ಕುಡುಪು ಬಳಿಯ 10.8 ಎಕರೆ ನಿರುಪಯೋಗಿ ಜಮೀನಿಗೆ ಹತ್ತಾರು ಕೋಟಿ ರೂ ಮೌಲ್ಯದ “ಟಿ.ಡಿ.ಆರ್ ನೀಡುವ ನಗರ ಪಾಲಿಕೆಯಿಂದ ಬಂದ ಫೈಲ್ ಕ್ಲಿಯರ್ ಮಾಡಲು ಮಂಗಳೂರು ” ಮುಡಾ” ಆಯುಕ್ತ ಮನ್ಸೂರ್ ಅಲಿ 25 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ನಗರದ ಶಾಸಕ ವೇದವ್ಯಾಸ ಕಾಮತ್ ಆಪ್ತ, ರಿಯಲ್ ಎಸ್ಟೇಟ್ ಲಾಭಿಯ ಗಿರಿಧರ್ ಶೆಟ್ಟಿ ನೀಡಿದ ದೂರಿನ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ಮನ್ಸೂರ್ ಅಲಿಯನ್ನು ಬಂಧಿಸಿದ ಸಂದರ್ಭ ಸಿಪಿಐಎಂ ಹಾಗೂ ಸಮಾನ ಮನಸ್ಕ ಸಂಘಟನೆಗಳು ಕುಡುಪು ಗ್ರಾಮದ ಜಮೀನಿಗೆ ಟಿ.ಡಿ.ಆರ್ ನೀಡಿರುವ ಪ್ರಕರಣವೇ ದೊಡ್ಡ ಹಗರಣ, ಭ್ರಷ್ಟಾಚಾರ, ನಿಯಮಗಳ ಉಲ್ಲಂಘನೆ ಎಂದು ಮಾಡಿದ್ದ ಆರೋಪ, ದೂರುಗಳು ನಿಜ ಎಂದು ಸಾಬೀತಾಗಿದೆ.
ಮಂಗಳೂರು “ಮುಡಾ” ನೂತನ ಆಯುಕ್ತರು ಕುಡುಪು ಜಮೀನಿಗೆ ಜಮೀನಿನ ಮಾಲಕರೇ ಅಲ್ಲದ, ಜಮೀನು ದಾಖಲೆಗಳಲ್ಲಿ ಹೆಸರೇ ಇಲ್ಲದ ಗಿರಿಧರ್ ಶೆಟ್ಟಿಗೆ ಟಿ.ಡಿ.ಆರ್ ನೀಡಲು ಒಪ್ಪಂದ ಮಾಡಿರುವುದು ನಿಯಮಗಳ ಉಲ್ಲಂಘನೆ ಎಂದು ಮಂಗಳೂರು ಪಾಲಿಕೆಗೆ ಪತ್ರ ಬರೆದಿದ್ದಾರೆ. ಗಿರಿಧರ್ ಶೆಟ್ಟಿ ಜಮೀನಿನ ಮಾಲಕ ಎಂಬುದಕ್ಕೆ ಬೇಕಾದ ದಾಖಲೆ ಒದಗಿಸುವಂತೆ ಕೇಳಿದ್ದಾರೆ.
ಹಾಗೆಯೆ, ರಾಜ್ಯ ಸರಕಾರಕ್ಕೆ ಪತ್ರ ಬರೆದು, ಕೃಷಿವಲಯಕ್ಕೆ ಬರುವ ಕುಡುಪು ಜಮೀನು ನಗರ ಪಾಲಿಕೆಗೆ ಘನ ತ್ಯಾಜ್ಯ ವಿಲೇವಾರಿಗಾಗಿ ಬಳಸಲು ಅವಕಾಶ ಇರುವುದಿಲ್ಲ, ಹಾಗೆಯೆ ಘನ ತ್ಯಾಜ್ಯ ಘಟಕದ ವಿಸ್ತರಣೆ ಉದ್ದೇಶಕ್ಕೆ ಜಮೀನು ಸ್ವಾಧೀನಕ್ಕೆ ಟಿ.ಡಿ.ಆರ್ ನೀಡಲು ನಿಯಮಗಳ ಅಡ್ಡಿ ಇದೆ ಎಂಬುದನ್ನು ಉಲ್ಲೇಖಿಸಿ ಈ ಕುರಿತು ಮಾರ್ಗದರ್ಶನ ಮಾಡುವಂತೆ ಕೋರಿದ್ದಾರೆ. ಈ ಮೂಲಕ ಕುಡುಪು ಗ್ರಾಮದ 10.8 ಎಕರೆ ನಿರುಪಯೋಗಿ ಜಮೀನಿಗೆ ಹತ್ತಾರು ಕೋಟಿ ಮೌಲ್ಯದ ಟಿ.ಡಿ.ಆರ್ ನೀಡುವ ಪ್ರಕ್ರಿಯೆ ದೊಡ್ಡ ಹಗರಣ, ಇದರಲ್ಲಿ ಭ್ರಷ್ಟಾಚಾರ ನಡೆದಿದೆ, ಶಾಸಕ ವೇದವ್ಯಾಸ ಕಾಮತರ ರಾಜಕೀಯ ಪ್ರಭಾವ ಇದರಲ್ಲಿ ಬಳಕೆಯಾಗಿದೆ ಎಂಬ ಆರೋಪ ಪ್ರಥಮ ಹಂತದಲ್ಲೆ ಸಾಬೀತಾಗಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕಿದ ಮೊದಲ ಗೆಲುವು. ರಾಜ್ಯ ಸರಕಾರ ಮುಡಾ ಆಯುಕ್ತರ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಈ ಟಿ.ಡಿ.ಆರ್ ನೀಡಿಕೆ ಒಪ್ಪಂದ ರದ್ದುಗೊಳಿಸಲು ಮಂಗಳೂರು ನಗರ ಪಾಲಿಕೆಗೆ ಆದೇಶಿಸಬೇಕು. ತಪ್ಪಿತಸ್ಥ ನಗರ ಪಾಲಿಕೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಪ್ರಕರಣದ ತನಿಖೆಗೆ ಆದೇಶಿಸಬೇಕು.

ಹಾಗೆಯೆ, ಈ ಫೈಲ್ ಕ್ಲಿಯರೆನ್ಸ್ ಗೆ ಲಂಚ ಕೇಳಿದ ಆರೋಪದಲ್ಲಿ ಮುಡಾ ಆಯುಕ್ತ ಮನ್ಸೂರ್ ಅಲಿ ಲೋಕಾಯುಕ್ತ ಪೊಲೀಸರಿಂದ (ಟಿ.ಡಿ.ಆರ್ ಹಗರಣದ ರೂವಾರಿ ಗಿರಿಧರ್ ಶೆಟ್ಟಿ ದೂರಿನ ಆಧಾರ) ಬಂಧನಕ್ಕೆ ಒಳಗಾದ (ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ) ಪ್ರಕರಣವನ್ನೂ ರಾಜ್ಯ ಸರಕಾರ ಸಮಗ್ರ ತನಿಖೆಗೆ ಒಳಪಡಿಸಬೇಕಿದೆ. ಇದೊಂದು ರಾಜಕೀಯ ಬಲದ ಆಳವಾದ ಪಿತೂರಿ ಪ್ರಕರಣ ಆಗಿರುವ ಎಲ್ಲಾ ಸಾಧ್ಯತೆ ಇದೆ. ಲಂಚದ ಬೇಡಿಕೆ ಇಟ್ಟಿದ್ದು ನಿಜ ಅಂತಾದರೆ ಆಯುಕ್ತರು ಶಿಕ್ಷೆ ಅನುಭವಿಸಲಿ, ಅದೇ ಸಂದರ್ಭ ನಗರದ ಸಂಪತ್ತನ್ನು ಹಣ, ರಾಜಕೀಯ ಪ್ರಭಾವ, ತೋಳ್ಬಲದ ಮೂಲಕ ನಿರ್ಭಯವಾಗಿ ಕಬಳಿಸುವ “ದೊಡ್ಡ ಕುಳಗಳೂ” ಕಾನೂನಿನ ರುಚಿ ನೋಡಲಿ.
