ರಾಜಧನ ಇಳಿಸಿದ್ರೂ ಕಲ್ಲಿನ ದರದಲ್ಲಿ ಇಳಿಕೆಯಾಗಿಲ್ಲ.. 26 ರೂ. ಇದ್ದ ಕಲ್ಲಿನ ದರ ಈಗ 45 ರೂ. ಆಗಿದ್ದೇಗೆ.!
ದಕ್ಷಿಣ ಕನ್ನಡ ಜಿಲ್ಲೆಗೆ ನೂತನ ಕಮೀಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ, ಎಸ್ಪಿಯಾಗಿ ಡಾ. ಅರುಣ್ ಕೆ. ಎಂಟ್ರಿಯಾಗುತ್ತಿದ್ದಂತೆ ಅಕ್ರಮವಾಗಿ ನಡೆಯುತ್ತಿದ್ದ ಕೆಂಪು ಕಲ್ಲು ಕ್ವಾರಿ ಬಾಗಿಲು ಬಂದಾಗಿತ್ತು. ಈ ನಡುವೆ ರಾಜ್ಯ ಸರಕಾರ ರಾಜಧನ ದುಬಾರಿ ವಿಧಿಸಿದ ಪರಿಣಾಮ ಅಧಿಕೃತ ಪರವಾನಿಗೆ ಪಡೆದಿದ್ದ ಕಲ್ಲು ಕ್ವಾರಿ ಗಳು ಕೂಡ ವಹಿವಾಟು ನಿಲ್ಲಿಸಿತ್ತು. ಇದರ ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಸಂಪೂರ್ಣ ಬ್ರೇಕ್ ಬಿದ್ದಿತ್ತು.
ಜಿಲ್ಲೆಯಲ್ಲಿ ಮರಳು, ಕೆಂಪು ಕಲ್ಲು ಬಂದ್ ಆಗಿ ನಿರ್ಮಾಣ ಕಾಮಗಾರಿ ಜೊತೆಗೆ ಆರ್ಥಿಕ ಚಟುವಟಿಕೆಗಳಿಗೆ ದೊಡ್ಡ ಹೊಡೆತ ಬಿದ್ದ ಪರಿಣಾಮ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಿಯೋಗ ಪ್ರತ್ಯೇಕ ಪ್ರತ್ಯೇಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಭೇಟಿಯಾಗಿ ರಾಜಧನ ಕಡಿತಗೊಳಿಸುವಂತೆ ಬೇಡಿಕೆ ಇಟ್ಟಿದ್ದವು. ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಬೃಹತ್ ಪ್ರತಿಭಟನಾ ಹೋರಾಟವನ್ನು ಹಮ್ಮಿಕೊಂಡಿತ್ತು. ಕೆಂಪು ಕಲ್ಲು ಮಾಲೀಕರ ಜೊತೆ ಅಧಿಕಾರಿಗಳು, ಸರಕಾರದ ಪ್ರತಿನಿಧಿಗಳು ಹಲವು ಸುತ್ತಿನ ಮಾತುಕತೆಗಳನ್ನು ಕೂಡ ನಡೆಸಿದ್ದರು. ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೆ ಹೊಡೆತ, ನಿರ್ಮಾಣ ಕಾಮಗಾರಿ, ಹಲವು ಕುಟುಂಬಗಳ ಆಧಾರವಾಗಿದ್ದ ಕೆಂಪು ಕಲ್ಲು ಗಣಿಗಾರಿಕೆ ಆರಂಭಕ್ಕೆ ಸಾರ್ವಜನಿಕರು ಕೂಡ ಸರಕಾರವನ್ನು ಒತ್ತಾಯಿಸಿದ್ದರು.

ಕೊನೆಗೆ ಸರಕಾರ ರಾಜಧನ ದುಬಾರಿ ಇದೆ ಎಂಬ ಬೇಡಿಕೆಯ ಹಿನ್ನೆಲೆಯಲ್ಲಿ ಟನ್ ಗೆ 295 ರೂಪಾಯಿ ಇದ್ದ ರಾಜಧನವನ್ನು 100 ರೂಪಾಯಿಗೆ ಸೀಮಿತಗೊಳಿಸಿದೆ. ಶೇಕಡಾ 60 ರಷ್ಟು ರಾಜಧನ ಇಳಿಕೆಯಾಗಿತ್ತು. ರಾಜಧನ ಇಳಿಕೆಯಾದರೂ ಕಲ್ಲಿನ ಬೆಲೆ ಈಗಲೂ ದುಬಾರಿ ಇರುವುದು ವಿಪರ್ಯಾಸವೇ ಸರಿ.
