ಕಟ್ಟಡ ಲೈಸೆನ್ಸ್, ಭೂ ಪರಿವರ್ತನೆಗಾಗಿ ಜನಸಾಮಾನ್ಯ ಆರು ಸರಕಾರಿ ಕಚೇರಿ ಅಲೆದಾಡುವಂತಾಗಿದೆ..

ರಾಜ್ಯ

ಸರಕಾರ ಕಾನೂನನ್ನು ಸರಳೀಕರಣ ಗೊಳಿಸಲಿ.. ನಿವೇಶನ ವಿನ್ಯಾಸದ ಅನುಮೋದನೆ ಗ್ರಾಮ ಪಂಚಾಯತ್ ಗೆ ನೀಡಲಿ..

ಸರಕಾರದ ಗಮನ ಸೆಳೆದ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನತೆ ತನ್ನ ಸ್ವಂತ ಜಮೀನಿನಲ್ಲಿ ಮನೆ ನಿರ್ಮಿಸಲು ಮುಂದಾದಾಗ ಸರ್ಕಾರದ ವಿವಿಧ ಇಲಾಖೆಗಳ ಅನುಮೋದನೆ ಪಡೆಯಲು ಕಷ್ಟ ಪಡಬೇಕಾಗಿದೆ. ಭೂ ಅಭಿವೃದ್ಧಿ ಹಾಗೂ ಕಟ್ಟಡ ಲೈಸೆನ್ಸ್ ಪಡೆಯುವ ಸಂದರ್ಭದಲ್ಲೂ ಗಂಭೀರ ಸಮಸ್ಯೆ ಎದುರಿಸುವಂತಾಗಿದೆ ಎಂದು ಬೆಳಗಾವಿ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಸದನದ ಗಮನ ಸೆಳೆದರು.

ಭೂ ಅಭಿವೃದ್ಧಿ ಹಾಗೂ ಕಟ್ಟಡ ಲೈಸೆನ್ಸ್ ಪ್ರಕ್ರಿಯೆಗೆ ಸರಕಾರ ಕಠಿಣ ಕಾನೂನು ಜಾರಿಗೊಳಿಸಿದ ಪರಿಣಾಮ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ದಲ್ಲಾಳಿಗಳನ್ನು ಅವಲಂಬಿಸುವಂತಾಗಿದೆ. ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ. ಸರಕಾರ ಕಾನೂನನ್ನು ಸಡಿಲಗೊಳಿಸಿದರೆ ಜನಸಾಮಾನ್ಯರಿಗೆ ತುಂಬಾ ಉಪಕಾರವಾಗಬಹುದು.

11ಇ ನಕ್ಷೆಗಾಗಿ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ, ಭೂ ಪರಿವರ್ತನೆಗಾಗಿ ಕಂದಾಯ ಇಲಾಖೆ, ನಿವೇಶನದ ವಿನ್ಯಾಸ ಅನುಮೋದನೆ, ಕಟ್ಟಡ ನಕ್ಷೆಯ ತಾಂತ್ರಿಕ ಅನುಮೋದನೆ ಹಾಗೂ ಸ್ವಾಧೀನ ಪ್ರಮಾಣ ಪತ್ರಕ್ಕಾಗಿ ನಗರಾಭಿವೃದ್ಧಿ ಇಲಾಖೆಯ ಸ್ಥಳೀಯ ನಗರ ಯೋಜನಾ ಪ್ರಾಧಿಕಾರ, ನಮೂನೆ 11-ಎ, ಕಟ್ಟಡ ಪರವಾನಿಗೆ ಹಾಗೂ ಕದ ನಂಬರಿಗಾಗಿ ಗ್ರಾಮ ಪಂಚಾಯತ್, ಕಟ್ಟಡ ಸ್ವಾಧೀನ ಪ್ರಮಾಣ ಪತ್ರಕ್ಕಾಗಿ ಕಾರ್ಮಿಕ ಇಲಾಖೆ ಹಾಗೂ ವಿದ್ಯುತ್ ಸಂಪರ್ಕಕ್ಕಾಗಿ ಮೆಸ್ಕಾಂ ಸೇರಿದಂತೆ ಕನಿಷ್ಠ ಆರು ಇಲಾಖೆಗಳ ಬಳಿ ಸಾರ್ವಜನಿಕರು ಅಲೆದಾಡಬೇಕಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮಕ್ಕೆ ತಿದ್ದುಪಡಿ ತಂದು ಗ್ರಾಮಾಂತರ ಯೋಜನಾ ನಿಯಮವನ್ನು ಜಾರಿಗೆ ತಂದು ನಿವೇಶನದ ವಿನ್ಯಾಸ ಅನುಮೋದನೆ ಅಧಿಕಾರವನ್ನು ಗ್ರಾಮ ಪಂಚಾಯತ್ ಗಳಿಗೆ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಇದರಿಂದ ಗ್ರಾಮೀಣ ಜನರು ನಗರ, ತಾಲ್ಲೂಕು, ಜಿಲ್ಲಾ ಕೇಂದ್ರಗಳಿಗೆ ಅಲೆದಾಟ ತಪ್ಪುತ್ತದೆ ಎಂದು ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.