ವ್ಯಕ್ತಿಗಿಂತ ಪಕ್ಷವೇ ದೊಡ್ಡದು. ಸಚಿವ ಪ್ರಿಯಾಂಕ್ ಖರ್ಗೆಯವರ ಒಂದೇ ಒಂದು ಹೇಳಿಕೆ ರಾಜ್ಯ ರಾಜಕೀಯದಲ್ಲಿ, ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ರಾಜ್ಯ ರಾಜಕೀಯದ ಆಗುಹೋಗುಗಳ ಬಗ್ಗೆ ಚರ್ಚಿಸಿ ಬಂದಿರುವ ಪ್ರಿಯಾಂಕ್ ಖರ್ಗೆ, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಕುರಿತು ಆಡಿರುವ ಮಾತುಗಳು ಭಾರಿ ಚರ್ಚೆಗೆ ಗ್ರಾಸವಾಗಿವೆ.ವ್ಯಕ್ತಿಗಿಂತ ಪಕ್ಷವೇ ದೊಡ್ಡದು ಎಂಬ ಸಂದೇಶ
ದೆಹಲಿ ಪ್ರವಾಸ ಮುಗಿಸಿ ಬಂದ ಸಚಿವ ಪ್ರಿಯಾಂಕ್ ಖರ್ಗೆ, ಪರೋಕ್ಷವಾಗಿ ನಾಯಕರಿಗಿಂತ ಪಕ್ಷವೇ ಮಿಗಿಲು ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ. ಯಾರೋ ಒಬ್ಬ ವ್ಯಕ್ತಿಯಿಂದ ಪಕ್ಷ ನಡೆಯುತ್ತಿಲ್ಲ. ಸಿದ್ದರಾಮಯ್ಯನವರು ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಆದರೆ, ಅವರಿಗಿಂತಲೂ ಮೊದಲು ಇಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿತ್ತು ಅಲ್ಲವೇ? ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಇದೇ ಕಾಂಗ್ರೆಸ್ ಪಕ್ಷವಲ್ಲವೇ ಎಂದು ಪ್ರಶ್ನಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕಾರ್ಯಕರ್ತರು ಇದ್ದರೆ ನಾಯಕರು. ಕೇವಲ ಸಿದ್ದರಾಮಯ್ಯ ಮಾತ್ರವಲ್ಲ, ಪಕ್ಷದಲ್ಲಿ ಅನೇಕ ಪ್ರಬಲ ನಾಯಕರಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಪ್ರತಿಪಾದಿಸಿದ್ದಾರೆ. ಸಿದ್ದರಾಮಯ್ಯ ಆಗಿರಲಿ, ಡಿಕೆ ಶಿವಕುಮಾರ್ ಆಗಿರಲಿ ಅಥವಾ ಸತೀಶ್ ಜಾರಕಿಹೊಳಿ ಅವರೇ ಆಗಿರಲಿ, ಇವರೆಲ್ಲರೂ ಇಂದು ದೊಡ್ಡ ನಾಯಕರಾಗಿ ಬೆಳೆಯಲು ಮೂಲ ಕಾರಣ ಪಕ್ಷದ ಸಾಮಾನ್ಯ ಕಾರ್ಯಕರ್ತರು. ಪಕ್ಷವು ಕಾರ್ಯಕರ್ತರನ್ನು ಬೆಳೆಸುತ್ತದೆ, ಆ ಕಾರ್ಯಕರ್ತರು ಸೇರಿ ನಾಯಕರನ್ನು ಬೆಳೆಸುತ್ತಾರೆ. ಹೀಗಾಗಿ ಎಲ್ಲರೂ ಸೇರಿದರೆ ಮಾತ್ರ ಪಕ್ಷವಾಗುತ್ತದೆ ಹೊರತು, ಒಬ್ಬರಿಂದಲೇ ಅಲ್ಲ ಎಂಬ ಮಾರ್ಮಿಕ ನುಡಿಗಳನ್ನು ಆಡಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅಥವಾ ಇನ್ಯಾವುದೇ ಆಂತರಿಕ ವಿಚಾರಗಳಿದ್ದರೂ, ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ಇರುವುದು ಹೈಕಮಾಂಡ್ ಗೆ ಮಾತ್ರ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ. ಶಾಸಕರು ಅಥವಾ ನಾಯಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದೇ ವಿನಹ, ಅಂತಿಮ ನಿರ್ಧಾರ ದೆಹಲಿ ನಾಯಕರದ್ದೇ ಆಗಿರುತ್ತದೆ. ಸಿಎಂ ಮತ್ತು ಡಿಸಿಎಂ ಕೂಡ ಈ ಎಲ್ಲಾ ಬೆಳವಣಿಗೆಗಳ ನಿರ್ಧಾರವನ್ನು ಹೈಕಮಾಂಡ್ ಅಂಗಳಕ್ಕೆ ಬಿಟ್ಟಿದ್ದಾರೆ ಎಂದು ಹೇಳುವ ಮೂಲಕ, ರಾಜ್ಯ ನಾಯಕರಿಗೆ ಸ್ಪಷ್ಟ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
