ಮಣಿಪುರಕ್ಕೆ ದಾವಿಸಿ ಗಡಿ ಕಾಯುವ ಯೋಧನಿಂದ ವಂಚನೆಗೊಳಗಾದ ಹೆಣ್ಣಿಗೆ ನ್ಯಾಯ ಒದಗಿಸಿದ ಗಟ್ಟಿಗಿತ್ತಿ.!
ಹೆಣ್ಣು ಅಬಲೆಯಲ್ಲ..ಈ ಮಾತನ್ನು ಪ್ರತಿ ನಿತ್ಯ ಕೇಳುತ್ತಿದ್ದೇವೆ. ಆದರೆ ಭಾರತದಂತಹ ದೇಶದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಹೆಣ್ಣು ಲೈಂಗಿಕ ಶೋಷಣೆ, ಅನ್ಯಾಯಕ್ಕೆ ಒಳಗಾಗುತ್ತಿದ್ದಾಳೆ. ಮಧ್ಯರಾತ್ರಿ ಹೆಣ್ಣೊಬ್ಬಳು ನಿರ್ಭೀತಿಯಿಂದ ಓಡಾಡುವ ಗಳಿಗೆ ಬಂದಾಗಲಷ್ಟೇ ಭಾರತಕ್ಕೆ ಸ್ವಾತಂತ್ರ್ಯ ದೊರಕಿದಂತಾಗುತ್ತದೆ ಎಂದು ಮಹಾತ್ಮರು ಹೇಳಿದ್ದರು. ಮಧ್ಯರಾತ್ರಿ ಬಿಡಿ ಮಟ ಮಟ ಮಧ್ಯಾಹ್ನ ಹೊತ್ತಿನಲ್ಲೇ ಮಹಿಳೆಯರು ಓಡಾಡುತ್ತಿದ್ದರೆ ಕೀಚಕರ ಗುಂಪು ಮಹಿಳೆಯರನ್ನು ಶೋಷಣೆಗೆ ಒಳಪಡಿಸುವ ಅನೇಕ ಸಂಗತಿಗಳು ನಡೆದಿದೆ. ಹೆಣ್ಣು ಶೈಕ್ಷಣಿಕ ಕೇಂದ್ರ, ಕೆಲಸ ಮಾಡುವ ಸ್ಥಳ, ಸ್ವತಹ ಕೈ ಕೈ ಹಿಡಿದು ಸಪ್ತಪದಿ ತುಳಿದ ಪತಿಯಿಂದಲೇ ಅನ್ಯಾಯಕ್ಕೆ ಒಳಗಾದ ನೂರಾರು ಉದಾಹರಣೆಗಳಿವೆ. ಆದರೆ ಸಕ್ಕರೆ ನಾಡು ಮಂಡ್ಯದಲ್ಲಿ ಗಟ್ಟಿಗಿತ್ತಿ ಹೆಣ್ಣೊಬ್ಬಳು ದೌರ್ಜನ್ಯ, ಅನ್ಯಾಯಕ್ಕೆ ಒಳಗಾದ ಅಬಲೆಯರ ಪಾಲಿಗೆ ಆಪತ್ಭಾಂದವ ಆಗಿದ್ದಾಳೆ. ಆಕೆ ಬೇರಾರೂ ಅಲ್ಲ. ರಜನಿರಾಜ್ ಅನ್ನುವ ಮಹಿಳಾ ಪರ ಹೋರಾಟಗಾರ್ತಿ.

ಸಕ್ಕರೆ ನಾಡು ಮಂಡ್ಯದ ದ್ವನಿ ಮಹಿಳಾ ಮತ್ತು ಮಕ್ಕಳ ಸಂಸ್ಥೆಯ ಅಧ್ಯಕ್ಷೆಯಾರಾಗಿರುವ ರಜನಿರಾಜ್ ಮಹಿಳಾ ದೌರ್ಜನ್ಯಕ್ಕೆ ಒಳಗಾದ ಅನೇಕ ಹೆಣ್ಣು ಮಕ್ಕಳಿಗೆ ಧ್ವನಿಯಾಗಿದ್ದಾಳೆ. ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಹಲವಾರು ರಾಜ್ಯಗಳಿಗೆ ಭೇಟಿ ನೀಡಿ ಮಹಿಳೆಯರ ಮೇಲೆ ನಡೆದಿರುವ ಅನ್ಯಾಯದ ವಿರುದ್ಧ ಸೆಟೆದು ನಿಂತು ನ್ಯಾಯ ಒದಗಿಸಿಕೊಡುವಲ್ಲಿ ಸಫಲರಾಗಿದ್ದಾರೆ. ಯಾವುದೇ ಪ್ರಚಾರವನ್ನು ಬಯಸದೇ ಅನ್ಯಾಯಕ್ಕೆ ಒಳಗಾದ ಹೆಣ್ಣುಮಕ್ಕಳ ಧ್ವನಿಯಾಗಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್, ತಮಿಳುನಾಡಿನ ಕೊಯಮತ್ತೂರು, ಜಾರ್ಖಂಡ್ ನ ರಾಂಚಿ.. ಹೀಗೆ ನಾನಾ ರಾಜ್ಯಗಳಲ್ಲಿ ಸಂಚಾರಿಸಿ ನಮ್ಮ ರಾಜ್ಯದ ಹೆಣ್ಣು ಮಕ್ಕಳು ವಿವಿಧ ಕಾರಣಕ್ಕೆ ಅನ್ಯಾಯ, ಶೋಷಣೆ, ದೌರ್ಜನ್ಯಕ್ಕೆ ಒಳಗಾದರೇ ಅವರ ಪರವಾಗಿ ನಿಂತು ಹೋರಾಟ ಮಾಡಿ ನ್ಯಾಯಯುತ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಡ್ಯ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ರಜನಿರಾಜ್ ನ್ಯಾಯದ ಪರ ಇಳಿದರೆಂದರೆ ಸಾಕು, ಹೆಣ್ಣಿಗೆ ನ್ಯಾಯ ಸಿಕ್ಕಿತೆಂದೇ ಅರ್ಥ. ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳ ಪಾಲಿಗೆ ಆಪತ್ಭಾಂದವರಾಗಿದ್ದಾರೆ ಈ ಮಂಡ್ಯದ ಹೆಣ್ಣು. ಈಕೆಯ ನ್ಯಾಯಯುತ ಹೋರಾಟವನ್ನು ಪರಿಗಣಿಸಿ ಕರ್ನಾಟಕ ಸರಕಾರವೇ ಕಿತ್ತೂರು ರಾಣಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಇದೇ ನವೆಂಬರ್ 23 ರಂದು ರಜನಿರಾಜ್ ಮಣಿಪುರಕ್ಕೆ ಭೇಟಿ ನೀಡಿ ದೌರ್ಜನ್ಯಕ್ಕೊಳಗಾದ ಹೆಣ್ಣೊಬ್ಬಳಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದಾಳೆ ಈ ಮಂಡ್ಯದ ಗಟ್ಟಿಗಿತ್ತಿ. ಮಂಡ್ಯ ಜಿಲ್ಲೆಯ ಹೆಣ್ಣೊಬ್ಬಳನ್ನು ಮಣಿಪುರ ರಾಜ್ಯದಲ್ಲಿ ಗಡಿ ಕಾಯುವ ಯೋಧನೊಬ್ಬ ಮದುವೆಯಾಗುವುದಾಗಿ ನಂಬಿಸಿ, ಆ ಹೆಣ್ಣು ಮಗಳಿಗೆ ಸತತ ನಾಲ್ಕು ತಿಂಗಳಿನಿಂದ ಲೈಂಗಿಕವಾಗಿ ದೌರ್ಜನ್ಯವೆಸಗಿ ಸಂಪರ್ಕಕ್ಕೆ ಸಿಗದೆ, ಪೋನ್ ಸ್ವಿಚ್ ಆಫ್ ಮಾಡಿಕೊಂಡು ಮಣಿಪುರ ರಾಜ್ಯದಲ್ಲಿ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ.
ಮಂಡ್ಯದ ಹೆಣ್ಣು ಮಗಳ ನೋವನ್ನು ಅರ್ಥ ಮಾಡಿಕೊಂಡು, ಆ ಯೋಧನ ಮನೆಯವರು ಬೇರೆ ಮದುವೆ ಮಾಡಲು ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇದನ್ನು ಅರಿತು ದೌರ್ಜನ್ಯಕ್ಕೊಳಗಾದ ಹೆಣ್ಣಿನ ಜೊತೆ ಮಹಿಳಾ ಹೋರಾಟಗಾರ್ತಿ ರಜನಿರಾಜ್ ಮಣಿಪುರಕ್ಕೆ ಧಾವಿಸಿದ್ದಾಳೆ. ಸೈನಿಕರ ಕೋರ್ಟ್ ಮಾರ್ಷಲ್ ನಲ್ಲಿ ಯೋಧನ ಮೇಲೆ ದೂರು ನೀಡಲು ಹಾಗೂ ಮೇಲಾಧಿಕಾರಿಗಳಾದ ಕರ್ನಲ್ ಅವರಿಗೆ ದೂರು ನೀಡುವ ಮೂಲಕ ಹೆಣ್ಣು ಮಗಳೊಬ್ಬಳಿಗೆ ನ್ಯಾಯ ಕೊಡಿಸಿದ್ದಾರೆ. ಯೋಧನ ಮನಃಪರಿವರ್ತನೆ, ಕಾನೂನು ಅರಿವು, ಜಾಗೃತಿ ಮೂಡಿಸಿ ಅನ್ಯಾಯಕ್ಕೊಳಗಾದ ಹೆಣ್ಣನ್ನು ವರಿಸುವಂತೆ ಒತ್ತಡ ಹಾಕಿ ಆಕೆಯ ಬಾಳು ಬಂಗಾರವಾಗಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ ರಜನಿರಾಜ್. ಯೋಧ ಯಾವುದೇ ಒತ್ತಡಕ್ಕೆ ಮಣಿಯದಿದ್ದರೆ ಆತನ ವಿರುದ್ಧ ಸಂಬಂಧ ಇಲಾಖೆಯೊಂದಿಗೆ ವ್ಯವಹರಿಸಿ ತಕ್ಕ ಶಾಸ್ತಿ ನೀಡಲು ಮುಂದಾಗಿದ್ದಾರೆ. ಕೊಡಗಿನ ವಕೀಲರಾದ ಸ್ಮಿತಾ ಕೂಡ ಇವರಿಗೆ ಸಾಥ್ ನೀಡಿದ್ದಾರೆ.

ಅನ್ಯಾಯಕ್ಕೊಳಗಾದ ಹೆಣ್ಣು ಮಕ್ಕಳ ಪಾಲಿಗೆ ಆಪತ್ಭಾಂದವ ರಾಗಿರುವ ಮಹಿಳಾ ಹೋರಾಟಗಾರ್ತಿ ರಜನಿರಾಜ್ ದಿಟ್ಟ ನಡೆ ಮಂಡ್ಯದಾದ್ಯಂತ ಮನೆಮಾತಾಗಿದೆ. ನಾವು ‘ಮಂಡ್ಯದ ಗಂಡು’ ಅನ್ನುವ ಹೆಸರಿನಲ್ಲಿ ಸಕ್ಕರೆ ನಾಡನ್ನು ಗುರುತಿಸಿಕೊಂಡರೆ ಅಲ್ಲಿ ಅಬಲೆಯರ ಪಾಲಿಗೆ ಆಪತ್ಭಾಂದವ ರಾಗಿರುವ ‘ಮಂಡ್ಯದ ಹೆಣ್ಣು’ ಕೂಡಾ ಸಿಗುತ್ತಾರೆ. ರಜನಿರಾಜ್ ಅವರ ಇಂತಹ ದಿಟ್ಟ ಹೋರಾಟಕ್ಕೆ ಮಂಡ್ಯದ ಜನ ಫಿದಾ ಆಗಿದ್ದಾರೆ. ಆಕೆಯ ಕಾರ್ಯವೈಖರಿಯನ್ನು ಶ್ಲಾಘಿಸುತ್ತಿದ್ದಾರೆ.
