ಬಂಟ್ವಾಳ ಬುಡಾ ಕಛೇರಿಯಲ್ಲಿ ಅಧಿಕಾರಿಗಳದ್ದೇ ಕಾರ್ಬಾರ್.!, ಅಧಿಕಾರಿಗಳು ಆಡಿದ್ದೇ ಆಟ. ಶಾಸಕರು, ಅಧ್ಯಕ್ಷರು ಮೌನ ಯಾಕೆ?

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ಜನ ಗ್ರಾಮಾಂತರ ಏಕವಿನ್ಯಾಸ, ತಾಂತ್ರಿಕ ಅನುಮೋದನೆ, ಅಭಿವೃದ್ಧಿ ಇವೆಲ್ಲವುಗಳಿಗೆ ಆಯಾ ತಾಲೂಕಿನ ಯೋಜನಾ ಪ್ರಾಧಿಕಾರದ ಕಚೇರಿಗೆ ತೆರಳಬೇಕಿದೆ. ಆದರೆ ಈ ಯೋಜನಾ ಪ್ರಾಧಿಕಾರದ ಕಚೇರಿಗಳ ಸಿಬ್ಬಂದಿಗಳು ಸ್ವಲ್ಪವೂ ಮಾನವೀಯತೆ ಇಲ್ಲದೆ ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಅಲೆದಾಡಿಸುವುದೇ ಇವರ ಕೆಲಸ. ಜನಸಾಮಾನ್ಯರನ್ನು ಸತಾಯಿಸುವುದು ಬಿಟ್ಟರೆ ಮಣ್ಣಾಂಗಟ್ಟಿ ಬೇರೇನೂ ಇಲ್ಲಿ ಹಾಗದು.

ಅದರಲ್ಲೂ ಎಲ್ಲೂ ಇಲ್ಲದ ಕೆಲವು ನಿಯಮಗಳನ್ನು ಬಂಟ್ವಾಳ ಯೋಜನಾ ಪ್ರಾಧಿಕಾರದ (ಬುಡಾ) ಕಚೇರಿಯಲ್ಲಿ ಜಾರಿಗೆ ತರಲಾಗಿದೆ. ಬಂಟ್ವಾಳದ ಮಿನಿವಿಧಾನ ಸೌಧದ ಎದುರಿಗಿನ ಕಟ್ಟಡದಲ್ಲಿ ಬುಡಾ ಕಚೇರಿ ಬಾಗಿಲು ತೆಗೆದು ಕಾರ್ಯಾರಂಭ ಮಾಡಿದರೂ ಅಸಲಿಗೆ ಬುಡಾ ಕಚೇರಿ ಇರುವ ಕಟ್ಟಡವೇ ಅಕ್ರಮವಂತೆ!

