ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಹವಾಲು ಸಭೆ ನಡೆಸಿ, ಕೆಂಪು ಕಲ್ಲಿನ ದರ ನಿಗದಿಯನ್ನು ಜಿಲ್ಲಾಡಳಿತವೇ ಮಾಡಬೇಕು
ರಾಜಧನವನ್ನು 257 ರೂ. ಗಳಿಂದ 97 ರೂ. ಗಳಿಗೆ ಇಳಿಕೆ ಮಾಡಿದ ತರುವಾಯವೂ ಕೆಂಪು ಕಲ್ಲು ಬೆಲೆಯನ್ಜು ಎರಡು ಪಟ್ಟು ಏರಿಕೆ ಮಾಡಿರುವ ಕೆಂಪುಕಲ್ಲು ಪಾಯಗಳ ಮಾಲಕರ ನೀತಿ ಕಾಳದಂಧೆಯ ವ್ಯಾಪಾರವನ್ನು ನೆನಪಿಸುವಂತಿದೆ. ಈ ವಿಪರೀತ ದರ ಏರಿಕೆ ಕಡಿಮೆ ಆದಾಯದ ಜನತೆಯ ಮನೆ ಕಟ್ಟುವ ಕನಸನ್ನು ಭಗ್ನಗೊಳಿಸಿದೆ, ಕಟ್ಟಡ ನಿರ್ಮಾಣ ಕಾರ್ಮಿಕರ ದುಡಿಮೆಗೆ ಬರೆ ಎಳೆದಿದೆ. ದ.ಕ. ಜಿಲ್ಲಾಧಿಕಾರಿಗಳು ಈ ಗಂಭೀರ ವಿಷಯದ ಕುರಿತು ಮಧ್ಯಪ್ರವೇಶ ಮಾಡಬೇಕು, ಸಂಬಂಧ ಪಟ್ಟ ಎಲ್ಲರನ್ನು ಒಳಗೊಂಡ ವಿಶೇಷ ಸಭೆ ನಡೆಸಿ ಜಿಲ್ಲಾಡಳಿತದಿಂದಲೆ ಕೆಂಪು ಕಲ್ಲಿಗೆ ನ್ಯಾಯಯುತ ದರ ನಿಗದಿ ಮಾಡಬೇಕು ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದೆ.

ನಿಯಮ ಪಾಲಿಸದೆ ಗಣಿಗಾರಿಕೆ ನಡೆಸುವುದರ ವಿರುದ್ದ ಜಿಲ್ಲಾಡಳಿತ ನಡೆಸಿದ ಕಟ್ಟುನಿಟ್ಟಿನ ಕ್ರಮಗಳಿಂದ ಕೆಂಪುಕಲ್ಲು ಗಣಿಗಾರಿಕೆ ಪೂರ್ಣಪ್ರಮಾಣದಲ್ಲಿ ಸ್ಥಗಿತಗೊಂಡ ಸಂದರ್ಭ ಕಲ್ಲಿನ ದರ ದುಪ್ಪಟ್ಟು ಏರಿಕೆ ಕಂಡಿತ್ತು. ನಿರ್ಮಾಣ ಕಾಮಗಾರಿಗಳು ಬಹುತೇಕ ಸ್ತಬ್ಧಗೊಂಡಿದ್ದವು. ಆದರೆ, ಇದೀಗ ನಿಯಮಗಳನ್ನು ಸರಳೀಕರಿಸಿ ಕೆಂಪುಕಲ್ಲು ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಅದಲ್ಲದೆ, ರಾಜಧನವನ್ನು ದೊಡ್ಡ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ. ಇಷ್ಟಾದರು ಕೆಂಪುಕಲ್ಲು ಪಾಯದ ಮಾಲಕರು ದರವನ್ನು ಏರಿಕೆಯಾಗಿರುವ ದುಪ್ಪಟ್ಟು ಮಟ್ಟದಲ್ಲಿಯೆ ಉಳಿಸಿದ್ದಾರೆ. ಇದು ಕಾಳಸಂತೆಯ ರೀತಿಯ ವ್ಯವಹಾರ ಅಲ್ಲದೆ ಮತ್ತೇನಲ್ಲ. ಪರಿಸ್ಥಿತಿಯ ದುರ್ಲಾಭ ಪಡೆದು ನೈತಿಕ ಅಲ್ಲದ ದಾರಿಯಲ್ಲಿ ಈ ಮಟ್ಟಿಗೆ ದರ ನಿಗದಿ ಮಾಡುವುದು ಬಹಿರಂಗ ಸುಲಿಗೆಯ ರೀತಿ ಕಾಣುತ್ತಿದೆ.
ಇದರಿಂದ ಜನಸಾಮಾನ್ಯರು, ಕಡಿಮೆ ಆದಾಯದ ಜನಗಳು ಮನೆ ನಿರ್ಮಾಣದ ಕೆಲಸಗಳನ್ನು ಸ್ಥಗಿತಗೊಳಿಸಿದ್ದಾರೆ. ಇದು ನಿರ್ಮಾಣ ವಲಯದಲ್ಲಿ ಮಂದಗತಿಗೆ ಕಾರಣವಾಗಿದ್ದು, ನಿರ್ಮಾಣ ಕಾರ್ಮಿಕರು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದರ ಪರಿಣಾಮ ಗ್ರಾಮೀಣ ಭಾಗಗಳು ಸೇರಿ ಜಿಲ್ಲೆಯ ಆರ್ಥಿಕ ಸ್ಥಿತಿಯನ್ನೂ ಏರುಪೇರುಗೊಳಿಸಿದೆ. ಈ ಎಲ್ಲಾ ಅಂಶಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು, ಕೆಂಪು ಕಲ್ಲು ಮಾಲಕರ ಸರ್ವಾಧಿಕಾರಿ ನಡೆ, ಏಕಪಕ್ಷೀಯ ದರ ನಿಗದಿ ನೀತಿಗೆ ಕಡಿವಾಣ ಹಾಕಬೇಕು, ಕೆಂಪು ಕಲ್ಲು ದರ ಏರಿಕೆ ಬಿಕ್ಕಟ್ಟಿಗೆ ಸಂಬಂಧಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಹವಾಲು ಸಭೆ ನಡೆಸಿ ಕೆಂಪು ಕಲ್ಲಿನ ದರ ನಿಗದಿಯನ್ನು ಜಿಲ್ಲಾಡಳಿತವೇ ಮಾಡಬೇಕು ಎಂದು ಸಿಪಿಐಎಂ ದ.ಕ. ಜಿಲ್ಲಾ, ಸಮಿತಿ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
