14 ವರ್ಷಗಳಿಂದ ದಂಡ ಕಟ್ಟಲು ಸಾಧ್ಯವಾಗದೇ, ಕಾರಾಗೃಹದಲ್ಲಿ ಬಂಧಿಯಾಗಿದ್ದ ಬಿಜಾಪುರದ ಖೈದಿಗೆ ನೆರವಾದ ಮಂಗಳೂರಿನ ಸಮಾಜಸೇವಕ

ಕರಾವಳಿ

ಜೈಲೇ ಶಾಶ್ವತ ಎಂದು ನಂಬಿ ಕೂತಿದ್ದ ಅಪರಾಧಿಯ ಬಾಳಿಗೆ ಬೆಳಕಾಗಿ ಬಂದ ಮಂಗಳೂರಿನ ಗಿರೀಶ್ ಕೊಟ್ಟಾರಿಯ ಮಾನವೀಯ ಕಾಳಜಿಗೆ ವ್ಯಾಪಕ ಶ್ಲಾಘನೆ

ಕಳೆದ ಹದಿನಾಲ್ಕು ವರ್ಷಗಳಿಂದ ಕಾರಾಗೃಹದಲ್ಲಿ ಬಂಧಿಯಾಗಿರುವ ಖೈದಿ. ಬಿಡುಗಡೆಯ ಭಾಗ್ಯವಿದ್ದರೂ ದಂಡದ ಹಣ ಕಟ್ಟಲಾಗದೆ ಜೈಲು ಕಂಬಿಯನ್ನೇ ಎಣಿಸಬೇಕಾದ ದುಸ್ಥಿತಿ. ಕುಟುಂಬಸ್ಥರು ಯಾರೂ ಈ ಖೈದಿಯ ನೆರವಿಗೆ ಬಾರದೇ ಇದ್ದುದರಿಂದ ಜೈಲೇ ಶಾಶ್ವತ ಎಂದು ನಂಬಿ ಕೂತಿದ್ದ ಬಿಜಾಪುರದ ಅಪರಾಧಿಯ ಬಾಳಿಗೆ ಬೆಳಕಾಗಿ ಬಂದಿದ್ದು ಮಂಗಳೂರಿನ ಸಮಾಜ ಸೇವಕ. ಎಲ್ಲಿಯ ಬಿಜಾಪುರ, ಎಲ್ಲಿಯ ಮಂಗಳೂರು. ಈ ಸ್ಟೋರಿ ತಿಳಿಯಬೇಕಾದರೆ ಈ ವರದಿ ಓದಲೇಬೇಕು.

ಹದಿನಾಲ್ಕು ವರ್ಷಗಳ ಹಿಂದೆ ತಾನು ಮಾಡಿದ ತಪ್ಪಿಗೆ ಕಾರಾಗೃಹವೇ ಆತನ ವಾಸಸ್ಥಳವಾಗಿತ್ತು. ಜೈಲಿನ ಜೀವನ ಬದುಕಿನ ಪಾಠ ಕಲಿಸಿ ಸನ್ನಡತೆಯಿಂದ ಬಿಡುಗಡೆಯಾಗಬೇಕಾದರೆ ಆತ 35,000 ದಂಡ ನ್ಯಾಯಾಲಯಕ್ಕೆ ಕಟ್ಟಲೇಬೇಕಿತ್ತು. ಆದರೆ ಆ ದಂಡ ಕಟ್ಟಲು ಆತನ ಕುಟುಂಬದವರು ಯಾರೂ ಮುಂದೆ ಬರಲೇ ಇಲ್ಲ. ಇನ್ನು ಜೈಲೇ ಶಾಶ್ವತ ಎಂದು ತಿಳಿದ ಬಿಜಾಪುರದ ಆ ಖೈದಿಯ ಬಾಳಲ್ಲಿ ಬೆಳಕಾಗಿ ಬಂದವರೇ ಮಂಗಳೂರಿನ ಸಮಾಜ ಸೇವಕ ಗಿರೀಶ್ ಕೊಟ್ಟಾರಿ. ಕಳೆದ ನಾಲ್ಕು ತಿಂಗಳ ಹಿಂದೆ ಕಾರ್ಯನಿಮಿತ್ತ ಬಿಜಾಪುರಕ್ಕೆ ತೆರಳಿದ್ದ ಗಿರೀಶ್ ಕೊಟ್ಟಾರಿ ಗೆ ಆಕಸ್ಮಿಕವಾಗಿ ಬಿಜಾಪುರದ ಜೈಲು ಅಧಿಕಾರಿಗಳು ಈ ವಿಷಯ ತಿಳಿಸಿದ್ದರು. ನವೆಂಬರ್ 18 ರಂದು ಬಿಜಾಪುರ ಕಾರಾಗೃಹಕ್ಕೆ ತೆರಳಿ ಆ ಅಪರಾಧಿಯ ಬಿಡುಗಡೆಗೆ ಪಾವತಿಸಲು ಬಾಕಿಯಿದ್ದ 35,000 ರೂಪಾಯಿಯನ್ನು ತಾನೇ ಪಾವತಿಸುವುದಾಗಿ ಹೇಳಿದ್ದ. ಅದರಂತೆ ಬಿಜಾಪುರ ಜಿಲ್ಲಾ ನ್ಯಾಯಾಧೀಶರಾದ ಅರವಿಂದ್, ಅಡಿಷನಲ್ ಎಸ್ಪಿ ರಾಮಣ ಗೌಡ, ವಕೀಲರ ಸಂಘದ ಅಧ್ಯಕ್ಷ ಬಿರಾದರ್, ಜೈಲು ಅಧೀಕ್ಷಕರ ಸಮ್ಮುಖದಲ್ಲಿ ದಂಡ ಪಾವತಿಸಿ ಆರೋಪಿಯನ್ನು ಬಂಧಮುಕ್ತಗೊಳಿಸಿದ್ದಾರೆ.

ತನಗೆ ಪರಿಚಯವೇ ಇಲ್ಲದ, ಎಲ್ಲಿಯೋ ದೂರದ ಆರೋಪಿಯ ಬಂಧಮುಕ್ತಕ್ಕೆ ಮಾನವೀಯ ನೆಲೆಯಿಂದ ಸ್ಪಂದಿಸಿದ ಮಂಗಳೂರಿನ ಸಮಾಜ ಸೇವಕ ಗಿರೀಶ್ ಕೊಟ್ಟಾರಿ ಸೇವೆ ಇದೀಗ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.