ಗ್ರೇಟರ್ ಬೆಂಗಳೂರು ಅಥಾರಿಟಿಯಲ್ಲಿ ಮತ್ತೊಂದು ದೊಡ್ಡ ಭ್ರಷ್ಟಾಚಾರದ ಹಗರಣ ಬೆಳಕಿಗೆ ಬಂದಿದೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಹೆಮ್ಮಿಗೆಪುರ, ಉತ್ತರಹಳ್ಳಿ ಹೋಬಳಿ, ಮಲ್ಲಸಂದ್ರ ಗ್ರಾಮದ ಸುಮಾರು 19 ಎಕರೆ ಜಾಗಕ್ಕೆ ನಕಲಿ PID ನಂಬರ್ ಮತ್ತು ನಕಲಿ ‘ಎ’ ಖಾತಾ ಸೃಷ್ಟಿಸಿ ಕೋಟಿಗಟ್ಟಲೇ ಹಣ ಪಡೆದ ಆರೋಪ ಎದುರಾಗಿದೆ. ಉಪ ಆಯುಕ್ತ ಅಬ್ದುಲ್ ರಬ್, ಜಂಟಿ ಆಯುಕ್ತೆ ಆರತಿ ಆನಂದ್, ರೆವೆನ್ಯೂ ಇನ್‌ಸ್ಪೆಕ್ಟರ್ (RI) ಶಿವಕುಮಾರ್ ARO ರಮೇಶ್ ರಾಥೋಡ್ ಈ ನಾಲ್ವರ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿದೆ. ಕಾಸಾಗ್ರ್ಯಾಂಡ್ ಲೋಟಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕ ಸತೀಶ್ ಸಿ. ಜಿ. ಅವರಿಗೆ ಅನುಕೂಲ ಮಾಡಿಕೊಡಲು ಈ ಅಧಿಕಾರಿಗಳು ಕೈಗಾರಿಕೆ ನಡೆಸಿದ್ದಾರೆ ಎಂಬ ಆರೋಪವಿದೆ.
ಮೊದಲು 30 ಅಡಿ ವಿಸ್ತೀರ್ಣದ ಜಾಗಕ್ಕೆ ನಕಲಿ PID ನೀಡಲಾಗಿತ್ತು.
ನಂತರ ಕೇವಲ ಒಂದು ತಿಂಗಳ ಅಂತರದಲ್ಲಿ ಕಾಸಾಗ್ರ್ಯಾಂಡ್‌ನಿಂದ ಬಂದ ಪತ್ರದ ಆಧಾರದ ಮೇಲೆ 4,36,144 ಚದರ ಅಡಿ, ಅಂದರೆ ಸರಿ-ಸುಮಾರು 10 ಎಕರೆ 20 ಗುಂಟೆ ಜಾಗಕ್ಕೆ ಅನಧಿಕೃತವಾಗಿ ‘ಎ’ ಖಾತಾ ನೀಡಲಾಗಿದೆ. ಈ ಜಾಗವು ಮೂಲತಃ ರೆವೆನ್ಯೂ ಸ್ವತ್ತು ಆಗಿದ್ದರೂ, ಅದಕ್ಕೆ ಪಾಲಿಕೆಯ ‘ಎ’ ಖಾತಾ ಸೃಷ್ಟಿಸಲಾಗಿದೆ. ಈ ಪ್ರಕ್ರಿಯೆಗಾಗಿ 5 ಕೋಟಿಗೂ ಹೆಚ್ಚು ಕಿಕ್‌ಬ್ಯಾಕ್ ಪಡೆದ ಆರೋಪ ಕೇಳಿ ಬರುತ್ತಿದೆ. ಈ ಅಕ್ರಮದಿಂದ ಪಾಲಿಕೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಗ್ರೇಟರ್ ಬೆಂಗಳೂರು ಅಥಾರಿಟಿಯ ಮುಖ್ಯ ಆಯುಕ್ತರಿಗೆ ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ದೂರಿನ ಆಧಾರದ ಮೇಲೆ ತಪ್ಪಿತಸ್ಥ ಅಧಿಕಾರಿಗಳಿಗೆ ಈಗಾಗಲೇ ಶೋಕಾಸ್ ನೋಟಿಸ್ ಜಾರಿಯಾಗಿದೆ ಎಂದು ತಿಳಿದುಬಂದಿದೆ. ದೂರುದಾರರು ತಕ್ಷಣವೇ ಈ ನಾಲ್ವರು ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು, ಪೂರ್ಣ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಘಟನೆಯಿಂದ ಗ್ರೇಟರ್ ಬೆಂಗಳೂರು ಅಥಾರಿಟಿಯಲ್ಲಿ ಭ್ರಷ್ಟಾಚಾರದ ಮಟ್ಟ ಎಷ್ಟು ಆಳವಾಗಿದೆ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ.