‘ಯಾರಿಗೇಳೋಣ ನಮ್ಮ ಪ್ರಾಬ್ಲಂ’ ಅನ್ನುವಂತೆ ಬುಡಾ ಕಚೇರಿಯ ಕಥೆ ವ್ಯಥೆಯ ಬಗ್ಗೆ ಜನಸಾಮಾನ್ಯರು ಸುಸ್ತು ಆಗಿಬಿಟ್ಟಿದ್ದಾರೆ. ಪಂಚಾಯತ್‍ನಿಂದ ಅಧಿಕಾರವನ್ನು ಕಿತ್ತುಕೊಂಡು ಯೋಜನಾ ಪ್ರಾಧಿಕಾರಕ್ಕೆ ಶಿಫ್ಟ್ ಮಾಡಿದ ಸರಕಾರ ಒಂದು ಕಡೆ ಸುಲಭದಲ್ಲಿಯೇ ಹಳ್ಳಿಗಳಲ್ಲಿ ಸಿಗುತ್ತಿದ್ದ ಪರವಾನಿಗೆಯನ್ನು ನಗರ ವ್ಯಾಪ್ತಿಗೆ ಬದಲಾಯಿಸಿ ಜನರನ್ನು ಬೇಕಾಬಿಟ್ಟಿಯಾಗಿ ಅಲೆದಾಡಿಸುವಂತೆ ಮಾಡಿ ಇದೀಗ ಬುಡಾ ಕಚೇರಿಯಲ್ಲಿ ಕಡತ ಪರಿಶೀಲನೆಗೆ ಟೋಕನ್ ವ್ಯವಸ್ಥೆ ಮಾಡಿರುವುದು ಇದೀಗ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಮನೆ ನಿರ್ಮಾಣಕ್ಕಾಗಿ ಜನ ಬುಡಾ ಕಚೇರಿಗೆ ಏಕವಿನ್ಯಾಸ ನಕ್ಷೆ ಹಾಗೂ ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದರೆ, ಇದರ ಕಡತ ಪರಿಶೀಲನೆಗಾಗಿ ಬುಡಾ ಕಚೇರಿಯಲ್ಲಿ ಜನರಿಗೆ ಟೋಕನ್ ನೀಡಲಾಗುತ್ತಿದೆ. ಜನ ಬೆಳಿಗ್ಗೆ ಕಚೇರಿಗೆ ಬಂದು ಕ್ಯೂ ನಿಂತು ಟೋಕನ್ ಪಡೆದುಕೊಳ್ಳಬೇಕು. ಅಬ್ಬಬ್ಬಾ ಎಂದರೆ ದಿನವೊಂದಕ್ಕೆ ನಗರ ಪ್ರದೇಶಗಳ ಜನರಿಗೆ ಕೇವಲ 15 ಹಾಗೂ ಗ್ರಾಮಾಂತರ ಪ್ರದೇಶದ ಜನರಿಗೆ 20 ಟೋಕನ್‍ಗಳನ್ನು ಮಾತ್ರ ವಿತರಿಸಲಾಗುತ್ತಿದೆಯಂತೆ. ಕೆಲಸಕ್ಕೆ ರಜೆ ಹಾಕಿ ಬುಡಾ ಕಚೇರಿಗೆ ಬಂದರೆ ಇಲ್ಲಿ ಟೋಕನ್ ಮುಗಿಯಿತು ಅನ್ನುವ ಬೋರ್ಡ್ ಹಾಕಿ ಹಿಂದೆ ಕಳುಹಿಸಲಾಗುತ್ತಿದೆಯಂತೆ.

ಬುಡಾ ಕಚೇರಿಗೆ ಬರುವುದು ಶ್ರೀಮಂತರೇನಲ್ಲ. ಶ್ರೀಮಂತರು, ಅಧಿಕಾರಶಾಹಿಗಳು ತಮ್ಮ ಕೆಲಸಕ್ಕಾಗಿ ಅಧಿಕಾರಿಗಳನ್ನು ಕಚೇರಿಗೆ ಕರೆಯಿಸಿಕೊಂಡು ಕೆಲಸ ಮಾಡಿಕೊಳ್ಳುತ್ತಾರೆ. ಆದರೆ ಈ ಕ್ಯೂನಲ್ಲಿ ನಿಲ್ಲುವವರು ಬಡವರು, ಮಧ್ಯಮವರ್ಗದವರು, ರಜೆ ಹಾಕಿ ಕೆಲಸಕ್ಕಾಗಿ ಕಚೇರಿಗೆ ಬಂದರೆ ಟೋಕನ್ ಸಿಗದೆ ಹಿಂದಕ್ಕೆ ಹೋಗಬೇಕಾಗಿದೆ. ಅತ್ತ ಕೆಲಸವೂ ಇಲ್ಲ, ಇತ್ತ ಬಂದಿರುವ ಕೆಲಸವೂ ಆಗಿಲ್ಲ.

ಮತ್ತೊಂದು ವಿಪರ್ಯಾಸವೆಂದರೆ, ಟೋಕನ್ ದೊರತರೂ ಕಡತ ಪರಿಶೀಲನೆ ಸಂದರ್ಭ ಏನಾದರೂ ವ್ಯತ್ಯಾಸಗಳು ಕಂಡು ಬಂದಲ್ಲಿ ಅದನ್ನು ಸರಿಪಡಿಸಲು ಮತ್ತೆ ಟೋಕನ್ ಪಡೆದೆ ಕಚೇರಿ ಅಧಿಕಾರಿಯನ್ನು ಸಂಪರ್ಕಿಸಬೇಕಾದ ದುರಾವಸ್ಥೆ ಇಲ್ಲಿದೆ. ಅದೂ ಅಲ್ಲದೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ನಾಗರಿಕರಿಗೆ ವಾರದಲ್ಲಿ 2 ದಿನ ಹಾಗೂ ಗ್ರಾಮಾಂತರ ಪ್ರದೇಶದ ಜನರಿಗೆ ವಾರಕ್ಕೆ 3 ದಿನ ಕಾಲ ಕಡತ ಪರಿಶೀಲನೆಗೆ ದಿನ ನಿಗದಿಪಡಿಸಲಾಗಿದೆ. ಇದರಿಂದ ನಾಗರಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ.

ಒಟ್ಟಿನಲ್ಲಿ ಜನ ತಾವು ದುಡಿದು ಸಂಪಾದಿಸಿದ ಹಣ ಖರ್ಚು ಮಾಡಿ ಮನೆ ನಿರ್ಮಾಣದ ಕನಸು ಕಂಡರೂ ಸರಕಾರದ ಅಧೀನ ಸಂಸ್ಥೆಗಳ ಬೇಕಾಬಿಟ್ಟಿ ನಿಯಮಗಳಿಂದಾಗಿ ತಮ್ಮ ಕನಸು ಈಡೇರಿಸಿಕೊಳ್ಳದ ಪರಿಸ್ಥಿತಿ ಉಂಟಾಗಿದೆ. ಅಧಿಕಾರಿಗಳ ಜೊತೆಗೆ ಜನಪ್ರತಿನಿಧಿಗಳು ಇದಕ್ಕೆ ನೇರ ಹೊಣೆ.

ಶಾಸಕರು, ಅಧ್ಯಕ್ಷರು ಯಾಕೆ ಮೌನ?

ಬಂಟ್ವಾಳ ಬುಡಾ ಕಚೇರಿಯಲ್ಲಿ ಅಧಿಕಾರಿಗಳು ಆಡಿದ್ದೇ ಆಟ. ದಿನಕ್ಕೊಂದು ಹೊಸ ಹೊಸ ರೂಲ್ಸ್ ತಂದು ಜನರನ್ನು ಸುಖಾಸುಮ್ಮನೆ ಅಲೆದಾಡಿಸುವುದರಲ್ಲಿಯೇ ಮಜಾ ತೆಗೆದುಕೊಳ್ಳುವ ಅಧಿಕಾರಿಗಳು ಕಿಂಚಿತ್ತೂ ಮಾನವೀಯತೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಯಾವುದೇ ತಾಲೂಕಿನ ಯೋಜನಾ ಪ್ರಾಧಿಕಾರ ಕಚೇರಿಯಲ್ಲಿ ಟೋಕನ್ ವ್ಯವಸ್ಥೆ ಇಲ್ಲದಿದ್ದರೂ, ಇಲ್ಲಿ ಜನಸಾಮಾನ್ಯರನ್ನು ಸತಾಯಿಸಲೆಂದೇ ಟೋಕನ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಆನೆ ನಡೆದಿದ್ದೇ ದಾರಿ ಅನ್ನುವಂತೆ ರೂಲ್ಸ್ ಪ್ರಯೋಗಿಸುವಾಗ ಅದಕ್ಕೆ ಕಡಿವಾಣ ಹಾಕಬೇಕಾದ ಸ್ಥಳೀಯ ಶಾಸಕರು, ಬುಡಾ ಅಧ್ಯಕ್ಷರು ಮೌನಕ್ಕೆ ಶರಣಾಗಿದ್ದಾರೆ. ಬಂಟ್ವಾಳದಲ್ಲಿ ಜನಪ್ರತಿನಿಧಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಅಷ್ಟೇ. ಇಲ್ಲಿ ಏನಿದ್ದರೂ ಅಧಿಕಾರಿಗಳ ಕಾರುಬಾರು ಅಷ್ಟೇ. ಇಲ್ಲಿನ ಶಾಸಕರು ರಾಜಕೀಯ ನಿವೃತ್ತಿಯ ಯೋಚನೆಯಲ್ಲಿದ್ದರೆ, ಬುಡಾ ಅಧ್ಯಕ್ಷರು ಮಾಜಿ ಸಚಿವರೊಬ್ಬರ ಬ್ಯಾಗ್ ಹೊತ್ತುಕೊಳ್ಳುವುದಕ್ಕೆ ಸೀಮಿತರಾಗಿದ್ದಾರೆ. ಇನ್ನಾದರೂ ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಲಿ.