ಅತ್ಯಾಪ್ತ ಸಹಚರ ಇಜಾಝ್ ಹತ್ಯೆಯ ದಿನದಂದೇ ನೌಫಲ್ ಗೆ ಮುಹೂರ್ತವಿಟ್ಟ ಹಂತಕ ಪಡೆ.!
ಅದು 2017 ಸೆಪ್ಟೆಂಬರ್ 25,
ಫರಂಗಿಪೇಟೆಯ ಪೊಲೀಸ್ ಔಟ್ ಪೋಸ್ಟ್ ಎದುರಲ್ಲೇ ರಾತ್ರೋರಾತ್ರಿ ಇಡೀ ಜಿಲ್ಲೆಯೇ ಬೆಚ್ಚಿಬೀಳಿಸುವ ಡಬ್ಬಲ್ ಮರ್ಡರ್ ಪ್ರಕರಣ ನಡೆದಿತ್ತು. ಸ್ವಿಫ್ಟ್ ಕಾರಿನಲ್ಲಿ ಐವರು ಸಹಚರರ ಜೊತೆಗೆ ಫರಂಗಿಪೇಟೆಗೆ ಬಂದಿದ್ದ ಜಿಯಾ. ಇದರ ಮುನ್ಸೂಚನೆ ಅರಿತ ಹಂತಕ ಪಡೆ ಇನೊವಾ ಕಾರಿನಲ್ಲಿ ಅತ್ತ ಧಾವಿಸಿತ್ತು. ಸ್ವಿಫ್ಟ್ ಕಾರಿನಲ್ಲಿದ್ದ ಜಿಯಾ ತಂಡದ ಮೇಲೆ ಹಂತಕ ಪಡೆ ಯದ್ವಾತದ್ವಾ ತಲವಾರು ಬೀಸಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಕಾರಿನಲ್ಲಿದ್ದ ಇತರ ಮೂವರ ಮೇಲೂ ತಲವಾರು ಬೀಸಲಾಗಿತ್ತು. ಫರಂಗಿಪೇಟೆಯಲ್ಲಿ ನಡುಬೀದಿಯಲ್ಲಿ ನಟ್ಟನಡುರಾತ್ರಿ ಗ್ಯಾಂಗ್ ವಾರ್ ಕದನಕ್ಕೆ ಜಿಯಾ, ಫೈಝಲ್ ಇಬ್ಬರ ಹೆಣ ಉರುಳಿತ್ತು. ಕಾರಿನಲ್ಲಿದ್ದ ಮುಶ್ತಾಕ್ ಸೇರಿದಂತೆ ಮೂವರು ಗಂಭೀರ ಗಾಯಗೊಂಡು ಬಚವಾಗಿದ್ದರು.
ಹೀಗೆ ಫರಂಗಿಪೇಟೆ, ಮಾರಿಪಳ್ಳ, ಬಜಾಲ್ ಪರಿಸರದಲ್ಲಿ ಮುಸ್ಲಿಂ ಅಂಡರ್ ವರ್ಲ್ಡ್ ಲೋಕವನ್ನು ಒಂದು ಸಲ ತಿರುಗಿ ನೋಡುವಂತೆ ಬೆಳೆದುಬಿಟ್ಟಿದ್ದ.ಫರಂಗಿಪೇಟೆ ಡಬ್ಬಲ್ ಮರ್ಡರ್ ಎ1 ಆರೋಪಿಯಾಗಿ ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ಮುಸ್ಲಿಂ ಅಂಡರ್ ವರ್ಲ್ಡ್ ಲೋಕದಲ್ಲಿ ಖತರ್ನಾಕ್ ಆಗಿ ಬೆಳೆಯುತ್ತಿದ್ದ. ಆತ ಬೇರೆ ಯಾರೂ ಅಲ್ಲ. ಅವನೇ ತುಕ್ಕ ಆಲಿಯಾಸ್ ಡೀಲ್ ಆಲಿಯಾಸ್ ಟೊಪ್ಪಿ ಆಲಿಯಾಸ್ ನೌಫಲ್. ಯೆಸ್ ಈ ತುಕ್ಕ ನೌಫಲ್ ಬಜಾಲ್ ಫೈಸಲ್ ನಗರದ ನಿವಾಸಿ. ಮೊನ್ನೆ ಉಪ್ಪಳದ ರೈಲ್ವೆ ಟ್ರ್ಯಾಕ್ ನಲ್ಲಿ ಡಬ್ಬಲ್ ಹಂತಕ ನೌಫಲ್ ಹೆಣ ನಿಗೂಢವಾಗಿ ಎಸೆದು ಹೋಗಿತ್ತು ಹಂತಕ ಪಡೆ!
ಹೀಗೆ ಉಪ್ಪಳದ ರೈಲ್ವೇ ಟ್ರ್ಯಾಕ್ ನಲ್ಲಿ ಅನಾಥ ರೀತಿಯಲ್ಲಿ ಶವವಾಗಿ ಸಿಕ್ಕ ನಟೋರಿಯಸ್ ನೌಫಲ್ ಹಿನ್ನೆಲೆ ಭಯಾನಕ. ಮಂಗಳೂರಿನ ವಿವಿಧ ಠಾಣೆಗಳಲ್ಲಿ 25 ಕ್ಕೂ ಅಧಿಕ ಕೇಸು ದಾಖಲಾಗಿತ್ತು. ಕಣ್ಣೂರು ಚೆರಿಯಪುತ್ತ, ಫರಂಗಿಪೇಟೆ ಜಿಯಾ, ಫೈಝಲ್ ಮರ್ಡರ್, ಜೈಲಿನಲ್ಲಿ ಸಮೀರ್ ಕಡಪ್ಪುರ ಕೊಲೆಯತ್ನ ಸೇರಿದಂತೆ ದರೋಡೆ, ಮಾದಕದ್ರವ್ಯ ಸಾಗಣೆ ಸೇರಿದಂತೆ ಹಲವಾರು ಕೇಸುಗಳನ್ನು ಮೆತ್ತಿಕೊಂಡಿದ್ದ.
ಅತ್ಯಾಪ್ತ ಇಜಾಝ್ ಹತ್ಯೆಯ ದಿನದಂದೇ ಮುಹೂರ್ತ!
ಮಾರಿಪಳ್ಳ-ಬಜಾಲ್-ಕಣ್ಣೂರು-ಫರಂಗಿಪೇಟೆ ಪರಿಸರದಲ್ಲಿ ಒಂದೊಮ್ಮೆ ಮುಸ್ಲಿಂ ಅಂಡರ್ ವರ್ಲ್ಡ್ ಲೋಕದ್ದೇ ಹವಾ, ಪರಸ್ಪರ ಎದುರಾಳಿ ಗುಂಪಿನ ಗ್ಯಾಂಗ್ ವಾರ್ ಗೆ ಹತ್ತಕ್ಕೂ ಹೆಚ್ಚು ಹೆಣ ಉರುಳಿತ್ತು. ರಕ್ತರಂಜಿತವಾಗಿತ್ತು ಈ ಪ್ರದೇಶ.2010 ರ ಇಸವಿಯಲ್ಲಿ ಕಣ್ಣೂರಿನ ಚೆರಿಯಪುತ್ತ ಅನ್ನುವಾತ ಪುಟ್ಬಾಲ್ ಆಡಿ ಬರುತ್ತಿರುವ ಸಂದರ್ಭ ಇದೇ ನೌಫಲ್, ಇಜಾಝ್ ತಂಡ ಬರ್ಬರವಾಗಿ ಕೊಚ್ಚಿ ಕೊಂದು ಹಾಕಿತ್ತು. ಚೆರಿಯಪುತ್ತ ಹತ್ಯೆಗೆ ರಿವೇಂಜ್ ಗೇಮ್ ಆಗಿ ಜಿಯಾ ಗ್ಯಾಂಗ್ 2014 ರ ಅಕ್ಟೋಬರ್ 30 ರಂದು ಕಣ್ಣೂರು ಸೆಲೂನಿಗೆ ನುಗ್ಗಿ ಇಜಾಝ್ ನನ್ನು ಬರ್ಬರವಾಗಿ ಕೊಚ್ಚಿ ಕೊಂದು ಹಾಕಿದ್ದರು. ತನ್ನ ಸ್ನೇಹಿತನನ್ನೇ ಕೊಲೆಗೈದ ಜಿಯಾ ನನ್ನು ಪಕ್ಕಾ ಪ್ಲ್ಯಾನ್ ಮಾಡಿ ಮುಹೂರ್ತ ಫಿಕ್ಸ್ ಮಾಡಿ ಆನಂತರ ಎತ್ತಿಬಿಡುತ್ತಾನೆ ನೌಫಲ್. ಕಾಕತಾಳೀಯವೋ, ವಿಪರ್ಯಾಸವೋ ತನ್ನ ಅತ್ಯಾಪ್ತ ಸ್ನೇಹಿತ ಇಜಾಝ್ ಹತ್ಯೆಯಾದ ಅದೇ ದಿನ, ಹನ್ನೊಂದು ವರ್ಷದ ನಂತರ ನೌಫಲ್ ಹೆಣವಾಗುತ್ತಾನೆ. ನೌಫಲ್ ಹತ್ಯೆಯ ಹಿಂದೆ ನಿಗೂಢತೆ ಇದೆ. ಅಕ್ಟೋಬರ್ 30 ರ ರಾತ್ರಿ 7 ರ ನಂತರ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅವತ್ತೇ ಆತನನ್ನು ಹಂತಕ ಪಡೆ ಹತ್ಯೆ ಮಾಡಿ ಮರುದಿನ ಉಪ್ಪಳದಲ್ಲಿ ಎಸೆದು ಹೋಗಿರುವ ಸಂಭವವೇ ಹೆಚ್ಚು.

ಜಿಯಾ ಹತ್ಯೆ ರೀತಿಯಲ್ಲೇ ಈತನ ಮರ್ಡರ್ ನಡೆದಿತ್ತು.!
2017 ರಲ್ಲಿ ಫರಂಗಿಪೇಟೆ ಜಂಕ್ಷನ್ ನಲ್ಲಿ ಜಿಯಾ, ಫೈಝಲ್ ಡಬ್ಬಲ್ ಮರ್ಡರ್ ನಡೆದಿತ್ತು. ಎ1 ಆರೋಪಿಯಾಗಿದ್ದವ ತುಕ್ಕ ನೌಫಲ್. ಜಿಯಾ ಕುತ್ತಿಗೆ ಭಾಗಕ್ಕೆ ಸಬ್ಬಲ್ ರೀತಿಯ ಆಯುಧ ಬಳಸಿ ಹತ್ಯೆ ಮಾಡಲಾಗಿತ್ತು. ನೌಫಲ್ ಕುತ್ತಿಗೆ ಭಾಗಕ್ಕೆ ಹೊಡೆದೇ ಕೊಂದು ಹಾಕಿದೆ ಹಂತಕ ಪಡೆ. ಸೇಮ್ ಟು ಸೇಮ್ ಜಿಯಾ ಮರ್ಡರ್ ರೀತಿಯಲ್ಲೆ ನೌಫಲ್ ಹತ್ಯೆ ನಡೆದಿದೆ.

ಗೋಲ್ಡ್ ಸ್ಮಗ್ಲಿಂಗ್ ಕೈವಾಡವಾ.?
ನಟೋರಿಯಸ್ ತುಕ್ಕ ನೌಫಲ್ ಹತ್ಯೆಯ ಹಿಂದೆ ಸ್ಥಳೀಯರ ಕೈವಾಡದ ಬಗ್ಗೆ ಗುಸು ಗುಸು ಕೇಳಿ ಬರುತ್ತಿದೆ. ನೌಫಲ್ ನನ್ನು ಪರಿಚಯಸ್ಥರೇ ಕರೆದುಕೊಂಡು ಹೋಗಿ ಹತ್ಯೆ ಮಾಡಿದರಾ ಅನ್ನುವ ಅನುಮಾನಗಳಿವೆ. ಬಜಾಲ್, ಫರಂಗಿಪೇಟೆ ಪರಿಸರದಲ್ಲಿ ನಟೋರಿಯಸ್ ಆಗಿ ಬೆಳೆದಿದ್ದ ತುಕ್ಕ ನೌಫಲ್ ಹಲವು ಭಾಗಗಳಲ್ಲಿ ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ಮುಸ್ಲಿಂ ಅಂಡರ್ ವರ್ಲ್ಡ್ ಅನ್ನು ಆಳುತ್ತಿದ್ದ. ಇದು ಈ ಭಾಗದಲ್ಲಿ ಫೀಲ್ಡ್ ನಲ್ಲಿದ್ದ ಹಲವು ಗ್ಯಾಂಗ್ ಗಳ ಕಣ್ಣು ಕುಕ್ಕಿದ್ದಂತೂ ಸತ್ಯ. ಈ ನಡುವೆ ಈ ಹಿಂದೆ ಇದ್ದ ಗ್ಯಾಂಗ್ ನಿಂದ ಸಿಡಿದು ಪ್ರತ್ಯೇಕ ಗ್ಯಾಂಗ್ ಕಟ್ಟಿಕೊಂಡಿದ್ದ. ಆನಂತರ ಫೀಲ್ಡ್ ನಲ್ಲಿದ್ದ ಕೆಲವು ದೊಡ್ಡ ತಲೆಗಳು ಒಟ್ಟು ಕೂರಿಸಿ ರಾಜಿ ಪಂಚಾತಿಕೆ ಕೂಡ ನಡೆಸಿದ್ದವು!
ಈ ಮಧ್ಯೆ ಗೋಲ್ಡ್ ಸ್ಮಗ್ಲಿಂಗ್ ಡೀಲ್ ಗಳಲ್ಲೂ ನೌಫಲ್ ಕೈಯಾಡಿಸುತ್ತಿದ್ದ. ವಿದೇಶಗಳಿಂದ ಅಕ್ರಮ ಸಾಗಾಣಿಕೆ ಮೂಲಕ ಬರುವ ಚಿನ್ನದ ಗಟ್ಟಿಯನ್ನು ದೋಚುವುದೇ ಈ ವ್ಯವಹಾರ. ಉಪ್ಪಳ ಭಾಗದಲ್ಲಿ ಇಂತಹ ನಟೋರಿಯಸ್ ಹಿನ್ನೆಲೆಯ ಐದಾರು ಗ್ಯಾಂಗ್ ಗಳಿವೆ. ಈ ಹಿಂದೆ ಗೋಲ್ಡ್ ಸ್ಮಗ್ಲಿಂಗ್ ಗ್ಯಾಂಗ್ ನಲ್ಲಿ ವೈಷಮ್ಯ ಉಂಟಾಗಿ ಉಪ್ಪಳದ ಕುಖ್ಯಾತ ಹಿನ್ನೆಲೆಯ ಕಾಲಿಯಾ ರಫೀಕ್ ನನ್ನು ಅಟ್ಟಾಡಿಸಿಕೊಂಡು ಉಳ್ಳಾಲ ಸೋಮೇಶ್ವರ ಬಳಿ ಫೈರಿಂಗ್ ನಡೆಸಿ ತಲವಾರು ಬೀಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಉಪ್ಪಳದ ನಟೋರಿಯಸ್ ಗ್ಯಾಂಗ್ ಈ ಕೃತ್ಯ ನಡೆಸಿತ್ತು. ಸಮೀರ್ ಕಡಪ್ಪರ ಹತ್ಯೆ ಕೂಡ ಗೋಲ್ಡ್ ಸ್ಮಗ್ಲಿಂಗ್ ವಿಚಾರದಲ್ಲೇ ನಡೆದಿತ್ತು. ಇದೀಗ ತುಕ್ಕ ನೌಫಲ್ ಕೂಡ ಗೋಲ್ಡ್ ಸ್ಮಗ್ಲಿಂಗ್ ಡೀಲಿಂಗ್ ನಲ್ಲಿ ತೊಡಗಿದ್ದರಿಂದ ಇದೇ ಹಿನ್ನೆಲೆಯಲ್ಲಿ ಹತ್ಯೆಯಾಗಿರಬಹುದು ಅನ್ನುವ ಮಾತುಗಳು ಕೇಳಿ ಬರುತ್ತಿವೆ.
ಐವರು ಶರಣು.?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಸ್ಟ್ರಾಂಗ್ ಆಗಿರುದರಿಂದ ತುಕ್ಕ ನೌಫಲ್ ಹತ್ಯೆಗೆ ಜಿಲ್ಲೆಯಲ್ಲಿ ಮುಹೂರ್ತ ಇಡಲು ಹೆದರಿತ್ತು ಅನ್ನುವ ಮಾಹಿತಿಗಳಿವೆ. ನೌಫಲ್ ನಿಗೆ ಡ್ರಗ್ಸ್ ಸೇವಿಸಿ ಎಲ್ಲೋ ಹತ್ಯೆ ಮಾಡಿ ಉಪ್ಪಳ ಪರಿಸರದಲ್ಲಿ ಎಸೆದು ಹೋಗಿರುವ ಅನುಮಾನಗಳಿವೆ. ಆದರೆ ನೌಫಲ್ ಒಬ್ಬಂಟಿಯಾಗಿ ಹೋಗಿದ್ದಾನೋ? ಆತನ ಪರಿಚಯಸ್ಥರು ನಂಬಿಸಿ ಕರೆದುಕೊಂಡು ಹೋಗಿದ್ದಾರೋ ಅನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಒಂದು ಮೂಲದ ಪ್ರಕಾರ ಉಪ್ಪಳ ಭಾಗದ ಐವರು ಮಂಜೇಶ್ವರ ಪೊಲೀಸರಿಗೆ ಶರಣಾಗಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗುತ್ತಿದೆ. ಒಟ್ಟಾರೆ ಪ್ರಕರಣ ನಿಗೂಢತೆ ಸೃಷ್ಟಿಸಿದೆ.
