ಮುಸ್ಲಿಂ ಸಮುದಾಯದ ಪರ ಧ್ವನಿ ಎತ್ತಿದರೆ ಜೋಕೆ. ಕಾಂಗ್ರೆಸ್ ನಿಂದ ಔಟ್

ಕರಾವಳಿ

ಅಂದು ಅಶ್ರಫ್, ಇಂದು ಸಿರಾಜ್, ನಾಳೆ ನೀವು.!

ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ಹಿಂಬಾಲಕರಾಗಿ ಜೈಕಾರ ಕೂಗುವುದು, ನಾಯಕರ ಹಿಂದೆ ಮುಂದೆ ನಿಂತು ಸೆಲ್ಫಿ ತೆಗೆಯುವುದು, ನಾಯಕರ ಮುಂದೆ ಕೈ ಕಟ್ಟಿ ನಿಲ್ಲುವುದು.. ಬ್ಯಾನರ್, ಬಂಟಿಂಗ್ಸ್ ಕಟ್ಟುವುದು ಇವಿಷ್ಟೇ ಸದ್ಯ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರ, ಎರಡನೇ ಹಂತದ ನಾಯಕರ ಪರಿಸ್ಥಿತಿ. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಉಸಿರಾಡುವುದು ಮುಸ್ಲಿಂ ಸಮುದಾಯದ ಮತಗಳಿಂದ. ಕೋಮುವಾದಿಗಳು ಅಧಿಕಾರಕ್ಕೆ ಏರುತ್ತಾರೆ, ಬಿಜೆಪಿ ಬರುತ್ತದೆ ಎಂದು ಚುನಾವಣಾ ಸಮಯದಲ್ಲಿ ಮುಸ್ಲಿಮರಿಗೆ ಗುಮ್ಮ ತೋರಿಸಿ ಮುಸ್ಲಿಂ ಸಮುದಾಯದ ಮತ ಹೋಲ್ ಸೇಲ್ ಆಗಿ ಕಾಂಗ್ರೆಸ್ ಗೆ ಬೀಳುತ್ತದೆ. ಒಂದು ವೇಳೆ ಮುಸ್ಲಿಂ ಸಮುದಾಯ ಕೈ ಕೊಟ್ಟು, ಪರ್ಯಾಯದತ್ತ ಮುಖ ಮಾಡಿದರೆ ಕಾಂಗ್ರೆಸ್ ಇಡುಗಂಟು ಇಲ್ಲದೆ ಪಾತಾಳ ಸೇರುವುದು ಕನ್ಫರ್ಮ್.

ಆದರೆ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಕಳೆದ ಆರೇಳು ದಶಕಗಳಿಂದ ತನ್ನೆಲ್ಲವನ್ನು ಸಮರ್ಪಿಸಿದರೂ ಕಾಂಗ್ರೆಸ್ ಸಮುದಾಯಕ್ಕೆ ಕೊಟ್ಟಿದ್ದು ಬರೀ ಶೂನ್ಯ. ಸಮುದಾಯದ ಕೆಲವೊಂದು ನಾಯಕರು ದೊಡ್ಡ ದೊಡ್ಡ ಹುದ್ದೆ ಅಲಂಕರಿಸಿದರೂ ಬೆನ್ನೆಲುಬು ಇಲ್ಲದ ನಾಯಕರಿಂದ ಸಮುದಾಯಕ್ಕೆ ಏನೂ ಲಾಭವಾಗಿಲ್ಲ. ಸಮುದಾಯದ ಓಟು ಪಡೆದು ಜಾತ್ಯತೀತ ನೆಲೆಯಲ್ಲಿ ಇತರರು ಅಧಿಕಾರ, ಅಂತಸ್ತು ಪಡೆದಿದ್ದೇ ಹೆಚ್ಚು. ಸಮುದಾಯಕ್ಕೆ ಅನ್ಯಾಯವಾದಾಗ ಕಣ್ಣೊರೆಸುವ ಕೆಲಸ ಮಾಡುತ್ತಿದ್ದರೆ ಹಳ್ಳಿಯಿಂದ ದಿಲ್ಲಿಯವರೆಗೆ ಕಾಂಗ್ರೆಸ್ ಪಕ್ಷದ ಪರ ಸಮುದಾಯ ಒಗ್ಗಟ್ಟಿನಿಂದ ನಿಲ್ಲುತ್ತಿತ್ತು. ಆದರೆ ಇಂದು ಹಳ್ಳಿಗಳಲ್ಲಿ ಸಮುದಾಯಕ್ಕೆ ಅನ್ಯಾಯವಾದಾಗ ಕೆಲವರು ಬೇರೆ ಬೇರೆ ಪಕ್ಷದತ್ತ ಮುಖ ಮಾಡುತ್ತಿರಲಿಲ್ಲ.