ಪೆಟ್ರೋಲ್ ,ಡೀಸಲ್ ಗೆ ಬೆಲೆ ಏರಿಕೆ ಆದಾಗ ವಾಹನದವರು ದರ ಏರಿಸುತ್ತಾರೆ. ಆದರೆ ಇಂಧನದ ಬೆಲೆ ಇಳಿಕೆಯಾದಾಗ ಟಿಕೆಟ್ ದರ ಕಡಿಮೆ ಮಾಡುವ ಗೋಜಿಗೆ ಹೋಗುವುದಿಲ್ಲ. ಇದೊಂದು ಅಧಿಕೃತವಾಗಿ ನಡೆಯುವ ಹಗಲು ದರೋಡೆ. ಅದೇ ರೀತಿ ಇದೀಗ ಕೆಂಪು ಕಲ್ಲು ಕ್ವಾರಿ ಮಾಲೀಕರು ಸರಕಾರ ರಾಜಧನ ಇಳಿಸಿದರೂ ಕಲ್ಲಿನ ಬೆಲೆ ಇಳಿಸದೇ ಜನರನ್ನು ದೋಚುತ್ತಿದೆ. ಇಂದಿನ ಕಾಲದಲ್ಲಿ ಮನೆ ಕಟ್ಟುವುದೇ ಕಷ್ಟದ ಕೆಲಸ. ಅಂತಹ ಸಮಯದಲ್ಲೂ ಸಿಕ್ಕಿದ್ದು ಸೀರುಂಡೆ ಅನ್ನುವಂತೆ ಕಲ್ಲು ಕ್ವಾರಿ ಮಾಲೀಕರು ದುಪ್ಪಟ್ಟು ದರ ದೋಚುವ ದಂಧೆಯಲ್ಲಿ ನಿರತರಾಗಿದ್ದಾರೆ. ಬಡವರ ಕನಸಿಗೆ ಕೊಳ್ಳಿ ಇಡುತ್ತಿದೆ.

ಇದ್ಯಾವ ನ್ಯಾಯ ಸ್ವಾಮಿ.? ಕೆಂಪು ಕಲ್ಲು ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಒಂದು ಕಲ್ಲು ದರ 26 ರೂಪಾಯಿ ಇತ್ತು .ಇದೀಗ ಅಕ್ರಮ ಹೋಗಿ ಸಕ್ರಮವಾದರೂ, ಸರಕಾರ ರಾಜಧನ ಇಳಿಸಿದ ನಂತರವೂ ಒಂದು ಕಲ್ಲಿಗೆ 45 ರಿಂದ 50 ರೂಪಾಯಿ ಆಸುಪಾಸು ದರ ವಿಧಿಸಲಾಗುತ್ತದೆ. ಈ ಬಗ್ಗೆ ನಿಯಂತ್ರಣ ಏಕಿಲ್ಲ.? ಇದು ಅನ್ಯಾಯ ಅಲ್ಲವೇ.? ಕೆಂಪು ಕಲ್ಲು ಬಂದ್ ಆದುದರಿಂದ ಲಾಭ ಮಾಲೀಕರಿಗೆ ಆಗಿದೆ. ಸ್ವತಃ ಕಲ್ಲಿನ ಕೋರೆ ಅವರೇ ಒಂದು ಕಲ್ಲಿಗೆ 35 ರೂಪಾಯಿ ವಿಧಿಸುತ್ತಿದ್ದಾರೆ. ಲೋಡಿಂಗ್ -ಆನ್ ಲೋಡಿಂಗ್ 4 ರೂಪಾಯಿ, ಬಾಡಿಗೆ 6 ರೂಪಾಯಿ ಹೀಗೆ ಅಂದಾಜು ಒಂದು ಕಲ್ಲಿಗೆ 45 ರೂಪಾಯಿ ತಗಲುತ್ತಿದೆ. ಲೋಡಿಂಗ್ -ಆನ್ ಲೋಡಿಂಗ್, ಬಾಡಿಗೆದಾರರು ಈ ಹಿಂದೆ ಇದ್ದ ಚಾರ್ಜ್ ದರವನ್ನೇ ವಸೂಲಿ ಮಾಡಿದರೆ, ಕಲ್ಲಿನ ಕ್ವಾರಿಯವರು ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ. ಕೂಲಿ ಕಾರ್ಮಿಕರಿಗೆ ಕ್ವಾರಿಯಲ್ಲಿ ಸಂಬಳ ಜಾಸ್ತಿಯಾಗಿಲ್ಲ. ಕ್ವಾರಿ ಮಾಲೀಕರಿಗೆ ಮಾತ್ರ ಬಂಪರ್ ಲಾಟ್ರಿ.!
