾಡಿದ ಪ್ರಭಾಕರ್ ಭಟ್ ವಿರುದ್ದ ಪ್ರಕರಣ ದಾಖಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಶ್ರೀರಂಗಪಟ್ಟಣ ಕೋರ್ಟ್‌ “ಮುಂದೆ ಇಂತಹ ಭಾಷಣ ಮಾಡಿದರೆ ಜಾಮೀನು ರದ್ದಾಗಲಿದೆ” ಎಂದು ಎಚ್ಚರಿಕೆ ನೀಡಿತ್ತು.