ಕಾಂಗ್ರೆಸ್ ಮುಸ್ಲಿಂ ಸಮುದಾಯಕ್ಕೆ ನಿರಂತರ ಅನ್ಯಾಯ ಮಾಡುತ್ತಲೇ ಇದೆ. ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಸಮುದಾಯದ ಪರ ಧ್ವನಿ ಎತ್ತಿದರೆ ಅವರ ಧ್ವನಿಯನ್ನು ಅಮುಕಿಸುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇದೆ. ಅಂತಹ ನಾಯಕರನ್ನು ಮೂಲೆ ಸೇರಿಸಲಾಗುತ್ತದೆ. ಕೇವಲ ಬಕೆಟ್ ಹಿಡಿಯುವ ನಾಯಕರನ್ನೇ ಸಮುದಾಯದ ನಾಯಕರೆಂದು ಬಿಂಬಿಸಲಾಗುತ್ತದೆ. ಅಂತಹವರನ್ನು ಬೆಳೆಸಲಾಗುತ್ತಿದೆ.

ಮಾಜಿ ಮೇಯರ್ ಅಶ್ರಫ್ ಸಮುದಾಯದ ಪರ ಧ್ವನಿ ಎತ್ತಿದ ಕಾರಣಕ್ಕೆ ಕಾಂಗ್ರೆಸ್ ಅವರನ್ನು ಸಂಪೂರ್ಣ ಮೂಲೆಗುಂಪು ಮಾಡಿತ್ತು. ಪೌರತ್ವ ವಿವಾದದ ಸಂದರ್ಭದಲ್ಲಿ ಸಮುದಾಯದ ಪರ ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದು ಅಶ್ರಫ್ ಮಾತ್ರ. ಕುದ್ರೋಳಿಯಲ್ಲಿ ಗೋಲಿಬಾರ್ ಗೆ ಇಬ್ಬರು ಅಮಾಯಕರು ಜೀವ ತೆತ್ತಾಗ ಸಮುದಾಯ ಅನುಭವಿಸುವ ಸಂಕಷ್ಟದ ಬಗ್ಗೆ ಗಟ್ಟಿ ಧ್ವನಿ ಎತ್ತಿದ್ದರು. ಅವರನ್ನೆ ಟಾರ್ಗೆಟ್ ಮಾಡಲಾಗಿತ್ತು. ಇಂದು ಅವರ ಪರಿಸ್ಥಿತಿ ಹೇಗಿದೆ. ಎಲ್ಲೂ ಸಲ್ಲದ ನಾಯಕರಾಗಿ ಅಶ್ರಫ್ ಅವರನ್ನು ಮೂಲೆಗುಂಪು ಮಾಡಲಾಗಿದೆ.

