ವಿಟ್ಲ: ಅಕ್ರಮ ಕೋಳಿ ಅಂಕಕ್ಕೆ ಧಾಳಿ, 27 ಜನರ ವಿರುದ್ದ ಪ್ರಕರಣ ದಾಖಲು.

ಕರಾವಳಿ

ಕೋಳಿ ಅಂಕದಲ್ಲೂ ರಾಜಕೀಯ; ನಿನ್ನೆ ಕಾಂಗ್ರೆಸ್ ಶಾಸಕರ ನಾಯಕತ್ವ, ಇಂದು ಬಿಜೆಪಿಯ ಸಂಜೀವ ಮಠಂದೂರು, ಜಿಲ್ಲಾಧ್ಯಕ್ಷ ಸತೀಶ ಕುಂಪಲ ನೇತ್ರತ್ವ

ಬಂಟ್ವಾಳ ಕೇಪು ಗ್ರಾಮದ ಕೇಪು ಮುರಳೀಧರ ರೈ ಎಂಬವರ ಗದ್ದೆಯಲ್ಲಿ, ದಿನಾಂಕ 21-12-2025 ರಂದು ಬೆಳಿಗ್ಗೆ ಹಲವು ಜನರು‌ ಸೇರಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಬಂದ ಮಾಹಿತಿಯಂತೆ ವಿಟ್ಲ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಕೇಪು ಗ್ರಾಮದ ಕೇಪು ಮುರಳೀಧರ ರೈ ಎಂಬವರ ಗದ್ದೆಯಲ್ಲಿ, ಹಲವಾರು ಜನರು ಗುಂಪು ಸೇರಿಕೊಂಡು ಹಿಂಸಾತ್ಮಕವಾಗಿ ಕೋಳಿ ಅಂಕ ಆಟವಾಡುತ್ತಿರುವುದು ಕಂಡುಬಂದಿರುತ್ತದೆ. ಅಲ್ಲಿ ನೆರೆದಿದ್ದ ಜನರಿಗೆ ಅಕ್ರಮ‌ ಕೋಳಿ ಅಂಕದ ಬಗ್ಗೆ ಕಾನೂನು ತಿಳುವಳಿಕೆ ನೀಡಿದರೂ, ಸೇರಿದ್ದ ಜನರು ಸ್ಥಳದಿಂದ ತೆರಳದೇ ನಿಂತುಕೊಂಡು ಬಿಜೆಪಿ ಪಕ್ಷದ ಸಂಜೀವ ಮಠಂದೂರು, ಮುರಳೀಧರ ರೈ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಕುಂಪಲ, ದಯಾನಂದ ಉಜಿರೆಮಾರು, ಹರಿಪ್ರಸಾದ್‌ ಯಾದವ್‌, ಅಶೋಕ ಶೆಟ್ಟಿ ವಿಟ್ಲ, ರಾಜೇಶ್‌ ಬಾಳೆಕಲ್ಲು ಎಂಬವರುಗಳು ಅಲ್ಲಿ ಸೇರಿದ್ದ ಜನರಿಗೆ ಕಾನೂನು ಬಾಹಿರ ಕೋಳಿ ಅಂಕವನ್ನು ಮುಂದುವರಿಸುವಂತೆ ಪ್ರಚೋದನೆ ಮತ್ತು ದುಷ್ಪ್ರೇರಣೆಯನ್ನು ನೀಡಿರುತ್ತಾರೆ.

ಪೊಲೀಸರು ಹೆಚ್ಚಿನ ಭದ್ರತೆಯನ್ನು ಏರ್ಪಡಿಸಿ, ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ 20 ಜನರನ್ನು ವಶಕ್ಕೆ ಪಡೆದು, ಸ್ಥಳದಲ್ಲಿದ್ದ 20 ಹುಂಜ ಕೋಳಿಗಳನ್ನು ಹಾಗೂ ಕೋಳಿ ಅಂಕಕ್ಕೆ ಬಳಸುವ ಕತ್ತಿಗಳನ್ನು ಸ್ವಾಧೀನಪಡಿಸಿಕೊಂಡು, ಕಾನೂನು ಬಾಹಿರ ಕೃತ್ಯಕ್ಕೆ ಪ್ರಚೋದನೆ ಮತ್ತು ದುಷ್ಪ್ರೇರಣೆ ನೀಡಿದವರು ಹಾಗೂ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದವರು ಸೇರಿ ಒಟ್ಟು 27 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 191/2025, ಕಲಂ: 189(2), 49, 221, 223, 190 BNS 2023 ಮತ್ತು 3, 11 PREVENTION OF CRUELTY TO ANIMALS ACT ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಿನ್ನೆ ಇದೇ ಜಾಗದಲ್ಲಿ ಶಾಸಕ ಅಶೋಕ ಕುಮಾರ್ ರೈ ಕೋಳಿ ಅಂಕ ನಡೆಸುವಂತೆ ತಿಳಿಸಿದ್ದರು. ಹಾಗಾಗಿ ಪೊಲೀಸರ ಎಚ್ಚರಿಕೆಯ ನಡುವೆಯೂ ಕೋಳಿ ಅಂಕ ನಡೆದಿತ್ತು. ಪೊಲೀಸರ ಆರೋಪದ ಪ್ರಕಾರ, ಶಾಸಕ ಅಶೋಕ್ ಕುಮಾರ್ ರೈ ಅಕ್ರಮಕ್ಕೆ ದುಷ್ಪ್ರೇರಣೆ ನೀಡಿದ್ದಾರೆ ಎನ್ನಲಾಗಿದೆ. ಸಂಜೆ 5ಗಂಟೆ ವೇಳೆಗೆ ಪೊಲೀಸರು ಸ್ಥಳದಲ್ಲಿದ್ದ 16 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಅಂಕಕ್ಕೆ ತಂದಿದ್ದ 22 ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ ಅಡಿ ಶಾಸಕ ಅಶೋಕ್ ಕುಮಾರ್ ರೈ, ಯಾವುದೇ ಪರವಾನಿಗೆ ಇಲ್ಲದೇ ಕೋಳಿ ಅಂಕಕ್ಕೆ ಜಾಗ ನೀಡಿದ ಮುರಳಿಧರ ರೈ ಸೇರಿದಂತೆ 17 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಒಟ್ಟಾರೆ ಈ ಕೋಳಿ ಅಂಕಕ್ಕೆ ರಾಜಕೀಯ ಬೆರೆಸಿ ಜಿದ್ದಾಟಕ್ಕೆ ಕಾರಣವಾಗಿದೆ. ಈ ರಾಜಕರಣಿಗಳನ್ನು ನಂಬಿ ಕೋಳಿ ಅಂಕಕ್ಕೆ ಬಂದವರು ಮಾತ್ರ ಸಂಕಟ ಶುರುವಾಗಿದೆ