ಮಂಗಳೂರು ನಗರ ಪೊಲೀಸರ ವಿಶೇಷ ಕಾರ್ಯಾಚರಣೆ, ಕುಖ್ಯಾತ ಅಂತರ್ ರಾಜ್ಯ ವಾಹನ ಚೋರ, ಸರಗಳ್ಳತನ ಆರೋಪಿಯ ಬಂಧನ.

ಕರಾವಳಿ

ನಾಲ್ಕು ದ್ವಿಚಕ್ರ ವಾಹನ, ಎರಡು ಚಿನ್ನದ ಸರ, ಒಟ್ಟು 5 ಲಕ್ಷ ಮೌಲ್ಯದ ಸೊತ್ತುಗಳ ವಶ.

ಇತ್ತೀಚೆಗೆ ಕದ್ರಿ ಬಟ್ಟಗುಡ್ಡೆ ಬಳಿ 83 ವರ್ಷ ಪ್ರಾಯದ ವಯೋವೃದ್ದ ಮಹಿಳೆಯು ತನ್ನ ಮನೆಯ ಬಳಿ ಓಣಿಯಲ್ಲಿದ್ದಾಗ ಅಪರಿತ ವ್ಯಕ್ತಿಯು ದ್ವಿಚಕ್ರ ವಾಹನದಲ್ಲಿ ಬಂದು ಚಿನ್ನದ ಸರವನ್ನು ಕಸಿದುಕೊಂಡು ಹೋದ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿ ತನಿಖೆ ಹಂತದಲ್ಲಿತ್ತು.

ಪ್ರಕರಣದ ಆರೋಪಿಯ ಪತ್ತೆ ಬಗ್ಗೆ ವಿಶೇಷ ತಂಡವನ್ನು ರಚಿಸಿ, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಮಂಗಳೂರು ಪೊಲೀಸರು, ದಿನಾಂಕ: 04-12-2025 ರಂದು ಆರೋಪಿಯ ಬಗ್ಗೆ ವಿಶೇಷ ತಂಡಕ್ಕೆ ದೊರೆತ ಮಾಹಿತಿಯಂತೆ ಕದ್ರಿ ಜೋಗಿ ಮಠದ ಬಳಿ ವಾಹನ ತಪಸಾಣೆ ನಡೆಸುತ್ತಿದ್ದ ಸಮಯ ಸಂಶಯಾಸ್ಪದವಾಗಿ ದ್ವಿಚಕ್ರ ವಾಹನ ಸಂಖ್ಯೆ KA19 HC 6946 ಚಲಾಯಿಸಿಕೊಂಡು ಬಂದ ವ್ಯಕ್ತಿಯನ್ನು ನಿಲ್ಲಿಸಿ ಪರಿಶೀಲಿಸಿದಾಗ, ಈ ವಾಹನವು ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ ವಾಹನವಾಗಿದ್ದು, ಆರೋಪಿಯು ಕಳ್ಳತನ ಮಾಡಿದ ದ್ವಿಚಕ್ರ ವಾಹನವನ್ನು ಬಳಸಿಕೊಂಡು ವಯೋವೃದ್ದರು, ಒಂಟಿ ಮಹಿಳೆಯರನ್ನು ಗುರಿಯಾಗಿಸಿ ಸರಗಳ್ಳತನ ಮಾಡಿರುವುದು ಬೆಳಕಿಗೆ ಬಂದಿರುತ್ತದೆ. ಆರೋಪಿಯನ್ನು ವಿಚಾರಣೆ ನಡೆಸಿ ಇಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಮುಂದಿನ ತನಿಖೆಗಾಗಿ ಆರೋಪಿಯನ್ನು 3 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಆದಿತ್ ಗೋಪಾನ್ @ ಮುತ್ತು ಕೃಷ್ಣ, ಪ್ರಾಯ: 32, ತಂದೆ: ಗೋಪಾನ್ ನಾಯರ್, ವೆಲ್ಲಟ್ಟಿ ವೀಡು, ವಲಿಯರ್ತಲ, ತಿರುವನಂತಪುರಂ, ಕೇರಳ. ಈತನನ್ನು ಪೊಲೀಸರು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಆರೋಪಿಯು ಹಲವಾರು ಪ್ರಕರಣಗಳಲ್ಲಿ ಭಾಗಿಯಾದ ಬಗ್ಗೆ ಮಾಹಿತಿ ನೀಡಿದ್ದು, ಈತನು ಕಳವುಗೈದ ಸೊತ್ತುಗಳನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿರುತ್ತಾರೆ. ಆರೋಪಿ ಅಧಿತ್ ಗೋಪಾನ್ ನಿಂದ ಕದ್ರಿ ಬಟ್ಟಗುಡ್ಡೆ ಬಳಿ ವಯೋವೃದ್ದ ಮಹಿಳೆಯಿಂದ ಸುಲಿಗೆ ಮಾಡಿರುವ 1.5 ಪವನ್ ಸರ. ದಿನಾಂಕ: 27-09-2025 ರಂದು ಮುಲ್ಕಿ ಠಾಣಾ ವ್ಯಾಪ್ತಿಯ ಕೋಟೆಕೇರಿ ಬಳಿ ಒಂಟಿ ಮಹಿಳೆಗೆ ಚೂರಿ ತೋರಿಸಿ, ಬೆದರಿಸಿ ಸುಲಿಗೆಗೈದ 2 ಪವನ್ ಚಿನ್ನದ ಸರ. ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಕಳವುಗೈದ ದ್ವಿಚಕ್ರ ವಾಹನ. ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ಕಳವುಗೈದ ದ್ವಿಚಕ್ರ ವಾಹನ, ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಬಳಿ ಕಳವು ನಡೆಸಿದ ದ್ವಿಚಕ್ರ ವಾಹನ. ಸುರತ್ಕಲ್ ಠಾಣಾ ವ್ಯಾಪ್ತಿಯ ಅಗರಮೇಲು ಬಳಿ ಕಳವು ನಡೆಸಿದ ದ್ವಿಚಕ್ರ ವಾಹನ, ಒಟ್ಟು 4 ದ್ವಿಚಕ್ರ ವಾಹನ ಮತ್ತು ಚಿನ್ನಾಭರಣ ಸಮೇತ ಒಟ್ಟು 5 ಲಕ್ಷ ಮೌಲ್ಯದ ಸೊತ್ತುಗಳನ್ನು ಆರೋಪಿಯಿಂದ ವಶಕ್ಕೆ ಪಡೆಯವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿರುತ್ತಾರೆ

