ಧರ್ಮದಂಗಲ್ ಹಿಂದೆ ಯುವಕರು ಬಿದ್ದದ್ದು ಸಾಕು; ಇನ್ನಾದರೂ ಮಂಗಳೂರು ವಿಶ್ವದರ್ಜೆಯ ಸಿಲಿಕಾನ್ ಸಿಟಿ ಆಗಲಿ.
‘ಏನಾಗುತ್ತಿದೆ ಮಂಗಳೂರಿನಲ್ಲಿ?’ ದಿನ ಬೆಳಗಾದರೆ ಚೂರಿಯದ್ದೇ ಸದ್ದು ಕೇಳುತ್ತಿತ್ತು. ಅಮಾಯಕರು ಓಡಾಡಲು ಹೆದರುವ ಕಾಲವಿತ್ತು. ಮತೀಯ ಕ್ರೌರ್ಯಕ್ಕೆ ಯಾರ್ಯಾರೋ ಮನೆಯ ಬಡಕೂಸು ಜೀವ ಕಳಕೊಳ್ಳುತ್ತಿತ್ತು. ಶಾಂತಿ, ನೆಮ್ಮದಿ, ಭಾತೃತ್ವದ ಸಮಾಜದಲ್ಲಿ ಕತ್ತಿ, ತಲವಾರು, ದ್ವೇಷ ಭಾಷಣಗಳು ಮೊಳಗುತ್ತಿತ್ತು. ರಕ್ತ ಕೊಟ್ಟು ಜೀವ ಉಳಿಸಬೇಕಾದ ಕೈಯಲ್ಲಿ ರಕ್ತ ಮೆತ್ತಿತ್ತು. ಅಪರಾಧ ಸುದ್ಧಿಗಳು ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತಿತ್ತು. ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆ ಎಂಬುದು ಮಂಗಳೂರಿನಲ್ಲಿದೆಯಾ? ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿತ್ತು.
ಕೋಮುಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಹೊಂದಿತ್ತು. ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವುದೇ ಪೊಲೀಸ್ ಇಲಾಖೆಗೆ ಸವಾಲಿನ ಸಂಗತಿಯಾಗಿತ್ತು. ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮಂದಿ ಸಮಾಜದಲ್ಲಿ ರಾಜಾರೋಷವಾಗಿ ತಮ್ಮ ಸಮಾಜಬಾಹಿರ ಕೃತ್ಯಗಳನ್ನು ನಡೆಸಿ ಸುಲಭದಲ್ಲಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವುದು ಸಾಮಾನ್ಯವಾಗಿದೆ. ಅದರಲ್ಲೂ ತೀರಾ ಇತ್ತೀಚೆಗೆ ಜಿಲ್ಲೆಯಲ್ಲಿ ಸರಣಿ ಕೋಮು ಸಂಘರ್ಷಗಳು, ಸರಣಿ ಕೊಲೆಗಳ ಎಲ್ಲೆ ಮೀರಿ ಜನಜೀವನವೇ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳೂ ಕೂಡಾ ತಮ್ಮ ಜವಾಬ್ದಾರಿ ಮೆರೆಯುವಲ್ಲಿ ವಿಫಲರಾಗಿ ಮತೀಯ ಜಿಲ್ಲೆಯಾಗಿ ಪರಿವರ್ತನೆಗೊಂಡಿತ್ತು.
ಐದಾರು ತಿಂಗಳ ಹಿಂದಿನ ಮಂಗಳೂರು ಈಗ ಇಲ್ಲ. ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಆದ ಕಾರಣ ಇಡೀ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಇಲಾಖೆಯ ಕೈಯಲ್ಲಿದೆ. ಪೊಲೀಸರೆಂದರೆ ಭಯ ಸಮಾಜಘಾತುಕ ಶಕ್ತಿಗಳಿಗೆ ಉಂಟಾಗಿದೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ ಹಾಗೂ ಜಿಲ್ಲಾ ಎಸ್ಪಿಯಾಗಿ ಡಾ. ಅರುಣ್ ಕೆ. ಇಬ್ಬರು ಖಡಕ್ ಆಫೀಸರ್ಸ್ ಜಿಲ್ಲೆಗೆ ಎಂಟ್ರಿಯಾದೊಡನೆ ದ್ವೇಷ ಭಾಷಣಕೋರರು, ಮತೀಯ ಗೂಂಡಾಗಳು ಉಸ್ಕು ಧಮ್ಮಿಲ್ಲದೆ ತೆರೆಗೆ ಸರಿದಿದ್ದಾರೆ. ಹಲವಾರು ಕಠಿಣ ಕಾನೂನುಗಳನ್ನು ಪರಿಚಯಿಸುವ ಮೂಲಕ ಕ್ರಿಮಿನಲ್ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಸಾಮಾಜಿಕ ಜಾಲತಾಣ, ಡ್ರಗ್ಸ್, ಮತೀಯ ಸಂಘರ್ಷ, ದ್ವೇಷ ಭಾಷಣಕ್ಕೆ ಅಂಕುಶ ಹಾಕಿದ್ದಾರೆ. ಈ ಬಾರಿ ಗಣೇಶೋತ್ಸವ, ಮೀಲಾದ್ ಹಬ್ಬಗಳಲ್ಲಿ ಕಿಡಿಗೇಡಿಗಳ ಪತ್ತೆ ಇರದ ಕಾರಣ ಉಭಯ ಸಮುದಾಯಗಳು ಸೌಹಾರ್ದತೆಯಿಂದ ಹಬ್ಬ ಹರಿದಿನಗಳನ್ನು ಆಚರಿಸಿದೆ. ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳೇ ಜಿಲ್ಲೆಯಲ್ಲಿ ಶಾಂತಿ ಮರುಕಳಿಸಲು ಕಾರಣವಾಗಿದೆ.
ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸಿ ತಮ್ಮ ಕಬಂಧ ಬಾಹುಗಳನ್ನು ಚಾಚುತ್ತಿದ್ದ ಮತೀಯಕೋರರನ್ನು ಸದೆ ಬಡಿದ ಕಾರಣ ಜಿಲ್ಲೆಯ ಜನ ಮತೀಯತೆಯ ಬದಲು ಅಭಿವೃದ್ಧಿ ವಿಷಯಗಳ ಬಗ್ಗೆ ಚಿಂತಿಸಲು ಆರಂಭಿಸಿದ್ದಾರೆ. ಕೂಳೂರು ಬಳಿ ಮಹಿಳೆಯೊಬ್ಬರು ರಸ್ತೆಗುಂಡಿಗೆ ಬಿದ್ದು ಮೃತಪಟ್ಟಾಗ ಇದೇ ಮೊತ್ತಮೊದಲ ಬಾರಿ ಅನ್ನುವಂತೆ ಜಿಲ್ಲೆಯ ಜನತೆ ಚುನಾಯಿತ ಜನಪ್ರತಿನಿಧಿಗಳನ್ನು ಪ್ರಶ್ನಿಸಿದ್ದರು.
ಇದೀಗ ಜಿಲ್ಲೆಯಲ್ಲಿ ಶಾಂತಿ ಸ್ಥಾಪನೆಯಾಗಿದೆ. ಜನತೆ ಧರ್ಮದಂಗಲ್ ಮರೆತಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಶಕೆಯ ಹೊಸ ಹುರುಪು ಉಂಟಾಗಿದೆ. ಸತತ ಕಮ್ಯುನಲ್ನಿಂದ ಬೇಸತ್ತ ಜಿಲ್ಲೆಗೆ ಯಾವುದೇ ಕಂಪೆನಿಗಳು ಇಲ್ಲಿ ತಳವೂರಲು ಚಿಂತಿಸುತ್ತಿತ್ತು. ಮತೀಯ ಕಾರಣದಿಂದಾಗಿ ಬೆಂಗಳೂರು ಅಭಿವೃದ್ಧಿಗೆ ಪೈಪೋಟಿ ನೀಡಬೇಕಿದ್ದ ಮಂಗಳೂರು ಹಿಂದೆ ಸರಿಯುವಂತಿತ್ತು. ಇದೀಗ ರಾಜ್ಯ ಸರಕಾರ ದಕ್ಷಿಣ ಕನ್ನಡ, ಉಡುಪಿಯನ್ನು ಐಟಿ ಹಬ್ ಮಾಡಲು ಮುಂದಾಗಿದೆ. ಇನ್ನು ಕರಾವಳಿ ಭಾಗದಲ್ಲಿ ವಿಶ್ವದರ್ಜೆಯ ಹಲವಾರು ಕಂಪೆನಿಗಳು ಲಗ್ಗೆ ಇಡುವ ಸಾಧ್ಯತೆ ಇದ್ದು ಕರಾವಳಿಯ ಒಟ್ಟು ಚಿತ್ರಣವೇ ಬದಲಾಗಿದೆ.

ಮಂಗಳೂರಿನಲ್ಲಿ ನೆಲೆಗೊಂಡಿರುವ ಮೂರನೇ ಐಟಿ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು ಬೆಂಗಳೂರಿನ ನಂತರ ಮುಂದಿನ ಐಟಿ ಹಬ್ ತಾಣವಾಗಿ ಹೊರಹೊಮ್ಮುತ್ತಿರುವ ಭಾರತದ ಸಿಲಿಕಾನ್ ಬೀಚ್ ಗೆ ಹೊಸ ಚೈತನ್ಯ ಮತ್ತು ಉತ್ಸಾಹ ತುಂಬಿದೆ. ಮೂಲಗಳ ಪ್ರಕಾರ 1000 ಕೋಟಿ ರೂಪಾಯಿ ಗಳಿಗೂ ಹೆಚ್ಚು ಮೌಲ್ಯದ ಈ ಸ್ವಾಧೀನವು ಮಂಗಳೂರಿನ ಇತಿಹಾಸದಲ್ಲಿ ಅತೀ ದೊಡ್ಡ ಐಟಿ ವಿಲೀನ ಸ್ವಾಧೀನವಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಎರಡು ಕರಾವಳಿ ಜಿಲ್ಲೆಗಳನ್ನು ಒಳಗೊಂಡಿರುವ ಭಾರತದ ಸಿಲಿಕಾನ್ ಬೀಚ್ ಅಧೀನದಲ್ಲಿ ವರ್ಷಕ್ಕೆ 5000 ಕ್ಕೂ ಹೆಚ್ಚು ಐಟಿ ವೃತ್ತಿಪರರ ನೇಮಕಾತಿಯನ್ನು ಗುರಿಯಾಗಿಸಿಕೊಂಡಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 28,000 ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿರುವುದರಿಂದ ಈ ವಿಸ್ತರಣೆಯು ಬಲವಾದ ಬೆಳವಣಿಗೆ ಪದವೀಧರರು ಮತ್ತು ಹೊಸಬರಿಗೆ ಇರುವ ಹೊಸ ಅವಕಾಶವನ್ನು ಎತ್ತಿ ತೋರಿಸುತ್ತದೆ. 2034 ರ ವೇಳೆಗೆ 2 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.
ಮಂಗಳೂರು, ಉಡುಪಿ ಎಜ್ಯುಕೇಶನಲ್ ಹಬ್, ಇಲ್ಲಿ ಹಲವಾರು ಹಲವಾರು ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಇದೆ. ಎನ್ಐಟಿಕೆಯಂತಹ ರಾಷ್ಟ್ರೀಯ ದರ್ಜೆಯ ತಾಂತ್ರಿಕ ಕಾಲೇಜು ಇದೆ. ಇಲ್ಲಿ ಸಾಕಷ್ಟು ಪ್ರತಿಭೆಗಳಿದ್ದರೂ ಸೂಕ್ತ ಸ್ಪಂದನೆ ಸಿಗದ ಕಾರಣ ಪಲಾಯನಗೊಳ್ಳುತ್ತಿತ್ತು. ಆದರೆ ಇದೀಗ ಐಟಿ ಬಿಟಿ ಕಂಪೆನಿಗಳು ಇಲ್ಲಿಯೇ ಆರಂಭಗೊಳ್ಳಲಿರುವುದರಿಂದ ಸ್ಥಳೀಯ ಪ್ರತಿಭೆಗಳಿಗೆ ಸೂಕ್ತ ಮನ್ನಣೆ ಸಿಗಲಿದೆ. ಧರ್ಮದಂಗಲ್ ಹಿಂದೆ ಯುವಕರು ಹೋದದ್ದು ಸಾಕು; ಇನ್ನಾದರೂ ಮಂಗಳೂರು ವಿಶ್ವದರ್ಜೆಯ ಸಿಲಿಕಾನ್ ಸಿಟಿ ಆಗಲಿ.
