ಜಮೀರಣ್ಣನವರೇ.. ತಮ್ಮ ಇಲಾಖೆ ಬಗ್ಗೆ ಗಮನ ಹರಿಸಿ, ಮೌನ ಮುರಿದು ಪುಣ್ಯ ಕಟ್ಕೊಳ್ಳಿ
ರಾಜ್ಯ ಸರಕಾರವು ವಿವಿಧ ಸಮುದಾಯಗಳ ಅಭಿವೃದ್ಧಿಗೆ ಅನೇಕ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿದೆ. ಅದರಲ್ಲೂ ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ವೀರಶೈವ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸೇರಿ ನಾನಾ ಅಭಿವೃದ್ಧಿ ನಿಗಮಗಳಿಂದ ನಾನಾ ಸಮುದಾಯದವರಿಗೆ ಸವಲತ್ತುಗಳ ಮಹಾಪೂರ ಹರಿದು ಬರುತ್ತಿದೆ.
ಅದರಲ್ಲೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸವಲತ್ತುಗಳು ಕಬ್ಬಿಣದ ಕಡಲೆ ಎಂದರೂ ತಪ್ಪಲ್ಲ. ಬಜೆಟ್ಟಿನಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಇಂತಿಷ್ಟು ಕೋಟಿ ಮೀಸಲಿಟ್ಟಿದ್ದೇವೆ ಅನ್ನುವ ಕ್ಲಿಪ್ಪುಗಳನ್ನೆಲ್ಲ ನೋಡಿರುತ್ತೇವೆ. ವಿರೋಧ ಪಕ್ಷದವರು ಕಾಂಗ್ರೆಸ್ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ ಎಂದು ಇದೇ ಅನುದಾನವನ್ನು ತೋರಿಸುತ್ತದೆ. ಸಾಬರ ಸರಕಾರ ಎಂದು ಕಿಂಡಲ್ ಮಾಡುವುದನ್ನು ಮೀಡಿಯಾಗಳಲ್ಲಿ ನೋಡಿದ್ದೇವೆ. ಅಷ್ಟಕ್ಕೂ ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಅನುದಾನವನ್ನು ಪಡೆಯಲು ಇಷ್ಟೊದು ಕಷ್ಟವಿದೆಯಾ ಅನ್ನುವುದನ್ನು ನೋಡಲು ಪಾಂಡೇಶ್ವರ ಅಲ್ಪಸಂಖ್ಯಾತ ಇಲಾಖೆಯ ಕಚೇರಿಗೆ ಒಮ್ಮೆ ದಾಪುಗಾಲಿಟ್ಟರೆ ಸಾಕು.

ರಾಜ್ಯದಲ್ಲಿ ಕ್ರಿಶ್ಚಿಯನ್ ಅಭಿವೃದ್ದಿ ನಿಗಮಕ್ಕೆ 200 ಕೋಟಿ ಭರಪೂರ ಅನುದಾನವನ್ನು ಮೀಸಲಿಟ್ಟಿದೆ. ಇದು ಕೇವಲ ಕ್ರೈಸ್ತ ಸಮುದಾಯಕ್ಕೆ ಮಾತ್ರ ಮೀಸಲಿರುವಂತದ್ದು. ಇನ್ನು ಮುಸ್ಲಿಮರ ಪರಿಸ್ಥಿತಿಯಂತೂ ತೀರಾ ಅಧೋಗತಿ. ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಲ್ಲಿ ಕಿರುಸಾಲ, ಶ್ರಮಶಕ್ತಿಯ ಯೋಜನೆಯ ಫಲಾನುಭವಿಯಾಗಲು ಪಡಬೇಕಾದ ಕಷ್ಟ ಅಷ್ಟಿಷ್ಟಲ್ಲ. ಒಂದೊಂದು ಶಾಸಕರ ಕ್ಷೇತ್ರದಿಂದ 800 ರಿಂದ 1000 ಅರ್ಜಿಗಳು ಕಮ್ಮಿಯೆಂದರೂ ಬರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಉದಾಹರಣೆಯಾಗಿಟ್ಟುಕೊಂಡು ನೋಡಿದರೆ 8 ವಿಧಾನ ಸಭಾಕ್ಷೇತ್ರಗಳ ಪೈಕಿ ಅಂದಾಜು 10,000 ಅರ್ಜಿಗಳು ಬರುತ್ತದೆ. ಆದರೆ ಫಲಾನುಭವಿಗಳು ಒಂದು ಶಾಸಕರ ಕ್ಷೇತ್ರದಲ್ಲಿ ಆಯ್ಕೆಯಾಗುವುದು ಬರೀ 8 ಮಂದಿ ಮಾತ್ರ! ದಕ್ಷಿಣ ಕನ್ನಡ ಜಿಲ್ಲೆಯಲ್ಲೇ 10,000 ಅರ್ಜಿ ಬಂದರೆ ಪಾಸಾಗುವುದು ಬರೀ ಚಿಲ್ಲರೆ 50 ಮಂದಿ ಫಲಾನುಭವಿಗಳಿಗೆ ಮಾತ್ರ. ಇದು ಅಲ್ಪಸಂಖ್ಯಾತ ಇಲಾಖೆಯ ಕಿರುಸಾಲ, ಶ್ರಮಶಕ್ತಿಯ ಒಟ್ಟಾರೆ ಮರ್ಮ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಬರೀ 8 ಮಂದಿಗೆ ನೀಡುವ ಈ ಸೌಲಭ್ಯಕ್ಕೆ ಸರಕಾರ ಇಷ್ಟೊಂದು ಬಿಲ್ಡಪ್ ತೆಗೆಯಬೇಕಾ? ಇನ್ನು ಜನಸಾಮಾನ್ಯ ಈ ಯೋಜನೆಗೆ ಅರ್ಜಿ ಹಾಕಲು ಸೈಬರ್ ಇನ್ನಿತರ ಕಡೆಗಳಲ್ಲಿ ಕ್ಯೂನಿಂತು ಕನಿಷ್ಠ 500 ರೂಪಾಯಿಯನ್ನಾದರೂ ಖರ್ಚು ಮಾಡುತ್ತಾನೆ.
ಇನ್ನು ಸ್ವಸಹಾಯ ಸಂಘಕ್ಕೆ ನೀಡುವ ಸಾಲ ಯೋಜನೆಯ ಅವಸ್ಥೆಯಂತೂ ಹೇಳಿ ಪ್ರಯೋಜನವಿಲ್ಲ. ಸ್ವಸಹಾಯ ಗುಂಪಿನ ಒಬ್ಬರಿಗೆ ಸಿಗುವುದು ಬರೀ ಐದು ಸಾವಿರ ರೂಪಾಯಿ ಮಾತ್ರ. ಈ ಯೋಜನೆಯ ಫಲಾನುಭವಿಯಾಗಲು ಬ್ಯಾಂಕ್ ಸಾಲ ನೀಡಬೇಕಂತೆ. ಬ್ಯಾಂಕ್ ಅಷ್ಟೊಂದು ಸುಲಭದಲ್ಲಿ ಯಾರಿಗಾದರೂ ಸಾಲ ನೀಡುತ್ತಾ? ಇದು ಜನರನ್ನು ಮಂಗ ಮಾಡುವ ಯೋಜನೆಯಲ್ಲದೇ ಇನ್ನೇನು.?