ಇದೀಗ ಸಿರಾಜ್ ಬಜಪೆ ಅನ್ನುವ ಯುವ ನಾಯಕನಿಗೂ ಅಂತಹದ್ದೇ ಪರಿಸ್ಥಿತಿ ಬಂದಿದೆ. ಅಮಾಯಕ ಅಬ್ದುಲ್ ರಹಿಮಾನ್ ಕೊಲೆ ಸಂದರ್ಭ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದು ಸಿರಾಜ್. ಕಾಂಗ್ರೆಸ್ ಮುಸ್ಲಿಂ ನಾಯಕರು ಪಕ್ಷದ ವಿರುದ್ಧ ಗುಡುಗಿದಾಗ ಮುಂಚೂಣಿಯಲ್ಲಿದ್ದವರು. ಜಿಲ್ಲೆಗೆ ರಾಜ್ಯ ಮಟ್ಟದ ನಾಯಕರು ಭೇಟಿ ನೀಡಿದಾಗ ಮುಲಾಜಿಲ್ಲದೆ ಸಮುದಾಯ ಅನುಭವಿಸುವ ಸಂಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಇದು ಸಮುದಾಯದ ಸ್ವಾಭಿಮಾನಿ ನಾಯಕನ ಕರ್ತವ್ಯವೂ ಹೌದು. ಕಾಂಗ್ರೆಸ್ ನಿಂದ ಅಧಿಕಾರ ಪಡೆದ ಮುಸ್ಲಿಂ ನಾಯಕರೆಲ್ಲ ಕೈ ಕಟ್ಟಿ ನಿಂತರೆ, ತನ್ನ ರಾಜಕೀಯ ಭವಿಷ್ಯಕ್ಕೆ ಮುಳ್ಳಾಗಬಹುದು ಎಂಬುದನ್ನು ಯೋಚಿಸದೆ ಸಮುದಾಯದ ಪರ ಗಟ್ಟಿಯಾಗಿ ನಿಂತರು. ಇದರ ಪರಿಣಾಮ ಕ್ಷೇತ್ರದಲ್ಲಿ ಜನಬೆಂಬಲ ಇದ್ದರೂ ಅವರನ್ನು ಮೂಲೆಗುಂಪು ಮಾಡಿ ಇನ್ನೊಬ್ಬ ಮುಸ್ಲಿಂ ಯುವಕನಿಗೆ ಅವಕಾಶ ಕಲ್ಪಿಸಲಾಗಿದೆ. ಮುಸ್ಲಿಂ ಸಮುದಾಯದ ನಾಯಕರಿಗೆ ಅವಕಾಶ ಕೊಟ್ಟಿದೆಯಲ್ಲ ಎಂದು ಯೋಚಿಸಬಹುದು. ಆದರೆ ಬೆನ್ನೆಲುಬು ಇಲ್ಲದ, ಮುಸ್ಲಿಂ ಸಮುದಾಯ ಅನ್ಯಾಯಕ್ಕೊಳಗಾದಾಗ ನಾಯಕರ ಮುಂದೆ ಕೈ ಕಟ್ಟಿ ನಿಲ್ಲುವವ ಲೀಡರ್ ಅಲ್ಲ. ಸಮುದಾಯದ ಸಂಕಷ್ಟವನ್ನು ಅಧಿಕಾರಸ್ಥರಿಗೆ ಮನವರಿಕೆ ಮಾಡುವಾತನೆ ನಿಜವಾದ ನಾಯಕ. ಆದರೆ ಇಂದು ಮುಸ್ಲಿಂ ಸಮುದಾಯದ ಪರ ಧ್ವನಿ ಎತ್ತಿದ್ದಕ್ಕೆ ಅಶ್ರಫ್, ಸಿರಾಜ್ ಅವರನ್ನು ಮೂಲೆಗುಂಪು ಮಾಡಲಾಗಿದೆ. ನಾಳೆ ನಿಮ್ಮ ಸರದಿ.! ಸಮುದಾಯದ ಪರ ಇನ್ಯಾವ ನಾಯಕ ಧ್ವನಿ ಎತ್ತದಂತೆ ಮಾಡುವ ಪ್ರಯತ್ನ ಇದು. ಮುಸ್ಲಿಂ ಸಮುದಾಯ ಸಾರಮ್ಮ ಎಂಬ ಮಹಿಳೆಯ ಮನೆ ಮುಟ್ಟುಗೋಲು ಆದಾಗ, ಬ್ಯಾರ್ದಿಗಳ ವಿರುದ್ದ ಅವಾಚ್ಯವಾಗಿ ಕಲ್ಲಡ್ಕದ ಸಂಘಿಯೊಬ್ಬ ಮಾತನಾಡಿದಾಗ, ನಾವು ಮತನೀಡಿ ಗೆಲ್ಲಿಸಿದ ಕಾಂಗ್ರೆಸಿನ ನಾ(ಲಾ)ಯಕರು ದಮ್ಮು ಬಿಚ್ಚಲಿಲ್ಲ. ಇನ್ನಾದರೂ ಮುಸ್ಲಿಂ ಸಮುದಾಯ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ.