ನಕಲಿ ದಾಖಲೆಗಳ ಸೃಷ್ಟಿಸಿ, ಸರ್ಕಾರಿ ಜಮೀನು ಕಬಳಿಸಲು ಸಹಕರಿಸಿದ ಆರೋಪದ 16 ಮಂದಿ ಸರ್ಕಾರಿ ನೌಕರರ ವಿರುದ್ಧ ಪ್ರಕರಣ ದಾಖಲು

ರಾಜ್ಯ

ನಕಲಿ ದಾಖಲೆಗಳ ಸೃಷ್ಟಿ ಮಾಡುವ ಮೂಲಕ ಸರ್ಕಾರಿ ಜಮೀನು ಕಬಳಿಸಲು ಸಹಕರಿಸಿದ ಆರೋಪದ ಮೇಲೆ ಆನೇಕಲ್ ತಾಲೂಕಿನ ಭೂ ದಾಖಲೆಗಳ ವಿಭಾಗದ 16 ಮಂದಿ ಸರ್ಕಾರಿ ನೌಕರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಉಪ ತಹಸೀಲ್ದಾರ್, ಮೂರು ಮಂದಿ ಶಿರಸ್ತೇದಾರರು, ಮೂರು ಮಂದಿ ಪ್ರಥಮ ದರ್ಜೆ ಸಹಾಯಕರು, ಇಬ್ಬರು ದ್ವಿತೀಯ ದರ್ಜೆ ಸಹಾಯಕರು, ಏಳು ಮಂದಿ ಡಿ. ದರ್ಜೆ ನೌಕರರು, ಒಟ್ಟು 16 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮೂಲ ಮಂಜೂರಾತಿ ಕಡತ, ದರಖಾಸ್ತು ವಹಿ, ಸಾಗುವಳಿ ಚೀಟಿ, ಮಂಜೂರು ನಡಾವಳಿ ವಹಿ, ಡಿಸಿ ಆದೇಶದ ಕಡತ, ಭೂ ಸುಧಾರಣೆ ಮೂಲ ಕಡತ ದಾಖಲೆಗಳೊಂದಿಗೆ ನಕಲಿ ದಾಖಲೆ ಸೇರಿಸಿ ಸರ್ಕಾರಿ ಜಮೀನನ್ನು ಕಬಳಿಸಲು ಸಹಕಾರ ನೀಡಿರುವುದು ಭೂಸುರಕ್ಷಾ ಯೋಜನೆಯಡಿಯಲ್ಲಿ ದಾಖಲೆಗಳನ್ನು ಸ್ಕ್ಯಾನ್ ಮಾಡುವ ವೇಳೆ ಕಂಡುಬಂದಿದೆ ಎಂದು ಆನೇಕಲ್ ತಹಸೀಲ್ದಾರ್‌ ವರದಿ ನೀಡಿದ್ದರು.

ಈ ಕುರಿತು ಮರು ಪರಿಶೀಲಿಸಿದಾಗ ನಕಲಿ ದಾಖಲೆಗಳೆಂದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ, 5 ವರ್ಷದಿಂದ ಅಭಿಲೇಖಾಲಯದಲ್ಲಿ ಕೆಲಸ ಮಾಡಿದ 16 ಸರ್ಕಾರಿ ನೌಕರರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪ್ರಕರಣ ದಾಖಲಿಸಲಾಗಿದೆ. ನಕಲಿ ದಾಖಲೆ ಸೃಷ್ಟಿಸುವಲ್ಲಿ ಸಹಕರಿಸಿದ ಖಾಸಗಿ ವ್ಯಕ್ತಿಗಳು ವ್ಯವಸ್ಥಿತ ಗುಂಪುಗಳ ಮೇಲೆಯೂ ವಿಚಾರಣೆ ನಡೆಸಿ ತಪ್ಪಿತಸ್ತರ ವಿರುದ್ದವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.