ಕುಂದಾಪುರ: ಕೋಟೇಶ್ವರ ಪಂಚಾಯತಿನಲ್ಲಿ ನುಂಗಿದ್ದೆಷ್ಟು.? ಅಭಿವೃದ್ದಿ ಅಧಿಕಾರಿಯ ಹಗಲು ದರೋಡೆ; ಕಮಾಯಿಯ ವಾಸನೆ ಬಡಿಯುತ್ತಿದೆ.

ಕರಾವಳಿ

ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ಮಹಾತ್ಮ ಗಾಂಧಿಯವರು ಹೇಳಿದ್ದು ಈಗ ಬಹಳಷ್ಟು ಜನರಿಗೆ ನೆನಪುಳಿದಿಲ್ಲ. ಕೇವಲ ನಗರ ಕೇಂದ್ರಿತ ನಾಗರೀಕತೆ ಅಭಿವೃದ್ಧಿ ಹೊಂದುತ್ತಿರುವುದು ಒಂದು ಕಡೆಯಾದರೆ, ಯುವ ಸಮುದಾಯ ನಗರದ ದಿಕ್ಕಿಗೆ ಮುಖ ಮಾಡಿದ ಕಾರಣ ಬಹುತೇಕ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿದೆ. ಹಾಗಂತ ಸರಕಾರಗಳಿಂದ ಗ್ರಾಮಗಳಿಗೆ ಹರಿದುಬರುತ್ತಿರುವ ಅನುದಾನ ಪ್ರಮಾಣವೇನೂ ಕಡಿಮೆಯಾಗಿಲ್ಲ. ಗ್ರಾಮಗಳ ಅಮೂಲಾಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳು ನಿರ್ಮಾಣಗೊಂಡು, ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಮೇಲಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಧ್ಯವಾದಷ್ಟು ವಿವಿಧ ಮೂಲಗಳಿಂದ ಆದಾಯ ಸಂದಾಯ ಮಾಡುತ್ತಲೇ ಇದೆ. ಕೇಂದ್ರ ಹಣಕಾಸು ಆಯೋಗದ ಅನುದಾನ, ರಾಜ್ಯದ ಶಾಸನಬದ್ಧ ಅನುದಾನ, ಗ್ರಾಮ ಪಂಚಾಯತಿಯ ಸ್ವಂತ ಆದಾಯ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರಾಯೋಜಿತ ಯೋಜನೆಗಳ ಅನುದಾನ ಹೀಗೆ ಎಲ್ಲಾ ಯೋಜನೆಗಳಿಂದ ಬರುವಂತಹ ಅನುದಾನದ ಬಹುತೇಕ ಹಣ ಜನಸಾಮಾನ್ಯರ ಕಲ್ಯಾಣ ಕಾರ್ಯಕ್ರಮಕ್ಕಿಂತ ಕೆಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಬಕಾಸುರರ ಹೊಟ್ಟೆ ಸೇರಿ ಜೀರ್ಣವಾಗುತ್ತಿರುವುದೇ ಹೆಚ್ಚು.

ಗ್ರಾಮ ಪಂಚಾಯತಿಗಳಿಗೆ ಬಿಡುಗಡೆಯಾಗುವ ಅನುದಾನವು ಆಯಾ ಗ್ರಾಮ ಪಂಚಾಯತ್‍ಗಳ ಅಧ್ಯಕ್ಷರುಗಳು, ಪಿಡಿಓಗಳ ಅದ್ಭುತ ಸೌಹಾರ್ದತೆಯ ದೆಸೆಯಿಂದ ಭೂರಿಭೋಜನವೇ ಬಿಡಿ, ಭ್ರಷ್ಟಾಚಾರವನ್ನು ತಳಮಟ್ಟದಿಂದಲೇ ನಿವಾರಿಸದೆ ಹೋದರೆ ಈ ದೇಶ ಯಾವತ್ತಿಗೂ ಅಭಿವೃದ್ದಿಗೊಳ್ಳುವುದಿಲ್ಲ. ಅದು ಸತ್ಯವೂ ಹೌದು. ವಿಚಾರಕ್ಕೆ ಬರೋಣ.

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಲ್ಲಿ ದಕ್ಷರೆಷ್ಟಿದ್ದಾರೋ ಗೊತ್ತಿಲ್ಲ. ಆದರೆ ಹೊಟ್ಟೆ ತುಂಬಾ ಉಣ್ಣುವ ಅಧಿಕಾರಿಗಳು ಮಾತ್ರ ಸಾಕಷ್ಟಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟೇಶ್ವರ ಪಂಚಾಯತ್ ಪಿಡಿಓ ಕೂಡಾ ಅಂತಹ ಹಗಲು ದರೋಡೆಗೆ ನಿಂತಿರುವ ಮಹಾನುಭವ. ಈತ ಪಿಡಿಓ ಆಗಿ ಸಾಧಿಸಿದ ಘನಂದಾರಿ ಕೆಲಸಗಳೇನೂ ಇಲ್ಲ. ಆದರೆ ಭ್ರಷ್ಟಾಚಾರದಲ್ಲಿ ಇವನದ್ದು ಸ್ನಾತಕೋತ್ತರ ಪದವಿ.

ಕೋಟೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟೇಶ್ವರ ಗ್ರಾಮದ ಪ್ರಖ್ಯಾತ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ (ಕೋಡಿ ಹಬ್ಬ) ಉತ್ಪತ್ತಿಯಾಗುವ ಹಸಿ ಹಾಗೂ ಒಣಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಗುತ್ತಿಗೆದಾರರಿಂದ ಪಂಚಾಯತ್ ಟೆಂಡರ್ ಕರೆದಿತ್ತು. ಹಬ್ಬದ ತ್ಯಾಜ್ಯವನ್ನು ಕಡ್ಡಾಯವಾಗಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಷರತ್ತಿಗೆ ಟೆಂಡರ್ ನಲ್ಲಿ ಭಾಗವಹಿಸುವವರು ಬದ್ಧರಾಗಿರತಕ್ಕದ್ದು ಎಂದು ಹೇಳಿತ್ತು. ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವುದು ಎಂದರೆ ಕಸವನ್ನು ಜಾತ್ರೆ ಪೇಟೆಯ ಅಂಗಡಿಗಳಿಂದ ಸಂಗ್ರಹಿಸುವಾಗ ಹಸಿಕಸ ಹಾಗೂ ಒಣಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸಂಗ್ರಹಿಸುವುದು ಹಾಗೂ ಸಂಗ್ರಹಿಸಿದ ಹಸಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಅಗತ್ಯಕ್ರಮ ವಹಿಸುವುದು. ಯಾವುದೇ ಕಾರಣಕ್ಕೂ ಕಸವನ್ನು ಭೂಮಿಯಲ್ಲಿ ಹುಗಿಯುವುದನ್ನು ಅಥವಾ ಎಲ್ಲಿಯಾದರೂ ರಾಶಿ ಹಾಕುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹಾಗೇನಾದರೂ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುವುದೆಂದು ಟೆಂಡರ್ ನಲ್ಲಿ ಭಾಗವಹಿಸಿ ನಂತರ ಏನಾದರೂ ಅವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಿದ್ದಲ್ಲಿ ಸಂಬಂಧಿಸಿದವರ ಮೇಲೆ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟೀಸಿನಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದರು.

ಜಾತ್ರಾ ಕಸ ನಿರ್ವಹಣೆಗೆ ಗ್ರಾಮ ಪಂಚಾಯಿತಿಯಿಂದ ಒಟ್ಟು 4 ಲಕ್ಷ ರೂಪಾಯಿಗಳನ್ನು ಕಾಯ್ದಿರಿಸಿತ್ತು. ಮಾತ್ರವಲ್ಲ ಗುತ್ತಿಗೆ ಪಡೆದವರು ಕಸ ವಿಲೇವಾರಿಗೆ ಬೇಕಾದ ಎಲ್ಲಾ ಅಗತ್ಯ ಸಿದ್ಧತೆ, ಸಲಕರಣೆ, ಕಾರ್ಮಿರನ್ನು ಹಾಗೂ ವಾಹನ ವ್ಯವಸ್ಥೆಯನ್ನು ಮಾಡುವಂತೆ ಟೆಂಡರ್ ಪ್ರತಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು.

ಆದರೆ ಇದೀಗ ವಾರಗಳ ಕಾಲ ನಡೆಯುವ ಕರಾವಳಿ ಕರ್ನಾಟಕದ ವೈಭವದ ಕೊಡಿ ಹಬ್ಬದ ಸ್ವಚ್ಛತೆಗೆ ಕೋಟೇಶ್ವರ ಪಂಚಾಯತ್ ಟೆಂಡರ್ ನೀಡಿದರೂ, ಈಗ ಪಂಚಾಯತ್ ಟೆಂಡರ್ ನಿಯಮಾವಳಿಗಳನ್ನು ಮೀರಿ ನೆರವು ನೀಡುತ್ತಿದೆ ಅನ್ನುವ ಆರೋಪ ಕೇಳಿ ಬರುತ್ತಿದೆ. ಭ್ರಷ್ಟಾಚಾರದ ವಾಸನೆ ಬಡಿಯತೊಡಗಿದೆ. ಸ್ಥಳೀಯ ಪಂಚಾಯತ್ ತನ್ನ ಕಸ ಎತ್ತುವ ಗಾಡಿಗಳನ್ನು ನೀಡಲು ಮುಂದಾಗಿದೆ ಎಂಬ ದೂರುಗಳು ಕೇಳಿ ಬರುತ್ತಿದೆ. ಟೆಂಡರ್ ಕರೆದ ಮೇಲೂ ಪಂಚಾಯತ್ ತನ್ನ ಪರಿಕರಗಳನ್ನು ಸ್ವಚ್ಛತೆ ಕೆಲಸಕ್ಕೆ ನೀಡುವುದು ಸಮಂಜಸವೇ? ಇದರ ಹಿಂದೆ ಕಮಾಯಿಯ ವಾಸನೆ ಬಡಿಯುತ್ತಿದೆ.