ಆರೋಪಿಯ ಮೇಲೆ ಈಗಾಗಲೇ ತಮಿಳುನಾಡು ರಾಜ್ಯದಲ್ಲಿ ಮನೆಗಳಿಗೆ ಹೊಂಚು ಹಾಕಿ 4 ಚಿನ್ನಾಭರಣ ಕಳ್ಳತನ ಪ್ರಕರಣ ದಾಖಲಾಗಿದ್ದು, ನಾಗರಕೋಯಿಲ್ ಜೈಲಿನಲ್ಲಿ ಸೆರೆವಾಸವನ್ನು ಅನುಭವಿಸಿ ಬಿಡುಗಡೆಗೊಂಡಿರುವ ಆಸಾಮಿಯಾಗಿರುತ್ತಾನೆ. ಈತನು ಅಂತರ್ ರಾಜ್ಯ ಕುಖ್ಯಾತ ಕಳ್ಳನಾಗಿದ್ದು, ಜೈಲಿನಿಂದ ಬಿಡುಗಡೆಯಾದ ನಂತರ ರೈಲಿನಲ್ಲಿ ಭಾರತ ದೇಶದ ನಾನಾ ಕಡೆ ಸುತ್ತಾಡಿಕೊಂಡು ರೈಲ್ವೇ ನಿಲ್ದಾಣದ ಬಳಿ ಆಸುಪಾಸಿನಲ್ಲಿ ಇರುವ ದ್ವಿಚಕ್ರವಾಹನ ಕಳ್ಳತನ ಮಾಡಿ ಸುಲಿಗೆ ಮಾಡುತ್ತಿದ್ದನು. ನಂತರ ರೈಲಿನಲ್ಲಿ ವಿವಿಧ ಕಡೆ ಪ್ರಯಾಣ ಮಾಡಿ ತಲೆಮರೆಸಿಕೊಳ್ಳುತ್ತಿದ್ದನು. ಈತನ ಪತ್ತೆಗೆ ಮಂಗಳೂರು ಪೊಲೀಸರ ವಿಶೇಷ ಪ್ರಯತ್ನದಿಂದ ಈ ಪ್ರಕರಣವು ಅತೀ ಶೀಘ್ರದಲ್ಲಿ ಪತ್ತೆಯಾಗಿರುತ್ತದೆ. ಈ ಪ್ರಕರಣವನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭ ಮತ್ತು ಕದ್ರಿ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ವಿಶೇಷ ಕಾರ್ಯಚರಣೆ ನಡೆಸಿ ಈ ಪತ್ತೆ ಕಾರ್ಯಚರಣೆ ಮಾಡಿರುತ್ತಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿವಿಧ ಠಾಣೆಗಳಲ್ಲಿ 2025 ನೇ ಸಾಲಿನಲ್ಲಿ ಈ ವರೆಗೆ 72 ದ್ವಿಚಕ್ರ ವಾಹನಗಳು ಕಳವಾಗಿದ್ದು, ಇದರ ಪೈಕಿ ಕಳವಾದ 57 ದ್ವಿಚಕ್ರ ವಾಹನಗಳು ಪತ್ತೆ ಮಾಡಲಾಗಿದ್ದು, 15 ದ್ವಿಚಕ್ರ ವಾಹನಗಳು ಮಾತ್ರ ಪತ್ತೆಗೆ ಬಾಕಿ ಇದೆ. ನಗರದಲ್ಲಿ ಒಟ್ಟು ಶೇಕಡ 79% ರಷ್ಟು ಕಳವಾದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಲಾಗಿದೆ. ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿರುತ್ತಾರೆ.