BIG iMPACT ಮಳಲಿ ಅಣೆಕಟ್ಟಿನ ಬಳಿ ರೂಲ್ಸ್ ಬ್ರೇಕ್ ಮಾಡಿ ಅಕ್ರಮ ಮರಳುಗಾರಿಕೆ; ಸ್ಥಳಕ್ಕೆ ತಹಶೀಲ್ದಾರ್ ಭೇಟಿ, ಪರಿಶೀಲನೆ

ಕರಾವಳಿ

ನಿನ್ನೆಯಷ್ಟೇ ಸ್ಪೆಷಲ್ ನ್ಯೂಸ್ ಮೀಡಿಯಾ ಸಮಗ್ರ ವರದಿ ಪ್ರಕಟಿಸಿತ್ತು

ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ತೆಂಕುಳಿಪಾಡಿ ಗ್ರಾಮದ ಮಳಲಿಯಲ್ಲಿ ಅಣೆಕಟ್ಟಿನ ಬುಡದಲ್ಲೇ ಅಕ್ರಮ ಮರಳುಗಾರಿಕೆ ನಡೆಸಿ , ಅಣೆಕಟ್ಟು ಕುಸಿಯುವ ಭೀತಿ ಎದುರಾಗಿದ್ದು ಸ್ಥಳೀಯ ನಾಗರೀಕರು ಆತಂಕಕ್ಕೆ ಒಳಗಾಗಿದ್ದರು.

ಯಾವುದೇ ಸೇತುವೆ ಅಥವಾ ಅಣೆಕಟ್ಟಿನಿಂದ 500 ಮೀಟರ್ ಅಂತರದಲ್ಲಿ ಮರಳುಗಾರಿಕೆ ಅಥವಾ ಇನ್ನಿತರ ನಿರ್ಮಾಣ ಚಟುವಟಿಕೆ ನಡೆಸಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮವಿದೆ. ಇಲಾಖೆಯು ಈಗಾಗಲೇ ಗುರುತಿಸಿರುವ ಗಡಿ ಗುರುತು ಉಲ್ಲಂಘಿಸಿ ಅಣೆಕಟ್ಟಿನ ಎರಡೂ ಬದಿಗಳಲ್ಲಿ ಮರಳುಗಾರಿಕೆ ನಡೆಯುತ್ತಿದ್ದು ,ನಿಯಮ ಉಲ್ಲಂಘಿಸಿ ಮರಳುಗಾರಿಕೆ ನಡೆಸುತ್ತಿರುವ ಪರಿಣಾಮ ಅಣೆಕಟ್ಟು ಡ್ಯಾಮೇಜ್ ಆಗಿ ಕುಸಿದುಬೀಳುವ ಸಾಧ್ಯತೆ ಇತ್ತು.

ಈ ಬಗ್ಗೆ ನಿನ್ನೆಯಷ್ಟೇ
ಸ್ಪೆಷಲ್ ನ್ಯೂಸ್ ಮೀಡಿಯಾ ‘ಮಳಲಿ: ರೂಲ್ಸ್ ಬ್ರೇಕ್ ಮಾಡಿ ಅಕ್ರಮ ಮರಳುಗಾರಿಕೆ’ ನಡೆಸುವ ಬಗ್ಗೆ ಸಮಗ್ರ ವರದಿಯನ್ನು ಪ್ರಕಟಿಸಿತ್ತು. ಈ ಹಿಂದೆ ಗಂಜಿಮಠ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಅಕ್ರಮ ಮರಳುಗಾರಿಕೆ ನಿಷೇಧಿಸುವಂತೆ ನಿರ್ಣಯ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗೂ ದೂರು ನೀಡಿದ್ದರು.

ಸ್ಥಳೀಯ ಗ್ರಾಮಸ್ಥರ ಆತಂಕಕ್ಕೆ ಧ್ವನಿಯಾಗಿ ಸ್ಪೆಷಲ್ ನ್ಯೂಸ್ ಮೀಡಿಯಾ ಸಮಗ್ರ ವರದಿ ಪ್ರಕಟಿಸುತ್ತಿದ್ದಂತೆ ಎಚ್ಚೆತ್ತು ಕೊಂಡ ಕಂದಾಯ ಇಲಾಖೆ ಅಧಿಕಾರಿಗಳು ಇಂದು (10-11-2025) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮಂಗಳೂರು ತಹಶೀಲ್ದಾರ್ ಟಿ ರಮೇಶ್ ಬಾಬು ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧಪಟ್ಟ ಮರಳುಗಾರಿಕೆ ನಡೆಸುವವರಿಗೆ ಎಚ್ಚರಿಕೆ ನೀಡಿರುವುದಾಗಿ ತಿಳಿದುಬಂದಿದೆ. ಉಪತಹಸೀಲ್ದಾರ್ ಸ್ಟೀಫನ್, ಕಂದಾಯ ನಿರೀಕ್ಷಕ ಪೂರ್ಣಚಂದ್ರ ತೇಜಸ್ವಿ, ಗ್ರಾಮ ಆಡಳಿತ ಅಧಿಕಾರಿ ಮೆಹಬೂಬ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಮರಳುಗಾರಿಕೆ ನಡೆಸುವ ಅನುಮತಿ ಪಡೆದವರು ಗಡಿ ಗುರುತು ನಿಯಮ ಉಲ್ಲಂಘಿಸಿ ಮರಳುಗಾರಿಕೆ ನಡೆಸುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿದೆ.