ಇತ್ತೀಚೆಗೆ ಅಧಿವೇಶನದ ಕಲಾಪದಲ್ಲಿ ಹನಿಟ್ರ್ಯಾಪ್ ವಿಚಾರವಾಗಿ ಮಾತನಾಡಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ವಿರುದ್ಧ ಆರ್ಟಿಐ ಕಾರ್ಯಕರ್ತ ಓರ್ವರು ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಮಾಣವಚನ ಸ್ವೀಕರಿಸುವಾಗ ಗೌಪ್ಯತೆ ಕಾಪಾಡುತ್ತೇನೆ ಎಂದಿದ್ದರು. ಆದರೆ ಸದನದಲ್ಲಿ ರಾಜಣ್ಣ ಅವರು ಹನಿಟ್ರ್ಯಾಪ್ ಬಗ್ಗೆ ಮಾತನಾಡಿ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ. ಹೀಗಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ದಿನವೇ ದೂರು ದಾಖಲಿಸಿದ್ದಾಗಿ ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಅವರು ತಿಳಿಸಿದ್ದಾರೆ.
ಹನಿಟ್ರ್ಯಾಪ್ ಬಗ್ಗೆ ಮಾತನಾಡಿರುವ ರಾಜಣ್ಣ ಅವರು ಸಿಡಿ ಇವೆ ಎಂದಿದ್ದಾರೆ. ಹೀಗಾಗಿ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆಗೆ ನಡೆಸಲಿ ಎಂದು ಆಗಹ್ರಿಸಿದ್ದಾರೆ. ಈಗಾಗಲೇ ಗೃಹ ಸಚಿವರಿಗೆ ದೂರು ನೀಡಿದ್ದೇನೆ. ಆದ್ದರಿಂದ ಈಗ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ಕೂಡಲೇ ರಾಜಣ್ಣ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸದನದಲ್ಲಿ ಮಾತನಾಡಿದ್ದ ರಾಜಣ್ಣ ಅವರು ತಮ್ಮ ವಿರುದ್ಧ ಹನಿಟ್ರ್ಯಾಪ್ ವಿಫಲ ಯತ್ನವಾಗಿದೆ. ರಾಜ್ಯದ ಎಲ್ಲಾ ಪಕ್ಷದ ನಾಯಕರು ಸೇರಿದಂತೆ ರಾಷ್ಟ್ರೀಯ ಕೆಲ ನಾಯಕರು ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಜನರನ್ನು ಹನಿಟ್ರ್ಯಾಪ್ ಖೆಡ್ಡಕ್ಕೆ ತಳ್ಳಲಾಗಿದೆ. ಹಲವರ ಸಿಡಿ, ಪೆನ್ಡ್ರೈವ್ಗಳು ಇವೆ ಎಂದು ಹೇಳಿದ್ದರು. ಹನಿಟ್ರ್ಯಾಪ್ ಪ್ರಕರಣ ರಾಜ್ಯ, ರಾಷ್ಟ್ರಮಟ್ಟದಲ್ಲೂ ಸದ್ದು ಮಾಡಿದ್ದು, ಪ್ರಸ್ತುತ ತನಿಖೆಯು ಹಳ್ಳ ಹಿಡಿದಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