ಕಿರು ಸಾಲವಾಗಲಿ, ಶ್ರಮಶಕ್ತಿ ಸಾಲವಾಗಲಿ ಇದರ ಫಲಾನುಭವಿಯಾಗಲು ಅರ್ಜಿ ಸಲ್ಲಿಸಬೇಕು. ದಾಖಲೆ ಸಲ್ಲಿಸಬೇಕು, ಇದರ ನಡುವೆ ಕೆಲವೊಂದು ಅಧಿಕಾರಿಗಳು ಬೇಕಾಬಿಟ್ಟಿ ರೂಲ್ಸ್ ಮಾಡಿ ಜನರನ್ನು ಸತಾಯಿಸುತ್ತಿದ್ದಾರೆ. ಅರ್ಜಿದಾರರ ಜೊತೆಗೆ ಜಾಮೀನುದಾರರು ಓಟಿಪಿ ನೀಡಬೇಕು. ಈ ಯೋಜನೆಗೆ ಅಲ್ಪಸಂಖ್ಯಾತ ಸಮುದಾಯದ ಬಡವರು, ಗ್ರಾಮಾಂತರ ಪ್ರದೇಶದ ಜನರು ಹೆಚ್ಚು ಅರ್ಜಿ ಹಾಕುವುದು, ಓದು, ಬರಹ ಇರುವವರು ಕೂಡಾ ಕಮ್ಮಿ. ಅಂತಹವರು ಓಟಿಪಿ ನೀಡಲು ಸಾಧ್ಯನಾ.? ಅಲ್ಪಸಂಖ್ಯಾತರ ಏಳಿಗೆಗಾಗಿ ಮೀಸಲಿಟ್ಟ ಅನುದಾನವನ್ನು ಪಡೆಯಲು ಇಷ್ಟೊಂದು ಸರ್ಕಸ್ ಮಾಡಬೇಕಾಗಿರುವುದು ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಂ ಸಮುದಾಯದ ದುರಾವಸ್ಥೆ ಅಲ್ಲದೆ ಮತ್ತೇನು.? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ನೀಡಿದ ಕಿರುಸಾಲ, ಶ್ರಮಶಕ್ತಿಯ ರಿಕವರಿ ಬೇರೆ ಜಿಲ್ಲೆಗೆ ಹೋಲಿಸಿದರೆ ಅತ್ಯಂತ ಹೆಚ್ಚು. ಆದರೆ ಇಲ್ಲಿ ಸಾವಿರಾರು ಅರ್ಜಿಗಳೂ ಬಂದರೂ ಒಂದು ಎಂಎಲ್‍ಎ ಕ್ಷೇತ್ರದಲ್ಲಿ ಆಯ್ಕೆಯಾಗುವುದು 7ರಿಂದ 8 ಮಂದಿಗೆ ಮಾತ್ರ. ಇನ್ನು ಫಲಾನುಭವಿಗಳಾಗಿ ಆಯ್ಕೆಯಾದವರ ಖಾತೆಗೂ ದುಡ್ಡು ಹಾಕಲು ಅಧಿಕಾರಿ ವರ್ಗ ಮೀನಮೇಷ ಎಣಿಸುತ್ತಿದೆ.

