ಕೋಟ್ಯಾಂತರ ರೂಪಾಯಿ ಸೈಬರ್ ವಂಚನೆ ಪ್ರಕರಣ: ಪುದುಚೇರಿಯ ಮೂವರು ಎಂಜಿನಿಯರ್ ವಿದ್ಯಾರ್ಥಿಗಳ ಬಂಧನ

ರಾಷ್ಟ್ರೀಯ

ಸೈಬರ್‌ ವಂಚನೆ ಜಾಲ: 14 ಮಂದಿ ಸೈಬರ್ ವಂಚಕರನ್ನು ಬಂಧಿಸಿದ ಆಂಧ್ರ ಪ್ರದೇಶ ಪೊಲೀಸರು

90 ಕೋಟಿ ರೂಪಾಯಿ ಮೌಲ್ಯದ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಂಜಿನಿಯರ್ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸೈಬರ್ ವಂಚಕರ ಜಾಲವೂ ಎಂಜಿನಿಯರಿಂಗ್ ಕಾಲೇಜಿನೊಳಗಿನಿಂದಲೇ ಕಾರ್ಯಾಚರಿಸುತ್ತಿತ್ತು. ಪುದುಚೇರಿ ಸೈಬರ್ ಕ್ರೈಂ ಪೊಲೀಸರು ಈ ಬೃಹತ್ ಜಾಲವನ್ನು ಬೇಧಿಸಿದ್ದು, ಆರೋಪಿ ವಿದ್ಯಾರ್ಥಿಗಳು ಸೈಬರ್ ಅಪರಾಧಿಗಳಿಗೆ ತಮ್ಮ ಸ್ನೇಹಿತರು ಹಾಗೂ ಕ್ಲಾಸ್‌ಮೇಟ್‌ಗಳ ಬ್ಯಾಂಕ್‌ ಡಿಟೇಲ್‌ಳನ್ನು ಮಾರಾಟ ಮಾಡುತ್ತಿದ್ದರು. ನಂತರ ಸೈಬರ್ ವಂಚಕರು ಅವರ ಖಾತೆಯಲ್ಲಿದ್ದ ಹಣವನ್ನು ಭಾರತದ ಮೂಲಕ ಅಕ್ರಮವಾಗಿ ವರ್ಗಾಯಿಸಿ ದುಬೈ ಮತ್ತು ಚೀನಾದ ನೆಟ್‌ವರ್ಕ್‌ಗಳ ಮೂಲಕ ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸುತ್ತಿದ್ದರು. ಪ್ರಕರಣ ಬೇಧಿಸಿದ ಪೊಲೀಸರು ಈ ಎಂಜಿನಿಯರಿಂಗ್ ಕಾಲೇಜನ್ನು ಸೈಬರ್ ಕ್ರೈಂಗಳ ಹಾಟ್‌ಸ್ಪಾಟ್ ಎಂದು ಕರೆದಿದ್ದಾರೆ.

ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳು ಇದ್ದಕ್ಕಿದ್ದಂತೆ ಸ್ಥಗಿತಗೊಂಡಾಗ ಅವರು ಪೊಲೀಸರನ್ನು ಸಂಪರ್ಕಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ದಿನೇಶ್ ಮತ್ತು ಜಯಪ್ರತಾಪ್ ಅವರು ತಮ್ಮ ಖಾತೆಯ ವಿವರಗಳನ್ನು ತಮ್ಮ ಸ್ನೇಹಿತನಾದ ಹರೀಶ್‌ಗೆ ಹಸ್ತಾಂತರಿಸಿದ್ದರು. ಈ ವಂಚಕ ಹರೀಶ್ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ 20 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಗ್ರಹಿಸಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಈ ವಂಚನೆಯಿಂದ ಬಂದ ಆದಾಯವನ್ನು ಸಂಗ್ರಹಿಸಲು ಸೈಬರ್ ವಂಚಕರು ಇವುಗಳನ್ನು ಬಳಸುತ್ತಿದ್ದರು. ಈ ಖಾತೆಗಳ ಮೂಲಕ ಕನಿಷ್ಠ 7 ಕೋಟಿ ರೂ.ಗಳನ್ನು ಆರೋಪಿಗಳು ವಿತ್ ಡ್ರಾ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಎಂಜಿನಿಯರಿಂಗ್ ಪದವೀಧರರು ಸೇರಿದಂತೆ ಏಳು ಜನರನ್ನು ಇಲ್ಲಿಯವರೆಗೆ ಬಂಧಿಸಲಾಗಿದೆ. ಥಾಮಸ್ ಅಲಿಯಾಸ್ ಹಯಗ್ರೀವ, ಹರೀಶ್, ಗಣೇಶನ್, ಗೋವಿಂದರಾಜ್, ಯಶ್ವಿನ್, ರಾಹುಲ್ ಮತ್ತು ಅಯ್ಯಪ್ಪನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಪೊಲೀಸರು 5 ಲಕ್ಷ ರೂ. ನಗದು, 171 ಚೆಕ್ ಪುಸ್ತಕಗಳು, 75 ಎಟಿಎಂ ಕಾರ್ಡ್‌ಗಳು, 20 ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು, ಹಲವಾರು ಬ್ಯಾಂಕ್ ಪಾಸ್‌ಬುಕ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಹುಂಡೈ ವೆರ್ನಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಗಣೇಶನ್ ಬ್ಯಾಂಕ್ ಖಾತೆಗಳಿಂದ ಡ್ರಾ ಮಾಡಿದ ಹಣವನ್ನು, ಚೀನಾದ ಸೈಬರ್ ಅಪರಾಧಿಗಳೊಂದಿಗೆ ಸೇರಿ ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿ , ಕಮಿಷನ್‌ಗಾಗಿ ಅದನ್ನು ಟೆಲಿಗ್ರಾಮ್ ಮೂಲಕ ಕಳುಹಿಸುತ್ತಿದ್ದನೆಂದು ತನಿಖೆಯಿಂದ ತಿಳಿದು ಬಂದಿದೆ.

ಇದೇ ರೀತಿ ಕಾಂಬೋಡಿಯಾದಿಂದ ಕಾರ್ಯನಿರ್ವಹಿಸುತ್ತಿರುವ ಸೈಬರ್‌ ವಂಚನೆ ಜಾಲವೊಂದಕ್ಕೆ ಸಂಬಂಧಿಸಿದ 14 ಸದಸ್ಯರನ್ನು ಆಂಧ್ರ ಪ್ರದೇಶ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಡಿಜಿಟಲ್‌ ಅರೆಸ್ಟ್‌ ಮೂಲಕ 75 ವರ್ಷದ ಭೀಮಾವರಂನ ನಿವೃತ್ತ ಪ್ರಾಧ್ಯಾಪಕನಿಗೆ 78 ಲಕ್ಷ ರೂ. ವಂಚಿಸಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅದ್ನಾನ್‌ ನಯೀಮ್‌ ಆಸ್ಮಿ ಅವರು ಗುರುವಾರ ಮಾಹಿತಿ ನೀಡಿ, ‘ವಾಟ್ಸ್‌ಆಯಪ್‌ ಕರೆ ಮಾಡಿ, ತಮ್ಮನ್ನು ತಾವು ಬೆಂಗಳೂರು ಪೊಲೀಸರು ಎಂದು ಬಿಂಬಿಸಿಕೊಂಡ ವಂಚಕರು ಸುಪ್ರೀಂ ಕೋರ್ಟ್‌ನ ನಕಲು ದಾಖಲೆಗಳನ್ನು ತೋರಿಸಿ ಹಣ ವಂಚಿಸಿದ್ದಾರೆ’ ಎಂದರು. ವಂಚಿಸಿದ್ದ ಹಣದಲ್ಲಿ ₹42 ಲಕ್ಷವನ್ನು ವಶಪಡಿಸಿಕೊಳ್ಳಲಾಗಿದೆ. ವಿವಿಧ ಬ್ಯಾಂಕ್‌ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಅಂತರರಾಷ್ಟ್ರೀಯ ಸಿಮ್‌ ಕಾರ್ಡ್‌ಗಳಿದ್ದ 15 ಮೊಬೈಲ್‌, ಬ್ಯಾಂಕ್‌ ದಾಖಲೆಗಳು, ಪಾಸ್‌ಪೋರ್ಟ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಜಾಲದ ಪ್ರಮುಖ ಆರೋಪಿ ಮುಂಬೈನ ರಹತೆ ಜೆ. ನಾರಾಯಣ್‌ ಎಂಬುವರು ಪರಾರಿಯಾಗಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.