ಪೊಲೀಸ್ ಇಲಾಖೆ, ಗಣಿ ಇಲಾಖೆ ಅಕ್ರಮ ಕಲ್ಲು ಕ್ವಾರಿ ಮೇಲೆ ಕ್ರಮ ಕೈಗೊಳ್ಳುತ್ತಾರೆ ಒಪ್ಪೋಣ. ಅಧಿಕೃತ ಪರವಾನಿಗೆ ಪಡೆದು ದುಪ್ಪಟ್ಟು ದರ ವಸೂಲಿ ಮಾಡಿ ಜನರನ್ನು ಸುಲಿಗೆ ಮಾಡುತ್ತಿರುವ ಕೆಂಪು ಕಲ್ಲು ಕ್ವಾರಿ ಗಳ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಗಣಿ ಇಲಾಖೆ, ಜಿಲ್ಲಾಡಳಿತ ಇನ್ನಾದರೂ ವೈಜ್ಞಾನಿಕ ರೀತಿಯ ದರವನ್ನು ಅಧಿಕೃತವಾಗಿ ಘೋಷಿಸಲಿ. ಇಲ್ಲವಾದರೆ ಹಗಲು ದರೋಡೆಗೆ ಕಡಿವಾಣ ಹಾಕಲು ಸಾಧ್ಯವಿಲ್ಲ.

ಕೆಂಪು ಕಲ್ಲು ಗಣಿಗಾರಿಕೆಗೆ ಬೀಗ ಬಿದ್ದಾಗ ಬೀದಿಗಿಳಿದಿದ್ದ ವಿರೋಧ ಪಕ್ಷ ಬಿಜೆಪಿ ಪಿಕ್ಕಾಸು , ಹಾರೆ, ಬಟ್ಟಿ ಪ್ರದರ್ಶಿಸಿ ಬೃಹತ್ ಜನಾಂದೋಲನ ನಡೆಸಿತ್ತು. ಇದೀಗ ಕೆಂಪು ಕಲ್ಲು ಗಣಿಗಾರಿಕೆ ಆರಂಭವಾಗಿ ಜನರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದರೂ ಮೌನಕ್ಕೆ ಜಾರಿದೆ. ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಕೆಂಪು ಕಲ್ಲು ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ. ಇತರ ಘಟಾನುಘಟಿ ಕಾಂಗ್ರೆಸ್ ನಾಯಕರು ಈ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಕೆಂಪು ಕಲ್ಲು ಗಣಿಗಾರಿಕೆ ನಡೆಸುವವರು ಜನಸಾಮಾನ್ಯರಿಂದ ಲೂಟಿ ಮಾಡುತ್ತಿದ್ದರೂ ಬಿಜೆಪಿ ಯಾಕೆ ಮೌನಕ್ಕೆ ಶರಣಾಗಿದೆ. ಬಿಜೆಪಿಯ ಪ್ರತಿಭಟನೆ ಮಾಲೀಕರ ಪರವೇ.? ತಮ್ಮದೇ ಪಕ್ಷದ ಘಟಾನುಘಟಿ ನಾಯಕರೊಬ್ಬರು ದುಪ್ಪಟ್ಟು ದರ ವಿಧಿಸುತ್ತಿದ್ದರೂ ಮಾತೇ ಆಡುತ್ತಿಲ್ಲ.
ಜಿಲ್ಲಾಡಳಿತ, ಗಣಿ ಇಲಾಖೆ ಇನ್ನಾದರೂ ಕೆಂಪು ಕಲ್ಲು ದರ ಪಟ್ಟಿ ಬಿಡುಗಡೆಗೊಳಿಸಬೇಕಿದೆ. ವೈಜ್ಞಾನಿಕ ದರ ನಿಗದಿಪಡಿಸಬೇಕಿದೆ. ದುಪ್ಪಟ್ಟು ದರ ವಿಧಿಸುವ ಕೆಂಪು ಕಲ್ಲು ಕ್ವಾರಿ ನಡೆಸುವವರ ಪರವಾನಿಗೆ ರದ್ದು ಪಡಿಸಬೇಕಿದೆ. ಸರಕಾರ ತರುವ ಕಾನೂನುಗಳು ಜನಸಾಮಾನ್ಯರ ಪರವಾಗಿರಬೇಕೇ ಹೊರತು ಧಣಿಗಳ ಪರವಾಗಿರಬಾರದು. ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆ ಹೆಸರಿನಲ್ಲಿ ನಡೆಯುತ್ತಿರುವ ಹಗಲು ದರೋಡೆಗೆ ಅಂಕುಶ ಹಾಕುವ ಕೆಲಸ ಅಧಿಕಾರಿ ವರ್ಗ ಮಾಡಬೇಕಿದೆ.