ಅಲ್ಪಸಂಖ್ಯಾತ ಸಮುದಾಯ ಅದರಲ್ಲೂ ಮುಸ್ಲಿಂ ಸಮುದಾಯ ಹೋಲ್‍ಸೇಲ್ ಆಗಿ ಕಾಂಗ್ರೆಸ್ಸಿಗೆ ಮತ ಹಾಕಿ ಗೆಲ್ಲಿಸಿದರೂ ತಮ್ಮ ಸಮುದಾಯದ ಬಡವರು ಯೋಜನೆಯ ಲಾಭ ಪಡೆಯಲು ಭಿಕ್ಷುಕರ ರೀತಿ ಅಲೆದಾಡಬೇಕಿದೆ. ಕಠಿಣ ಕಾನೂನುಗಳನ್ನು ಅಧಿಕಾರಿಗಳು ರೂಪಿಸಿ ಮುಸ್ಲಿಂ ಸಮುದಾಯದ ಬಡವರ್ಗ ಯೋಜನೆಯ ಲಾಭ ಪಡೆಯದಂತೆ ತಡೆಹಿಡಿಯುವ ಹುನ್ನಾರ ಕೂಡ ಕೆಲವೊಂದು ಕಡೆ ನಡೆಯುತ್ತಿದೆ. ಮುಸ್ಲಿಂ ಸಂಘ ಸಂಸ್ಥೆಗಳು ಈ ಬಗ್ಗೆ ಮೌನವಾಗಿದೆ. ಮುಸ್ಲಿಂ ಸಮುದಾಯವನ್ನು ಸರಕಾರ ಈ ರೀತಿ ಕೆಣಕಿದರೆ ಒಂದಲ್ಲ ಒಂದು ದಿನ ಸಮುದಾಯ ಸರಕಾರದ ವಿರುದ್ಧ ತಿರುಗಿ ಬೀಳುವುದಂತೂ ಸತ್ಯ. ಸರಕಾರ ಅಧಿಕಾರಿ ವರ್ಗವನ್ನು ಇನ್ನಾದರೂ ಹದ್ದುಬಸ್ತಿನಲ್ಲಿಡಲಿ. ಯೋಜನೆಯ ಲಾಭ ಅಲ್ಪಸಂಖ್ಯಾತ ಸಮುದಾಯದ ಬಡವರ್ಗಕ್ಕೂ ತಲುಪಲಿ.
ಜಮೀರ್ ಸಾಹೇಬ್ರು ಮೌನ!
ಮುಖ್ಯಮಂತ್ರಿ ಸಿದ್ಧರಾಮಯ್ಯರು ಹಲವಾರು ಭಾಗ್ಯಗಳ ಮೂಲಕ ಜನಮನ್ನಣೆ ಪಡೆದವರು. ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳಿಗೆ ಹಲವಾರು ಅನುದಾನವನ್ನು ಮೀಸಲಿಟ್ಟಿದ್ದಾರೆ. ಅದರ ಜೊತೆಗೆ ಆ ಅನುದಾನ ಪಡೆಯಲು ಅಷ್ಟೊಂದು ಕಠಿಣ ನಿಯಮಗಳನ್ನು ಹೇರಲಾಗಿದೆ. ಸರಕಾರ ನಿಯಮಗಳಲ್ಲಿ ಸರಳೀಕೃತ ತಂದರೆ ಹಲವಾರು ಬಡ ಕುಟುಂಬಗಳಿಗೆ ಈ ಯೋಜನೆಯಿಂದ ಲಾಭವಾಗಬಹುದು.
ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಜಮೀರ್ ಅಹಮ್ಮದ್‍ರವರು ತಮ್ಮ ಇಲಾಖೆಯಲ್ಲಿ ಕಠಿಣ ನಿಯಮ ಹೇರಿ ಮುಸ್ಲಿಂ ಸಮುದಾಯ ಅನುದಾನದಿಂದ ವಂಚಿಸಲ್ಪಟ್ಟರೂ ಯಾಕೆ ಸುಮ್ಮನಿದ್ದಾರೆ.? ದಿನದಿನ ಅಧಿಕಾರಿಗಳು ಹೊಸ ಹೊಸ ಕಾನೂನುಗಳನ್ನು ತಂದು ಅಲ್ಪಸಂಖ್ಯಾತ ಸಮುದಾಯದ ಫಲಾನುಭವಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದರೂ ಯಾಕೆ ಮೌನವಾಗಿದ್ದಾರೆ. ತಮ್ಮ ಇಲಾಖೆಯ ಅಧೀನಕ್ಕೆ ಬರುವ ಕಿರುಸಾಲ, ಶ್ರಮಶಕ್ತಿ ಯೋಜನೆ ಸಮುದಾಯದ ಬಡವರ್ಗಕ್ಕೂ ತಲುಪುವಂತಹ ಕೆಲಸವನ್ನಾದರೂ ಮಾಡಿ ಪುಣ್ಯ ಕಟ್ಟಿಕೊಳ್ಳಿ.
