ಒಬ್ಬರ ಹೆಸರಿನಲ್ಲಿ ಖರೀದಿಯಾದ ಸಿಮ್‌ ಕಾರ್ಡ್‌ ನಂತರದಲ್ಲಿ ದುರ್ಬಳಕೆ ಆದರೆ, ಮೂಲ ವ್ಯಕ್ತಿಯನ್ನು ಕೂಡ ಅಪರಾಧಿ ಎಂದು ಪರಿಗಣಿಸಬಹುದು: ಕೇಂದ್ರ ಸರಕಾರ

ರಾಷ್ಟ್ರೀಯ

ಮೊಬೈಲ್‌ ಸಿಮ್‌ ಕಾರ್ಡ್‌ಗಳನ್ನು ಸೈಬರ್‌ ಅಪರಾಧ ಚಟುವಟಿಕೆಗಳಿಗೆ ಅಥವಾ ಇತರ ಅಪರಾಧ ಕೃತ್ಯಗಳಿಗೆ ದುರ್ಬಳಕೆ ಮಾಡಿಕೊಂಡರೆ, ಆ ಸಿಮ್‌ ಕಾರ್ಡ್ ಯಾರ ಹೆಸರಿನಲ್ಲಿದೆಯೋ ಅವರನ್ನೇ ಹೊಣೆ ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ನಾಗರಿಕರು ಎಚ್ಚರಿಕೆಯಿಂದ ಇರಬೇಕು, ಮೊಬೈಲ್‌ ಫೋನ್‌ನ ಐಎಂಇಐ ಸಂಖ್ಯೆಯನ್ನು ಬದಲಾಯಿಸಿದ್ದರೆ ಅಂತಹ ಮೊಬೈಲ್‌ ಫೋನ್‌ ಬಳಕೆ ಸೂಕ್ತವಲ್ಲ ಎಂದು ಕೇಂದ್ರ ದೂರಸಂಪರ್ಕ ಇಲಾಖೆಯ ಪ್ರಕಟಣೆ ಹೇಳಿದೆ.

ನಕಲಿ ದಾಖಲೆಗಳನ್ನು ಬಳಸಿ ಸಿಮ್‌ ಕಾರ್ಡ್‌ ಖರೀದಿಸಬಾರದು, ಗ್ರಾಹಕರು ತಮ್ಮ ಹೆಸರಿನಲ್ಲಿ ಖರೀದಿಸಿದ ಸಿಮ್‌ ಕಾರ್ಡ್‌ಗಳನ್ನು ಅದನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುವ ಇತರರಿಗೆ ನೀಡಬಾರದು ಎಂದು ಕೂಡ ಇಲಾಖೆಯು ಎಚ್ಚರಿಸಿದೆ. ಮಾರ್ಪಾಡು ಮಾಡಿರುವ ಐಎಂಇಐ ಸಂಖ್ಯೆ ಹೊಂದಿರುವ ಸಾಧನಗಳನ್ನು ಬಳಕೆ ಮಾಡುವುದು, ಕಾನೂನಿಗೆ ವಿರುದ್ಧವಾದ ರೀತಿಯಲ್ಲಿ ಸಿಮ್‌ ಕಾರ್ಡ್‌ ಪಡೆದುಕೊಳ್ಳುವುದು, ಸೈಬರ್ ವಂಚನೆಯ ಕೆಲಸಗಳಿಗೆ ಸಿಮ್‌ ಕಾರ್ಡ್‌ ಬಳಕೆ ಮಾಡುವವರಿಗೆ ತಮ್ಮ ಸಿಮ್‌ ಕಾರ್ಡ್‌ ಒದಗಿಸುವುದರಿಂದ ಗಂಭೀರ ಸ್ವರೂಪದ ಕಾನೂನು ಪರಿಣಾಮಗಳಿಗೆ ಗುರಿಯಾಗಬೇಕಾದೀತು. ಒಬ್ಬರ ಹೆಸರಿನಲ್ಲಿ ಖರೀದಿಯಾದ ಸಿಮ್‌ ಕಾರ್ಡ್‌ ನಂತರದಲ್ಲಿ ದುರ್ಬಳಕೆ ಆದರೆ, ಮೂಲ ವ್ಯಕ್ತಿಯನ್ನು ಕೂಡ ಅಪರಾಧಿ ಎಂದು ಪರಿಗಣಿಸಬಹುದು’ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.