ಅಪರೂಪದ ರಾದ್ಧಾಂತಕ್ಕೆ ಸಾರ್ವಜನಿಕರು, ಸಿಬ್ಬಂದಿ ಗಲಿಬಿಲಿ.!
ನ್ಯಾಯಾಲಯದ ಆದೇಶ ಪಾಲಿಸುವಲ್ಲಿ ವಿಫಲರಾದ ಆರೋಪದಡಿ ಉಚ್ಚ ನ್ಯಾಯಾಲಯದ ಸೂಚನೆಯಂತೆ ನವೆಂಬರ್ 14 ರಂದು ಖಾನಾಪುರ ತಹಶೀಲ್ದಾರ್ ಹುದ್ದೆಯಿಂದ ಬಿಡುಗಡೆ ಹೊಂದಿದ್ದ ದುಂಡಪ್ಪ ಕೋಮಾರ ಅವರು ಸುಪ್ರೀಂಕೋರ್ಟ್ ಆದೇಶದೊಂದಿಗೆ ಬುಧವಾರ ಕರ್ತವ್ಯಕ್ಕೆ ಹಾಜರಾದರು. ಆದರೆ ಹಾಲಿ ತಹಶೀಲ್ದಾರ್ ಮಂಜುಳಾ ನಾಯಕ್ ಕಚೇರಿಯಲ್ಲಿ ಆಸೀನರಾಗಿದ್ದರು. ಈ ವೇಳೆ ಕೋಮಾರ ಮತ್ತು ಮಂಜುಳಾ ಮಧ್ಯೆ ಕುರ್ಚಿಗಾಗಿ ಮಾತಿನ ಚಕಮಕಿ ನಡೆದು ಸಾರ್ವಜನಿಕರು, ಸಿಬ್ಬಂದಿ ಗಲಿಬಿಲಿಗೊಂಡರು.

ಕೂಡಲೇ ಅಧಿಕಾರ ಹಸ್ತಾಂತರಿಸುವಂತೆ ಕೋಮಾರ ಹೇಳಿದಾಗ ಮಂಜುಳಾ ಅವರು ‘ಮೇಲಾಧಿಕಾರಿಗಳ ಆದೇಶದಂತೆ ಕರ್ತವ್ಯ ನಿರ್ವಹಿಸುತ್ತಿದ್ದು ಸರಕಾರ ಆದೇಶ ನೀಡಿದರೆ ಕುರ್ಚಿ ಬಿಟ್ಟುಕೊಡುವೆ’ ಎಂದರು.
ಮಂಜುಳಾ ಅವರು ಊಟದ ಬಿಡುವಿನಲ್ಲಿ ಚೇಂಬರ್ ನಿಂದ ಹೊರ ಹೋದಾಗ ಕೋಮಾರ ತಹಶೀಲ್ದಾರ್ ಕುರ್ಚಿಯಲ್ಲಿ ಕುಳಿತರು. ಕೆಲವು ಕಡತಗಳಿಗೆ ಸಹಿ ಮಾಡಿದರು. ಊಟ ಮುಗಿಸಿ ಮಂಜುಳಾ ಅವರು ಕಚೇರಿಗೆ ಮರಳಿದಾಗ ಮತ್ತೆ ಅವರಿಬ್ಬರ ನಡುವೆ ವಾಗ್ವಾದ ನಡೆಯಿತು. ದುಂಡಪ್ಪ ಕುರ್ಚಿ ಬಿಟ್ಟು ಕೊಡದ ಹಿನ್ನೆಲೆಯಲ್ಲಿ ಮಂಜುಳಾ ಅವರು ಗ್ರೇಡ್ -2 ತಹಶೀಲ್ದಾರ್ ಚೇಂಬರ್ ನಲ್ಲಿ ಕುಳಿತು ಕರ್ತವ್ಯ ನಿರ್ವಹಿಸಿದರು.
