ಗಂಜಿಮಠ ಗ್ರಾಮ ಸಭೆ ನಿರ್ಣಯಕ್ಕೆ ಇಲ್ಲ ಬೆಲೆ; ಗ್ರಾಮಸ್ಥರಿಂದ ಜಿಲ್ಲಾಡಳಿತಕ್ಕೆ ದೂರು
ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ತೆಂಕುಳಿಪಾಡಿ ಗ್ರಾಮದ ಮಳಲಿಯಲ್ಲಿ ಆಣೆಕಟ್ಟಿನ ಬುಡದಲ್ಲೇ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅಣೆಕಟ್ಟಿನ ಸುರಕ್ಷತೆ ದೃಷ್ಟಿಯಿಂದ ತಕ್ಷಣ ಮರಳುಗಾರಿಕೆ ನಿಷೇಧಿಸುವಂತೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದಾರೆ.
ಗಂಜಿಮಠ ಪಂಚಾಯಿತಿ ಗ್ರಾಮ ಸಭೆಯಲ್ಲಿ ಈ ಬಗ್ಗೆ ಹಲವು ಬಾರಿ ವಿಷಯ ಪ್ರಸ್ತಾಪಗೊಂಡಿದ್ದವು. ಜನವರಿ 8 ರಂದು ಗ್ರಾಮ ಸಭೆಯಲ್ಲಿ ಮರಳುಗಾರಿಕೆ ನಿಷೇಧಿಸುವಂತೆ ನಿರ್ಣಯ ಕೂಡ ಮಾಡಲಾಗಿತ್ತು. ಆದರೆ ಅವೆಲ್ಲವೂ ಕಸದ ಬುಟ್ಟಿ ಸೇರಿದೆ.

ಇದೀಗ ಗ್ರಾಮಸ್ಥರು ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಆಯುಕ್ತರು, ಉಸ್ತುವಾರಿ ಸಚಿವರಿಗೆ ಈ ಬಗ್ಗೆ ದೂರು ನೀಡಿದ್ದಾರೆ.
ಸರಕಾರದಿಂದ ಮಂಜೂರಾದ 12.50 ಕೋಟಿ ರೂಪಾಯಿ ಅನುದಾನ ಹಾಗೂ ಕಾಮಗಾರಿ ವಿಳಂಬಕ್ಕೆ ನಂತರದಲ್ಲಿ ಪಡೆಯಲಾದ ಹೆಚ್ಚುವರಿ ಅನುದಾನದಿಂದ ಮಳಲಿ -ಪೊಳಲಿ ಸಂಪರ್ಕ ರಸ್ತೆ ಒಳಗೊಂಡಿರುವ ಅಣೆಕಟ್ಟು ನಿರ್ಮಿಸಲಾಗಿದೆ. ಯಾವುದೇ ಸೇತುವೆ ಅಥವಾ ಅಣೆಕಟ್ಟಿನಿಂದ 500 ಮೀಟರ್ ಅಂತರದಲ್ಲಿ ಮರಳುಗಾರಿಕೆ ಅಥವಾ ಇನ್ನಿತರ ನಿರ್ಮಾಣ ಚಟುವಟಿಕೆ ನಡೆಸಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮವಿದೆ.

ಇಲಾಖೆಯು ಈಗಾಗಲೇ ಗುರುತಿಸಿರುವ ಗಡಿ ಗುರುತು ಉಲ್ಲಂಘಿಸಿ ಅಣೆಕಟ್ಟಿನ ಎರಡೂ ಬದಿಗಳಲ್ಲಿ ಮರಳುಗಾರಿಕೆ ನಡೆಯುತ್ತಿದೆ. ನಿಯಮ ಉಲ್ಲಂಘಿಸಿ ಮರಳುಗಾರಿಕೆ ನಡೆಸುತ್ತಿರುವ ಪರಿಣಾಮ ಅಣೆಕಟ್ಟು ಡ್ಯಾಮೇಜ್ ಆಗಿ ಕುಸಿದುಬೀಳುವ ಸಾಧ್ಯತೆ ಇರುವುದಾಗಿ ಸಂಬಂಧ ಪಟ್ಟ ಪಟ್ಟ ಇಲಾಖೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಳಲಿ -ಪೊಳಲಿ ಅಣೆಕಟ್ಟಿನ ಬಳಿ ಅಕ್ರಮ ಮರಳುಗಾರಿಕೆ ನಿಷೇಧಿಸದಿದ್ದರೆ ಮೂಲರಪಟ್ನ, ಪೊಳಲಿ ಸೇತುವೆಗೆ ಬಂದೊಡಗಿದ ದುಸ್ಥಿತಿ ಬರುವುದರಲ್ಲಿ ಅನುಮಾನ ಇಲ್ಲ. ಇಲ್ಲಿನ ಗ್ರಾಮಸ್ಥರು ತೀವ್ರ ಆತಂಕಿತರಾಗಿದ್ದಾರೆ.
