ನಾಗರೀಕರು ಸತತ ದೂರು ಕೊಟ್ಟರೂ ಕ್ರಮ ಕೈಗೊಳ್ಳದ ಅಧಿಕಾರಿಗಳು; ಅಕ್ರಮದ ಹಿಂದೆ ಗಣಿ ಇಲಾಖೆ, ಸ್ಥಳೀಯ ಪಂಚಾಯತ್ ಅಧಿಕಾರಿಗಳು ಶಾಮೀಲು ಶಂಕೆ.!
ಇನ್ನಾದರೂ ಕಂದಾವರ ಪದವಿನ ಜನತೆಯ ರೋಧನ ಇಲಾಖೆಯ ಕಿವಿಗೆ ಮುಟ್ಟಲಿ
ದುಡ್ಡಿನ ಬಲ, ಅಧಿಕಾರಿಗಳ ಬೆಂಬಲ ಇದ್ದರೆ ಕಾನೂನಿಗೆ ಮಣ್ಣೆರಚಿ ಅಕ್ರಮ ವಹಿವಾಟು ನಡೆಸಬಹುದು ಅನ್ನುವುದಕ್ಕೆ ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂದಾವರ ಪದವಿನಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಕೆಂಪು ಕಲ್ಲು ಗಣಿಗಾರಿಕೆಯೇ ಅಪ್ಪಟ ಸಾಕ್ಷಿ.
2023 ರಲ್ಲಿ ಸ್ಥಳೀಯ ನಾಗರಿಕರು ಕಂದಾವರ ಪದವಿನಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ಸಂಬಂಧ ಪಟ್ಟ ಇಲಾಖೆಗೆ, ಲೋಕಾಯುಕ್ತ ಇಲಾಖೆಗೆ ದೂರು ಸಲ್ಲಿಸಿದಾಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರ ಆದೇಶದಂತೆ 19-05-2023 ರಂದು ಕಂದಾಯ ಇಲಾಖೆಯ ಅಧಿಕಾರಿಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಭೂ ಮಾಪನ ಇಲಾಖೆಯ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ದಾಳಿ ನಡೆಸಿ ಕೆಂಪು ಕಲ್ಲು ಕೋರೆಯನ್ನು ಸೀಝ್ ಮಾಡಿದ್ದರು. ಕುರುಡು ಕಾಂಚಾಣದ ಮಸಲತ್ತೋ ಏನೋ ಸೀಝ್ ಆಗಿದ್ದ ಕೋರೆ ಅಷ್ಟೇ ವೇಗದಲ್ಲಿ ಓಪನ್ ಕೂಡ ಆಗಿತ್ತು.

ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂದಾವರ ಪದವಿನಲ್ಲಿ ಕಾರ್ಯಾಚರಿಸುತ್ತಿರುವ ಈ ಕೋರೆಯ ಜಾಗ ಮಹಿಳೆಯೊಬ್ಬರ ಹೆಸರಿನಲ್ಲಿದ್ದರೆ ಸೊಸೆಯ ಹೆಸರಿನಲ್ಲಿ ಜಿಪಿಎ ಮಾಡಲಾಗಿದೆಯಂತೆ. ವಿಪರ್ಯಾಸವೆಂದರೆ ಪರವಾನಿಗೆ ಪಡೆದಿರುವ ಸರ್ವೇ ನಂಬರೇ ಬೇರೆ, ಕೋರೆ ನಡೆಸುವ ಸ್ಥಳವೇ ಬೇರೆಯಂತೆ.!ಅಧಿಕಾರಿಗಳನ್ನೇ ಯಾಮಾರಿಸಿ, ಕಾನೂನಿಗೆ ಮಣ್ಣೆರಚಿ ಗಣಿಗಾರಿಕೆ ನಡೆಸಲಾಗುತ್ತಿದೆ ಎನ್ನುತ್ತಾರೆ ಇಲ್ಲಿನ ಸ್ಥಳಿಯರು.
