ಮಂಗಳೂರು: ಗಣಿ ಇಲಾಖೆಯಲ್ಲಿ ದಪ್ಪ ಚರ್ಮದ, ದರ್ಪದ ಅಧಿಕಾರಿಗಳದ್ದೇ ಅಂಧ ದರ್ಬಾರು.!

ಕರಾವಳಿ

ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಆಟಾಟೋಪಗಳನ್ನು ಬರೆಯುತ್ತಾ ಹೋದರೆ ಅದು ಕಾದಂಬರಿಯಾದೀತು. ಲಂಚಬಾಕರ ಸ್ವರ್ಗ ಅಂದರೆ ತಪ್ಪಲ್ಲ. ಎಲ್ಲಾ ಧೋ ನಂಬರ್ ದಂಧೆಕೋರರಿಗೆ ಆಸ್ಥಾನ ಕೂಡ ಹೌದು. ಅದರಲ್ಲೂ ಗಣಿ ಇಲಾಖೆಯ ಲಂಚಬಾಕತನ ಡಿಫರೆಂಟ್. ಜಿಲ್ಲೆಯ ಗಣಿಯಲ್ಲಿರುವ ಖನೀಜಗಳನ್ನು ತೋಡಿ,ತೋಡಿ ಸಕತ್ತಾಗಿ ಮುಕ್ಕುವ ಕೆಲವು ಅಧಿಕಾರಿಗಳು.

ಜಿಲ್ಲೆಯ ಹೊಯಿಗೆ, ಕಪ್ಪು, ಕೆಂಪು ಕಲ್ಲು ಕ್ವಾರಿ ಆರಂಭಿಸಲು ಕೆಲವೊಂದು ನೀತಿ ನಿಯಮಗಳಿವೆ. ಆದರೆ ಇಲ್ಲಿಯ ಅಧಿಕಾರಿಗಳಿಗೆ ಕೈ ಬೆಚ್ಚ ಮಾಡಿದರೆ ಯಾವುದೇ ರೂಲ್ಸ್ ಇಲ್ಲಿ ಮಾಯ. ಎಲ್ಲವೂ ಅನಧಿಕೃತವಾಗಿ ನಡೆಯುತ್ತದೆ. ತಿಂಗಳಿಗೆ ಇಂತಿಷ್ಟು ಮಾಮೂಲು ಕೊಟ್ಟರೆ ಇಲ್ಲಿ ಅನಧಿಕೃತ ಎಲ್ಲವೂ ಅಧಿಕೃತವಾಗಿ ನಡೆಯುತ್ತದೆ. ಸಾರ್ವಜನಿಕರ ದೂರು ಬಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಇನ್ನು ಇಲ್ಲಿನ ಮಾಹಿತಿ ನೀಡುವ ಅಧಿಕಾರಿಯೊಬ್ಬನಿದ್ದಾನೆ. ಆತನದ್ದು ಅಂಧ ದರ್ಬಾರು.! ಜಿಲ್ಲೆಯನ್ನೆ ನಾಶ ಮಾಡಲು ಹೊರಟು, ಸಾರ್ವಜನಿಕರಿಗೆ ಕಾಟ ಕೊಡುವ ಕಾಡಪ್ಪನಂತೆ.! ಸಾರ್ವಜನಿಕರು ಯಾರಾದರೂ ಮಾಹಿತಿ ಕೇಳಿ ಬಂದರೆ ದರ್ಪದಿಂದ ನಡೆದುಕೊಳ್ಳುತ್ತಾನೆ. ಸಣ್ಣ ಸಣ್ಣ ವಿಷಯಕ್ಕೂ ಡಿಸಿ ಬಳಿ ಹೋಗಿ ಅನ್ನುವ ದರ್ಪದ ಉತ್ತರ ಈತನದ್ದು. ಯಾವುದೋ ಜಿಲ್ಲೆಯಿಂದ ಬುದ್ದಿವಂತರ ಜಿಲ್ಲೆಗೆ ವಕ್ಕರಿಸಿ ಬಂದ ಈ ಅಧಿಕಾರಿ ಇಲ್ಲಿ ಪರ್ಮನೆಂಟಾಗಿ ಗೂಟ ಹೊಡೆದಿದ್ದಾರೆ. ಯಾರೂ ಕೇಳುವವರೇ ಇಲ್ಲ. ಅನಧಿಕೃತ ಕೆಲಸಕ್ಕೆಲ್ಲ ಈತನೇ ಬಾಸ್. ಮೇಲಾಧಿಕಾರಿಗಳು ಲೆಕ್ಕಕ್ಕೆ ಇಲ್ಲ. ಇಂತಹ ದರ್ಪದ ಅಧಿಕಾರಿಗಳನ್ನು ಇಲ್ಲಿಂದ ವರ್ಗಾವಣೆ ಮಾಡಿದರಷ್ಟೇ ಈ ಗಣಿ ಇಲಾಖೆ ಉದ್ಧಾರವಾಗಬಹುದು.

ಸರಕಾರಕ್ಕೆ ಸಾಕಷ್ಟು ಆದಾಯ ತರುವ ಗಣಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವೊಂದು ದಪ್ಪ ಚರ್ಮದ ಅಧಿಕಾರಿಗಳ ಕೈ ವಶದಲ್ಲಿದೆ. ಮಾಮೂಲಿಗೆ ಕೈ ಯೊಡ್ಡಿ ತಾವು ಭಕಾಸುರರಾಗುತ್ತಿದ್ದಾರೆಯೇ ಹೊರತು ಸರಕಾರದ ಆದಾಯಕ್ಕೆ ಕನ್ನ ಹಾಕುತ್ತಿದ್ದಾರೆ. ಇಲ್ಲಿ ಸರಕಾರಿ ನೌಕರ ಯಾರು.? ಎಂದು ಚಿಮಣಿ ದೀಪ ಹಿಡಿದು ಹುಡುಕಬೇಕು, ಕಾರಣ ಒಬ್ಬನೇ ಒಬ್ಬ ಅಧಿಕಾರಿಯ ಗುರುತು ಹಿಡಿಯಲು ಯಾರಲ್ಲೂ ಐಡೆಂಟಿ ಕಾರ್ಡ್ (ಗುರುತು ಪತ್ರ) ಕೊರಳಿಗೆ ಬಿಗಿಯಲಿಲ್ಲ.! ನೌಕರನ ಕುರ್ಚಿಯಲ್ಲಿ ಮಾಫಿಯಾ ಕುಳಗಳು.! ಮಾನ್ಯ ಗಣಿ ಇಲಾಖೆಯ ಸಚಿವರು, ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಜಿಲ್ಲೆಯ ಗಣಿ ಇಲಾಖೆಗೆ ಸಮರ್ಥ, ಪ್ರಾಮಾಣಿಕರನ್ನು ತರುವ ಪ್ರಯತ್ನ ಮಾಡಬೇಕಿದೆ. ಉಂಡಾಡಿಗುಂಡರನ್ನು ಎತ್ತಂಗಡಿ ಮಾಡಬೇಕಾಗಿದೆ.