ಕಂದಾವರ ಪದವಿನಲ್ಲಿ ಜನವಸತಿ ಪ್ರದೇಶದಲ್ಲೇ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ಸುತ್ತಮುತ್ತ ಐವತ್ತಕ್ಕೂ ಅಧಿಕ ಮನೆಗಳಿವೆ. ಕ್ರಷರ್ ಯಂತ್ರಗಳನ್ನು ಬಳಸಿ ಹಗಲು ರಾತ್ರಿ ಎನ್ನದೆ ಗಣಿಗಾರಿಕೆ ನಡೆಸುತ್ತಿದ್ದು, ಜನವಸತಿ ಪ್ರದೇಶವಾಗಿದ್ದರೂ ಸೂಕ್ತ ಸುರಕ್ಷತೆಯ ನಿಯಮಗಳನ್ನು ಪಾಲನೆ ಮಾಡದೆ ಬೃಹತ್ ಗಾತ್ರದ ವಾಹನ ಬಳಸಿ ಕೆಂಪು ಕಲ್ಲನ್ನು ಸಾಗಿಸಲಾಗುತ್ತಿದೆ. ಇಲ್ಲಿನ ಕ್ರಷರ್ ನಿಂದ ಹೊರಬರುವ ಧೂಳಿನಿಂದ ಸ್ಥಳೀಯ ನಿವಾಸಿಗಳು ಅದರಲ್ಲೂ ಮುಖ್ಯವಾಗಿ ಮಕ್ಕಳು, ವಯೋವೃದ್ಧರು, ಗರ್ಭಿಣಿ ಮಹಿಳೆಯರು ಶ್ವಾಸಕೋಶ ಸಂಬಂಧಿಸಿದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಪರಿಸರದಲ್ಲಿ ಗಣಿಗಾರಿಕೆಯ ಯಂತ್ರದಿಂದ ಹೊರಬರುವ ಶಬ್ದದಿಂದ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಗಿ ಕಲಿಕೆಗೆ ಬಹಳ ತೊಂದರೆ ಹಾಗೂ ಆರೋಗ್ಯದಲ್ಲೂ ವ್ಯತ್ಯಾಸವಾಗುತ್ತಿದೆ. ಮಾತ್ರವಲ್ಲದೆ ಪರಿಸರ ಮಾಲೀನ್ಯವಾಗುತ್ತಿದೆ. ಗ್ರಾಮಸ್ಥರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಗಣಿಗಾರಿಕೆ ನಿಲ್ಲಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ವಿಚಿತ್ರವೆಂದರೆ ಇಲ್ಲಿನ ನಾಗರಿಕರ ಸತತ ದೂರುಗಳು ಇದ್ದರೂ ಗಣಿ ಇಲಾಖೆ ಕೋರೆ ನಡೆಸಲು ಅನುಮತಿ ನೀಡಿದೆ. ಆರು ತಿಂಗಳ ಅವಧಿಗೆ ಪಡೆದಿದ್ದ ಪರವಾನಿಗೆ ಇದೇ ನವೆಂಬರ್ 8 ಕ್ಕೆ ಮುಗಿದಿದ್ದರೂ ಗಣಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಜಾಣ ಕುರುಡು ಪ್ರದರ್ಶಿಸಿದೆ. ಈ ಅಕ್ರಮದಲ್ಲಿ ಅಧಿಕಾರಿಯೊಬ್ಬರ ಶಾಮಿಲಾತಿ ಇದೆ ಎಂದು ನಾಗರಿಕರು ದೂರುತ್ತಿದ್ದಾರೆ. ಇದು ಕಾಂಚಾಣದ ಮಹಿಮೆ ಅಲ್ಲದೇ ಮತ್ತೇನು.?

ಕಂದಾವರ ಪದವಿನಲ್ಲಿ ಕಾರ್ಯಾಚರಿಸುವ ಅಕ್ರಮ ಗಣಿಗಾರಿಕೆ ವಿರುದ್ಧ ಇಲ್ಲಿನ ನಾಗರೀಕರು ಸಂಬಂಧಪಟ್ಟ ಇಲಾಖೆಗೆ ಸತತ ದೂರು ನೀಡಿದರೂ ಯಾವುದೇ ಪ್ರಯೋಜನವಾಗದೇ ಇದ್ದಾಗ ದಿನಾಂಕ 26-08-2025 ರಂದು ಸ್ಥಳೀಯ ನಾಗರಿಕರು ನ್ಯಾಯಾಲಯದ ಮೊರೆ ಹೋಗಿ ವಕೀಲರ ಮುಖಾಂತರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನೋಟಿಸ್ ಇಶ್ಯೂ ಮಾಡಿದ್ದು, ಆದರೆ ಈ ಇಲಾಖೆ ನೋಟಿಸ್ ಗೂ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಈ ಮೊದಲು ದಿನಾಂಕ 13-08-2025 ರಂದು ಇಲ್ಲಿನ ನಾಗರೀಕರು ಒಂದಾಗಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಪಿಐಎಲ್ (wp 25228/2025) ಸಲ್ಲಿಸಿದ್ದು ತೀರ್ಪು ಇನ್ನೂ ಬಂದಿಲ್ಲ. ಮುಂದಿನ ತಿಂಗಳು ಡಿಸೆಂಬರ್ 4 ಕ್ಕೆ ಹಿಯರಿಂಗ್ ಕೂಡ ಇದೆ.
ಇಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಕೋರೆ ವಿರುದ್ಧ ಸ್ಥಳೀಯರು ಹಲವಾರು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಗೆ ಮನವಿ ನೀಡುತ್ತಿದ್ದರೂ ಇಲಾಖೆಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತಿಲ್ಲ. ದಿನಾಂಕ 13-03-2023 ರಂದು ಸ್ಥಳೀಯರು ಅಕ್ರಮ ಗಣಿಗಾರಿಕೆ ವಿರುದ್ಧ ಪರಿಸರ ಮತ್ತು ವಾಯು ಮಾಲಿನ್ಯ ನಿಯಂತ್ರಣ ಮಂಡಳಿಗೆ ಪರಿಶೀಲನೆ ನಡೆಸುವಂತೆ ದೂರು ಕೊಟ್ಟರೂ ಅಧಿಕಾರಿಗಳು ಈವರೆಗೂ ಇತ್ತ ಮುಖನೇ ಮಾಡಿಲ್ಲ. ಜನರ ಸಮಸ್ಯೆಗೆ ಸ್ಪಂದಿಸದ ಇಂತಹ ಇಲಾಖೆ ಇರುವುದು ಯಾವ ಪುರುಷಾರ್ಥಕ್ಕೆ? ಕೇವಲ ದೊಡ್ಡವರ ಡೀಲ್ ನಡೆಸಲು ಮಾತ್ರ ಇರುವುದಾ..?ಎಂದು ಪ್ರಶ್ನಿಸುತ್ತಾರೆ ಇಲ್ಲಿನ ನಾಗರಿಕರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಂತೂ ಕುರುಡು ಕಾಂಚಾಣದ ಹಿಂದೆ ಹೋಗಿದೆ. ಇನ್ನು ಸ್ಥಳೀಯ ಗ್ರಾಮ ಪಂಚಾಯತ್ ಕೆಲ ಅಧಿಕಾರಿಗಳು ಹಾಗೂ ಕೆಲವೇ ಮಂದಿ ಸದಸ್ಯರು ಅಕ್ರಮದ ಪರ ವಕಾಲತ್ತು ವಹಿಸಿ ಜನಸಾಮಾನ್ಯರಿಗೆ ಉಂಡೆನಾಮ ಹಾಕಿದ್ದಾರಂತೆ. ಪ್ರಭಾವಿ ವ್ಯಕ್ತಿಗಳು ಗಣಿಗಾರಿಕೆ ನಡೆಸುತ್ತಿರುವುದರಿಂದ ಸ್ಥಳೀಯ ಪಂಚಾಯತ್ ಮತ್ತು ಕೆಲವು ನಾ(ಲಾ)ಯಕರು ಅವರೊಂದಿಗೆ ಶಾಮೀಲಾಗಿದ್ದಾರೆ ಎನ್ನುತ್ತಿದ್ದಾರೆ ಇಲ್ಲಿನ ನಿವಾಸಿಗಳು. ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿಯೆತ್ತಿದರೆ ತಮ್ಮ ಪಟಾಲಂ ಮೂಲಕ ಗೂಂಡಾಗಿರಿ, ಧಮ್ಕಿ ಹಾಕುವ ಕೆಲಸ ಇಲ್ಲಿ ನಡೆಯುತ್ತಿದೆಯಂತೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿರುವ ಪರವಾನಿಗೆಯನ್ನು ದುರ್ಬಳಕೆ ಮಾಡಿಕೊಂಡು ಗಡಿ ಗುರುತು ಮೀರಿ ಜನವಸತಿ ಪ್ರದೇಶಗಳಲ್ಲಿ ಕೆಂಪು ಕಲ್ಲಿನ ಕೋರೆ ನಡೆಸಲಾಗುತ್ತಿದೆ. ಇಲ್ಲಿನ ಸಾರ್ವಜನಿಕರು ಹೈರಣಾಗಿದ್ದಾರೆ.
ಇಲ್ಲಿನ ನಾಗರಿಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಲವು ಬಾರಿ ದೂರು ನೀಡಿದ್ದರೂ ಇಲಾಖೆ ಮಾತ್ರ ಪರವಾನಿಗೆ ನವೀಕರಣ ಮಾಡಿ ಅಕ್ರಮಕ್ಕೆ ಸಾಥ್ ಕೊಡುತ್ತಿದೆ. ದಿನಾಂಕ 11-11-2025 ರಂದು ಸಾರ್ವಜನಿಕರು ಗಣಿ ಇಲಾಖೆಗೆ ಮತ್ತೊಮ್ಮೆ ದೂರು ಹಾಗೂ ಹೈಕೋರ್ಟ್ ಪಿಐಎಲ್ ಪ್ರತಿ ನೀಡಿದರೂ ಗಣಿ ಇಲಾಖೆಯ ಕೆಲವು ಅಧಿಕಾರಿಗಳು ಅಕ್ರಮ ನಡೆಸುವವರ ಜೊತೆ ಗಳಸ್ಯ-ಕಂಠಸ್ಯ ಸಂಬಂಧ ಬೆಳೆಸಿ ಪರವಾನಿಗೆ ನೀಡುತ್ತಿದ್ದಾರೆ ಎಂದು ಇಲ್ಲಿನ ನೊಂದ ನಾಗರಿಕರು ದೂರುತ್ತಿದ್ದಾರೆ.
ಇನ್ನಾದರೂ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಂದಾವರ ಪದವಿನ ನಿವಾಸಿಗಳ ಗೋಳು ಕೇಳುವಂತಾಗಲಿ. ಪರವಾನಿಗೆ ಮುಗಿದಿದ್ದರೂ ರಾಜಾರೋಷವಾಗಿ ತಲೆ ಎತ್ತಿರುವ ಅಕ್ರಮ ಗಣಿಗಾರಿಕೆಯನ್ನು ಮುಚ್ಚಲಿ.
